ನಿಜವಾದ ಸಿರಿವಂತ ಯಾರು?
ಒಬ್ಬ ಉದ್ಯಮಿ ತನ್ನ ಉದ್ಯಮವನ್ನು ವಿಸ್ತರಿಸುತ್ತಾನೆ. ಹೆಚ್ಚಿನ ಶಾಖೆಗಳನ್ನು ತೆರೆಯುವುದು, ಬೇರೆ ಬೇರೆ ಊರಿನಲ್ಲಿ, ಬೇರೆ ಬೇರೆ ಜಾಗದಲ್ಲಿ ಕಾರ್ಖಾನೆಯನ್ನು ಆರಂಭಿಸುವುದು, ಕಚೇರಿಯನ್ನು ಅಲಂಕಾರಗೊಳಿಸುವುದು, ಹೀಗೆ ತನ್ನ ಉದ್ಯಮವನ್ನು ಹಿಗ್ಗಿಸುತ್ತಾನೆ. ಆ ಉದ್ಯಮವನ್ನು ನೋಡಿಕೊಳ್ಳಲು ವ್ಯವಸ್ಥಾಪಕರನ್ನೋ, ಪ್ರಬಂಧಕರನ್ನೋ ನೇಮಿಸಿರುತ್ತಾನೆ. ಉದ್ಯಮವನ್ನು ನಿರ್ದಿಷ್ಟ ರೀತಿಯಲ್ಲಿ ರೀತಿಯಲ್ಲಿ ನಡೆಸುವಂತೆ ಅವರಿಗೆ ತಿಳಿಸಿರುತ್ತಾನೆ. ಮಾಸಾಂತ್ಯಕ್ಕೋ, ವರ್ಷಾಂತ್ಯಕ್ಕೋ ಇಂತಿಷ್ಟು ಲಾಭಾಂಶ ಬರಬೇಕೆಂದು ಸೂಚಿಸಿರುತ್ತಾನೆ. ತನ್ನ ಉದ್ಯಮವನ್ನು, ವ್ಯವಹಾರವನ್ನು ನೋಡಿಕೊಳ್ಳುವವರು ಇರುವುದರಿಂದ ಅವನು ಪ್ರತಿನಿತ್ಯದ ವ್ಯವಹಾರದಲ್ಲಿ ಭಾಗವಹಿಸದೆ, ಆಗೊಮ್ಮೆ, ಈಗೊಮ್ಮೆ ಎಂಬಂತೆ ಬಂದು ಹೋಗುತ್ತಾನೆ. ತನ್ನಿಂದ ನಿಯೋಜಿಸಲ್ಪಟ್ಟವರು ಸರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆಯೇ ಎಲ್ಲವೂ ವ್ಯವಸ್ಥಿತವಾಗಿದೆಯೇ ಎಂದು ನೋಡುತ್ತಿರುತ್ತಾನೆ. ದಿನನಿತ್ಯ ತನ್ನ ಪ್ರತಿಯೊಂದು ಶಾಖೆಗೋ, ಆ ಶಾಖೆಯ ವಿಭಾಗಕ್ಕೋ ಅಥವಾ ಪ್ರತಿಯೊಬ್ಬ ನೌಕರನನ್ನು ಭೇಟಿ ಮಾಡುವುದಿಲ್ಲ. ಅವನ ಉದ್ಯಮವನ್ನು ನೋಡಿಕೊಳ್ಳುವ ನೌಕರ ಆ ಉದ್ಯಮಿಯಿಂದ ಪಡೆದ ಎಲ್ಲಾ ಸವಲತ್ತುಗಳನ್ನು ಉಪಯೋಗಿಸಿಕೊಂಡು ಅವನ ಉದ್ಯಮವನ್ನು ವಿಸ್ತರಿಸಲು ಪ್ರಯತ್ನಿಸುತ್ತಾನೆ. ಹೀಗೆ ಪ್ರಯತ್ನಿಸಿ ಬಂದ (ಬಂದರೆ) ಲಾಭದ ಅಂಶ ಮಾತ್ರ ಮಾಲೀಕನ ಖಾತೆಗೆ ತಲುಪುತ್ತದೆ. ಮಾಲೀಕತ್ವದ ದಾಖಲಾತಿ ಇಲ್ಲವೆಂಬುದನ್ನು ಬಿಟ್ಟರೆ ನೌಕರ ಮಾಲೀಕನಂತೆ ಎಲ್ಲಾ ಸೌಲಭ್ಯಗಳನ್ನೂ, ಸುಖವನ್ನೂ ಅನುಭವಿಸುತ್ತಾನೆ. ಒಂದೇ ವ್ಯತ್ಯಾಸವೆಂದರೆ, ಅವನಲ್ಲಿ ತಾನು ಮಾಲೀಕನೆಂಬ ಭಾವನೆ ಇರುವುದಿಲ್ಲ. ಈಗ ಮಾಲೀಕನ ಅನುಪಸ್ಥಿತಿಯಲ್ಲಿ ಅವನ ಆಸ್ತಿಯನ್ನು, ಸೌಲಭ್ಯವನ್ನು ಬೇರೊಬ್ಬರು ಬಳಸಿಕೊಳ್ಳುತ್ತಿದ್ದಾರೆ ಎಂದಾದರೆ, ಆ ಒಂದು ಕ್ಷಣದಲ್ಲಿ ಮಾಲೀಕನ ಆ ಆಸ್ತಿ ನೌಕರನದ್ದಾಯಿತು. ಅಷ್ಟೇ ಅಲ್ಲ, ಒಡೆಯನಾದವನು ಅವನ ಬಳಿ ಇರುವ ಎಲ್ಲಾ ಆಸ್ತಿಯ ವಿವರವನ್ನು ಪ್ರತಿಕ್ಷಣ ಎಣಿಸುತ್ತಲೂ ಇರುವುದಿಲ್ಲ, ನೆನಪಿಸಿಕೊಳ್ಳುತ್ತಲೂ ಇರುವುದಿಲ್ಲ, ಅನುಭವಿಸುತ್ತಲೂ ಇರುವುದಿಲ್ಲವೆಂದಾದರೆ ಆ ಆಸ್ತಿ ಅಥವಾ ವಸ್ತು ಅವನದ್ದಾಗುವುದು ಹೇಗೆ? ಅದು ಕನಸಿನಲ್ಲಿ ಏನನ್ನೋ ಕಂಡು ಅದೆಲ್ಲವೂ 'ನನ್ನದೇ' ಎಂದು ತಿಳಿದಂತೆಯೇ.
ಒಡೆಯನ ಚಾಲಕ ಅವನ ಕಾರು ನಡೆಸುತ್ತಾನೆ. ಅವನ ನೌಕರ ವಿಮಾನದಲ್ಲಿ ಹಾರಾಡುತ್ತಾನೆ, ಪಂಚತಾರಾ ಹೊಟೇಲುಗಳಲ್ಲಿ ಉಳಿಯುತ್ತಾನೆ. ಉತ್ತಮವಾದ, ಸುಸಜ್ಜಿತವಾದ ಮನೆ, ಆಫೀಸು, ಉತ್ತಮ ಸಂಬಳ, ಎಲ್ಲವೂ ನೌಕರನಿಗೆ ಇದೆ. ಇತ್ತೀಚಿನ ದಿನಗಳಲ್ಲಿ ನೌಕರನ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಲಾಗುತ್ತಿದೆ. ಹೆಲ್ತ್ ಕ್ಲಬ್ ಮೆಂಬರ್ಶಿಪ್, ಮನರಂಜನೆಗಾಗಿ ಸ್ಪೋರ್ಟ್ಸ್ ಕ್ಲಬ್ ಮೆಂಬರ್ಶಿಪ್, ವಾರ್ಷಿಕ ರಜೆ, ಮಕ್ಕಳ ಸ್ಕೂಲ್ ಫೀಸ್, ಬೋನಸ್... ಇತ್ಯಾದಿ. ನೌಕರನನ್ನು ಹೆಚ್ಚಿನ ಕಾಳಜಿಯಿಂದ ನೋಡಿಕೊಳ್ಳಲಾಗುತ್ತದೆ. ಏಕೆಂದರೆ ಅವನು ಸಂತೋಷದಿಂದ ಇದ್ದರೆ ಅವನಿಂದ ಹೆಚ್ಚಿನ ಕೆಲಸ ಪಡೆಯಬಹುದೆಂದು. ಉದ್ಯಮಿಗಳ ಲೋಕದಲ್ಲಿ ನೌಕರರು ಕಾಗದದ ಮೇಲಿನ ಲೆಕ್ಕಾಚಾರ ಮಾತ್ರ. ತನ್ನ ಬಳಿ ಕೆಲಸ ಮಾಡುವವರಿಗೆ ತಾನೆಷ್ಟು ಕೊಟ್ಟೆ, ಅವರಿಂದ ತಾನೆಷ್ಟು ಪಡೆದೆ ಎಂಬುದೇ ಅಲ್ಲಿ ಪ್ರಾಧಾನ್ಯವಾಗುತ್ತದೆ. ಉದ್ಯಮಿ ಅದರಲ್ಲಿಯೇ ತೃಪ್ತಿಪಡುತ್ತಾನೆ. ಆದರೆ ನೌಕರನಾದವನು ನಾನೇ ನಿಜವಾದ ಶ್ರೀಮಂತ, ನನ್ನ ಒಡೆಯ ಎನ್ನಿಸಿಕೊಂಡವನು ಕೇವಲ ಕಾಗದದ ಅಂಕಿ-ಅಂಶಗಳಲ್ಲಿ ಶ್ರೀಮಂತನೆಂದು ತಿಳಿದರೆ 'ಮಾಲೀಕತ್ವ' ಎಂಬ ಶಬ್ದ ಅನುಪಸ್ಥಿತಿಯಲ್ಲಿ ಮಾಲೀಕರು, ಧಣಿಗಳು ಎಂದು ಕರೆಸಿಕೊಳ್ಳುವವರು ಯಾವ ಸ್ಥಾನದಲ್ಲಿರುತ್ತಾರೆ? ಅವರು ಎಷ್ಟು ಸಿರಿವಂತರು ಎಂಬುದು ನಿಜಕ್ಕೂ ಅತಿ ದೊಡ್ಡ ಪ್ರಶ್ನೆಯಲ್ಲವೆ?
(ಮುಂದುವರಿಯುವುದು)
ಕಿರಣ ಉಪಾಧ್ಯಾಯ, keyrun1970@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

