ಆನಂದ ವಾಸ್ತವಿನಿಂದ ಅಲ್ಲ
ಯಾವುದೇ ಕಟ್ಟಡ ಕಟ್ಟಬೇಕೆಂದರೂ ವಾಸ್ತುವನ್ನು ನೋಡುತ್ತಾರೆ. ಅದರಲ್ಲೂ ಮನೆಗೆ ವಾಸ್ತು ಅಳವಡಿಸುವುದು ಜಾಸ್ತಿ. ಮನೆ ನೆಮ್ಮದಿಯ ತಾಣ. ಹೊರಗಿನಿಂದ ಮನೆಗೆ ಬಂದಾಗ ಸಿಗುವ ನೆಮ್ಮದಿ, ಆನಂದ ವಾಸ್ತವಿನದಲ್ಲ, ವಾಸ್ತವ ಬದುಕಿನಿಂದ. ವಾಸ್ತು ಪ್ರಕಾರ ಮನೆ ಕಟ್ಟಿದವರೆಲ್ಲ ತುಂಬಾ ಸಂತೋಷವಾಗಿದ್ದಾರೆಯೇ? ಮೊದಲು ಮನಸ್ಸುಗಳನ್ನು ವಾಸ್ತವಗೊಳಿಸಿ ಮನಸ್ಸು - ಮನಸ್ಸುಗಳನ್ನು ಕಟ್ಟಿಕೊಳ್ಳಬೇಕಾಗಿದೆ. 'ಅಪ್ಪ ನೆಟ್ಟ ಆಲದ ಗಿಡ ಎಂದು' ನೇಣು ಹಾಕಿಕೊಳ್ಳುವುದು ಎಷ್ಟು ಸರಿ? ವಾಸ್ತು ಪ್ರಕಾರ ಸಾಗಿದರೆ ಮನಸ್ಸು ಅಸ್ತವ್ಯಸ್ತಗೊಂಡು ಅನೇಕ ಬಾರಿ ಕಟ್ಟಡ ಒಡೆದವರನ್ನು ಕಾಣುತ್ತೇವೆ. ಹಳ್ಳಿಗರಿಗಿಂತ ಪಟ್ಟಣಗಳಲ್ಲೇ 'ವಾಸ್ತು' ಹೆಚ್ಚು ಜಾರಿಯಲ್ಲಿದೆ. ವಾಸ್ತುವಿಗಾಗಿ ಅನೇಕ ವಾಸ್ತುಶಾಸ್ತ್ರಜ್ಞರು ಹುಟ್ಟಿಕೊಂಡಿದ್ದಾರೆ. ಸರಿಯಾಗಿ ಗಾಳಿ, ಬೆಳಕು, ನೀರಿನ ವ್ಯವಸ್ಥೆಗಳನ್ನು ಅಳವಡಿಸಿ ಕಟ್ಟಿದರೆ ಸಾಕು. ಮನೆ ಚಿಕ್ಕದಾಗಿದ್ದರೂ, ವಾಸ್ತು ಇರದಿದ್ದರೂ, ನಮ್ಮ ಮನಸ್ಸು ವಿಶಾಲವಾಗಿದ್ದರೆ ಯಾವ ವಾಸ್ತುವಿನ ಅವಶ್ಯಕತೆನೇ ಇಲ್ಲ ಅಲ್ಲವೆ?
- ಜಯಶ್ರೀ ಭಂಡಾರಿ, ಬಾದಾಮಿ
ವಾಸ್ತುವಿನಿಂದ ಸಂಕಟ ನಿವಾರಣೆ
ಭೂಮಿಯ ಅಯಸ್ಕಾಂತೀಯ ಶಕ್ತಿಯ ಕಂಪನವು ಸೂರ್ಯನ ಕಿರಣಗಳ ಸಂಯೋಜನೆಯೊಂದಿಗೆ ಉಂಟಾಗುವ ತರಂಗಗಳನ್ನು ಮಾನವನ ಜೀವನದ ಮೇಲೆ ಉಪಯುಕ್ತವಾಗುವಂತೆ ಬಳಸುವ ವಿಧಾನವೇ 'ವಾಸ್ತುಶಾಸ್ತ್ರ'ದ ತಿರುಳು. ಮಾನವನಿಗೆ ಸುಖ ಶಾಂತಿ ನೆಮ್ಮದಿಯ ಜೀವನ ಹೊಂದಲು ಮನೆಯು ವಾಸ್ತುಶಾಸ್ತ್ರದ ಪ್ರಕಾರವಾಗಿಯೇ ಇರಬೇಕಾದುದು ಅತೀ ಮುಖ್ಯ. ನಾನು ಸ್ವತಃ ವಾಸ್ತುವಿನ ಪ್ರಭಾವವನ್ನು ನನ್ನ ಜೀವನದಲ್ಲಿ ಅನುಭವಿಸಿರುತ್ತೇನೆ. ವಾಸ್ತು ಸರಿಯಿಲ್ಲದ ಕಟ್ಟಡದಲ್ಲಿ ವಾಸಿಸಿ ಜೀವನದಲ್ಲಿ ಅನೇಕ ಸಂಕಷ್ಟಗಳನ್ನು ಅನುಭವಿಸಿದ್ದೇನೆ. ನಂತರ ವಾಸ್ತು ಪ್ರಕಾರದ ಕಟ್ಟಡಗಳಲ್ಲಿ ಉತ್ತಮ ಫಲಿತಾಂಶವನ್ನೂ ಪಡೆದಿದ್ದೇನೆ. ಈ ಅನುಭವದ ಸಹಾಯದಿಂದ ನಾನೇ ಸ್ವತಃ ವಾಸ್ತು ಸಲಹೆಗಾರನಾಗಿದ್ದೇನೆ. ವಾಸ್ತುಶಾಸ್ತ್ರ ಖಂಡಿತ ಮಾನವನಿಗೆ ಉಪಯೋಗಿ. ಆದರೆ ಸಲಹೆ ನೀಡುವವರು ಅನುಭವಿಗಳಾಗಿರಬೇಕಾದ್ದು ಅತೀ ಮುಖ್ಯ. ಎಲ್ಲಾ ರೀತಿಯ ಕಷ್ಟ, ನಷ್ಟ, ತಾಪತ್ರಯಾದಿಗಳನ್ನು ವಾಸ್ತು ರೀತಿಯಲ್ಲಿ ಪರಿಹರಿಸಿ ಉತ್ತಮ ಫಲ ನೀಡಲೂ ಸಾಧ್ಯ. ಅನುಮಾನ ಬೇಡ.
- ಎಸ್. ಬಲರಾಮ ತಂತ್ರಿ, ಉಡುಪಿ
ನೆಮ್ಮದಿ ಕಂಡುಕೊಳ್ಳಲು ಮಾರ್ಗಗಳಿವೆ!
ಈ 'ವಾಸ್ತು'ವನ್ನು ನಂಬುವವರು ನಿವೇಶನ ಖರೀದಿಸುವ ಮುನ್ನ, ಮನೆ ಕೆಲಸ ಪ್ರಾರಂಭಿಸುವ ಮುನ್ನ ಯೋಚಿಸಬೇಕು. ನಂತರದಲ್ಲಿ ಯೋಚಿಸಿದರೆ ವಾಸ್ತು ಒಂದು ಪೀಡೆಯಾಗದೆ ಇರದು. ಕಟ್ಟಿದ ಮನೆಯನ್ನು ಖರೀದಿಸುವಾಗಲೂ ಸಹ ತಮ್ಮ ಸ್ವಂತ ನಿರ್ಧಾರ ತೆಗೆದುಕೊಳ್ಳಬೇಕು. ಮನೆಗೆ ಬಂದವರು, ಸ್ನೇಹಿತರು, ಆಪ್ತರು 'ಈ ಅಡುಗೆ ಮನೆ, ಬಾತ್ರೂಮ್, ದೇವರ ಮನೆ ಇಲ್ಲಿರಬೇಕಾಗಿತ್ತು, ಅಲ್ಲಿರ ಬೇಕಾಗಿತ್ತು' ಅಂತ ತಲೆ ಕೆಡಿಸಿಯಾರು! ನಂತರ ಮನಸ್ಸು ಕೆಡುತ್ತದೆ. ನೆಮ್ಮದಿಯು ಹಾಳಾಗುತ್ತದೆ. ಜೊತೆಗೆ ನಿರ್ಧಾರ ಬದಲಿಸಿದರೆ ಹಣವೂ ಪೋಲು! ಒಂದು ವೇಳೆ ವಾಸ್ತುವನ್ನು ಅಳವಡಿಸಿಕೊಳ್ಳಲು ಸಾಧ್ಯವಾಗದವರು ಮನಸ್ಸನ್ನು ಸಕಾರಾತ್ಮಕ, ಚಿಂತನೆಗಳ ಮೂಲಕ ನೆಮ್ಮದಿ ಜೀವನ ನಡೆಸಬಹುದು. ಅಲ್ಲದೆ ರೇಖಿ, ಪಿರಮಿಡ್ಡು, ಕ್ರಿಸ್ಟಲ್, ಚೈನೀವಾಸ್ತು, ವಾಸ್ತುಪುರುಷ ಹೀಗೆ ಇತ್ಯಾದಿ ವಿಧಾನಗಳ ಮೂಲಕ ವಾಸ್ತುದೋಷ ಪರಿಹಾರ ಮಾಡಿಕೊಳ್ಳಬಹುದು.
- ಅನುಪಮಾ ಸಿ.ಎಸ್., ಮೈಸೂರು
'ಜಗುಲಿ'ಯಲ್ಲಿ ಈ ವಾರದ ವಿಷಯ 'ವಾಸ್ತು ಬೇಕೆ?'. ವಿಷಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಬರವಣಿಗೆ 100 ಪದಗಳ ಮಿತಿಯಲ್ಲಿರಲಿ. ಜತೆಗೆ ನಿಮ್ಮದೊಂದು ಪಾಸ್ಪೋರ್ಟ್ ಅಳತೆಯ ಭಾವಚಿತ್ರ ಇರಲಿ. ಕೈ ಬರಹದಲ್ಲಿ ಕಳಿಸುವುದಿದ್ದರೆ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ನಮ್ಮ ವಿಳಾಸ: ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು- 560001, ಇ-ಮೇಲ್: anekaby2@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

