ತನಿಖೆ ತಿರುವು ಮುರುವು!

ಯಾವುದೇ ಅಪರಾಧ ಪ್ರಕರಣ ನಡೆದಾಗ ಅದರ ಕೂಲಂಕಷ ಪರಿಶೀಲನೆ ನಡೆಸಿ ವರದಿ ನೀಡಬೇಕಾದ ಕರ್ತವ್ಯ ತನಿಖಾಧಿಕಾರಿಯಾದ ಪೊಲೀಸ್ ಇನ್ಸ್ಪೆಕ್ಟರ್ರವರದು. ಪಳಗಿದ ಪೊಲೀಸ್ ಅಧಿಕಾರಿಗಳು ಕೆಲವರು ಮೃತದೇಹವನ್ನು ನೋಡಿದ ಕೂಡಲೇ ಅದು ಕೊಲೆಯೇ, ಅಪಘಾತವೇ ಅಥವಾ ಆತ್ಮಹತ್ಯೆಯೇ ಎಂಬುದನ್ನು ಮೇಲ್ನೋಟದಲ್ಲಿಯೇ ಹೇಳುವಷ್ಟು ಸಮರ್ಥರಾಗಿರುತ್ತಾರೆ. ಆದರೆ ನ್ಯಾಯಾಲಯ ಪೊಲೀಸರ ಹೇಳಿಕೆಯನ್ನು ಮಾತ್ರವೇ ದಾಖಲೆಯಾಗಿ ಪರಿಗಣಿಸುವುದಿಲ್ಲ. ಅಧಿಕೃತ ವೈದ್ಯರು ನೀಡುವ ಶವಪರೀಕ್ಷಾ ವರದಿ ಪ್ರಮುಖ ಆಧಾರವಾಗಿರುತ್ತದೆ. ಅದೇ ಕಾರಣಕ್ಕೆ, ಪ್ರತಿ ಅಸಹಜ ಸಾವಿನಲ್ಲೂ ಶವಪರೀಕ್ಷೆ ನಡೆಸಬೇಕೆಂದು ನಮ್ಮ ಕಾನೂನಿನಲ್ಲಿ ಕಲ್ಪಿಸಲಾಗಿದೆ. ಕೆಲವೊಮ್ಮೆ ಮೇಲ್ನೋಟಕ್ಕೆ ಕಾಣಿಸುವ ಸತ್ಯಗಳು ಶವಪರೀಕ್ಷೆಯಲ್ಲಿ ಸುಳ್ಳು ಎಂಬುದು ಸಾಬೀತಾದ ಸಾಕಷ್ಟು ನಿದರ್ಶಗಳಿವೆ.
ಪೊಲೀಸ್ ಇಲಾಖೆಯಲ್ಲಿ ದಕ್ಷ ಪ್ರಾಮಾಣಿಕ ಅಧಿಕಾರಿಗಳಿರುವ ಹಾಗೆ ಅದಕ್ಷ ಅಧಿಕಾರಿಗಳೂ ಇದ್ದಾರೆ. ಪಳಗಿದ ಅಧಿಕಾರಿಗಳಿರುವಂತೆ, ಎಷ್ಟೇ ವರ್ಷಗಳ ಸರ್ವಿಸ್ ಆದರೂ ಅಪರಾಧ ಪ್ರಕರಣಗಳ ವಿಚಾರದಲ್ಲಿ ಆಳ ಅಗಲಗಳನ್ನು ಅರಿಯದೆ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳೂ ಇಲಾಖೆಯಲ್ಲಿ ಸಾಕಷ್ಟು ಜನ ಇಲ್ಲದಿಲ್ಲ. ಹಲವಾರು ಬಾರಿ ಹಿರಿಯ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡುವವರೇ ಪೇದೆಗಳು. ಹಿಂದೆ ಇದ್ದ ಎಳೆನೀರು ಹನುಮಂತ ಎಂಬ ಪೇದೆ ಯಾವುದೇ ಕಳ್ಳತನದ ಪ್ರಕರಣ ನಡೆದರೂ ಅದರ ಎಂಒ ನೋಡಿದ ಕೂಡಲೇ ಅಯ್ಯೋ ಇದನ್ನು ಮಾಡಿದವನು ಇಂತಹವನೇ ಎಂದು ಹೇಳುತ್ತಿದ್ದ ಎಂದು ಇಂದಿಗೂ ಹಿರಿಯ ಅಧಿಕಾರಿಗಳು ಸ್ಮರಿಸುತ್ತಾರೆ. ಹಾಗೆ ಎಂಒ ನೋಡಿ ಅಪರಾಧಿಗಳನ್ನು ಎಳೆದು ತಂದು ಠಾಣೆಯಲ್ಲಿ ರುಬ್ಬುತ್ತಿದ್ದಂತೆ ನಿಜ ಅದಾಗೇ ಹೊರಬರುತ್ತಿತ್ತು. ಅಂತಹ ಪೇದೆಗಳು ಇಂದಿಗೂ ಇದ್ದಾರೆ. ಆದರೆ ಅವರನ್ನು ಸಮರ್ಥವಾಗಿ ಬಳಸಿಕೊಳ್ಳಬೇಕಷ್ಟೆ.
ಅದೇ ರೀತಿ, ನಿರ್ಲಕ್ಷ್ಯ ವಹಿಸಿ ತನಿಖೆಯ ದಾರಿ ತಪ್ಪಿಸುವ ಪೇದೆಗಳೂ ಇರುತ್ತಾರೆ. ಇಂದಿನ ಕತೆ, ಅಂತಹ ನಿರ್ಲಕ್ಷ್ಯಕಾರಿ ಪೇದೆಯೊಬ್ಬನ ಮಾತು ಕೇಳಿದ ಇನ್ಸ್ಪೆಕ್ಟರ್ ಒಬ್ಬರು ನಂತರ ಎಂತಹ ಮುಜುಗರ ಅನುಭವಿಸಬೇಕಾಯಿತು ಎಂಬುದಕ್ಕೆ ನಿದರ್ಶನ.
=
ಇದು ನಡೆದಿದ್ದು 1994ರಲ್ಲಿ. ಸಾಂಸ್ಕೃತಿಕ ನಗರಿ ಮೈಸೂರಿನ ಲಷ್ಕರ್ ಠಾಣಾ ವ್ಯಾಪ್ತಿಯಲ್ಲಿ. ಈ ಠಾಣೆಯಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದವರು ಮಧ್ಯರಾತ್ರಿ ಸಮೀಪಿಸುತ್ತಿದ್ದಂತೆ ಠಾಣೆಯಿಂದ ಮನೆಯ ಕಡೆ ಹೊರಟರು. ಆಗ ಈಗಿನಂತೆ ಮೊಬೈಲ್ ಫೋನ್ಗಳಿರಲಿಲ್ಲ. ಪೊಲೀಸರ ಪಾಲಿಗೆ ಸ್ಥಿರ ದೂರವಾಣಿ ಮತ್ತು ವಾಕಿಟಾಕಿಗಳೇ ಪ್ರಮುಖ ಸಂಪರ್ಕ ಮಾಧ್ಯಮಗಳಾಗಿದ್ದವು.
ಕೆಲಸ ಮುಗಿಸಿ ಮನೆಗೆ ಬಂದ ಸಬ್ ಇನ್ಸ್ಪೆಕ್ಟರ್ ಯೂನಿಫಾರಂ ತೆಗೆದು ಊಟಕ್ಕೆ ಕೂತಿದ್ದರು. ಅದೇ ಸಮಯಕ್ಕೆ ಪೇದೆಯೊಬ್ಬ ಸೈಕಲ್ ಮೇಲೆ ಬಂದು 'ಸಾರ್ ಕಲ್ಯಾಣನಗರ ರಿಂಗ್ ರಸ್ತೆಯಲ್ಲಿ ಸ್ಕೂಟರ್ ಅಪಘಾತವಾಗಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ' ಎಂಬ ಸುದ್ದಿ ಹೇಳಿ ಅಲ್ಲಿಂದ ಹೊರಟು ಹೋದ. ಬೆಳಗಿನಿಂದ ಡ್ಯೂಟಿಯಲ್ಲಿದ್ದ ಸಬ್ ಇನ್ಸ್ಪೆಕ್ಟರ್ಗೆ ಈ ಸುದ್ದಿಯಿಂದ ತುಂಬಾ ಕಿರಿಕಿರಿಯಾಗಿದ್ದಂತೂ ಸುಳ್ಳಲ್ಲ. ಆದರೆ ಸ್ಥಳಕ್ಕೆ ಹೋಗಲೇಬೇಕಿತ್ತು. ಹಾಗಾಗಿ ಊಟ ಅರ್ಧದಲ್ಲಿಯೇ ನಿಲ್ಲಿಸಿ ಮತ್ತೆ ಯೂನಿಫಾರಂ ತಗಲಿಸಿಕೊಂಡು ಬೈಕ್ ಹತ್ತಿ ಘಟನಾ ಸ್ಥಳಕ್ಕೆ ಹೊರಟರು.
ಆಗಲೇ ಮಧ್ಯರಾತ್ರಿಯಾಗಿದೆ. ರಸ್ತೆಗಳು ನಿರ್ಮಾನುಷವಾಗಿವೆ. ಬೀದಿ ದೀಪಗಳ ಮಂದ ಬೆಳಕು ರಸ್ತೆಯ ಮೇಲೆ ಹರಡಿದೆ. ರಸ್ತೆಯ ಒಂದು ಮೂಲೆಯಲ್ಲಿ ಸ್ಕೂಟರ್ ಬಿದ್ದಿದೆ. ಸ್ವಲ್ಪ ದೂರದಲ್ಲಿ ಒಂದು ಶವ ಬಿದ್ದಿದೆ. ಅದು ಮೇಲ್ನೋಟಕ್ಕೆ ಅಪಘಾತ ಎಂಬುದನ್ನು ದೃಢಪಡಿಸಿಕೊಂಡ ಸಬ್ ಇನ್ಸ್ಪೆಕ್ಟರ್ ಹೆಣವನ್ನು ಕೆಆರ್ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿ, ಸ್ಕೂಟರನ್ನು ಲಷ್ಕರ್ ಪೊಲೀಸ್ ಠಾಣೆಗೆ ಸಾಗಿಸಿ ಮನೆಗೆ ಬರುವಷ್ಟರಲ್ಲಿ ಮುಂಜಾನೆ ಸಮೀಪಿಸಿತ್ತು.
ಮನೆಗೆ ಬಂದು ಮಲಗಿ ಬೆಳಗ್ಗೆ ಎದ್ದು ಅಪಘಾತ ನಡೆದ ಸ್ಥಳಕ್ಕೆ ಪಂಚನಾಮೆಗೆಂದು ಹೊರಟರು. ಅಲ್ಲಿ ಬಿದ್ದಿದ್ದ ಸ್ಕೂಟರ್ನ ಕೆಲವು ಬಿಡಿ ಭಾಗಗಳು ಮತ್ತಿತರೆ ವಸ್ತುಗಳನ್ನು ಶೇಖರಿಸಿಕೊಂಡು, ಘಟನೆ ಹೇಗೆ ನಡೆದಿರಬಹುದು ಎಂಬ ಬಗ್ಗೆ ಒಂದು ತರ್ಕಕ್ಕೆ ಬಂದು ಅಲ್ಲಿಂದ ನೇರವಾಗಿ ಕೆಆರ್ ಆಸ್ಪತ್ರೆಗೆ ಬಂದರು. ಶವದ ಮೇಲಿನ ಗಾಯಗಳನ್ನು ವಿವರವಾಗಿ ಬರೆದುಕೊಳ್ಳಬೇಕಾದ ಕಾರಣ ಶವವನ್ನು ಕೂಲಂಕಷವಾಗಿ ಪರಿಶೀಲಿಸುತ್ತಿದ್ದರು.
ಶವದ ಬಲಗಿವಿಯ ಹಿಂಭಾಗದಲ್ಲಿ ಸ್ವಲ್ಪ ರಕ್ತ ಒಸರಿದ ಗುರುತು ಇತ್ತು. ಅಲ್ಲಿ ಬಲವಾದ ಗಾಯವೇನಾದರೂ ಆಗಿರಬಹುದೇ ಎಂಬ ಸಂಶಯದಿಂದ ಎಸ್ಐ ಕುಳಿತು ಗಾಯವನ್ನು ಪರೀಕ್ಷೆ ಮಾಡಲು ಮುಂದಾದರು. ಆದರೆ ಹಿಂದೆ ನಿಂತಿದ್ದ ತರಲೆ ಪೇದೆಯೊಬ್ಬ ಗೇಲಿ ಮಾಡಿ 'ಸಾರ್ ಗಾಡಿ ಬಿದ್ದಾಗ ಪರಚಿಕೊಂಡಿರುತ್ತದೆ. ಅದಕ್ಕೆಲ್ಲಾ ತಲೆ ಕೆಡಿಸಿಕೊಂಡರೆ ಹೇಗೆ?' ಎಂದು ಚುಡಾಯಿಸಿದ. ಎಸ್ಐಗೆ ಸ್ವಲ್ಪ ಅವಮಾನವಾದಂತಾಗಿ ಅದನ್ನು ಪರೀಕ್ಷೆ ಮಾಡದೆ ಎದ್ದು ಶವಪರೀಕ್ಷೆ ಮಾಡುವಂತೆ ವೈದ್ಯರಲ್ಲಿ ವಿನಂತಿ ಮಾಡಿದರು. ಸ್ಕೂಟರ್ ಅಪಘಾತವಾಗಿ ವ್ಯಕ್ತಿ ಮೃತಪಟ್ಟಿರುವುದಾಗಿ ದೂರಿನಲ್ಲಿ ಬರೆದು ವೈದ್ಯರಿಗೆ ನೀಡಿ ಅಲ್ಲಿಂದ ಠಾಣೆಗೆ ಹೊರಟರು.
=
ಬೆಳಗ್ಗೆ 11 ಗಂಟೆ ಸಮಯ. ಠಾಣೆಯಲ್ಲಿ ಕೂತು ಫೈಲ್ಗಳನ್ನು ನೋಡುತ್ತಿದ್ದ ಎಸ್ಐ ವಾಕಿಟಾಕಿ ಸಿಗ್ನಲ್ ಕೊಡತೊಡಗಿತು. ಕೂಡಲೇ ಕೆಆರ್ ಆಸ್ಪತ್ರೆಗೆ ಬನ್ನಿ ಎಂಬ ಸಂದೇಶ ಅದರಲ್ಲಿ ರವಾನೆಯಾಗಿತ್ತು. ಏನೋ ಗ್ರಹಚಾರ ಕಾದಿದೆ ಎಂದು ಆತುರವಾಗಿಯೇ ಹೊರಟು ಬಂದ ಎಸ್ಐಗೆ ಆಸ್ಪತ್ರೆ ವೈದ್ಯರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಡರು. 'ಏನ್ರೀ ಬಂದೂಕಿನಿಂದ ಗುಂಡು ಹೊಡೆದು ಕೊಲೆ ನಡೆದಿದ್ದರೆ ನೀವು ಅಪಘಾತ ಅಂತ ಬರೆದಿದ್ದೀರಲ್ಲಾ' ಎಂದು ಒಂದೇ ಸಮನೆ ವೈದ್ಯ ಡಾ. ರವಿಶಂಕರ್ ದಬಾಯಿಸಿದರು. ಎಸ್ಐ ಜಂಘಾಬಲವೇ ಉಡುಗಿಹೋಯಿತು.
ಗುಂಡು ಹಾರಿಸಿ ನಡೆಸಿದ ಯಾವುದೇ ಕೊಲೆಯಲ್ಲಿ ಮೇಲ್ನೋಟಕ್ಕೆ ಕಾಣಿಸುವಷ್ಟು ಆಳದ ಗಾಯ ಆಗೇ ಆಗಿರುತ್ತದೆ. ಆದರೆ ಈ ಪ್ರಕರಣದಲ್ಲಿ ಅಂತಹ ಗಾಯ ಕಾಣಿಸದ ಕಾರಣ ಎಸ್ಐ ಇಂತಹ ಮುಜುಗರ ಅನುಭವಿಸಬೇಕಾಯಿತು. ದೇಹಕ್ಕೆ ಗುಂಡು ತಗುಲಿ ಒಳಹೊಕ್ಕಿರುವ ಸ್ಥಳವನ್ನು ಎಂಟ್ರಿ ವೂಂಡ್ ಎಂದು ಕರೆಯುತ್ತಾರೆ. ಸಮೀಪದಿಂದ ಗುಂಡು ತಗಲಿದರೆ ಅದು ದೇಹವನ್ನು ಸೀಳಿಕೊಂಡು ಹೊರಹೋಗುತ್ತದೆ. ಹೀಗೆ ಗುಂಡು ಹೊರಹೋದ ಸ್ಥಳಕ್ಕೆ ಎಕ್ಸಿಟ್ ವೂಂಡ್ ಎಂದು ಕರೆಯಲಾಗುತ್ತದೆ. ಆದರೆ ಈ ಪ್ರಕರಣದಲ್ಲಿ ಈ ಎರಡೂ ಸ್ಥಳಗಳು ಮೇಲ್ನೋಟಕ್ಕೆ ಕಾಣಿಸಿರಲಿಲ್ಲ.
ರಿವಾಲ್ವರ್ನಿಂದ ಗುಂಡು ಹಾರಿಸಿ ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ ಎಂದು ವೈದ್ಯರು ಶವಪರೀಕ್ಷಾ ವರದಿಯಲ್ಲಿ ತಿಳಿಸಿದ್ದರು. ಅಂದು ಬೆಳಗ್ಗೆ ಹೆಣದ ಬಲಗಿವಿಯ ಹಿಂಭಾಗದಲ್ಲಿ ಆಗಿದ್ದ ಗಾಯವನ್ನು ಪರಿಶೀಲನೆ ಮಾಡಲು ಹೋದಾಗ ತರಲೆ ಪೇದೆ ತಡೆದಿದ್ದನಲ್ಲಾ ಅದೇ ಜಾಗದಲ್ಲಿ ಗುಂಡು ಒಳಹೊಕ್ಕಿತ್ತು. ಆದರೆ ತುಂಬಾ ದೂರದಿಂದ ಗುಂಡು ಹಾರಿಸಿದ ಪರಿಣಾಮ ಅದು ಹೊರಹೋಗದೆ ಒಳಗೇ ನಿಂತಿತ್ತು. ಸುದ್ದಿ ತಿಳಿದ ಕೂಡಲೇ ಅಂದು ಮೈಸೂರಿನ ಕಮೀಷನರ್ ಆಗಿದ್ದ ಕಸ್ತೂರಿರಂಗನ್ ಕೆಆರ್ ಆಸ್ಪತ್ರೆಗೆ ಧಾವಿಸಿದರು. ಕೊಲೆಯ ಬಗ್ಗೆ ವಿವರ ಕಲೆ ಹಾಕುವಂತೆ ಸೂಚಿಸಲಾಯಿತು.
ಮೃತಪಟ್ಟ ವ್ಯಕ್ತಿ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದ ಕಾರಣ ಪ್ರಕರಣವನ್ನು ಅಲ್ಲಿಗೆ ವರ್ಗಾಯಿಸಲಾಯಿತು. ಉದಯಗಿರಿ ಠಾಣೆಯಲ್ಲಿ ಇನ್ಸ್ಪೆಕ್ಟರ್ ಆಗಿ ಕರ್ತವ್ಯದಲ್ಲಿದ್ದವರು ಉತ್ತಪ್ಪ ಎಂಬವರು. ಇವರು ಕೊಡಗಿನವರಾಗಿದ್ದು, ಉತ್ತಮ ಅಧಿಕಾರಿ ಎಂದು ಹೆಸರು ಗಳಿಸಿದ್ದರು. ಪ್ರಕರಣ ಇಲ್ಲಿಗೆ ವರ್ಗಾವಣೆಯಾದ ಕೆಲವೇ ದಿನಗಳಲ್ಲಿ ಅಪರಾಧಿಗಳನ್ನು ಬಂಧಿಸುವಲ್ಲಿ ಉತ್ತಪ್ಪ ಯಶಸ್ವಿಯಾದರು.
=
ಈ ಕೊಲೆ ನಡೆಯಲು ವಿಚಿತ್ರ ಕಾರಣವಿತ್ತು. ಮೃತ ವ್ಯಕ್ತಿ ಎರಡು ಮದುವೆ ಆಗಿದ್ದ. ಆತನ ಎರಡನೇ ಹೆಂಡತಿ ಆತನಿಗಿಂತ ವಯಸ್ಸಿನಲ್ಲಿ ತುಂಬಾ ಕಿರಿಯವಳಾಗಿದ್ದಳು ಮತ್ತು ನೋಡಲು ತುಂಬಾ ಸುಂದರಿಯಾಗಿದ್ದಳು. ಗಂಡನಿದ್ದರೂ ಮತ್ತೊಂದು ಅಕ್ರಮ ಸಂಪರ್ಕ ಇಟ್ಟಿಕೊಂಡಿದ್ದಳು. ಆಕೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿ ಸಶಸ್ತ್ರ ಮೀಸಲು ಪಡೆಯಲ್ಲಿ ಕೆಲಸ ಮಾಡುತ್ತಿದ್ದ. ಈ ವಿಷಯ ಮೃತ ವ್ಯಕ್ತಿಗೆ ತಿಳಿದು ಪ್ರತಿ ದಿನ ಮನೆಯಲ್ಲಿ ರಂಪವಾಗುತ್ತಿತ್ತು. ಮನೆಯಲ್ಲಿ ಮಾತ್ರವಲ್ಲದೆ ಆತನನ್ನು ಬೀದಿಯಲ್ಲಿಯೂ ಬಾಯಿಗೆ ಬಂದಂತೆ ಬಯ್ಯುತ್ತಿದ್ದ ಕಾರಣ ಈ ಮೃತನ ಪತ್ನಿ ಮತ್ತು ಆಕೆಯ ಪ್ರಿಯಕರ ಸೇರಿ ಸಂಚು ರೂಪಿಸಿ ಕೊಲೆ ಮಾಡಲಾಗಿತ್ತು. ಈ ಪ್ರಕರಣವನ್ನು ಬೇಧಿಸಿದ ಇನ್ಸ್ಪೆಕ್ಟರ್ಗೆ ಅಂದಿನ ಕಮಿಷನರ್ ಕಸ್ತೂರಿರಂಗನ್ ಬಹುಮಾನ ನೀಡಿದರು.
- ಅಶ್ವತ್ಥನಾರಾಯಣ್ ಎಲ್.
sathyajns@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


