ಬೈಟುಕಾಫಿ

ವಾಸ್ತವದಲ್ಲಿ ದಾರಿಯಿದೆ

ವಾಸ್ತವದಲ್ಲಿ ದಾರಿಯಿದೆ
Published On :

ನಮ್ಮನಿಮ್ಮಂತಹ ಸಾಮಾನ್ಯ ಮನಸ್ಥಿತಿಯವರಿಗೆ ಇದೊಂದು ಅಚ್ಚರಿ ಎನಿಸಬಹುದು. ಆದರೆ ಇಂಥವರು ಸಾವಿರಾರು ಮಂದಿ ಇದ್ದಾರೆ. ಇವರಿಗೆ ವಾಸ್ತವವನ್ನೂ ಭ್ರಮೆಯನ್ನೂ ಕನಸನ್ನೂ ಪ್ರತ್ಯೇಕವಾಗಿ ನೋಡಲು ಬಾರದು. ಅವರು ತಾವು ಕಾಣುತ್ತಿರುವುದನ್ನೇ ನಿಜವೆಂದು ನಂಬಿರುತ್ತಾರೆ. ಆದರೆ ಅವರಿಗೆ ಕಾಣುವುದು ಇತರರಿಗೆ ಕಾಣುತ್ತಿರುವುದಿಲ್ಲ.
ಇಂಥವರನ್ನು ಗೀಳುರೋಗಿಗಳು, ಸ್ಕಿಜೋಫ್ರೇನಿಯಾ ಪೀಡಿತರು ಎಂದು ಗುರುತಿಸುವುದು ಸುಲಭ. ಯಾರೋ ಹಿಂಬಾಲಿಸಿದಂತೆ, ಯಾರೋ ಇವರ ವಿರುದ್ಧ ಕತ್ತಿ ಮಸೆಯುತ್ತಿರುವಂತೆ ಇವರಿಗೆ ಕಾಣಿಸುತ್ತದೆ. ಅದನ್ನವರು ಮುಚ್ಚುಮರೆಯಿಲ್ಲದೆ ಹೇಳಿಕೊಳ್ಳುತ್ತಾರೆ ಕೂಡಾ. ಆದ್ದರಿಂದಲೇ ಅವರನ್ನು ರೋಗಿಗಳೆಂದು ಪ್ರತ್ಯೇಕಿಸಿ ನೋಡುವುದು ಸುಲಭವಾಗುತ್ತದೆ.
ಆದರೆ, ನಮ್ಮ ನಿಮ್ಮ ನಡುವೆಯೇ ಕೆಲವರಿರುತ್ತಾರೆ. ಮೇಲ್ನೋಟಕ್ಕೆ ಇವರು ಆರೋಗ್ಯವಂತರಂತೆ ಕಾಣಿಸುತ್ತಾರೆ. ಆದರೆ ಒಳಗೊಳಗೇ ಇವರ ಭ್ರಮೆಗಳು ಬೇರು ಬಿಟ್ಟಿರುತ್ತವೆ. ಹೊರಗೊಂದು ಬದುಕು, ಒಳಗೊಂದು ಬದುಕನ್ನು ಬದುಕುತ್ತಿರುತ್ತಾರೆ. ಜೀವಿಸುವುದಕ್ಕಾಗಿ ಯಾವುದೋ ಕೆಲಸ ಮಾಡುತ್ತಿರುತ್ತಾರೆ. ಮನಸ್ಸಿನಲ್ಲಿ ಆ ಕೆಲಸವನ್ನು ದ್ವೇಷಿಸುತ್ತಾ, ಇನ್ನೊಂದೇ ಕೆಲಸದಲ್ಲಿ ತೃಪ್ತಿ ಕಾಣುತ್ತಿರುತ್ತಾರೆ. ಇನ್ನು ಕೆಲವರು ತೀರಲಾಗದ ಅತೃಪ್ತಿಯ ಮೂಟೆಗಳನ್ನು ಹೊತ್ತವರು. ಅವುಗಳನ್ನು ತೀರಿಸಿಕೊಳ್ಳಲು ನ್ಯಾಯಯುತವಾದ ಮಾರ್ಗಗಳಿದ್ದರೂ ಅದು ಅವರಿಗೆ ಇಷ್ಟವಿಲ್ಲ. ಬಹಿರಂಗದಲ್ಲಿ ಕೊರತೆಯ ಜೀವನ ಸಾಗಿಸುತ್ತಾರೆ. ಇವರ ಅಂತರಂಗದಲ್ಲಿ ಇನ್ನೊಂದೇ ಜೀವನ ಇರುತ್ತದೆ. ಇದು ಯಾರದೋ ಕತೆ ಎಂದೇಕೆ ತಿಳಿಯಬೇಕು? ನಿಮ್ಮ ಅಂತರಂಗವನ್ನೇ ಒಮ್ಮೆ ಅವಲೋಕಿಸಿಕೊಳ್ಳಿ!
ನಾನು ಬಲಿಷ್ಠ, ನಾನು ಸುಂದರ, ನಾನು ಗುಣವಂತ ಎಂಬೆಲ್ಲ ಭ್ರಮೆಗಳಿಂದ ಹೊರಬರುವುದು ಮನುಷ್ಯನ ವಿಕಾಸಕ್ಕೆ ಒಳ್ಳೆಯದು. ಆದರೆ ಅದು, ನಾನು ದುರ್ಬಲ, ಹೇಡಿ, ವಿಫಲ ವ್ಯಕ್ತಿ ಎಂಬ ಕೀಳರಿಮೆಗಳಿಗೂ ದಾರಿ ಆಗಕೂಡದು. ಈ ಎರಡೂ ಅತಿರೇಕಗಳೂ ಅವಾಸ್ತವಗಳೇ. ನಮ್ಮ ನಮ್ಮ ನಿಜವಾದ ಸಾಮರ್ಥ್ಯ, ವ್ಯಕ್ತಿತ್ವಗಳನ್ನು ಗುರುತಿಸಿಕೊಳ್ಳುವುದೇ ನಮ್ಮ ವಾಸ್ತವವನ್ನು ಅರಿತಂತೆ. ವಾಸ್ತವದಲ್ಲಿ ದಾರಿಯಿದೆ. ಭ್ರಮೆಯಲ್ಲಿ ಗುರಿ ಮಾತ್ರ ಇರುತ್ತದೆ.

-  ಸಹನೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.