ಬೈಟುಕಾಫಿ

ಆಸ್ತಿ ಮೌಲ್ಯ ಭಯಕ್ಕೆ ಸಮ!

Published On :

ಪ್ರಪಂಚದ ವಿಸ್ತಾರವನ್ನು ಅರಿಯದೇ ಒಂದೇ ರೀತಿ ಬದುಕುವುದಾಗಲೀ, ಯಾಂತ್ರಿಕ ಜೀವನ ನಡೆಸುವುದಾಗಲೀ ಬುದ್ಧಿವಂತಿಕೆಯ ಲಕ್ಷಣವಲ್ಲ. ಹಾಗೆಂದ ಮಾತ್ರಕ್ಕೆ ಸಮಾಜದ ಸಂಪರ್ಕ ಕಡಿದುಕೊಳ್ಳಬೇಕೆಂದಾಗಲೀ, ದುಡಿಯುವುದನ್ನು ನಿಲ್ಲಿಸಬೇಕೆಂದಾಗಲೀ, ಯಾವುದರ ಬಗ್ಗೆಯೂ ಕಾಳಜಿ ಇರಕೂಡದು ಎಂದಾಗಲೀ ಅಥವಾ ಯಾವುದರ ಬಗ್ಗೆಯೂ ಲಕ್ಷ್ಯ ಕೊಡಬಾರದು ಎಂದಲ್ಲ. ಆದರೆ, ಜೀವನದ ಸತ್ಯವೇನೆಂದು ತಿಳಿಯುವುದರೆಡೆಗೂ ಗಮನ ಹರಿಸಬೇಕಲ್ಲ?
ಹಣಕ್ಕಾಗಿಯೋ, ಆಸ್ತಿಗಾಗಿಯೋ ಇರುವ ಪ್ರೀತಿ ನಮ್ಮಲ್ಲಿ ಅಸುರಕ್ಷತೆಯ ವಾತಾವರಣವನ್ನು ಮೂಡಿಸುತ್ತದೆ. ಆಗಾಗ ಬದಲಾಗುವ ಮಾರುಕಟ್ಟೆಯಲ್ಲಿ ಹಣದ ಮೌಲ್ಯವೂ ಏರುಪೇರಾಗುವುದರಿಂದ, ಅದನ್ನು ನಮ್ಮ ರಕ್ಷಣೆಗೋಸ್ಕರ ಕೂಡಿಟ್ಟುಕೊಂಡು ಬಳಸಿಕೊಳ್ಳಬಹುದು ಎಂಬುದು ಒಂದು ಬಗೆಯ ಭ್ರಮೆ. ಅಷ್ಟೇ ಅಲ್ಲ, ನಾವು ಏನನ್ನಾದರೂ ಪಡೆದರೆ ಅಥವಾ ಯಾವುದನ್ನಾದರೂ ಪ್ರೀತಿಸಿದರೆ, ಅದನ್ನು ಕಳೆದುಕೊಳ್ಳುವ ಭಯ ನಮ್ಮನ್ನು ಆವರಿಸುತ್ತದೆ. ಬಹಳಷ್ಟು ಬಾರಿ ಪಡೆದಿದ್ದೇವೆ ಎಂಬ ಖುಷಿಗಿಂತ ಕಳೆದುಕೊಳ್ಳುತ್ತೇವೆ ಎಂಬ ಭಯದಲ್ಲೇ ನಾವು ಬದುಕುತ್ತೇವೆ. ಭಯ ಅಥವಾ ಚಿಂತೆಯೇ ನಮ್ಮ ಗುಣಧರ್ಮವಾದರೆ ಎಷ್ಟೇ ಹಣವಿದ್ದರೂ ಸಮಾಧಾನ ಇರುವುದಿಲ್ಲ. ಇಂದು ಊಟದ ಬಗ್ಗೆ ಚಿಂತೆಯಾದರೆ, ನಾಳೆ ಮನೆಯ ಬಗ್ಗೆ, ನಾಡಿದ್ದು ವಾಹನದ ಬಗ್ಗೆ... ಕ್ರಮೇಣ ಚಿಂತೆ ಅಥವಾ ಭಯ ಮಾನಸಿಕ ವೇದನೆಯಾಗಿ ಮಾರ್ಪಡುತ್ತದೆ.
ನಾವು ನಮ್ಮ ಭಯದಿಂದಾಗಿ ಆಸ್ತಿ ಗಳಿಕೆಯಲ್ಲಿ ತೊಡಗಿದ್ದೇವೆ ಎಂದಾದರೆ, ಅದರ ಮೌಲ್ಯ ನಮ್ಮ ಭವಿಷ್ಯದ ಭಯಕ್ಕೆ ಸಮನಾದುದು ಎಂದಾಯಿತು. ಒಂದು ವೇಳೆ ಭವಿಷ್ಯದ ಬಗ್ಗೆ, ನಮಗಿರುವ ಆ ಭಯದ ನಿವಾರಣೆಯಾದರೆ ಅದಕ್ಕೆಂದೇ ಸಂಪಾದಿಸಿದ ಆಸ್ತಿಯ ಮೌಲ್ಯ ಶೂನ್ಯವಾದಂತಾಗಲಿಲ್ಲವೇ? ಹಾಗಾದರೆ ಭಯ ನಿವಾರಣೆಗೆಂದೇ ಸಂಪಾದಿಸಿದ ಆಸ್ತಿಯ ಅಸ್ತಿತ್ವ ಏನು ಭಯವೇನೆಂಬುದು ವ್ಯಕ್ತಿಯ ದೃಷ್ಟಿಕೋನ ಮತ್ತು ಸಂದರ್ಭಕ್ಕೆ ಹೊಂದಿಕೊಂಡು ಇರುವಂತಹದು. ಆದ್ದರಿಂದಲೇ ಒಬ್ಬೊಬ್ಬರಿಗೆ ಒಂದೊಂದು ಬಗೆಯ ಭಯ. ಕೆಲವರಿಗೆ ಕತ್ತಲಲ್ಲಿ ಹಾವು ಕಂಡರೂ ಭಯವಾಗುವುದಿಲ್ಲ. ಇನ್ನು ಕೆಲವರಿಗೆ ಹಗಲಲ್ಲಿ ಹಗ್ಗ ಕಂಡರೂ ಹಾವೆಂದು ತಿಳಿದು ಭಯವಾಗುವುದುಂಟು. ಒಮ್ಮೊಮ್ಮೆ ನಿಜವಾದ ಭಯಕ್ಕಿಂತ ಭಯದ ನಿರೀಕ್ಷೆ  ಹೆಚ್ಚು ಆಘಾತಕಾರಿಯಾಗಿರುತ್ತದೆ. ನಾವು ಭವಿಷ್ಯದ ಬಗ್ಗೆ ಅನಾವಶ್ಯಕ ತಲೆ ಕೆಡಿಸಿಕೊಳ್ಳದೇ ವರ್ತಮಾನದಲ್ಲಿ ಇರುವುದನ್ನು ಕಲಿತರೆ ನಮ್ಮಲ್ಲಿ ಭಯದ ಛಾಯೆ ಇರುವುದಿಲ್ಲ. ಕಳೆದುಹೋದ ದಿನಗಳ ಅನುಭವದಿಂದ ನಾವು ಭಯಪಡುತ್ತೇವೆ ಎಂದಾದರೆ ಅದಕ್ಕೆ ಅರ್ಥವಿಲ್ಲ. ಏಕೆಂದರೆ, ಅದೇ ರೀತಿಯ ದಿನಗಳು ಮರುಕಳಿಸದೆಯೂ ಇರಬಹುದು. ಸತ್ಯವಾಗದೆಯೂ ಇರಬಹುದು. ಭವಿಷ್ಯದಲ್ಲಿ ವೇದನೆ ಪಡಬೇಕಾದೀತು ಎಂದು ಭಯಪಡುವ ವ್ಯಕ್ತಿ ವರ್ತಮಾನದಲ್ಲಿಯೂ ಭಯದಿಂದಾಗಿ ವೇದನೆ ಅನುಭವಿಸುತ್ತಿರುತ್ತಾನೆ.

(ಮುಂದುವರಿಯುವುದು)

- ಕಿರಣ್ ಉಪಧ್ಯಾಯ
keyrun1970@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.