ಎಲ್ಲರ ಮನಃಸ್ಥಿತಿಯೂ ಒಂದೇ!
ಸುಮ್ಮನೇ ನಮ್ಮ ನೆರೆಯವರೊಂದಿಗೆ, ಬಂಧುಗಳೊಂದಿಗೆ ಸ್ಪರ್ಧೆಗಿಳಿದೋ, ಮತ್ಸರಪಟ್ಟೋ ನಮ್ಮನ್ನು ನಾವೇ ಮೂರ್ಖರನ್ನಾಗಿಸಿಕೊಳ್ಳುವುದಕ್ಕಿಂತ ನಮ್ಮ ಸುತ್ತಮುತ್ತಲಿನವರನ್ನು ಪ್ರೀತಿಸಿ, ನಮ್ಮ ಬಲ ವರ್ಧಿಸಿಕೊಳ್ಳುವುದು ಒಳಿತು.
ತುಲನೆ ಯಾವತ್ತೂ ಬಾಹ್ಯದಲ್ಲಿ ಕಾಣುವುದರಿಂದ ಆರಂಭವಾಗುತ್ತದೆ. ನಾವು ಇತರರ ಸಂಪತ್ತನ್ನೋ, ಸೌಕರ್ಯವನ್ನೋ ಕಂಡು ಅವರು ಸುಖಿಗಳೆಂದು ಭಾವಿಸುತ್ತೇವೆ. ಆದರೆ ಅದನ್ನು ಹೊಂದಿದವರ, ಉಪಯೋಗಿಸುತ್ತಿರುವವರ ಮನಃಸ್ಥಿತಿ ಇನ್ನೆಲ್ಲಿಯೋ ಇರುತ್ತದೆ. ನಮಗಿಂತ ಮೇಲಿನವರ ಐಷಾರಾಮಿ ಜೀವನ ಕಂಡು ನಾವು ಅವರು ಸುಖಿಗಳೆಂದು ಎಣಿಸಿದರೆ, ಅವರು ತಮಗಿಂತ ಮಿಗಿಲಾದವರನ್ನು ಕಂಡು ಅದೇ ಭಾವನೆಯಲ್ಲಿ ಇರುತ್ತಾರೆ. ಅದಲ್ಲದೇ ಅವರು ಅವರದೇ ಆದ ತೊಂದರೆಯಲ್ಲಿಯೋ, ಚಿಂತೆಯಲ್ಲಿಯೋ, ಕಲ್ಪನೆಯಲ್ಲಿಯೋ ಇರಬಹುದು. ಅದರಂತೆ ನಮಗಿಂತ ಕೆಳಗಿನ ಅಂತಸ್ತಿನಲ್ಲಿರುವವರು ನಮ್ಮನ್ನು ಕಂಡು ನಾವು ಸುಖಿಗಳೆಂದು ಭಾವಿಸುತ್ತಾರೆ. ಅವರು ನಮ್ಮಂತೆ ಆಗುವ ಕನಸು ಕಾಣುತ್ತಿರುತ್ತಾರೆ. ಒಂದರ್ಥದಲ್ಲಿ ಎಲ್ಲರ ಮನಃಸ್ಥಿತಿಯೂ ಒಂದೇ ರೀತಿಯದ್ದಾಗಿರುತ್ತದೆ.
ಪ್ರತಿಯೊಬ್ಬರೂ ತಮ್ಮ ಬಳಿ ಇರುವುದನ್ನು ಬಿಟ್ಟು ಇಲ್ಲವಾದುದರ ಬಗ್ಗೆ ಚಿಂತಿಸುತ್ತ ಇರುವುದರಿಂದ ಸಂತೃಪ್ತರಾಗಿರುವುದಿಲ್ಲ. ನಮ್ಮಲ್ಲಿರುವ ಪ್ರತಿಭೆಯ ನೂರಕ್ಕೆ ನೂರರಷ್ಟು ಕೊಟ್ಟರೂ, ನಮ್ಮಲ್ಲಿರುವ ಅರ್ಹತೆಯನ್ನೂ, ಶ್ರೇಷ್ಠ ಗುಣವನ್ನೂ ಸಂಪೂರ್ಣವಾಗಿ ನೀಡಿದರೂ, ಕೆಲವರು ನಮಗಿಂತ ಹೆಚ್ಚು ಹೊಂದಿದ್ದಾರೆ ಎಂಬುದಕ್ಕಾಗಿ ನಾವು ಯೋಚಿಸುತ್ತೇವೆ. ನಮಗಿಂತ ಮೇಲಿನವರೊಡನೆ ಹೋಲಿಸಿಕೊಳ್ಳುವುದರಿಂದ ನಮಗೆ ಅರಿವಿಲ್ಲದಂತೆಯೇ ನಮ್ಮಲ್ಲಿ ವೈರತ್ವ, ಮತ್ಸರ, ಅಶಾಂತಿ ಹೆಚ್ಚುವುದಲ್ಲದೆ, ನಮ್ಮ ಬಗ್ಗೆ ನಾವೇ ಅಪ್ರಶಂಸೆ ಪಡುವಂತಾಗುತ್ತದೆ. ನಮಗೆ ಅರಿವಿಲ್ಲದೇ ನಾವು ಒತ್ತಡಕ್ಕೆ ಒಳಗಾಗುತ್ತೇವೆ. ನಮಗಿಂತ ಕೆಳಗಿನವರೊಂದಿಗೆ ನಾವು ಹೋಲಿಸಿಕೊಂಡರೆ ಅವರಿಗಿಂತ ನಾವು ಎಷ್ಟು ಭಾಗ್ಯವಂತರು ಎಂಬುದರ ಅರಿವಾಗುತ್ತದೆ. ಈ ರೀತಿಯ ತುಲನೆ ನಮ್ಮಲ್ಲಿಯ ವ್ಯಾಕುಲತೆಯನ್ನು, ಚಿಂತೆಯನ್ನು ತಗ್ಗಿಸುವುದಷ್ಟೇ ಅಲ್ಲ, ನಮ್ಮಲ್ಲಿರುವ ಮಾನ್ಯತೆಗೆ ಬಲ ಕೊಡುತ್ತದೆ.
ಒಂದು ರೀತಿಯಲ್ಲಿ ನೋಡಿದರೆ ನಮಗಿಂತ ಕೆಳಗಿನವರೊಡನೆಯೂ ತುಲನೆ ಸರಿಯಲ್ಲ. ಏಕೆಂದರೆ ನಮ್ಮ ಸಂತೋಷಕ್ಕಾಗಿ ನಾವು ಇನ್ನೊಬ್ಬರ ಕಷ್ಟವನ್ನು ಉಪಯೋಗಿಸಿಕೊಳ್ಳುತ್ತೇವೆ. ಆದರೆ ಅವರ ಕಷ್ಟಕ್ಕೆ ನಾವೇ ನೇರವಾಗಿ ಹೊಣೆಯಾಗಿರದ ಕಾರಣ ಅವರೊಂದಿಗೆ ನಮ್ಮನ್ನು ಹೋಲಿಸಿಕೊಳ್ಳುವ ಸ್ವಾತಂತ್ರ್ಯವನ್ನು ನಾವು ಬಳಸಿಕೊಳ್ಳಬಹುದು. ಅದಕ್ಕಿಂತ ಮಿಗಿಲಾಗಿ ಪ್ರತಿನಿತ್ಯ, ಪ್ರತಿಕ್ಷಣವೂ ನಾವು ನಮ್ಮ ಬಳಿ ಇರುವುದನ್ನು ಸಂಪೂರ್ಣವಾಗಿ ಉಪಯೋಗಿಸುತ್ತಾ ಮುಂದುವರೆದರೆ ವಾಸ್ತವಿಕತೆಯತ್ತ ಸಮೀಪಿಸುತ್ತೇವೆ ಮತ್ತು ಹೆಚ್ಚಿನ ಸಂತೋಷದಲ್ಲಿ ಇರುತ್ತೇವೆ.
(ಮುಂದುವರಿಯುವುದು)
- ಕಿರಣ್ ಉಪಾಧ್ಯಾಯ
keyrun1970@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

