ಬೈಟುಕಾಫಿ

ಸರ್ವೇ ಜಾಣ ಸುಖಿನೋ ಭವಂತು

ಸರ್ವೇ ಜಾಣ ಸುಖಿನೋ ಭವಂತು
Published On :

ಮೂರ್ಖರ ತಿಂಗಳಿನಲ್ಲಿ  ಚುನಾವಣೆ ಘೋಷಿಸುವುದರ ಮೂಲಕ ಶತಕೋಟಿ ಜನರನ್ನು ಇನ್ನೈದು ವರ್ಷದ  ಮಟ್ಟಿಗೆ  ಮೂರ್ಖರನ್ನಾಗಿಸಲು ನಮ್ಮ ಶತಮೂರ್ಖ ನಾಯಕರು ಸ್ಕೆಚ್ ಹಾಕುತ್ತಿರುವ ಹೊತ್ತಿಗೆ,  ಎಲೆಕ್ಷನ್ ಕುರಿತು ಇಲ್ಲೊಂದು ಸರ್ವೇ ನಡೆದಿದೆ. ಇದು ಬಿಚ್ಚಿಟ್ಟಿರುವ ಅಂಕಿ ಅಂಶಗಳನ್ನು ಒಮ್ಮೆ ಗಮನಿಸಿ ನೋಡಿ. ಈ ಅಂಕಿಅಂಶದಲ್ಲಿ ನೀವು ಯಾವ್ಯಾವುದರಲ್ಲಿ ಪಾಲುದಾರರು ಎಂಬುದನ್ನೂ ನೋಡಿಕೊಳ್ಳಿ. ಇಷ್ಟಕ್ಕೂ ಇದ್ಯಾವುದೂ ನಿಮಗೆ ಗೊತ್ತಿಲ್ಲ ಅಂತೇನಲ್ಲ. ಆದರೆ ಒಮ್ಮೆ ಅಂಕಿಅಂಶಗಳನ್ನು ಗಮನಿಸಿದರೆ ಕಡೆಯಪಕ್ಷ ನಿಮ್ಮ ಮನಸು ಗುಣಾತ್ಮಕ ಬದಲಾವಣೆಯತ್ತ ಹೊರಳಬಹುದೇನೋ ಅಂತಷ್ಟೇ.

ಬಾಪ್ ನಂಬ್ರಿ .. ಬೇಟಾ ದಸ್ ನಂಬ್ರಿ - ಇವ್ರನ್ನ ನಂಬೋದ್ ಹೆಂಗ್ರಿ ?
ಚುನಾವಣೆಯಲ್ಲಿ ಇಂತಿಷ್ಟು ಮಾತ್ರ ಖರ್ಚು ಮಾಡಬೇಕು ಎಂಬ ನೀತಿ ಸಂಹಿತೆ ಇರುವುದು ಗೊತ್ತಿರುವ ವಿಚಾರ. ಆದರೆ ಈಗಿನ ಪರಿಸ್ಥಿತಿಯಲ್ಲಿ ಅಷ್ಟೇ ಖರ್ಚಿನಲ್ಲಿ ತಮ್ಮ ಸ್ವಂತ ಹೆಂಡತಿ ಮಕ್ಕಳ ವೋಟು ಗಿಟ್ಟಿಸುವುದು ಕೂಡ ಕಷ್ಟ. ಹಾಗಾಗಿ ಕದ್ದುಮುಚ್ಚಿ ನೀತಿಸಂಹಿತೆ ಮೀರುವುದು ರಾಜಕಾರಣಿಗಳಿಗೆ ಅನಿವಾರ್ಯ. ಹಾಗೆಂದೇ ಚುನಾವಣಾ ಆಯೋಗವೂ ಪಾಪ ಹೋಗ್ಲಿ ಅಂತ ಲೂಸ್ ಬಿಟ್ಟಿರುತ್ತೆ. ಆದರೆ ಇಲ್ಲಿ ನಮ್ಮ ಅಭ್ಯರ್ಥಿಗಳು  ಕೊಟ್ಟಿರುವ ಮಿತಿಗಿಂತ ಹತ್ತು ಪಟ್ಟು ಖರ್ಚು ಮಾಡುತ್ತಾರೆ ಎಂಬ  ಅಂಕಿಅಂಶ ಬಹಿರಂಗಗೊಂಡಿದೆ. ಅಲ್ಲಿಗೆ ಮುಂದಿನ ಐದು ವರ್ಷದಲ್ಲಿ ಪ್ರತಿ ವಸ್ತುವಿನ ಬೆಲೆಯೂ ಹತ್ತು ಪಟ್ಟು ಹೆಚ್ಚಲಿದೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ ತಾನೇ?

ಕರುಳಿನ 'ಕುಡಿ'
ಸರ್ಕಾರದ ಎಂಜಿನ್ ನಡೆಯೋಕೆ ಎಣ್ಣೆ ಇಲ್ದೆ ಹೋದ್ರೆ ಹೆಂಗೆ?  ಅದು ಇಂಧನ ಅಲ್ವೇ?! ಸರ್ಕಾರದ ಎಂಜಿನ್ ಅಂದ್ರೆ ನಾವು ಮತದಾರರು. ಹಾಗಾಗಿ ಎಂಜಿನ್‌ಗೆ ಎಣ್ಣೆ ಹಾಕಿಸ್ಲೇಬೇಕು. ಈ ನಂಬಿಕೆಯಲ್ಲೇ ಚುನಾವಣೆಯ ಹೊತ್ತಿಗೆ ಸರ್ವಿಸ್ ನೆಪದಲ್ಲಿ ಹೆಂಡದ ಸರಬರಾಜು ನಡೆಯುತ್ತದೆ. ತಪ್ಪು ಅನ್ನೋಕಾಗತ್ತಾ?    ಬ್ರೈನಿಗೂ ಕೈಗೂ ಕನೆಕ್ಷನ್ ತಪ್ಸಿದ್ರೆ ತಾನೇ ವೋಟು ಒತ್ತಿಸ್ಕೊಳೋಕ್ ಆಗೋದು! ಈ ಸತ್ಯ ಗೊತ್ತಿರೋದ್ರಿಂದ ಅಕ್ಕರೆಯಿಂದ ಸಕ್ಕರೆ ಮಾತಾಡಿ ಲಿಕ್ಕರ್ ಕೊಡಿಸ್ತಾರೆ. ಸರ್ವೇ ಏನ್ ಹೇಳತ್ತೆ ಗೊತ್ತಾ? ಇಡೀ  ನ್ಯೂಜಿಲೆಂಡ್ ದೇಶದಲ್ಲಿ ಉತ್ಪಾದಿಸಲಾಗುವ ಹಾಗೂ ಮಾರಾಟವಾಗುವ  ಒಟ್ಟು ಮದ್ಯದ ಹತ್ತು ಪಟ್ಟು ಮದ್ಯ ನಮ್ಮ ದೇಶದ ಈ ಒಂದೇ ಚುನಾವಣೆಯಲ್ಲಿ ಹಂಚಲಾಗುತ್ತದೆ. ಆ ಮಟ್ಟಿಗೆ ಇದು 'ಮದ್ಯಂ'ತರ ಚುನಾವಣೆ!

ಅತ್ತ ಪುಲಿ ಇತ್ತ ದರಿ
ಇರೋವ್ರಲ್ಲೇ ಕಡಿಮೆ ಭ್ರಷ್ಟರನ್ನು ಆರಿಸಿ ವೋಟ್ ಹಾಕಿ ಅಂತ ಎಲ್ಲರೂ ಹೇಳ್ತಾರೆ ನಿಜ. ಆದರೆ 'ನನ್ನನ್ನೇ ಕಡಿಮೆ ಭ್ರಷ್ಟ ಅಂತ ಡಿಸೈಡ್ ಮಾಡು ಪ್ಲೀಸ್‌' ಅಂತ ಲಂಚ ಕೊಡೋಕ್ ಬರ್ತಾರಲ್ಲಪ್ಪ ಅಭ್ಯಥಿಗಳು! ಇದಕ್ಕೇನು ಮಾಡೋದು? ಎಷ್ಟೋ ಸಲ ಇದೇ ಬೇಸರದಲ್ಲಿ ಯಾರೋ ಒಬ್ರಿಗೆ ವೋಟ್ ಮಾಡುವ ಜನರು ಚುನಾವಣೆಯ ನಂತರ, 'ಛೇ ಛೇ ಇವನಿಗೆ ವೋಟ್ ಮಾಡಬಾರದಿತ್ತು' ಎಂದು ಮುಂದಿನ ಚುನಾವಣೆ ತನಕ ನಿರಂತರ ಲೊಚಗುಟ್ಟುತ್ತಿರುತ್ತಾರೆ. ಅಂಕಿಅಂಶದ ಪ್ರಕಾರ ಶೇ. 56 ಮಂದಿ ಈ ರೀತಿ ತಮ್ಮ ಆಯ್ಕೆ ಬಗ್ಗೆ ಬೇಸರಿಸ್ಕೊಳ್ತಾರಂತೆ. ಥೇಟ್ ಹೆಂಡತಿ, ಮೊಬೈಲ್‌ಗಳ ಆಯ್ಕೆಯಲ್ಲಿ ಎಡವಿ ಬೇಜಾರಾದಂತೆ! ಈ 56 ಪರ್ಸ್ಸೆಂಟಲ್ಲಿ  ನೀವಿದ್ದೀರಾ?

ಹಣಾ-ಹಣಿ
ನೋಟ್ ಬಿಸಾಕಿದ್ರೆ ವೋಟ್ ಬೀಳುತ್ತೆ ಅನ್ನೋದು ನಮ್ಮ ರಾಜಕಾರಣಿಗಳಿಗೆ ಗೊತ್ತಿರೋದ್ರಿಂದಲೇ ಚುನಾವಣಾ ಹಣಾಹಣಿ ಶುರು ಆಗುತ್ತಿದ್ದಂತೆಯೇ ಹಣ ಹಣಿದು ಮತ ಗಳಿಸಲು ಹವಣಿಸುತ್ತಾರೆ. ಹೀಗೆ ದುಡ್ಡಿಗಾಗಿ ಮತ ಮಾರಿಕೊಳ್ಳುವವರ ಸಂಖ್ಯೆ ಶೇಕಡಾ28 ಎಂದು ಅಂಕಿಅಂಶ ತಿಳಿಸುತ್ತದೆ!

ಹೆಸರು ಮಾಡಿದವರ ಹೆಸರೇ ಮತಪಟ್ಟಿಯಲ್ಲಿಲ್ಲ!
'ಸೆಲೆಬ್ರಿಟಿಗಳು, ಬುದ್ಧಿಜೀವಿಗಳು ಎಲ್ಲರದೂ ಒಂದೇ ಮಾತು. ಮತದಾನ ನಿಮ್ಮ ಹಕ್ಕು. ಯಾವ ಕಾರಣಕ್ಕೂ ಮತದಾನದಿಂದ ದೂರ ಉಳಿಯಬೇಡಿ.' ಆದರೆ ಅವರೇ ಮತ ಚಲಾಯಿಸಿರುವುದಿಲ್ಲ!
45 ಪರ್ಸೆಂಟ್ ಬುದ್ಧಿಜೀವಿಗಳು ಮತದಾನ ಮಾಡುತ್ತಿಲ್ಲ ಎಂದು ಅಂಕಿ ಅಂಶ ತಿಳಿಸುತ್ತದೆ. ಇದಕ್ಕೆ ಕಾರಣ ಮತದಾರರ ಪಟ್ಟಿಯಿಂದಲೇ ಅವರ ಹೆಸರುಗಳು ಕಾಲಿಗೆ ಬುದ್ಧಿ ಹೇಳಿರುವುದು.
ಇದೀಗ ಫೇಸ್ ಬುಕ್ ವಾಟ್ಸ್‌ಆ್ಯಪ್ ಬಂದಮೇಲೆ ವೋಟ್ ಮಾಡೋದು ಕೂಡ ಕೆಲವರಿಗೆ ಶೋಕಿ ಆಗಿಬಿಟ್ಟಿದೆ. ನಗರ ಪ್ರದೇಶದ 42 ಪರ್ಸೆಂಟ್ ಯುವಶಕ್ತಿ ಫೇಸ್‌ಬುಕ್ಕಲ್ಲಿ ತಾವು ಮತ ನೀಡಿ ಶಾಯಿಕಲೆ ಮಾಡಿಕೊಂಡಿರುವ ಬೆರಳಿನ ಫೋಟೋ ಅಪ್‌ಲೋಡ್ ಮಾಡಿ ಲೈಕು ಕಮೆಂಟು ಗಿಟ್ಟಿಸಲೆಂದೇ ವೋಟು ಹಾಕುತ್ತಾರೆ. ಕೆಲವರು ಸುಮ್‌ಸುಮ್ನೆ ಕೈಗೆ ಇಂಕ್ ಹಚ್ಚಿಕೊಂಡು ವೋಟ್ ಮಾಡಿದೆ ಎಂದು ಫೋಟೋ ಹಾಕ್ಕೊಳೋದೂ ಇದೆ ಬಿಡಿ.
ಶೇ.75 ಅಭ್ಯರ್ಥಿಗಳು ತಮ್ಮ ಆಸ್ತಿ ಘೋಷಣೆ ಮಾಡುವಾಗ ಕಡುಬಡವರಾಗಿರುತ್ತಾರೆ. ಅವರಿಗೆ ಬ್ಯಾಂಕಲ್ಲಿ ಸಾಲ ಇರುತ್ತದೆ. ಸಾಲ ಮಾಡಿ ಕಾರು ಖರೀದಿ ಮಾಡಿರುತ್ತಾರೆ. ಬಾಡಿಗೆ ಮನೆಯಲ್ಲಿ ಇರ್ತಾರೆ. ಖರ್ಚಿಗೂ ಕಾಸಿಲ್ಲ ಅಂತ ತೋರಿಸ್ಕೊಳ್ತಾರೆ. ಅದಕ್ಕೇ ಅಲ್ವೇ ಎಲೆಕ್ಷನ್ನಿಗೆ ನಿಲ್ಲೋದು. ಎಲ್ಲಾರು ಮಾಡುವುದು ದುಡ್ಡಿಗಾಗಿ!
37ಪ್ರತಿಶತ ಮಂದಿಗೆ ಪ್ರಜಾಪ್ರಭುತ್ವದ ಅರ್ಥವೇ ಗೊತ್ತಿಲ್ಲ. ಪ್ರಜೆಗಳೇ ಪ್ರಭುಗಳು ಅಂದಮೇಲೆ ನಾವೇ ರಾಜರು. ನಾವ್ಯಾಕೆ ಮತ ಹಾಕಿ ಇನ್ನೊಬ್ಬರನ್ನು ರಾಜನಾಗಿಸ್ಬೇಕು ಅನ್ನೋ ಉಡಾಫೆ!
ಮಜಾ ನೋಡಿ. ಜನಕ್ಕೆ ಮತ ಹಾಕೋದನ್ನ ತಪ್ಪಿಸ್ಕೊಳೋಕೆ ಏನೇನು ಕಾರಣ ಸಿಗತ್ತೆ:
ಶೇ. 18 ಮಂದಿ ಉದ್ದದ ಕ್ಯೂ ಇದೆ ಎಂದು, ಮತಗಟ್ಟೆವರೆಗೆ ಹೋಗಿ ವಾಪಸ್ ಬರ್ತಾರೆ.
ಶೇ. 26 ಮಂದಿ ಮಳೆ ಬರ್ತಾ ಇದ್ರೆ ಮತ ಹಾಕೋಕೆ ಹೋಗೋದಿಲ್ಲ.
ಶೇ. 18 ಮಂದಿ 'ಮಳೆ ಬರುವಾ ಹಾಗಿದೆ' ಅಂತ ಮನೇಲೆ ಕೊಡೆ ಹಿಡಿದು ಕೂರ್ತಾರೆ.
ಶೇ. 5 ಮಂದಿಯ ಪರಿಸ್ಥಿತಿ ಹೇಗಂದ್ರೆ, ಮಳೆಯ ಸಮಯದಲ್ಲಿ ಮತಗಟ್ಟೆ ತಲುಪೋದಕ್ಕೇ ಆಗೋದಿಲ್ಲ. ರಸ್ತೆಗಳು, ಗಲ್ಲಿಗಳು, ವಾಹನ ವ್ಯವಸ್ಥೆ ಹಾಗಿರುತ್ತವೆ! 


- ನವೀನ್ ಸಾಗರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.