ಬೈಟುಕಾಫಿ

ಹೊಟ್ಟೆಗೇನ್ ತಿಂತಾರೆ?

ಹೊಟ್ಟೆಗೇನ್ ತಿಂತಾರೆ?
Published On :

ರಾಜಕಾರಣಿಯೊಬ್ಬ ಜನಪ್ರಿಯನಾದನೆಂದರೆ ಸಾಕು, ಆತ ಉಡುವ ಬಟ್ಟೆಯಿಂದ ಹಿಡಿದು ಸೇವಿಸುವ ಆಹಾರದವರೆಗೆ ಎಲ್ಲವೂ ಸುದ್ದಿಯಾಗುತ್ತವೆ. ನಮ್ಮ ಹರದನಹಳ್ಳಿ ದೊಡ್ಡೇಗೌಡ ದೇವೇಗೌಡರು ಪ್ರಧಾನಿಯಾದಾಗ, ಅವರು ಸೇವಿಸುತ್ತಿದ್ದ ರಾಗಿ ಮುದ್ದೆಗೆ ದೇಶಾದ್ಯಂತ ಡಿಮ್ಯಾಂಡ್ ಬಂದಿರಲಿಲ್ಲವೆ? ಹಾಗೇ ಲಾಲು ಯಾದವ್ ಕಾಲದಲ್ಲಿ ಮೊಸರು ಮತ್ತು ಖಿಚಡಿ, ಮೊರಾರ್ಜಿ ಕಾಲದಲ್ಲಿ ಸ್ವಮೂತ್ರಪಾನ!
ಈ ಸಲ ಚುನಾವಣೆಯ ಪ್ರಮುಖ ಹುರಿಯಾಳುಗಳಾದ ನರೇಂದ್ರ ಮೋದಿ, ರಾಹುಲ್ ಗಾಂಧಿ, ಅರವಿಂದ ಕೇಜ್ರಿವಾಲ್ ಏನು ಸೇವಿಸುತ್ತಾರೆ? ಪ್ರಚಾರಯಾತ್ರೆ, ರ್ಯಾಲಿ, ಸಾವಿರಾರು ಮಂದಿಯನ್ನು ಉದ್ದೇಶಿಸಿ ಭಾಷಣ ಎಂದೆಲ್ಲ ಖರ್ಚಾಗುವ ಶಕ್ತಿ ್ಣಅಷ್ಟಿಷ್ಟಲ್ಲ. ಸಾರ್ವಜನಿಕ ಜೀವನದ ಸಂದರ್ಭದಲ್ಲಿ ಯಾವ ಆಹಾರ ಕೊಂಡೊಯ್ಯುತ್ತಾರೆ. ಸೇವಿಸುತ್ತಾರೆ ಎಂಬ ಕುತೂಹಲ ನಿಮಗಿದ್ದೇ ಇರಬಹುದು. ಅವರ ಆಹಾರ ಪದ್ಧತಿ ಹೇಗಿದೆ ನೋಡಿ.

ಮೋದಿ ಶಕ್ತಿಯ ರಹಸ್ಯ
63 ವರ್ಷದ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ 90 ಕೆಜಿ ತೂಗುತ್ತಾರೆ. ಎದೆಯ ಸುತ್ತಳತೆ 56 ಇಂಚು. ಭಾಷಣದ ವೇಳೆ ಅಥವಾ ಹೊರಗೆ ಹೋಗುವ ಸಂದರ್ಭ ನಿಂಬೆಯ ಪಾನಕವನ್ನು ಯಾವಾಗಲು ಜೊತೆಗಿರಿಸಿಕೊಂಡಿರುತ್ತಾರೆ. ಸಂಜೆ ಸ್ವಲ್ಪ ಗುಜರಾತಿ ಊಟದೊಂದಿಗೆ ಕಿಚಡಿ ಸೇವಿಸುವ ರೂಢಿಯಿದೆ. ಸದ್ಯ ಚೈತ್ರ ನವರಾತ್ರಿ ದಿನಗಳಲ್ಲಿ 9 ದಿನ ಉಪವಾಸ. ನಿಂಬೆ ಪಾನಕ ಮತ್ತು ಬಿಸಿ ನೀರಷ್ಟೇ ಸೇವನೆ.

ಚಾಕೊಲೇಟ್ ಯುವರಾಜ
43 ವರ್ಷದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮಿತಭಕ್ಷಕ. ಮಿತ ಆಹಾರ ಸೇವನೆಯಲ್ಲಿ ನಂಬಿಕೆ ಇರಿಸಿಕೊಂಡಿದ್ದಾರೆ. ರಾಹುಲ್ ಮುಂಜಾನೆಯ ಉಪಹಾರವನ್ನು ಎಂದೂ ಮಿಸ್ ಮಾಡುವುದಿಲ್ಲ. ಕೆಲ ಸಂದರ್ಭಗಳಲ್ಲಿ ನೂಡಲ್ಸ್ ಅನ್ನು ಸೇವಿಸುತ್ತಾರೆ. ಪ್ರಯಾಣದ ಸಂದರ್ಭಗಳಲ್ಲಿ ಒಣ ಅಥವಾ ಕರಿದ ಪದಾರ್ಥಗಳಿಂದ ದೂರವಿರುತ್ತಾರೆ. ಕೋಲಾ ಅಥವಾ ನಿಂಬೆ ಪಾನಕ ಕುಡಿಯುತ್ತಾರೆ. ಸಸ್ಯಾಹಾರ, ಮಾಂಸಾಹಾರ ಹಾಗೂ ಕರಾವಳಿ ಭಾರತೀಯ ಭಕ್ಷ್ಯಗಳು ಕಾಂಗ್ರೆಸ್ ಯುವರಾಜನಿಗೆ ಪ್ರಿಯವಾದವುಗಳು. ಸಿಹಿ ತಿನಿಸುಗಳನ್ನು ಇಷ್ಟುಪಡುವವರಾಗಿದ್ದು ಚಾಕೊಲೇಟ್‌ಗಳನ್ನು ಪ್ರೀತಿಸುತ್ತಾರೆ.

ಕೇಜ್ರಿ ಲಂಚ್ ಬಾಕ್ಸ್
45 ವರ್ಷದ ಮಾಜಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೆನಪಾಗುವುದೇ ಟಿಫನ್ ಬಾಕ್ಸ್‌ನೊಂದಿಗೆ. ದೆಹಲಿಯ ರೈಲ್ವೇ ಭವನದ ಹೊರಗೆ ಧರಣಿ ಕುಳಿತಾಗ ಕೇಜ್ರಿವಾಲ್ ಸೇವಿಸುತ್ತಿದ್ದುದು ಹೆಂಡತಿ ಟಿಫನ್ ಬಾಕ್ಸ್‌ನಲ್ಲಿ ತುಂಬಿಸಿ ಕಳುಹಿಸುತ್ತಿದ್ದ ಆಹಾರವನ್ನು. ಕೇಜ್ರಿವಾಲ್‌ಗೆ ಅಂತಹ ಯಾವುದೇ ನಿಯಮಿತ ಆಹಾರ ಪದ್ಧತಿ ಇಲ್ಲ. ಮಸಾಲೆ ರಹಿತ ಪದಾರ್ಥಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಾರೆ. ಹೆಸರು ಬೇಳೆ ಪದಾರ್ಥ, ಹುರಿದ ಕಡಲೆ ಮತ್ತು ಜೀರ್ಣಕಾರಿ ಬಿಸ್ಕೇಟ್‌ಗಳನ್ನು ಹೊರಗೆ ಹೋಗುವಾಗ ಕೊಂಡುಹೋಗುತ್ತಾರೆ.


- ಮಂಜು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.