ಬೈಟುಕಾಫಿ

ಹಕ್ಕಿಗಳಿಗೂ ಹಕ್ಕಿದೆ

Published On :

ನೇಹಾಳು ಹುಟ್ಟಿ ಬೆಳೆದದ್ದು ನಗರದಲ್ಲೇ ಆದರೂ ಶಾಲೆಗೆ ರಜ ಬಂದಾಗ ಅಮ್ಮನೊಡನೆ ತನ್ನ ಅಜ್ಜಿಯ ಮನೆಗೆ ಖುಷಿಯಲ್ಲೇ ಹೋಗುತ್ತಿದ್ದಳು. ಅಲ್ಲಿನ ತೋಟದ ಮನೆ, ಸುತ್ತಲೂ ಮರ ಗಿಡಗಳು, ಗದ್ದೆಗಳಲ್ಲದೇ ಅಲ್ಲಿದ್ದ ಅಳಿಲು, ಕೋಳಿ, ಬೆಕ್ಕಿನ ಮರಿಗಳು. ನಾಯಿಗಳೊಂದಿಗೆ ಆಡಬಹುದೆಂಬ ಆಸೆಯೇ ಇದಕ್ಕೆ ಕಾರಣವಾಗಿತ್ತು. ಮನೆಯ ಮುಂದಿನ ದೊಡ್ಡ ಮಾವಿನ ಮರದ ಮೇಲೆ ವಾಸವಿದ್ದ ಗಿಳಿಗಳು, ಕೋಗಿಲೆಗಳು ನೇಹಳಿಗೆ ಗೆಳೆಯರೇ ಆಗಿಬಿಟ್ಟಿದ್ದರು. ಅಜ್ಜಿಯ ಮನೆಯಲ್ಲಿ ಕೋಗಿಲೆಯ ಕುಹು ಕುಹುವೇ ಬೆಳಗಿನ ಅಲಾರಾಂ ಆಗಿತ್ತು. ಗಿಳಿಗಳು ಕಚ್ಚಿ ಬಿಸುಟ ಮಾವಿನ ಕಾಯಿಯ ರುಚಿ ಯಾವ ಪಿಜ್ಜಾಗೂ ಇಲ್ಲ ಎಂದು ಕುಣಿದು ಕುಪ್ಪಳಿಸುತ್ತಿದ್ದಳು. ಹೀಗೆ ಪರಿಸರವನ್ನು ಪ್ರೇಮಿಸುತ್ತಿದ್ದ ನೇಹಾ ರಜೆ ಮುಗಿದಾಗ ಮನಸ್ಸಿಲ್ಲದ ಮನಸ್ಸಿನಿಂದ ನಗರಕ್ಕೆ ಬಂದಳು. ಶಾಲೆ ಪ್ರಾರಂಭವಾಗಿ ಓದು-ಬರೆಹ. ಹೋಂ ವರ್ಕ್‌ಗಳ ನಡುವೆ ಮಾವಿನ ಮರ, ಪಕ್ಷಿಗಳ ಚಿಲಿಪಿಲಿಗಳು ಮಾರ್ದನಿಸುತ್ತಿತ್ತು. ಶಾಲೆಗೆ ಅಪ್ಪ ಕರೆದೊಯ್ಯುವಾಗ ಸಿಗುವ ಗಿಳಿಗಳನ್ನು ಮಾರುವ ಅಂಗಡಿಯನ್ನು ದಿನವು ನೋಡುತ್ತಿದ್ದವಳು ಒಂದು ದಿನ 'ಅಪ್ಪಾ ನನಗೆ ಅಲ್ಲಿರುವ ಎಲ್ಲಾ ಗಿಳಿಗಳು ಬೇಕು ಇವತ್ತೇ ಕೊಡಿಸು' ಎಂದು ಹಟ ಹಿಡಿದಳು. ಎಂದೂ ಯಾವುದಕ್ಕೂ ಹಟ ಮಾಡದವಳು ಹೀಗೇಕೆ ಎಂದು ಯೋಚಿಸಿದ ಅಪ್ಪ, 'ಮಗಳೇ ಹಾಗೆಲ್ಲಾ ಗಿಳಿಗಳನ್ನು ಕೊಳ್ಳಬಾರದು, ಅವುಗಳನ್ನು ಬಂಧಿಸಿಡಬಾರದು. ಬೇಡಾ ಮಗಳೇ' ಎಂದರಲ್ಲದೇ ಮುಂದುವರಿದು 'ಅಷ್ಟು ಗಿಳಿಗಳನ್ನು ಕೊಂಡರೆ ಸಾಕುವುದು ಕೂಡಾ ತುಂಬಾ ಕಷ್ಟ' ಎಂದರು. ಆಗ ನೇಹಾಳು 'ಅಪ್ಪಾ, ಅಪ್ಪಾ ಅವುಗಳನ್ನೆಲ್ಲ ಕೊಂಡು ನಾನು ಕೂಡಿ ಹಾಕುವುದಿಲ್ಲ. ಅಲ್ಲೇ ಆಗಲೇ ಹಾರಿಬಿಡುತ್ತೇನೆ. ಅವುಗಳನ್ನು ಬೇರೆ ಯಾರಾದರೂ ಕೊಂಡರೆ ಅವುಗಳಿಗೆ ಬಂಧನ ತಪ್ಪಿದ್ದಲ್ಲ. ನಾವು ಈಗಲೇ ಕೊಂಡು ಹಾರಿ ಬಿಡೋಣ. ಅಜ್ಜಿ ಮನೆಯ ಮುಂದಿನ ಮಾವಿನ ಮರದಲ್ಲಿನ ಗಿಳಿಗಳಂತೆ ಇವುಗಳು ಕೂಡ ಸ್ವಚ್ಛಂದ ಜೀವನ ಸಾಗಿಸಲಿ'.

-ದತ್ತಾ ಹುರಿಗಾಳ್, ನೇಗಲಾಲ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.