ಈಕೆ ಬ್ರಹ್ಮಸೃಷ್ಟಿಯೆ?

ಪುರಾಣಿಕರು (ಪುರಾಣ ಕಥೆ ಹೇಳುವವರು) ತಮ್ಮ ಮುಂದೆ ನೆರೆದ ಭಕ್ತಾದಿಗಳಿಗೆ ಭಾರಿ ಉತ್ಸಾಹದಲ್ಲಿ ಸೃಷ್ಟಿ ಪುರಾಣವನ್ನು ವಿವರಿಸುತ್ತಿದ್ದರು. ಆದಿಮಾಯೆ, ಆಕೆಯಿಂದ ಉದಿಸಿದ ತ್ರಿಮೂರ್ತಿಗಳು, ಮೂವರಿಗೂ ಕಾರ್ಯಗಳ ಹಂಚಿಕೆ, ನಂತರ ಅವರ ವಾಗ್ವಾದ. ಬ್ರಹ್ಮನ ಸೃಷ್ಟಿಯ ಕಾರ್ಯವನ್ನು ಪುರಾಣಿಕರು ವಿವರವಾಗಿಯೇ ವರ್ಣಿಸಿದರು. ಕೋಟ್ಯಂತರ ಸಸ್ಯಜಾತಿಗಳು, ಲಕ್ಷಾಂತರ ಪ್ರಾಣಿಜಾತಿಗಳು, ಸಾವಿರಾರು ದೇವತೆಗಳು ಎಲ್ಲವೂ ಸೃಷ್ಟಿಯಾದವು.
ಅಷ್ಟರಲ್ಲಿ ಅಲ್ಲಿಗೆ ಪುರಾಣಿಕರ ಮಗಳು ಬರಬೇಕೆ? ಆಕೆಯೋ ಅಮಿತ ಸೌಂದರ್ಯವತಿ. ಅವಳನ್ನು ನೋಡಿ ಮೊದಲೇ ಚಿತ್ತದಲ್ಲಿ 'ಚಿತ್' ಆಗಿದ್ದ ತರುಣನೊಬ್ಬ ಕೂತಲ್ಲೇ ಕವಿತೆ ರಚಿಸಿಬಿಟ್ಟ.
ಅಧರದ್ಯುತಿರಸ್ತಪಲ್ಲವಾ ಮುಖಶೋಭಾ ಶಶಿಕಾಂತಿಲಂಘಿನೀ
ತನುರಪ್ರತಿಮಾ ಚ ಸುಭ್ರುವೋ ನ ವಿಧೇರಸ್ಯ ಕೃತಿಂ ವಿವಕ್ಷತಿ
ಆಹಾ, ಈ ತರುಣಿಯ ತುಟಿಗಳ ಚೆಲುವು ಎಳೆಯ ಮಾವಿನ ಚಿಗುರುಗಳನ್ನು ಮೀರಿಸುವಂತಿದೆ. ಇವಳ ಮುಖದ ಕಾಂತಿಯನ್ನು ನೋಡಿ ಚಂದ್ರನೇ ಮುಖ ಮುಚ್ಚಿಕೊಂಡಿದ್ದಾನೆ. ಸುಂದರ ಹುಬ್ಬುಗಳು ಬಿಲ್ಲಿನಂತಿವೆ. ಈಕೆಯ ಶರೀರವನ್ನು ಶ್ಲಾಘಿಸಲು ಸೃಷ್ಟಿಯಲ್ಲಿ ತುಲನೆ ಮಾಡಬಹುದಾದ ಸಂಗತಿಗಳೇ ಇಲ್ಲ. ಹಾಗಾಗಿ ಈಕೆಯ ಸೃಷ್ಟಿಯನ್ನು ಬ್ರಹ್ಮನು ಮಾಡಿರಲಿಕ್ಕಿಲ್ಲ!
ಬ್ರಹ್ಮನು ಮಾಡಿರಲಾರ ಯಾಕೆಂದರೆ, ತನ್ನ ಸೃಷ್ಟಿಯನ್ನು ನಾಚಿಸುವ ಇನ್ನೊಂದು ಸೃಷ್ಟಿಯನ್ನು ಅವನಾದರೂ ಮಾಡಲು ಹೇಗೆ ಸಾಧ್ಯ? ಆದ್ದರಿಂದ ಈಕೆಯನ್ನು ಮನ್ಮಥನೋ ವಸಂತನೋ ಜಯಂತನೋ ಸೃಷ್ಟಿ ಮಾಡಿರಬೇಕು ಎಂಬುದೇ ಇಲ್ಲಿನ ತಾತ್ಪರ್ಯ. ಹೀಗೆ ಬ್ರಹ್ಮಸೃಷ್ಟಿಯ ಪುರಾಣಿಕರ ಪುಂಗಿ ಅವರ ಮಗಳಿಂದಲೇ ಬಂದ್ ಆಯ್ತು.ಟಿ
-ಹರಿಹರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


