ಬೈಟುಕಾಫಿ

ಡೋಣಿ ತಣದಲ್ಲಿ ನವಿಲು ನರ್ತನ

ಡೋಣಿ ತಣದಲ್ಲಿ ನವಿಲು ನರ್ತನ
Published On :

ಬರದ ನಾಡು ಬಿಜಾಪುರ ಜಿಲ್ಲೆಯಾದ್ಯಂತ ಹರಿಯುತ್ತಿರುವ ಡೋಣಿ ನದಿ ತಟ ಈಗ ಹಲವಾರು ಜಾತಿಯ ಪ್ರಾಣಿ ಪಕ್ಷಿಗಳ ಆಶ್ರಯತಾಣವಾಗಿ ಮಾರ್ಪಡುತ್ತಿದೆ. ಡೋಣಿ ನದಿ ಹರಿಯುವ ಪ್ರದೇಶದಲ್ಲಿ ದಟ್ಟವಾಗಿ ಬೆಳೆದಿರುವ ಜಾಲಿ ಗಿಡಗಳ ಪೊದೆಗಳು ನವಿಲುಗಳ ಆಶ್ರಯ ತಾಣವಾಗಿದ್ದು, ನವಿಲು ಸಂತತಿ ಹೆಚ್ಚಾಗಲು ಕಾರಣವಾಗಿದೆ.
ನವಿಲುಗಳು ಗುಂಪು ಗುಂಪಾಗಿ ರಸ್ತೆ ಬದಿ, ನದಿ ತಟದಲ್ಲಿ ಓಡಾಡುತ್ತಿರುವುದನ್ನು ಈಗ ಕಾಣಬಹುದು. ಈ 'ರೈತರ ಮಿತ್ರ'ರ ಹೆಚ್ಚಳ ಪಕ್ಷಿ ಪ್ರೇಮಿಗಳಲ್ಲಿ ಸಂಚಲನ ಮೂಡಿಸಿದೆ. ಡೋಣಿ ನದಿಯು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ ಹತ್ತಿರ ಉಗಮವಾಗಿ ಬಿಜಾಪುರ ಜಿಲ್ಲೆಯಲ್ಲಿ ಹರಿದು ಯಾದಗಿರಿ ಜಿಲ್ಲೆಯ ಕೋಡೆಕಲ್ಲ ಹತ್ತಿರ ಕೃಷ್ಣಾ ನದಿ ಸೇರುತ್ತದೆ. ನದಿಯ ಎರಡು ಬದಿಯಲ್ಲಿ ಹೇರಳವಾಗಿ ಬಳ್ಳಾರಿ ಜಾಲಿ ಮರಗಳು ಬೆಳೆದಿವೆ. ಹೀಗಾಗಿ ಡೋಣಿ ನದಿ ತಟ ವಿವಿಧ ಜಾತಿಯ ಪ್ರಾಣಿ ಪಕ್ಷಿಗಳಿಗೆ ಆಶ್ರಯ ತಾಣವಾಗಿ ಮಾರ್ಪಟ್ಟಿದೆ. ನವಿಲುಗಳ ಜೊತೆಗೆ ಮೊಲ, ನರಿ, ಕಾಡುಹಂದಿ, ಉಡ, ಹಾವು, ಬುರಲಿ, ಕೌಜಗ ಸೇರಿದಂತೆ ನಾನಾ ಪ್ರಾಣಿ-ಪಕ್ಷಿಗಳು ಈ ಪ್ರದೇಶದಲ್ಲಿ ವಾಸಿಸುತ್ತಿವೆ. ಇವುಗಳ ಜೊತೆಗೆ ವಿದೇಶಿ ಹಕ್ಕಿಗಳು ಕೂಡಾ ಸಂತಾನೋತ್ಪತ್ತಿಗಾಗಿ ಡೋಣಿ ನದಿ ತಟದಲ್ಲಿ ಬೀಡು ಬಿಟ್ಟಿರುವುದು ಸ್ಥಳೀಯರಲ್ಲಿ ಖುಷಿ ತಂದಿದೆ.
ಡೋಣಿ ನದಿ ಪ್ರದೇಶ ನವಿಲುಗಳ ನೆಚ್ಚಿನ ತಾಣ. ಮೊಟ್ಟೆಗಳನ್ನು ಇಡಲು ಪೊದೆಗಳಿರಬೇಕು. ಡೋಣಿ ನದಿ ತಟ ಇದಕ್ಕೆ ಪೂರವಾಗಿದ್ದು, ನವಿಲುಗಳ ಸಂತಾನಾಭಿವೃದ್ಧಿಗೆ ಅನುಕೂಲವಾಗಿದೆ. ಬೆಳಗ್ಗೆ ಹಾಗೂ ಸಂಜೆ ಸಮಯದಲ್ಲಿ ಆಹಾರ ಅರಸಿ ಬರುವ ನವಿಲುಗಳ ಹಿಂಡನ್ನು ನೋಡಲು ಇಲ್ಲಿನ ಜನ ಕುತೂಹಲದಿಂದ ಕಾಯುತ್ತಾರೆ. ಕೆಲ ಪ್ರದೇಶಗಳಲ್ಲಿ 15-20 ನವಿಲುಗಳು ಹಾಗೂ ಮರಿಗಳು ಗುಂಪಿನಲ್ಲಿದ್ದು, ನಸುಕಿನಲ್ಲಿ ಗರಿಬಿಚ್ಚಿ ನರ್ತಿಸುವುದು ನೋಡುಗರ ಮೈಮನ ಸೂರೆಗೊಳ್ಳುತ್ತಿವೆ.
ಈ ಭಾಗದ ಜನರಿಗೆ ನವಿಲು ಕಂಡರೆ ಎಲ್ಲಿಲ್ಲದ ಪ್ರೀತಿ. ಅವುಗಳ ರಕ್ಷಣೆಗೆ ರೈತರು ಹೆಚ್ಚಿನ ಮುತುವರ್ಜಿವಹಿಸಿದ್ದಾರೆ. ನವಿಲುಗಳ ಬೇಟೆಗೆ ಯಾರಾದರೂ ಬಂದರೆ ಅವರಿಗೆ ಬೈಯ್ದು ಬುದ್ಧಿ ಹೇಳಿ ಕಳುಹಿಸುತ್ತಾರೆ. ಡೋಣಿ ನದಿಯ ಪ್ರದೇಶವಲ್ಲದೆ ಮೂಕಿಹಾಳ, ಮಡಿಕೇಶ್ವರ, ನಡಹಳ್ಳಿ, ದೇವರ ಹುಲಗಬಾಳ ಗ್ರಾಮದಲ್ಲಿರುವ ಹಳ್ಳಿಗಳಲ್ಲಿ ಹಳ್ಳದ ಸುತ್ತಲಿನ ಪ್ರದೇಶದಲ್ಲಿಯೂ ಕೂಡಾ ನವಿಲುಗಳು ಹಿಂಡು ಹಿಂಡಾಗಿ ತಿರುಗಾಟ ನಡೆಸುತ್ತಿರುವ ದೃಶ್ಯ ಸಾಮಾನ್ಯ. ಇಲ್ಲಿ ನವಿಲುಗಳ ರಕ್ಷಣೆಗೆ ನವಿಲುಧಾಮ ಸ್ಥಾಪನೆಯ ಅಗತ್ಯವಿದೆ.

-ಶ್ರೀಶೈಲ ಬಿರಾದಾರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.