ಕತ್ತಲಲ್ಲಿ ಕಳೆದ ಸೂಜಿ

ವಿಶಾಲವಾದ ಬಯಲು. ನೀವದರ ಮಧ್ಯದಲ್ಲಿ ನಿಂತಿದ್ದೀರಿ. ಅಮಾವಾಸ್ಯೆಯ ರಾತ್ರಿ. ಸಾಲದ್ದಕ್ಕೆ ಆ ಬಯಲಿನ ಸುತ್ತಲೂ ದಟ್ಟ ಮರಗಿಡಗಳ ಸಮೃದ್ಧ ರಾಶಿ. ಇನ್ನೂ ಹೇಳಬೇಕೆಂದರೆ ನಿಮಗೆ ಇರುಳು ದೃಷ್ಟಿ ದೋಷ. ಎಷ್ಟೇ ಕಣ್ಣಗಲಿಸಿ ನೋಡಿದರೂ ಸುತ್ತಲೂ ಗಾಡಾಂಧಕಾರ ಬಿಟ್ಟರೆ ಮತ್ತಿನ್ನೇನೂ ಗೋಚರಿಸಲು ಸಾಧ್ಯವೇ ಇಲ್ಲ. ಹಾಗಿರುವ ಸ್ಥಿತಿಯಲ್ಲಿ ನಿಮ್ಮ ಸೂಜಿ ಕಳೆದು ಹೋಗಿದೆ. ಹುಡುಕಿ ಪಡೆದುಕೊಳ್ಳಲು ಸಾಧ್ಯವೆ?
ಜೀವನದಲ್ಲಿ ಕಳೆದು ಹೋದ ಅವಕಾಶಗಳು, ಕಳಕೊಂಡ ಸಂಬಂಧಗಳು, ಮುಗಿದು ಹೋದ ಘಟನೆಗಳು ಕತ್ತಲ ಬಯಲಲ್ಲಿ ಕಳಕೊಂಡ ಸೂಜಿಯಿದ್ದಂತೆ. ಅದು ಚಿನ್ನದ ಸೂಜಿಯೇ ಆಗಿರಬಹುದು, ಹಾಗಲ್ಲದಿದ್ದರೂ ಸಂದರ್ಭಕ್ಕೆ ಚಿಕ್ಕ ಸೂಜಿಯೂ ಅತ್ಯಮೂಲ್ಯವೇ. ಹಾಗೆಯೇ ಜೀವನದಲ್ಲಿ ಅದು ಎಷ್ಟೇ ಚಿಕ್ಕದಿದ್ದರೂ ಅದನ್ನು ಕಡೆಗಣಿಸಲು ಸಾಧ್ಯವೇ ಇಲ್ಲ. ಎಲ್ಲ ಸಂಬಂಧಗಳೂ ನಮ್ಮ ಪಾಲಿಗೆ ಅತ್ಯಂತ ಮುಖ್ಯವೇ. ಹಾಗೆಂದು ಒಮ್ಮೆ ಅದು ದೂರಾಗಿ ಹೋದ ನಂತರ ಅದರ ಬಗ್ಗೆಯೇ ಯೋಚಿಸುತ್ತಾ ಕೂರುವುದರಲ್ಲಿ ಅರ್ಥವೇ ಇಲ್ಲ. ಅಥವಾ ಒಮ್ಮೆ ದೂರಾಗಿದ್ದನ್ನು ಹೇಗಾದರೂ ಮಾಡಿ ಮತ್ತೆ ಗಳಿಸಿಕೊಳ್ಳಬೇಕೆಂದು ತೊಳಲಾಡುವುದು ಮೂರ್ಖತನವೇ. ಕತ್ತಲೆಯ ಬಯಲಿನಲ್ಲಿ ನೀವು ಒಡಾಡುವುದೇ ದುಸ್ತರ. ತಡಕಾಡುತ್ತಾ ಹೋಗಬಹುದು. ಅಂಥ ತಡಕಾಟಕ್ಕೆ ಏನೋ ಸಿಲುಕಲೂಬಹುದು. ಹಾಗೆ ಸಿಕ್ಕದ್ದು ಏನೆಂಬುದನ್ನು ಗುರುತಿಸಲು ಸಾಧ್ಯವೆ? ಅಪಾಯದ ಸಾಧ್ಯತೆಯೇ ಹೆಚ್ಚಿರುತ್ತದೆ. ಇಂಥ ವ್ಯರ್ಥ ಪ್ರಯತ್ನಗಳನ್ನು ನಿಲ್ಲಿಸಿ ಮುಂದೆ ಏನು ಎಂಬುದನ್ನು ಯೋಚಿಸುವುದು ಜಾಣತನ. ಸಾಧ್ಯವಾದಷ್ಟು ನೀವೆಲ್ಲಿದ್ದೀರಿ, ಬಯಲಿಂದ ಬೆಳಕಿನ ತಾಣ ಎಷ್ಟು ದೂರದಲ್ಲಿದೆ ಎಂಬುದನ್ನು ವಿವೇಚನಾಪೂರ್ವಕ ಅರಿಯುವ ಯತ್ನ ಮಾಡಿ. ಒಮ್ಮೆ ಬಯಲನ್ನು ದಾಟಿ ಬೆಳಕಿಗೆ ಬಂದರೆ ಕಳಕೊಂಡದ್ದಕ್ಕಿಂತ ಹೆಚ್ಚಿನ ಎಲ್ಲವನ್ನೂ ಪಡೆದುಕೊಳ್ಳುವ ಸಾಧ್ಯತೆ ಇದ್ದೇ ಇರುತ್ತದೆ. ಹೊರಬರಲು ಸಾಧ್ಯವೇ ಇಲ್ಲವೆಂದು ಮನವರಿಕೆ ಆದಲ್ಲಿ ಇದ್ದಲ್ಲೇ ಬೆಳಕು ಬರುವವರೆಗೆ ನಿಮ್ಮನ್ನು ರಕ್ಷಿಸಿಕೊಳ್ಳಿ. ಧೈರ್ಯವಷ್ಟೇ ಆ ಸಂದರ್ಭದಲ್ಲಿ ನಿಮ್ಮನ್ನು ಕಾಪಾಡಬಲ್ಲುದು.
- ಸಹನೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


