ಬೈಟುಕಾಫಿ

ಪ್ರೇರಣದಾಯಕ ವಾತಾವರಣವಿರಲಿ

Published On :

ಪೋಷಕರು ತಮ್ಮ ವೈಯಕ್ತಿಕ ಸಾಧನೆಗಳಲ್ಲಿಯೇ ತಲ್ಲೀನರಾಗಿ ತಮ್ಮ ಮಗುವಿನ ಎಲ್ಲಾ ಕೆಲಸಗಳನ್ನು ಮನೆಯ ಕೆಲಸದಾಕೆಗೆ ವಹಿಸುವುದು ಶೋಚನೀಯ. ಬೆಳೆಯುತ್ತಿರುವ ಎಳೆಯ ಮನಸ್ಸುಗಳಿಗೆ ತಂದೆ, ತಾಯಿ, ಅಜ್ಜ, ಅಜ್ಜಿಯರ ಸನಿಹ ಸಾಂತ್ವನಗಳು ತೀರಾ ಅಗತ್ಯವಿದೆ. ಪರೀಕ್ಷಾ ದಿನಗಳಲ್ಲಿ ಮಗುವಿನ ಊಟ, ಪಾಠ, ಆಹಾರ, ಪದ್ಧತಿ ಹಾಗೂ ದಿನಚರಿಗಳ ಮೇಲೆ ನಿಯಮಿತ ಹಾಗೂ ನಿರಂತರವಾದ ಗಮನಹರಿಸಬೇಕು. ಯಾವುದೇ ಕಾರಣಕ್ಕೂ ತಮ್ಮ ಮಗುವನ್ನು ಬೇರೆ ಮಕ್ಕಳಿಗೆ ಹೋಲಿಸಿ ಮೂದಲಿಸುವುದು, ಇಷ್ಟೇ ಅಂಕಗಳನ್ನು ಪಡೆದೇ ತೀರಬೇಕೆನ್ನುವ ಅತಿಯಾದ ಒತ್ತಡದ ಷರತ್ತುಗಳನ್ನು ಹೇರಬಾರದು. ಮಗುವಿನ ಸಾಮರ್ಥ್ಯಕ್ಕೆ ಅನುಗುಣವಾಗಿ ಸಕಾರಾತ್ಮಕ ಮಾತುಗಳ ಮೂಲಕ ಪ್ರೋತ್ಸಾಹಿಸಬೇಕು.
= ನಂದಿನಿ. ಕೆ. ನಾಯ್ಕ ಹಳ್ಳಿ, ಕಾರ್ಕಳ
ಚುಚ್ಚು ಮಾತನಾಡುವುದು ಸಲ್ಲ
ವಿದ್ಯಾರ್ಥಿಗಳ ಜೀವನದಲ್ಲಿ ಇದೊಂದು ಮಹತ್ತರ ಘಟ್ಟ. ಇಡೀ ವರ್ಷ ಓದಿದ ವಿಷಯಗಳ ಕುರಿತು ಮೂರು ಗಂಟೆಯಲ್ಲಿ ಪರೀಕ್ಷೆ ಬರೆಯುವುದು ಸಾಮಾನ್ಯ ವಿಷಯವೇನಲ್ಲ. ಎಲ್ಲಾ ಪಾಲಕರಿಗೂ ತಮ್ಮ ಮಕ್ಕಳು ಹೆಚ್ಚು ಅಂಕ ತೆಗೆಯಬೇಕೆಂಬ ಹಂಬಲ ಇದ್ದೇ ಇರುತ್ತದೆ. ಅದಕ್ಕಾಗಿ ಪರೀಕ್ಷಾ ಸಮಯದಲ್ಲಿ ಮಕ್ಕಳಿಗೆ ಒತ್ತಡ ಹೇರುವುದಾಗಲಿ ಅವರ ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವಂತಹ ಮಾತುಗಳನ್ನಾಡುವುದು ಸರಿಯಲ್ಲ. ಬೇರೆ ಮಕ್ಕಳ ಉದಾಹರಣೆ ನೀಡಿ ಚುಚ್ಚು ಮಾತನಾಡಬಾರದು. ಇಷ್ಟೇ ಅಂಕ ತೆಗೆದುಕೊಳ್ಳಬೇಕೆಂಬ ಒತ್ತಡ ಬೇಡ. ಮಕ್ಕಳಿಗೆ ಮಾನಸಿಕ ಸ್ಥೈರ್ಯ, ಆತ್ಮವಿಶ್ವಾಸವನ್ನು ತುಂಬಬೇಕು. ಅಂಕಗಳಿಕೆಗೆ ಪ್ರಾಶಸ್ತ್ಯ ನೀಡಬಾರದು. ತಿಳವಳಿಕೆ, ಜ್ಞಾನದ ಕಡೆಗಷ್ಟೆ ಗಮನ ಕೊಡಬೇಕು. ಪ್ರಕೃತಿದತ್ತ ಜೀವನವನ್ನು ಸೃಜನಾತ್ಮಕವಾಗಿ ರೂಪಿಸಿಕೊಳ್ಳಲು ಕಲಿಸಬೇಕು. ಪರೀಕ್ಷೆಯ ಸಮಯದಲ್ಲಿಯೇ ಅಲ್ಲದೆ ಜೀವನದ ಪ್ರತಿ ಘಟ್ಟದಲ್ಲೂ ಪಾಲಕರು ಮಕ್ಕಳಿಗೆ ಸೌಹಾರ್ದಯುತ ವಾತಾವರಣ ನಿರ್ಮಿಸುವುದು ಸೂಕ್ತ ಹಾಗೂ ಔಚಿತ್ಯಪೂರ್ಣ.
= ಶರತ್. ಎಂ. ಆರ್, ಮಳವಳ್ಳಿ
ಭಯವೇ ಜೀವನದ ಮೊದಲ ಶತ್ರು
ಪೋಷಕರು ವಿದ್ಯಾರ್ಥಿಗಳೊಡನೆ ಪ್ರೀತಿ, ವಿಶ್ವಾಸಗಳಿಂದ ನಡೆದುಕೊಳ್ಳಬೇಕು. ಶಿಕ್ಷಣದ ಮಹತ್ವ ಮತ್ತು ಪರೀಕ್ಷೆಯ ಅಗತ್ಯತೆಗಳ ಬಗ್ಗೆ ತಿಳಿಹೇಳಬೇಕು. ಯಾವುದೇ ಕಾರಣಕ್ಕೂ ಹೆದರಿಸಿ, ಒತ್ತಡ ಹೇರಿ ಅವರ ಮನದಲ್ಲಿ ಆತಂಕ ಮತ್ತು ಭಯದ ವಾತಾವರಣ ಉಂಟುಮಾಡಬಾರದು. ರಾತ್ರಿಯಿಡೀ ನಿದ್ದೆಗೆಟ್ಟು ಓದುವಂತೆ ಒತ್ತಾಯಿಸಬಾರದು. ಪರೀಕ್ಷಾ ಸಮಯದಲ್ಲಿ ಆರೋಗ್ಯದ ಕಡೆಗೂ ವಿಶೇಷ ಗಮನಕೊಡಬೇಕು. ಪೋಷಕರು ವಿದ್ಯಾವಂತರಾಗಿದ್ದಲ್ಲಿ ಮಕ್ಕಳಿಗೆ ಪಾಠ-ಪ್ರವಚನಗಳಲ್ಲಿ ಮಾರ್ಗದರ್ಶನ ನೀಡಬೇಕು. ವಿದ್ಯಾರ್ಥಿಗಳನ್ನು ಸಿನಿಮಾ ಮತ್ತು ದೂರದರ್ಶನಗಳಿಂದ ದೂರವಿರಿಸಬೇಕು. ಭಯವೇ ಜೀವನದ ಮೊದಲ ಶತ್ರು ಎಂಬುದನ್ನು ತಿಳಿಸ ಬೇಕು. ಕೀಳರಿಮೆಯನ್ನು ಉಂಟುಮಾಡದೆ ಅವರಲ್ಲಿ ಉತ್ಸಾಹ, ಹುಮ್ಮಸ್ಸು, ನವಚೈತನ್ಯ, ಆತ್ಮವಿಶ್ವಾಸ ಮೂಡಿಸಬೇಕು.
= ಕೆ. ಎನ್. ಅಕ್ರಂಪಾಷ, ಚಿಂತಾಮಣಿ

'ಜಗುಲಿ'ಯಲ್ಲಿ ಈ ಸಲದ ವಿಷಯ 'ಪರೀಕ್ಷೆ ಸಮಯದಲ್ಲಿ ಪಾಲಕರ ಪಾತ್ರ?'. ವಿಷಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಬರವಣಿಗೆ 100 ಪದಗಳ ಮಿತಿಯಲ್ಲಿರಲಿ. ಜತೆಗೆ ನಿಮ್ಮದೊಂದು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಇರಲಿ. ಕೈ ಬರಹದಲ್ಲಿ ಕಳಿಸುವುದಿದ್ದರೆ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ನಮ್ಮ ವಿಳಾಸ: ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್‌ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು- 560001, ಇ-ಮೇಲ್: anekaby2@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.