ಬೈಟುಕಾಫಿ

ಟೊಮೆಟೊ ತರುವುದು ದುಪ್ಪಟ್ಟು ಲಾಭ

ಟೊಮೆಟೊ ತರುವುದು ದುಪ್ಪಟ್ಟು ಲಾಭ
Published On :

ನಮ್ಮ ರಾಜ್ಯದಲ್ಲಿ ಎರಡು ಕಾರಣಗಳಿಂದ ಟೊಮೆಟೊ ಸದ್ದು ಮಾಡುತ್ತದೆ. ಆ ಸಂದರ್ಭಗಳು ಎಂದರೆ ಧಾರಣೆ ಅತಿ ಹೆಚ್ಚಾಗಿ ಏರುವುದು ಅಥವಾ ನೆಲ ಕಚ್ಚುವುದು. ಒಮ್ಮೊಮ್ಮೆ ಕಿಲೋಗೆ 30 ರೂಪಾಯಿ ದಾಟುವ ಟೊಮೆಟೊ, ಕೆಲವು ಸಲ ಕೆ.ಜಿ.ಗೆ ಒಂದು ರೂಪಾಯಿಗೆ ಕುಸಿಯುವುದೂ ಉಂಟು. ಬೆಲೆ ಏರಿದಾಗ ಗ್ರಾಹಕರು ಕಣ್ಣೀರು ಸುರಿಸುತ್ತಲೇ ಖರೀದಿಸುತ್ತಾರೆ, ಧಾರಣೆ ಪಾತಾಳಮುಖಿಯಾದಾಗ ರೈತರು ತಾವೇ ಬೆಳೆದ ಬೆಳೆಯನ್ನು ರಸ್ತೆಗೆ ಚೆಲ್ಲಿ ಹತಾಶೆ ವ್ಯಕ್ತಪಡಿಸುತ್ತಾರೆ. ಈ ಅತಿರೇಕಗಳ ಕಾರಣದ ಬಗ್ಗೆ ನಾನು ವಿಶ್ಲೇಷಿಸಲು ಹೋಗುವುದಿಲ್ಲ. ಬೆಲೆಯಲ್ಲಿ ಎಷ್ಟೇ ಏರಿಳಿತವಾದರೂ ಟೊಮೆಟೊ ಬೇಡಿಕೆಯಂತೂ ಕುಗ್ಗುವುದಿಲ್ಲ. ಏಕೆಂದರೆ ಯಾವ ಅಡುಗೆಗೂ ಇದು ಹೊಂದಿಕೊಳ್ಳಬಲ್ಲದು. ಕೆಲವು ಪದಾರ್ಥಗಳಲ್ಲಂತೂ ಟೊಮೆಟೊ ನೀಡುವ ರುಚಿಯೇ ಬೇರೆ. ಅದೇ ಇದರ ವಿಶೇಷತೆ. ಇನ್ನೊಂದು ವಿಶೇಷ ಎಂದರೆ ಯಾರು ಟೊಮೆಟೊವನ್ನು ಜಾಸ್ತಿ ಬಳಸುತ್ತಾರೆಯೋ ಅವರಲ್ಲಿ ಕ್ಯಾನ್ಸರ್ ಸಾಧ್ಯತೆ ಕಡಿಮೆ ಎನ್ನುತ್ತವೆ ಅಧ್ಯಯನಗಳು. ಕ್ಯಾನ್ಸರ್ ನಿಗ್ರಹಿಸುವ ಶಕ್ತಿಶಾಲಿ ತರಕಾರಿಗಳಲ್ಲಿ ಟೊಮೆಟೊ ಕೂಡ ಒಂದು.

ಯಾವ ಗುಣ ಟೊಮೆಟೊಕ್ಕೆ ಈ ಶಕ್ತಿ ತಂದುಕೊಟ್ಟಿದೆ ಎನ್ನುವುದು ರಹಸ್ಯವಾಗಿಯೇನೂ ಉಳಿದಿಲ್ಲ. ವಿಟಮಿನ್ 'ಎ'ನಿಂದ ಸಮೃದ್ಧವಾಗಿರುವ ಲೈಕೋಪೀನ್ ಎನ್ನುವ ಪದಾರ್ಥ ಟೊಮೆಟೊದಲ್ಲಿ ಇರುತ್ತದೆ. ಟೊಮೆಟೊಕ್ಕೆ ಕೆಂಪು ಬಣ್ಣ ಬರುವುದೇ ಲೈಕೋಪೀನ್‌ನಿಂದ. ಇದು ಕ್ಯಾನ್ಸರ್ ವಿರುದ್ಧ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಬೀಟಾ ಕ್ಯಾರೊಟಿನ್, ವಿಟಮಿನ್ ಸಿ ಹಾಗೂ ಫೆನೋಲ್‌ಗಳೂ ಇದರಲ್ಲಿ ಹೇರಳವಾಗಿರುತ್ತವೆ. ಪ್ರಾಸ್ಟೇಟ್, ಶ್ವಾಸಕೋಶ, ಉದರ, ಸ್ತನ, ಕೊಲೆರೆಕ್ಟಲ್ ಕ್ಯಾನ್ಸರ್ ಸೇರಿದಂತೆ 13 ರೀತಿಯ ಕ್ಯಾನ್ಸರ್‌ಗಳನ್ನು ಟೊಮೆಟೊ ತಡೆಯಬಲ್ಲದು ಎನ್ನುವುದು ರುಜುವಾತಾಗಿದೆ. ಟೊಮೆಟೊ ಮತ್ತು ಕ್ಯಾನ್ಸರ್ ಕುರಿತಂತೆ ಈವರೆಗೆ 180ಕ್ಕೂ ಅಧಿಕ ಸಂಶೋಧನಾ ವರದಿಗಳು ಪ್ರಕಟವಾಗಿವೆ!
ಟೊಮೆಟೊದಿಂದ ಸಿಗುವ ಇನ್ನೊಂದು ಲಾಭ ಎಂದರೆ ಹೃದ್ರೋಗಗಳಿಂದಲೂ ಪಾರಾಗಬಹುದು ಎನ್ನುವುದು. ಲೈಕೋಪೀನ್ ಮಟ್ಟ ಕಡಿಮೆ ಇರುವವರಲ್ಲಿ ಹೃದ್ರೋಗದ ಸಾಧ್ಯತೆ ಹೆಚ್ಚು ಎನ್ನುತ್ತಾರೆ ಹೃದ್ರೋಗ ತಜ್ಞರು. ಲೈಕೋಪೀನ್ ಎದೆ ಉರಿ ಕಡಿಮೆ ಮಾಡುವುದರ ಜತೆಗೆ ಎಲ್‌ಡಿಎಲ್ ಕೊಲೆಸ್ಟರಾಲ್ ಮಟ್ಚವನ್ನೂ ತಗ್ಗಿಸುತ್ತದೆ. ಹೀಗಾಗಿ ಅಡುಗೆಯಲ್ಲಿ ಟೊಮೆಟೊದ ಅಧಿಕ ಬಳಕೆ ದುಪ್ಪಟ್ಟು ಲಾಭ ತರಬಲ್ಲದು.
ಟೊಮೆಟೊವನ್ನು ಹೇಗೆ ಬೇಕಾದರೂ ಬಳಸಬಹುದು. ಹಸಿಯಾಗಿ ಹಾಗೆಯೇ ತಿನ್ನಬಹುದು, ಬೇಯಿಸಿ ಬಳಸಬಹುದು. ಸೂಪ್ ಅಥವಾ ಸಾಸ್ ರೂಪದಲ್ಲಿಯೂ ಸೇವಿಸಬಹುದು. ಹೇಗಾದರೂ ತಿನ್ನಿ, ಟೊಮೆಟೊ ತಿನ್ನಿ.

-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.