ಮಕ್ಕಳ ಓದಿಗೆ ಕಂಪನಿ ಕೊಡಿ!
ಪರೀಕ್ಷಾ ಸಮಯದಲ್ಲಿ ಪಾಲಕರು ತಮ್ಮ ಮಕ್ಕಳಿಗಾಗಿ ತಮ್ಮ ಸಮಯವನ್ನು ಮೀಸಲಿಡಬೇಕು. ಪ್ರತ್ಯೇಕ ಓದುವ ಕೊಠಡಿ, ಕಂಪ್ಯೂಟರ್, ಪುಸ್ತಕಗಳು ಇನ್ನಿತರ ಸಾಮಗ್ರಿಗಳನ್ನು ಒದಗಿಸಿ ತಮ್ಮ ಜವಾಬ್ದಾರಿ ಮುಗಿಯಿತೆಂದು ತಿಳಿಯಬಾರದು. ಮಕ್ಕಳಿಗೆ ಒಂದು ಪ್ರತ್ಯೇಕ ಕೊಠಡಿ ಮಾಡಿಕೊಟ್ಟು ತಾವು ತಮಗಿಷ್ಟ ಬಂದ ಟಿ.ವಿ. ಕಾರ್ಯಕ್ರಮ ನೋಡುವುದರಲೋ, ಗೆಳೆಯರೊಂದಿಗೆ ಕಾಡು ಹರಟೆ ಹೊಡೆಯುತ್ತಲ್ಲೋ ನಿರತವಾಗಬಾರದು. ಕೊನೆಯ ಪಕ್ಷ ಪರೀಕ್ಷೆಯ ಸಮಯದಲ್ಲಿ ತಡ ರಾತ್ರಿ ಹಾಗೂ ಬೆಳಗಿನ ಜಾವ ಓದುವ ಮಕ್ಕಳೊಂದಿಗೆ ನೀವು ಕೂತ ಪ್ರೋತ್ಸಾಹಿಸಿರಿ. ನೀವು ನಿಮ್ಮದೇ ಕೆಲಸಗಳನ್ನು ಮಾಡಿಕೊಳ್ಳುತ್ತಾ ಅವರ ಓದಿಗೆ ಕಂಪನಿ ಕೊಡಿ. ಅವರಿಗೂ ಓದುವ ಉತ್ಸಾಹ ಬರುತ್ತದೆ. ಪರೀಕ್ಷಾ ಸಮಯದಲ್ಲಿ ಮನೆಯ ಸಮಸ್ಯೆಗಳು ಮಕ್ಕಳ ನೆಮ್ಮದಿ ಕೆಡಿಸದಂತೆ ನೋಡಿಕೊಳ್ಳಿ.
-ವಿದ್ಯಾ ಸರ್ವೇಶ್, ಕುಮಾರ ಪಟ್ಟಣಂ.
ಪೌಷ್ಠಿಕ ಆಹಾರಗಳನ್ನು ಕೊಡಿ!
ಪರೀಕ್ಷೆಯು ವಿದ್ಯಾರ್ಥಿಗಳ ಪರಿಶ್ರಮದ ಅಳತೆಗೋಲು. ಪರೀಕ್ಷೆಗಳು ಸಮೀಪಿಸಿದವು ಎಂದರೆ ಹೆತ್ತವರಿಗಂತೂ ಅಗ್ನಿ ಪರೀಕ್ಷೆಯೇ ಸರಿ. ಓದಿದ್ದನ್ನೆಲ್ಲ ಕೆಲವೇ ಗಂಟೆಗಳಲ್ಲಿ ಪರೀಕ್ಷಾ ಕೊಠಡಿಯಲ್ಲಿ ಬರೆಯಬೇಕಾಗಿದೆ. ಅದಕ್ಕೆ ಪಾಲಕರ ಪ್ರೋತ್ಸಾಹ ಮಾರ್ಗದರ್ಶನ ಅಗತ್ಯ. ಪಾಲಕರು ಮಕ್ಕಳಿಗೆ ಓದುವ ಪರಿಸರ ನಿರ್ಮಿಸಿ ಬೌದ್ಧಿಕ ಹಾಗೂ ಮಾನಸಿಕ ಬೆಳವಣಿಗೆಗೆ ಪ್ರೋತ್ಸಾಹಿಸಬೇಕು. ಟಿ.ವಿ., ರೇಡಿಯೊ, ಮೊಬೈಲ್ಗಳ ಹಾವಳಿಯಿಂದ ಮಕ್ಕಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಮಕ್ಕಳನ್ನು ಸದಾ ನಿಂದಿಸುವುದನ್ನು ಬಿಟ್ಟು ಆತ್ಮಸ್ಥೈರ್ಯ ತುಂಬಬೇಕು. ಹಣ್ಣು-ಹಂಪಲು, ಪೌಷ್ಟಿಕ ಆಹಾರಗಳನ್ನು ಕೊಟ್ಟು ಸಮಯಕ್ಕೆ ಸರಿಯಾಗಿ ನಿದ್ದೆ ಮಾಡುವಂತೆ ತಿಳಿಸಿ. ಪರೀಕ್ಷೆ ಬರೆದು ಬಂದ ವಿಷಯದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೇ ಮುಂದಿನ ವಿಷಯಗಳನ್ನು ಅಭ್ಯಸಿಸುವತ್ತ ಗಮನ ಹರಿಸುವಂತೆ ಹುರಿದುಂಬಿಸಿ. ಉದ್ವೇಗ, ಭಯಗಳನ್ನು ದೂರ ಮಾಡಿಸಿ ಶ್ರದ್ಧೆ, ಸಹನೆಯಿಂದ ಪರೀಕ್ಷೆ ಎದುರಿಸಲು ಮಾರ್ಗದರ್ಶನ ನೀಡಿದಲ್ಲಿ ಮಕ್ಕಳ ಭವಿಷ್ಯ ಉಜ್ವಲವಾಗುವುದರಲ್ಲಿ ಸಂಶಯವಿಲ್ಲ.
- ಎಸ್. ಜಯಶ್ರೀ ಶೆಣೈ, ಬಿ.ಸಿ.ರೋಡ್.
ವಿದ್ಯೆಯಲ್ಲಿ ವ್ಯಾಪಾರ ದೃಷ್ಟಿ ಬೇಡ
ಸಾಮಾನ್ಯವಾಗಿ ಪರೀಕ್ಷೆಯ ಸಮಯ ಅಂದ್ರೆ ಮಕ್ಕಳಿಗೆ ಜವಾಬ್ದಾರಿ, ಭಯ, ಒತ್ತಡ ಹೆಚ್ಚು ಆದ್ದರಿಂದ ಪೋಷಕರು ತಮ್ಮ ಮಕ್ಕಳಿಗೆ ಪರೀಕ್ಷೆಯ ಬಗ್ಗೆ ಆದಷ್ಟು ಉತ್ಸಾಹ ತುಂಬುವಂತಹ ಮಾತುಗಳನ್ನು ಆಡಿ ಒತ್ತಡವನ್ನು ನಿವಾರಿಸಬೇಕು. ತಮ್ಮ ಆಸೆ-ಆಕಾಂಕ್ಷೆಗಳನ್ನು ಮಕ್ಕಳ ಮೇಲೆ ಹೇರಬಾರದು. ಆದಷ್ಟೂ ಅವರಿಗೆ ಓದುವತ್ತ ಮತ್ತು ಮನನ ಮಾಡಿಸುವತ್ತ ಗಮನ ಹರಿಸಬೇಕು. ಮಕ್ಕಳಿಗೆ ಪರೀಕ್ಷೆ ಬಂದರೆ ಪೋಷಕರು ಆತಂಕಕ್ಕೆ ಒಳಗಾಗುತ್ತಾರೆ. ಏಕೆಂದರೆ ವಿದ್ಯೆಯನ್ನು ವ್ಯಾಪಾರ ದೃಷ್ಟಿಯಿಂದ ನೋಡುತ್ತಾರೆ. ಜೀವನದಲ್ಲಿ ಅಂಕ ಗಳಿಸುವುದೇ ಮುಖ್ಯವಲ್ಲ. ಮಕ್ಕಳಿಗೆ ಸ್ನೇಹಿತರಾಗಿ ಹಿತವಚನ ನೀಡಿ ಅವರ ಸಮಸ್ಯೆಯನ್ನು ಅರಿತು ಅದರ ನಿವಾರಣೆಗೆ ಸಹಕರಿಸಬೇಕು.
- ಮೀರಾ ಗುರುರಾಜ್, ಅರಸೀಕೆರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

