ದೂರಿಗೆ ಸ್ಪಂದನೆ ಬೇಕು
ಅವರು ಯಾವಾಗಲೂ ಹಾಗೆಯೇ. ಎಷ್ಟೆಂದರೂ ಅಷ್ಟೇ. ಬದಲಾಗುವುದೇ ಇಲ್ಲ, ಹಾಗಾಗಿ ಅವರನ್ನು ಅವರ ಪಾಡಿಗೆ ಬಿಟ್ಟುಬಿಟ್ಟಿದ್ದೇನೆ ಎಂದು ಹಲವರು ಹೇಳುತ್ತಿರುವುದನ್ನು ಕೇಳುತ್ತೇವೆ. ಯಾರೇ ಆದರೂ ಒಂದೇ ವಿಚಾರವನ್ನು ಪದೇ ಪದೆ ಹೇಳುತ್ತಿದ್ದರೆ ಹಿಂಸೆ ಎನಿಸುತ್ತದೆ, ಸುಮ್ಮನೆ ತಲೆ ತಿನ್ನುತ್ತಾರೆ ಎನಿಸುತ್ತದೆ. ಎಲ್ಲವೂ ಹೌದು. ಅದರಲ್ಲೂ ದಾಂಪತ್ಯದಂತಹ ಸೂಕ್ಷ್ಮ ಸಂಬಂಧವಾಗಿದ್ದರೆ ಮುಗಿದೇ ಹೋಯಿತು. ನಿತ್ಯ ಅನುಭವಿಸುವಂತಿಲ್ಲ, ಅನುಭವಿಸದೇ ಬಿಡುವಂತಿಲ್ಲ ಎಂಬಂತಾಗುತ್ತದೆ. ಆಗಲೇ ಹೀಗೆ ನಿರ್ಲಕ್ಷಿಸುವ ಪರಿಪಾಠ ಆರಂಭವಾಗುತ್ತದೆ. ಯಾರೇ ಆದರೂ ಒಂದೇ ವಿಚಾರದ ಬಗ್ಗೆ ತಲೆ ತಿನ್ನುತ್ತಾ ಇದ್ದರೆ ಅದು ಕಿರಿಕಿರಿಯೇನೋ ನಿಜವೇ. ಆದರೆ, ಒಮ್ಮೆ ಯೋಚಿಸಿ. ಅವರಿಗೆ ಯಾಕೆ ಹಾಗೆ ಅದೇ ವಿಚಾರ ತಲೆಗೆ ಬರುತ್ತಿದೆ? ಅಷ್ಟರ ಮಟ್ಟಿಗೆ ನಿಮ್ಮಲ್ಲಿ ಅವರು ಅದನ್ನು ಹೇಳುತ್ತಿದ್ದಾರೆ ಎಂದರೆ, ತಮ್ಮಲ್ಲೇ ಅವರು ಆ ವಿಚಾರದ ಬಗ್ಗೆ ಎಷ್ಟು ಕೊರಗಿರಲಿಕ್ಕೆ ಸಾಧ್ಯವಿಲ್ಲ? ಅವರ ಈ ಮನೋಭಾವನೆಗೆ ಕಾರಣ ಏನು? ನೀವು ಅವರನ್ನು ನಿರ್ಲಕ್ಷಿಸುತ್ತಿರುವುದರಿಂದಲೇ ಅವರಿಗೆ ಹಾಗೆ ನಿಮ್ಮ ತಲೆ ತಿನ್ನಬೇಕು ಎಂದೆನಿಸುತ್ತಿದೆಯಾ? ನಿಮ್ಮ ಬಗ್ಗೆ ಅವರಿಗಿರುವ ಕಂಪ್ಲೇಂಟ್‌ಗಳು ಏನು? ಅವರಿಗೆ ನಿಮ್ಮ ಬಗ್ಗೆ ಯಾವುದಾದರೂ ವಿಚಾರದಲ್ಲಿ ಸಂಶಯ ಮೂಡುತ್ತಿದೆಯಾ ಎಂದು ಸಹನೆಯಿಂದ ಕುಳಿತು ಕೇಳಿ. ಅವರ ಸಮಸ್ಯೆ ಆಲಿಸಿ. ಆಗ ಅವರಿಗೆ ವಿಷಯ ಮನದಟ್ಟು ಮಾಡಿಕೊಡುವ ತಾಳ್ಮೆ ನಿಮ್ಮದಾಗಬೇಕು. ಅಷ್ಟಕ್ಕೂ ಅವರೊಂದಿಗೆ ಬಾಳಬೇಕಾದವರು ನೀವೇ. ಹೀಗಾಗಿ ಒಂದಿಷ್ಟು ಸಹನೆಯಿಂದ, ಅವರನ್ನು ಕನ್ವಿನ್ಸ್ ಮಾಡುವುದು ಖಂಡಿತ ತಪ್ಪಲ್ಲ. ಅವರ ಭಾವನೆ ಸಂಶಯಕ್ಕೆ ತಿರುಗಿದ್ದರೆ ಅದರ ಬಗೆಗೂ ವಿಶ್ವಾಸದಿಂದ ಮಾತನಾಡಿ. ಅವರಲ್ಲಿರುವ ಅಭದ್ರತೆಯನ್ನು ಹೋಗಲಾಡಿಸಿ. ಇದನ್ನು ಕರ್ತವ್ಯವೆಂದು ಮಾಡಬೇಡಿ. ಇದು ನಿಮ್ಮ ಬದುಕನ್ನೂ ಬಾಧಿಸುವ, ಬದಲಾಯಿಸುವ ಸಂಗತಿ. ಹಾಗಾಗಿ ನೀವದಕ್ಕೆ ಕಿವಿಯಾಗಲೇಬೇಕು. ಅದಕ್ಕಿಂತ ಹೆಚ್ಚಾಗಿ, ಅಳುವ ಮುಖಕ್ಕೆ ಹೆಗಲಾದರೆ ಗ್ರೇಟ್. ನಿಮ್ಮ ಪ್ರೀತಿಪಾತ್ರರಾದ್ದರಿಂದಲೇ ಅವರು ನಿಮ್ಮ ಹತ್ತಿರ ಅದಕ್ಕಾಗಿ ಬಂದಿದ್ದಾರಲ್ಲವೆ?
- ಸಹನೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

