ಕವಿಮನೆಯಿಲ್ಲದ ರಾಜಮಾರ್ಗ!

ಪಾಂಡಿತ್ಯ, ಸಹೃದಯತೆ, ವೈಚಾರಿಕತೆ, ಪರಿಶ್ರಮಗಳಂತಹ ವಿವಿಧ ಗುಣಗಳ ಸಮನ್ವಯವನ್ನು ಮೆರೆದವರು ಡಿ.ವಿ.ಗುಂಡಪ್ಪ. ಅಂತಹ ಮಹಾನ್ ವ್ಯಕ್ತಿಯ ಪುತ್ರ ಬಿಜಿಎಲ್ ಸ್ವಾಮಿ. ಸಾಹಿತ್ಯ ಕ್ಷೇತ್ರದಲ್ಲಿ ಇಬ್ಬರೂ ಅಪಾರ ಕೃಷಿ ಮಾಡಿದವರು. ಈ ಇಬ್ಬರೂ ಕೊನೆವರೆಗೂ ಒಟ್ಟಾಗಿಯೇ ಇದ್ದರು. ತಂದೆ ಅಸ್ತಂಗತರಾದ ನಂತರ ಮಗನೂ ಅದೇ ಮನೆಯಲ್ಲಿ ವಾಸಿಸುತ್ತಿದ್ದರು.
ಆ ಇಬ್ಬರೂ ವಾಸಿಸುತ್ತಿದ್ದ ಮನೆಯ ಕುರುಹು ಇಂದು ಹುಡುಕಿದರೂ ಸಿಗದು. ಅವರಿದ್ದ, ಮಹಾನ್ ಕೃತಿಗಳು ಹುಟ್ಟಿದ ಆ ಮನೆಯ ಸ್ಥಳದಲ್ಲಿ ಇಂದು ಬೃಹದಾಕಾರದವಾಣಿಜ್ಯ ಸಂಕೀರ್ಣ ಎದ್ದು ನಿಂತಿದೆ. ಅಲ್ಲಿ ಡಿವಿಜಿ ಅವರ ಮನೆ ಇತ್ತು ಎಂಬುದು ಅದನ್ನು ಬಲ್ಲವರಿಗೇ ತಿಳಿಯದಂತಾಗಿದೆ. ಬೆಂಗಳೂರಿನ ಗಾಂಧಿಬಜಾರಿನ ಡಿವಿಜಿ ರಸ್ತೆಯಲ್ಲಿ ಅವರ ಮನೆಯಿತ್ತು. ಆ ಮನೆಯಲ್ಲಿದ್ದ, ಡಿವಿಜಿ ಬಳಸುತ್ತಿದ್ದ ಕುರ್ಚಿ, ಮೇಜು, ಟೈಪಿಂಗ್ ಮಷಿನ್ಗಳು ಮಾತ್ರ ಇನ್ನೂ ಇವೆ.
1936ರ ಸುಮಾರಿನಲ್ಲಿ ಗಾಂಧಿಬಜಾರಿನ ನಾಗಸಂದ್ರ ರಸ್ತೆಯಲ್ಲಿ ಡಿವಿಜಿ ಮನೆ ಕೊಂಡುಕೊಂಡರು. ಆ ಮನೆಯಲ್ಲಿ ಡಿವಿಜಿ ಹಾಗೂ ಕುಟುಂಬ, ಅವರ ಸಹೋದರರಾದ ಡಿ.ವಿ.ಶೇಷಗಿರಿ ರಾವ್, ಡಿ.ವಿ.ರಾಮ್ರಾವ್ ಹಾಗೂ ಕುಟುಂಬ ಸದಸ್ಯರು ವಾಸಿಸುತ್ತಿದ್ದರು. ಕಾರಣಾಂತರಗಳಿಂದ ಕೆಲ ದಿನಗಳ ನಂತರ ಆ ನಿವೇಶನವನ್ನು ಡಿವಿಜಿ ಅವರ ಹೆಸರಿಗೆ ನೋಂದಾಯಿಸಲಾಗಿತ್ತು. ಅವರು ತೀರಿಕೊಂಡ ನಂತರ ಆ ನಿವೇಶನ ಬಿಜಿಎಲ್ ಸ್ವಾಮಿ ಅವರಿಗೆ ಹಾಗೂ ಸ್ವಾಮಿ ನಿಧನದ ನಂತರ ಡಿ.ವಿ.ರಾಮ್ರಾವ್ ಅವರ ಪುತ್ರ ಚಂದ್ರಮೌಳಿಗೆ ಸೇರಬೇಕು ಎಂದು ವಿಲ್ ಮಾಡಲಾಗಿತ್ತು. ಆದರೆ, ಬಿಜಿಎಲ್ ಸ್ವಾಮಿ ಆ ಮನೆಯಲ್ಲಿ ಇರಲಿಲ್ಲ. ಅವರು ಹೈದ್ರಾಬಾದ್ನಲ್ಲಿ ವಾಸಿಸುತ್ತಿದ್ದರು. ಹಾಗಾಗಿ ಆ ಮನೆ ಕೆಲ ದಿನ ಖಾಲಿ ಇತ್ತು. ತಮ್ಮ ಕೊನೆಯ ದಿನಗಳಲ್ಲಿ ಅವರು ಕುಟುಂಬ ಸಮೇತರಾಗಿ ಬಂದು ಆ ಮನೆಯಲ್ಲಿ ನೆಲೆಸಿದರು. ಸ್ವಾಮಿ ನಿಧನರಾದ ನಂತರ ವಿಲ್ನಂತೆ ಮನೆ ಚಂದ್ರಮೌಳಿ ಅವರಿಗೆ ಸೇರಿತು.
ಮನೆ ಹೀಗಿತ್ತು
ಆ ಮನೆಯ ವಿಸ್ತೀರ್ಣ 50/110, 18 ಚದರದ ಮನೆ. ಆ ಮನೆಯ ಮುಂದೆ ಹಾಗೂ ಸುತ್ತಮುತ್ತ ಗಿಡ-ಮರಗಳಿದ್ದವು. ಒಳಗೆ ಹೋದರೆ ಬಲಭಾಗ ಡಿವಿಜಿ ಅವರನ್ನು ನೋಡಲು ಬರುತ್ತಿದ್ದ ಅತಿಥಿಗಳಿಗಾಗಿ ಮೀಸಲಿಡಲಾಗಿತ್ತು. ಎಡಭಾಗದಲ್ಲಿದ್ದ ಕೊಠಡಿಯಲ್ಲಿ ಅವರು ಮಲಗುತ್ತಿದ್ದರು. ಅಲ್ಲಿಯೇ ಅವರ ಓದು, ಬರಹ ಹೆಚ್ಚಾಗಿ ನಡೆಯುತ್ತಿತ್ತು. ಪ್ರತ್ಯೇಕವಾಗಿ ರೋಲ್ಟಾಪ್ ಡೆಸ್ಕ್, ಟೈಪಿಂಗ್ ಮಷಿನ್, ಗ್ರಂಥಾಲಯ, ಕನ್ನಡ, ಇಂಗ್ಲಿಷ್, ತೆಲುಗು ಹಾಗೂ ಸಂಸ್ಕೃತದ ಪುಸ್ತಕಗಳಿದ್ದ ಲೈಬ್ರರಿ ಇತ್ತು. ಪ್ರತಿನಿತ್ಯ ಮುಂಜಾನೆ 4/4.30ಕ್ಕೆ ಏಳುತ್ತಿದ್ದರು. ಸ್ನಾನ, ಓದು, ಬರಹ ಮುಗಿಸಿ ಸಮೀಪದ ಗೋಕುಲ ಸಂಸ್ಥೆಗೆ ಹೋಗಿ 9ಕ್ಕೆ ಹಿಂತಿರುಗಿ ತಿಂಡಿ ತಿನ್ನುತ್ತಿದ್ದರು. ಮತ್ತೆ ಓದಿನಲ್ಲಿ ತಲ್ಲೀನರಾಗುತ್ತಿದ್ದರು. ಮಧ್ಯಾಹ್ನ ಊಟದ ನಂತರ ಮತ್ತೆ ಮಲಗುತ್ತಿದ್ದರು. ಸಂಜೆ ಕಾರ್ಯನಿರತರಾಗುತ್ತಿದ್ದರು. ಸುಮಾರು 73ನೇ ಇಸವಿಯಲ್ಲಿ ಅವರಿಗೆ ಪಾರ್ಶ್ವವಾಯು ಬಂತು. 81ರಲ್ಲಿ ನಿಧನರಾದರು. ಈ ನಡುವೆ ಡಿವಿಜಿ ಅವರು ಬದುಕಿರುವಾಗಲೇ ಅವರ ವಿರೋಧದ ನಡುವೆಯೂ ಗಾಂಧಿಬಜಾರಿನ ಆ ರಸ್ತೆಗೆ ಡಿವಿಜಿ ರಸ್ತೆ ಎಂದು ನಾಮಕರಣ ಮಾಡಲಾಗಿತ್ತು.
ಮನೆ ಚಂದ್ರಮೌಳಿ ಅವರ ಕಾಲಕ್ಕೆ ಕೊಂಚ ಶಿಥಿಲವಾಗಿತ್ತು. ಅದನ್ನು ರಿಪೇರಿ ಮಾಡಿಸಿ ವಾಸವಿದ್ದರು. ನಂತರ ಆ ಮನೆಯನ್ನು ಕೆನರಾ ಬ್ಯಾಂಕ್ ಶಾಖೆಗೆ ಬಾಡಿಗೆ ನೀಡಿ ತಾವು ಬೇರೆ ಕಡೆ ವಾಸಿಸುತ್ತಿದ್ದರು. ಅದೇ ಬ್ಯಾಂಕ್ನಿಂದ ಸಾಲ ಪಡೆದಿದ್ದರು. ಏಳೆಂಟು ವರ್ಷ ಕಳೆದ ನಂತರ ಸಾಲ ತೀರಿಸಲು ಆಗದೆ ಆ ಮನೆಯನ್ನು ಮಾರಾಟ ಮಾಡಿದರು.
-ಶಾಂತ ತಮ್ಮಯ್ಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


