ಸೀರಿಯಲ್ ಕಿಲ್ಲರ್ಗೆ ಬೈ

ಪಕ್ಕದ ಮನೆಯ ಆಂಟೀದು ಯಾವಾಗಲೂ ಒಂದೇ ಕಂಪ್ಲೇಂಟು, 'ನನ್ನ ಮಗ ಓದೋದೇ ಇಲ್ಲಾರೀ. ಕೇಳಿದ್ದನ್ನೆಲ್ಲ ಕೊಡಿಸ್ತೀನಿ. ಟ್ಯೂಷನ್ಗೆ ಬೇರೆ ಹಾಕಿದ್ದೇನೆ. ಈ ಸಾರಿಯೂ ಕಡಿಮೆ ಮಾರ್ಕ್ಸ್ ಬಂದಿದೆ. ಏನ್ ಮಾಡಬೇಕು ಈ ಮೂದೇವಿಗೆ ಅಂತಾನೇ ಗೊತ್ತಾಗುತ್ತಿಲ್ಲ' ಎಂಬುದು. ಇದಕ್ಕೆ ಉತ್ತರ ಆಂಟಿಯಲ್ಲೇ ಇದೆ. ಆಂಟಿ ಯಾವಾಗಲೂ ಹಾಲ್ನಲ್ಲಿ ಧಾರಾವಾಹಿ ನೋಡುತ್ತಿರ್ತಾರೆ. ಮಗ ಪುಸ್ತಕಗಳನ್ನೆಲ್ಲ ರಾಶಿಹಾಕಿಕೊಂಡು ಪಕ್ಕದಲ್ಲೇ ಕೂತು ಓದುತ್ತಿರುತ್ತಾನೆ. ಮಾರ್ಕ್ಸ್ ಬರಬೇಕು ಅಂದರೆ ಹೇಗೆ ಸಾಧ್ಯ?
'ಹಲೋ, ಸುಮಾ, ಹೇಗಿದ್ದೀಯಾ? ನಿನ್ನನ್ನು ನೋಡಿ ಎಷ್ಟು ವರ್ಷಗಳಾಗೋಯ್ತು. ಮಧ್ಯಾಹ್ನ ನಿಮ್ಮ ಮನೆಗೆ ಬರಬೇಕೆಂದಿದ್ದೇನೆ. ಇರುತ್ತೀ ತಾನೆ?' ಆ ಕಡೆಯಿಂದ ಬಂದ ಉತ್ತರದಿಂದ ನನ್ನ ಉತ್ಸಾಹವೆಲ್ಲ ಜರ್ರನೆ ಇಳಿದುಹೋಯಿತು. 'ಅಯ್ಯೋ ಬಾರೇ, ಅದಕ್ಕೇನಂತೆ. ಆದರೆ 5 ಗಂಟೆ ಒಳಗೆ ಬಾ ಅಥವಾ 8 ಗಂಟೆ ಹೊತ್ತಿಗೆ ಬಂದ್ರೂ ಆಗತ್ತೆ' ಎಂದ ನನ್ನ ಬಾಲ್ಯದ ಗೆಳತಿಯ ಮಾತಿನಲ್ಲಿ ನನ್ನನ್ನು ನೋಡಬೇಕೆಂಬ ತವಕವಾಗಲೀ, ಉತ್ಸಾಹವಾಗಲಿ ಕಂಡುಬರಲಿಲ್ಲ.
ಮೊನ್ನೆ ಊರಿನಲ್ಲಿ ವೈದಿಕವಿತ್ತು. ಹಳ್ಳಿಗಳಲ್ಲಿ ವೈದಿಕದ ದಿನ ಊರಿನ ಹೆಂಗಸರೆಲ್ಲ ಸೇರಿ ಅಂದಿನ ಅಡುಗೆ, ಕಜ್ಜಾಯ(ಸಿಹಿತಿನಿಸು)ಗಳನ್ನು ಮಾಡುವುದು ಲಾಗಾಯ್ತಿನಿಂದಲೂ ಬಂದ ಪದ್ಧತಿ. ಹಿಂದೆಲ್ಲ ಇಂತಹ ಸಂದರ್ಭಗಳಲ್ಲಿ ಆಯಾ ಸೀಜನ್ ತರಕಾರಿಗಳ ವಿಷಯ, ಮದುವೆ-ಮಕ್ಕಳ ವಿಷಯ, ಕಷ್ಟಸುಖದ ಬಗೆಗಿನ ವಿಷಯಗಳು ಚರ್ಚೆಗೆ ಬರುತ್ತಿದ್ದವು. ಊರಿಗೆ ಹೊಸದಾಗಿ ಸೇರ್ಪಡೆಯಾದ ಸದಸ್ಯರ ಪರಿಚಯವಾಗುತ್ತಿತ್ತು. ಮೊನ್ನೆ ಕೂಡ ಹಾಗೇ ಒಂದು ಗುಂಪು ಚರ್ಚೆಯಲ್ಲಿ ನಿರತವಾಗಿತ್ತು. ನಾನು ಸಹಜವಾಗಿಯೇ ಅತ್ತ ಕಿವಿಗೊಟ್ಟೆ. 'ಬೇಕಾದ್ರೆ ನೋಡು, ಅವನಿಗೆ ಬೇರೆಯವಳೊಂದಿಗೆ ಸಂಬಂಧ ಖಂಡಿತ ಇದೆ. ಅವಳಿಗೂ ಅಷ್ಟೆ. ಈಗ ಆಡ್ತಿರೋದೆಲ್ಲ ಬರೀ ನಾಟಕ' ಎಂದು ಒಬ್ಬಳೆಂದರೆ, ಇನ್ನೊಬ್ಬರು 'ಆಕೆಯ ಅಮ್ಮ ಉಟ್ಟಿದ್ದು ಕಾಂಜೀವರಂ ಸೀರೆ ಅಲ್ವಾ?' ಅಂದರು. ಎರಡು-ಮೂರು ತಾಸು ಇದೇ ವಿಷಯದ ಬಗ್ಗೆ ಚರ್ಚೆ ನಡೆಯಿತು. ಅವರ್ಯಾರೂ ತೋಟಗಾರಿಕೆ, ಗಾರ್ಡನಿಂಗ್, ಕರಕುಶಲ ಕಲೆ, ಹೊಸ ಅಡುಗೆಯ ಬಗ್ಗಾಗಲಿ, ಪರಸ್ಪರರ ಕಷ್ಟಸುಖದ ಬಗ್ಗಾಗಲಿ, ಮಕ್ಕಳ ಬಗ್ಗಾಗಲಿ ಮಾತನಾಡುತ್ತಿರಲಿಲ್ಲ. ಅವರೆಲ್ಲ ಹಿಂದಿನ ದಿನದ ಧಾರಾವಾಹಿಯ ಬಗ್ಗೆ, ಮುಂದೇನಾಗಬಹುದು ಎಂಬುದರ ಬಗ್ಗೆ ಚರ್ಚಿಸುತ್ತಿದ್ದರು! ವಿಚಿತ್ರವೆಂದರೆ, ವೈದಿಕದ ಊಟ ಮುಗಿಯುತ್ತಿದ್ದಂತೆ ಎಲ್ಲರೂ ಅವರವರ ಮನೆಗೆ ಹೊರಡುವ ಧಾವಂತದಲ್ಲಿದ್ದರು! ಮನೆಗೆ ಹೋಗಿ ಮಾಡಬೇಕಾದ ತುರ್ತು ಕೆಲಸವೇನೂ ಅವರಿಗಿರಲಿಲ್ಲ. ಅವರ ತುರ್ತು ಮಧ್ಯಾಹ್ನದ ಧಾರಾವಾಹಿ ವೀಕ್ಷಿಸುವುದು!
ಧಾರಾವಾಹಿ ಗೀಳು ಇಷ್ಟಕ್ಕೇ ನಿಲ್ಲುವುದಿಲ್ಲ. ಧಾರಾವಾಹಿ ಕತೆಗಳು ಫೇಸ್ಬುಕ್ನಲ್ಲೂ ಹರಿದಾಡುತ್ತಿವೆ!
ಏಕೆ ಇಷ್ಟೊಂದು ಧಾರಾವಾಹಿ ಹುಚ್ಚು? ಒಂದು ದಿನವಲ್ಲ, ಇಡೀ ವಾರ ನೋಡದೆ ಹೋದರೂ ಧಾರಾವಾಹಿಯ ಕತೆ ಮುಂದಕ್ಕೇನೂ ಹೋಗಿರುವುದಿಲ್ಲ. ಈಗೀಗಂತೂ ಈ ಧಾರಾವಾಹಿ ವೀಕ್ಷಣೆ ಗಂಭೀರ ಸ್ವರೂಪ ಪಡೆಯುತ್ತಿದೆ. ಕೇವಲ ಮನರಂಜನೆಗೆಂದೇ ಪ್ರಾರಂಭವಾದ ಈ ಧಾರಾವಾಹಿಗಳು ವೀಕ್ಷಕರನ್ನು ತಮ್ಮ ಸುಳಿಯಲ್ಲಿ ಸಿಲುಕಿಸಿ ಎತ್ತ ಎಳೆದೊಯ್ಯುತ್ತಿವೆ ಎಂಬುದೇ ತಿಳಿಯುತ್ತಿಲ್ಲ. ಹಾಗಾಗಿ, ನೀವು ಯಾರನ್ನಾದರೂ ಭೇಟಿ ಮಾಡಲು ಅವರ ಮನೆಗೆ ಹೋಗಬೇಕಾದರೆ ಅವರ 'ಅನುಕೂಲ'ವಾದ ಸಮಯ ಯಾವುದೆಂದು ವಿಚಾರಿಸಿಕೊಂಡು ಹೋಗುವುದೊಳಿತು!
ಹಾಗಂತ ಮನೆಯಲ್ಲಿರುವ ಮಹಿಳೆಯರೆಲ್ಲ ಧಾರಾವಾಹಿ ನೋಡುವ ವ್ಯಸನ ಅಂಟಿಸಿಕೊಂಡಿದ್ದಾರೆಂದರ್ಥವಲ್ಲ. ನಗರಗಳಿರಲಿ, ಹಳ್ಳಿಗಳಿರಲಿ ಸೃಜನಶೀಲ ಚಟುವಟಿಕೆಗಳಲ್ಲಿ ಸದಾ ತಮ್ಮನ್ನು ತೊಡಗಿಸಿಕೊಂಡಿರುವಂಥ ಎಷ್ಟೋ ಮಹಿಳೆಯರು ನಮ್ಮ ನಡುವಿದ್ದಾರೆ.
ಮನೆಕೆಲಸ ನೀವೇ ಮಾಡಿಕೊಳ್ಳಿ
ಟಿವಿ ಮುಂದಿನಿಂದೆದ್ದು ಬನ್ನಿ. ಸ್ವಲ್ಪ ವಿಭಿನ್ನವಾಗಿ ಯೋಚಿಸಿ. ಟಿವಿ ನೋಡುತ್ತಾ ಗಂಟೆಗಟ್ಟಲೆ ಕುಳಿತುಕೊಳ್ಳಲು ಸಾಧ್ಯವಿರುವವರಿಗೆ ಎದುರಿನ ಮೂಲೆಯಲ್ಲಿ ಜೇಡ ಕಟ್ಟಿರುವ ಬಲೆಯನ್ನು ತೆಗೆಯಲೂ ಪುರುಸೊತ್ತಿರುವುದಿಲ್ಲ. ಸಾಧ್ಯವಾದಷ್ಟು ಮನೆಯ ಕೆಲಸಗಳನ್ನೆಲ್ಲ ನೀವೇ ಮಾಡಿಕೊಳ್ಳಬಹುದಲ್ಲ? ಮನೆಗೆ ಅಗತ್ಯ ವಸ್ತುಗಳನ್ನು ನೀವೇ ಹೋಗಿ ತನ್ನಿ. ಅತ್ತ ನಿಮ್ಮ ಮೆಚ್ಚಿನ ಧಾರಾವಾಹಿ ನಡೆಯುತ್ತಲೇ ಇರಲಿ, ಇತ್ತ ಈ ಕೆಲಸ ಮಾಡಿ ಮುಗಿಸಿ. ಹುಡುಕುತ್ತಾ ಹೋದರೆ ಮನೆಯಲ್ಲಿ ಮಾಡುವಂಥ ನೂರಾರು ಕೆಲಸಗಳು ಕಾಣುತ್ತವೆ. ಇಸ್ತ್ರಿ ಹಾಕುವುದು, ಮಕ್ಕಳ ಹೋಂವರ್ಕ್ಗೆ ಸಹಾಯ ಮಾಡುವುದು. ಸೋಫಾ, ಟೇಬಲ್ಗಳ ಧೂಳು ಒರೆಸುವುದು. ಪ್ರತಿದಿನ ಸ್ವಲ್ಪ ದೂರವಾದರೂ ನಡೆಯಿರಿ. ನಿಮಗೆ ಅನುಕೂಲ ಎನಿಸಿದ ಹೊತ್ತಿನ ಅರ್ಧ ಗಂಟೆಯ ನಡಿಗೆ ಉತ್ತಮ ಆರೋಗ್ಯಕ್ಕೆ ಪೂರಕ ಎಂದು ಸಂಶೋಧನೆಗಳು ಸಾಬೀತುಪಡಿಸಿವೆ. ಯೋಗಾಸನ ರೂಢಿಸಿಕೊಳ್ಳಿ. ಒಮ್ಮೆ ಕೆಲಸ ಮಾಡಲು ತೊಡಗಿದರೆ ಸಾಕು. ಕೆಲಸಗಳು ತಾನಾಗೇ ಕಾಣಿಸುತ್ತವೆ. ಬೇಕಾದರೆ ಮಾಡಿ ನೋಡಿ. ಇದೇ ರೀತಿ ಎಂದೋ ಮರೆತಿದ್ದ, ಮಾಡಬೇಕೆಂದಿದ್ದ ನಿಮ್ಮ ಹವ್ಯಾಸಗಳಿಗೂ ಮರುಹುಟ್ಟು ನೀಡಬಹುದು. ಇನ್ನು ಗ್ರಾಮೀಣ ಪ್ರದೇಶದ ಮಹಿಳೆಯರಿಗಂತೂ ಕೆಲಸ ಮಾಡುವ ಮನಸ್ಸೊಂದಿದ್ದರೆ ಸಾಕು ಸಮಯವೇ ಸಾಲದು, ಅಷ್ಟೊಂದಿವೆ. ಮನೆಯ ಸುತ್ತಮುತ್ತಲಿನ ಜಾಗದಲ್ಲೇ ತರಕಾರಿ ಬೆಳೆದುಕೊಳ್ಳಬಹುದು. ಮನೆಯ ಅಂದ ಹೆಚ್ಚಿಸುವ ನಿಟ್ಟಿಂಗ್, ಕಸೂತಿ ಮುಂತಾದ ಕರಕುಶಲ ವಸ್ತುಗಳನ್ನು ತಯಾರಿಸಬಹುದು. ಇದರಿಂದ ದೇಹ, ಮನಸ್ಸು ಆರೋಗ್ಯಪೂರ್ಣವಾಗಿರುವುದಲ್ಲದೆ, ಆರ್ಥಿಕವಾಗಿಯೂ ಸ್ವಾವಲಂಬಿಗಳಾಗಬಹುದು.
ವ್ಯರ್ಥವಾಗುವ ಸಮಯ
ಮೂರ್ಖರ ಪೆಟ್ಟಿಗೆ ಎಂದೇ ಕರೆಯಲಾಗುವ ಟಿವಿ ಜನರನ್ನು ಆಲಸಿಗಳನ್ನಾಗಿ ಮಾಡುತ್ತದೆ ಎಂಬ ಆರೋಪ ಹಳೆಯದು. ಸಮೀಕ್ಷೆಯೊಂದರ ಪ್ರಕಾರ, ಜನ ತಮ್ಮ ಆಯುಷ್ಯದಲ್ಲಿ ಸರಾಸರಿ ಒಂಬತ್ತು ವರ್ಷಗಳನ್ನು ಟಿವಿ ಮುಂದೆ ಕಳೆಯುತ್ತಾರಂತೆ! ಇಂದು ನಮ್ಮ ದೇಶದಲ್ಲಿ ಪ್ರತಿ ಹತ್ತರಲ್ಲಿ ಮೂವರು ಊಟವನ್ನೂ ಟಿವಿ ಎದುರೇ ಮಾಡುವ ಪರಿಪಾಠ ಇಟ್ಟುಕೊಂಡಿದ್ದಾರೆಂದರೆ ಅವರ ಟಿವಿ ಗೀಳಿನ ಪರಿಚಯವಾಗುತ್ತದೆ. ಟಿವಿ ವೀಕ್ಷಿಸುವವರಲ್ಲಿ ಪುರುಷರಿಗಿಂತ ಮಹಿಳೆಯರೇ ಮುಂದಿದ್ದಾರೆ ಎನ್ನುವುದು ಸತ್ಯ. ಮನೆಯಲ್ಲೇ ಇರುವ ಕೆಲವು ಮಹಿಳೆಯರು ದಿನಕ್ಕೆ ಸುಮಾರು 7 ಗಂಟೆಗಳ ಕಾಲ ಟಿವಿ ವೀಕ್ಷಿಸುತ್ತಾರಂತೆ! ಅಂದರೆ ವಾರಕ್ಕೆ ಸುಮಾರು 42 ಗಂಟೆ! ತಿಂಗಳಿಗೆ 294 ಗಂಟೆಗಳು, ವರ್ಷಕ್ಕೆ ಸುಮಾರು 3528 ಗಂಟೆಗಳು! ಒಂದು ಅಂದಾಜಿನಂತೆ ಅವರ ಜೀವಿತದ ಕನಿಷ್ಠ 50 ವರ್ಷಗಳನ್ನಾದರೂ ಟಿವಿ ವೀಕ್ಷಣೆಯಲ್ಲಿ ಕಳೆಯಬಹುದು ಅಂದುಕೊಂಡರೆ, ಅಬ್ಬಬ್ಬಾ! ವ್ಯರ್ಥವಾಗುವ ಅಮೂಲ್ಯ ವೇಳೆಯನ್ನು ಲೆಕ್ಕಹಾಕಲೂ ಭಯವಾಗುತ್ತದೆ!
ನನ್ನ ಕೆಲಸಗಳಿಗೆ ದಿನದ ಇಪ್ಪತ್ನಾಲ್ಕು ಗಂಟೆಗಳೇ ಸಾಲುತ್ತಿಲ್ಲ, ಇನ್ನು ಧಾರಾವಾಹಿ ನೋಡುವುದಕ್ಕೆಲ್ಲಿ ಸಮಯ? ನನ್ನ ಕೆಲಸ ಬೆಳಗ್ಗೆ 6 ಗಂಟೆಗೆ ಹಸುಗಳ ಹಾಲು ಹಿಂಡುವುದರಿಂದ ಆರಂಭವಾಗಿ ಮನೆಗೆಲಸ, ತರಕಾರಿ ಗಿಡಗಳಿಗೆ, ಹೂವಿನ ಗಿಡಗಳಿಗೆ ನೀರುಣಿಸಿ, ಹೆಚ್ಚಿನ ಹಾಲನ್ನು ಡೇರಿಗೆ ಕೊಟ್ಟು ಬರುವಷ್ಟರಲ್ಲಿ ಬೆಳಗ್ಗಿನ ಹತ್ತೂವರೆ ಕಳೆದಿರುತ್ತದೆ. ನಂತರ ಅಡುಗೆ. ಸ್ವಲ್ಪ ವಿಶ್ರಾಂತಿಯ ನಂತರ ನಿಟ್ಟಿಂಗ್ನಲ್ಲಿ ಸ್ವೆಟರ್, ಶಾಲು ಹೆಣೆಯುವುದನ್ನು ಹೇಳಿಕೊಡುತ್ತೇನೆ. ಆರಾಮವಾಗಿ ಕುಳಿತು ಟಿವಿ ನೋಡುವುದು ರಾತ್ರಿ 9 ಗಂಟೆ ನಂತರವೇ. ಕರೆಂಟ್ ಸರಿಯಾಗಿದ್ದರೆ ಒಂದೆರಡು ಧಾರಾವಾಹಿ ನೋಡುತ್ತೇನೆ, ಏಕೆಂದರೆ ಹಳ್ಳಿಗಳಲ್ಲಿ ಪವರ್ಕಟ್ ಜಾಸ್ತಿ ಅಲ್ವಾ?
- ತುಂಬೇಮನೆ ಸುಮಿತ್ರಾ ಹೆಗಡೆ, ಶಿರಸಿ
-ಶಶಿರೇಖಾ ಹೆಗಡೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


