ಬೈಟುಕಾಫಿ

ಶ್ರವಣಕುಮಾರರು ಈಗೆಲ್ಲಿ!

Published On :

ವೃದ್ಧಾಶ್ರಮದಲ್ಲಿ ತಮ್ಮ ಕುಟುಂಬದ ಹಿರಿಯರನ್ನು ಇಡುವವರು ಹೆಚ್ಚಿನ ಪಾಲು ವಿಭಕ್ತ ಕುಟುಂಬದವರೇ. ಆದರೆ, ಅನೇಕ ವಿಭಕ್ತ ಕುಟುಂಬಗಳಲ್ಲಿಯೂ ಕೂಡ ಹಿರಿಯರೊಡನೆ ಕಾಲ ಕಳೆಯುತ್ತಿರುವವರನ್ನು ಕೂಡ ಕಾಣಬಹುದು. ತಮ್ಮನ್ನು ತಂದೆ-ತಾಯಿಯರು ಹಗಲಿರುಳು ಕಣ್ಣಲ್ಲಿ ಕಣ್ಣಿಟ್ಟು ಕಾಪಾಡಿದ್ದನ್ನು ಮರೆಯಬಾರದು. ಗಂಡ-ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗಬೇಕಾಗಿದೆಯಾದ ಕಾರಣ ಹೆತ್ತವರನ್ನು ವೃದ್ಧಾಶ್ರಮಕ್ಕೆ ಸೇರಿಸುತ್ತೇವೆ ಎಂಬುದು ಸರಿಯಲ್ಲ. ಆದರೆ, ಕೆಲವರು ತಮ್ಮ  ಮಕ್ಕಳನ್ನು ಕಳೆದುಕೊಂಡವರು, ಕೆಲವರು ಕುಟುಂಬದ ಒಡನಾಟದಲ್ಲಿ ಸಂಬಂಧಿಗಳಿಂದ ದೂರವಾದವರೂ ಇದ್ದಾರೆ. ಇಂಥವರು ಸ್ವ-ಇಚ್ಚೆಯಿಂದ ಬಂದು ವೃದ್ಧಾಶ್ರಮದಲ್ಲಿ ನೆಲೆಸಿದ್ದಾರೆ. ಅವರು ಅಲ್ಲಿ ಸುಮ್ಮನೇ ಕಾಲ ಕಳೆಯುತ್ತಿಲ್ಲ ಸಣ್ಣಪುಟ್ಟ ಕಾರ್ಯ ನಿರ್ವಹಿಸುತ್ತ ತಮ್ಮದೇ ಆದ ಜೀವನ ಶೈಲಿಯಲ್ಲಿ ಬದುಕುತ್ತಿದ್ದಾರೆ. ಈಗ ಜಗತ್ತು ಮಾತ್ರವಲ್ಲ ಮಾನವನ ಮನಸ್ಸು ಕೂಡ ಚಿಕ್ಕದಾಗುತ್ತಿದೆ. ತಂದೆ,ತಾಯಿ ಸೇರಿದಂತೆ ಹಿರಿಯರೆಲ್ಲ ಯಾರಿಗೂ ಬೇಡವಾಗಿದೆ. ಹೆತ್ತವರನ್ನು ಪ್ರೀತಿ ವಾತ್ಸಲ್ಯದಿಂದ ನೋಡಿಕೊಳ್ಳುವುದು ಪುಣ್ಯದ ಕೆಲಸವಲ್ಲವೇ?
-ವೈ.ಬಿ.ಕಡಕೋಳ, ಮುನವಳ್ಳಿ, ಬೆಳಗಾವಿ

ಆತ್ಮಾವಲೋಕನ ಮಾಡಿಕೊಳ್ಳಲಿ!
ಇತ್ತೀಚಿನ ದಿನಗಳಲ್ಲಿ ಮಗ ಮದುವೆಯಾಗಿ ಹೆಂಡತಿ ಮನೆಗೆ ಬಂದೊಡನೆಯೇ ವೃದ್ಧ ತಂದೆ ತಾಯಿಗಳನ್ನು ನಿರ್ಲಕ್ಷಿಸುವ, ಹೊರಗೆ ದಬ್ಬುವ, ವೃದ್ಧಾಶ್ರಮಗಳಿಗೆ ಸೇರಿಸುವುದನ್ನು ಗ್ರಾಮೀಣ ಭಾಗದಲ್ಲೂ ಕಾಣುತ್ತಿದ್ದೇವೆ. ಅತ್ತಾಗ ಕೈ ತುತ್ತು ಕೊಟ್ಟು ಸಲುಹಿದ ಅಮ್ಮನನ್ನು, ಬೇಕೆನಿಸಿದ್ದನ್ನು ಕೊಡಿಸಿದ ಅಪ್ಪನನ್ನು ಮರೆಯುವ ಇಂದಿನ ಮಕ್ಕಳನ್ನು ನೋಡಿದಾಗ ತುಂಬಾ ವ್ಯಥೆಯನಿಸುತ್ತದೆ. ಬದುಕನ್ನೇ ಧಾರೆ ಎರೆದವರನ್ನು ಈ ಪೀಳಿಗೆ ವೃದ್ಧಾಶ್ರಮಗಳಿಗೆ ತಳ್ಳುವುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಯಾರೊಂದಿಗೋ ಗಂಟೆಗಟ್ಟಲೆ ಮೊಬೈಲ್ನಲ್ಲಿ ಮಾತನಾಡುವ ಇಂದಿನ ಯುವ ಜನಾಂಗ, ಹೆತ್ತವರ ಜೊತೆ ಭಾವನಾತ್ಮಕವಾಗಿ ಮಾತನಾಡಬೇಕಾಗಿದೆ. ಗ್ರಾಮೀಣ ಭಾಗದಲ್ಲ್ಲೂ ಅವಿಭಕ್ತ ಕುಟುಂಬಗಳು ಒಡೆದು ಹಿರಿಯರನ್ನು ಧಿಕ್ಕರಿಸಿ ನಗರದತ್ತ ವಾಲುತ್ತಿರುವುದು ತುಂಬಾ ವಿಷಾದನೀಯ.
-ಬಸವರಾಜ ಗಂ. ಪುರಾಣಿಕಮಠ, ಬೈಲಹೊಂಗಲ

ನಗರ ಜೀವನಶೈಲಿಯ ಆಕರ್ಷಣೆ
ರೈತನಿಲ್ಲದ ಬದುಕನ್ನು ಕಲ್ಪನೆ ಮಾಡಿಕೊಳ್ಳುವುದೂ ಅಸಾಧ್ಯ. ಊಟದ ಕೊನೆಯಲ್ಲಿ 'ಅನ್ನದಾತ ಸುಖೀಭವ'ಎಂದು ಹಾರೈಸಬೇಕೆಂದು ವೇದ ಮಂತ್ರಗಳಲ್ಲಿ ಉಲ್ಲೇಖವಿದೆ. ಈ ಅನ್ನ ಕೊಡುವ ರೈತನ ಮಕ್ಕಳು ಕೃಷಿಯನ್ನು ಬಿಟ್ಟು ಬೇರೆ ಉದ್ಯೋಗ ಹುಡುಕುತ್ತ ನಗರ ಪ್ರದೇಶಕ್ಕೆ ಹೋಗಲು ಪ್ರಮುಖ ಕಾರಣ, ವಿದ್ಯಾವಂತನಾದ್ದರೂ ಕೃಷಿಕನಿಗೆ ಹೆಣ್ಣು ಕೊಡುವುದಿಲ್ಲ. ನಗರ ಪ್ರದೇಶದ ಆಡಂಬರದ ಜೀವನ ಶೈಲಿಗೆ ಆಕರ್ಷಿತರಾಗಿರುವ ಹೆಣ್ಣು ಮಕ್ಕಳು ರೈತನನ್ನು ಮದುವೆಯಾಗಲು ಒಪ್ಪುವುದಿಲ್ಲ. ಹಾಗಾಗಿ ರೈತನ ಮಕ್ಕಳು ಒಕ್ಕಲು ತೊರೆದು ನಗರದಲ್ಲಿ ಉದ್ಯೋಗ ಮಾಡುತ್ತಾರೆ. ಪರಿಣಾಮ ವೃದ್ಧ ರೈತ ತಂದೆ ತಾಯಿ ಹಳ್ಳಿಗಳಲ್ಲೇ ಉಳಿಯುವ ಅನಿವಾರ್ಯ ಪರಿಸ್ಥಿತಿ ಸೃಷ್ಟಿಯಾಗಿದೆ. ಇದು ರೈತರೇ ಮಾಡಿಕೊಳ್ಳುತ್ತಿರುವ ಸ್ವಯಂಕೃತ ಅಪರಾಧ.
-ಫ್ಯಾಷನ್ ಡಿಸೈನರ್ ಮಧು, ಹಾಸನ.

'ಜಗುಲಿ'ಯಲ್ಲಿ ಈ ಸಲದ ವಿಷಯ 'ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿವೆಯೇ?'. ವಿಷಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಬರವಣಿಗೆ 100 ಪದಗಳ ಮಿತಿಯಲ್ಲಿರಲಿ. ಜತೆಗೆ ನಿಮ್ಮದೊಂದು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಇರಲಿ. ಕೈ ಬರಹದಲ್ಲಿ ಕಳಿಸುವುದಿದ್ದರೆ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ನಮ್ಮ ವಿಳಾಸ: ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್‌ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು- 560001, ಇ-ಮೇಲ್: anekaby2@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.