ರೈತಾಪಿಗಳಿಗೇ ಬೇಡದ ಹಳ್ಳಿ
ಇಂದಿನ ಯುವ ಜನತೆ ನಗರ ವಾಸದ ಭ್ರಮೆಯಲ್ಲಿದ್ದಾರೆ. ಅದರ ಜೊತೆಯಲ್ಲೆ ಹಳ್ಳಿಗಳಲ್ಲಿ ಜೀವನ ನಡೆಸಲು ಕಷ್ಟವೆನಿಸಿ ನಗರ ಸೇರುವವರ ಸಂಖ್ಯೆಯೂ ಗಣನೀಯವಾಗಿ ಹೆಚ್ಚಾಗುತ್ತಿದೆ. ಹಳ್ಳಿಯಲ್ಲಿ ವಾಸಮಾಡಲು ಇಂದಿನ ಯುವತಿಯರಿಗೆ ಮನಸ್ಸಿಲ್ಲವೆಂಬುದೂ ನಿಜ. ನಗರದ ಯುವತಿಯರು ಹಳ್ಳಿಯ ಹುಡುಗರೆಂದರೆ ಮೂಗೆಳೆಯುತ್ತಾರೆ. ಭೂತಾಯಿಯ ಸೇವೆ ಮಾಡುವವರು ಇನ್ನು ಮುಂದೆ ಕಾಣಸಿಗುವುದು ದುಸ್ತರವೆನಿಸುತ್ತಿದೆ. ರೈತಾಪಿ ಮಕ್ಕಳು ಹಳ್ಳಿಯಲ್ಲೇ ಬೇರೂರುವಂತೆ ಎಲ್ಲ ಅನುಕೂಲಗಳನ್ನು ಸರ್ಕಾರ ತ್ವರಿತವಾಗಿ ಮಾಡಿಕೊಡಬೇಕು. ಮಳೆ ಬಂದಾಗ ಬೆಳೆ ಇಲ್ಲ, ಬೆಳೆ ಬಂದಾಗ ಬೆಲೆ ಇಲ್ಲ ಎಂದು ಎಲ್ಲರೂ ನಗರ ಸೇರುತ್ತಿರುವುದು ಕಂಡಾಗ ಮುಂದಿನ ದಿನಗಳಲ್ಲಿ ಏನಾಗುತ್ತದೋ ಎಂಬ ಆತಂಕ ಕಾಡುತ್ತಿದೆ. ಸರ್ಕಾರ ಇಂತಹ ವಿಚಾರಗಳನ್ನು ತ್ವರಿತವಾಗಿ ಕೈಗತ್ತಿಕೊಂಡು ಕ್ರಮ ಕೈಗೊಳ್ಳಬೇಕಿದೆ. ಇಲ್ಲದಿದ್ದಲ್ಲಿ ನೀವು ಹೇಳಿದಂತೆ ಹಳ್ಳಿಗಳು ವೃದ್ಧಾಶ್ರಮಗಳಾಗುವಲ್ಲಿ ಸಂದೇಹವೇ ಇಲ್ಲ.
= ಪತಂಗಿ ಹೇಮಲತಾ ಮುರಳಿ. ಬೆಂಗಳೂರು
ಹೊಟ್ಟೆಗಿನ್ನು ತಣ್ಣೀರು ಬಟ್ಟೆ
ಭಾರತದಂತಹ ಮುಂದುವರಿಯುತ್ತಿರುವ ರಾಷ್ಟ್ರಗಳಲ್ಲಿ ಇತ್ತೀಚಿನ ದಿನಗಳಲ್ಲಿ ಶಿಕ್ಷಣ, ಕೈಗಾರಿಕೆ, ನಗರೀಕರಣ ಮತ್ತು ಪಾಶ್ಚಿಮಾತ್ಯ ಸಂಸ್ಕೃತಿಗಳಿಗೆ ಆದ್ಯತೆ ನೀಡುತ್ತಿರುವುದರ ಪರಿಣಾಮವಾಗಿ ಇಂದು ಶುದ್ಧವಾದ ಗಾಳಿ, ನೀರು ಮತ್ತು ಆಹಾರಗಳಿಗೆ ಪರದಾಡಬೇಕಾಗಿದೆ. ಕೃಷಿ ಉತ್ಪನ್ನಗಳಿಗೆ ಸರಿಯಾದ ಬೆಲೆ ಸಿಗದಿರುವುದರಿಂದ ಹಾಗೂ ಅಧಿಕ ಶ್ರಮದಿಂದ ಹಳ್ಳಿಯ ಕೃಷಿ ಜೀವನದ ಬಗ್ಗೆ ಯುವ ಜನತೆ ದಿವ್ಯ ನಿರ್ಲಕ್ಷ್ಯ ತೋರುತ್ತಿದ್ದಾರೆ. ಇಂದು ಜನಸಂಖ್ಯಾ ಸ್ಫೋಟದಿಂದಾಗಿ ತಿನ್ನುವ ಬಾಯಿಗಳು ಹುಟ್ಟುತ್ತಿವೆಯೇ ವಿನಃ ಹಳ್ಳಿಗಳಲ್ಲಿ ದುಡಿಯುವ ಕೈಗಳು ಹುಟ್ಟುತ್ತಿಲ್ಲ. ಇದರಿಂದಾಗಿ ಯುವ ಜನತೆ ಹಣ ಮತ್ತು ಐಷಾರಾಮಿ ಜೀವನವೆಂಬ ಬಿಸಿಲು ಕುದುರೆಯ ಬೆನ್ನೇರಿ ಸ್ವಾತಂತ್ರ್ಯ, ಸುಖ, ಶಾಂತಿ, ನೆಮ್ಮದಿ ಇಲ್ಲದಿದ್ದರೂ ನಗರಗಳ ಕಡೆ ವಲಸೆ ಹೋಗುತ್ತಿದ್ದಾರೆ. ಹಗಾಗಿ ಇಂದು ಹಳ್ಳಿಗಳು ವೃದ್ಧಾಶ್ರಮವಾಗುತ್ತಿವೆ.
= ಅನನ್ಯ ಎಸ್. ಆರ್, 6ನೇ ತರಗತಿ ವಿದ್ಯಾರ್ಥಿ, ಕಮ್ಮರಡಿ, ಕೊಪ್ಪ ತಾಲ್ಲೂಕು
ರಾಮರಾಜ್ಯದ ಕನಸು ಎಲ್ಲಿ ಹೋಯ್ತು!
ಭಾರತ ಹಳ್ಳಿಗಳಿಂದ ಕೂಡಿದ ದೇಶ. ಇಂತಹ ನಾಡಿನಲ್ಲಿ ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿರುವುದು ವಿಪರ್ಯಾಸದ ಸಂಗತಿ. ದೇಶದ ಸಂಸ್ಕೃತಿ ಏನಾದರೂ ಉಳಿದಿದೆ ಎಂದರೆ ಅದು ಹಳ್ಳಿಗಳಲ್ಲಿ ಮಾತ್ರ. ಹಳ್ಳಿಯ ಜನರಲ್ಲಿಯೇ ಬಂಧುಗಳು, ನೆರೆಹೊರೆಯವರು, ಸಂಬಂಧಿಕರು ಎಂಬ ಭಾವನೆ ಇದೆ. ಸಿಟಿಗಳಲ್ಲಿ ಹಗಲು ಹೊತ್ತೂ ಬಾಗಿಲು ಮುಚ್ಚಿಕೊಂಡಿರುತ್ತಾರೆ. ಹಳ್ಳಿಯ ಜನರು ವ್ಯವಸಾಯದಲ್ಲಿ ತೊಡಗಿ ತಮ್ಮಂತೆ ತಮ್ಮ ಮಕ್ಕಳು ಕಷ್ಟ ಪಡುವುದು ಬೇಡವೆಂದು ಸಿಟಿಯತ್ತ ಕಳುಹಿಸುತ್ತಿದ್ದಾರೆ. ಈ ಮಕ್ಕಳು ಓದಿ ಉದ್ಯೋಗ ಗಿಟ್ಟಿಸಿಕೊಂಡ ನಂತರ ಹಳ್ಳಿಯ ಕಡೆಗೆ ಮುಖ ತೋರಿಸುವುದಿಲ್ಲ. ಇದರಿಂದ ಕೇವಲ ತಂದೆ ತಾಯಿಗಳು ಮಾತ್ರ ಈ ಹಳ್ಳಿಯಲ್ಲಿ ಬದುಕಿ ಬಾಳ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
= ಅವಿನಾಶ್ ಎಸ್. ಬೋರಂಚಿ, ಬೆಡಕಪಳ್ಳಿ, ಚಿಂಚೋಳಿ
'ಜಗುಲಿ'ಯಲ್ಲಿ ಈ ಸಲದ ವಿಷಯ 'ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿವೆಯೇ?'. ವಿಷಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಬರವಣಿಗೆ 100 ಪದಗಳ ಮಿತಿಯಲ್ಲಿರಲಿ. ಜತೆಗೆ ನಿಮ್ಮದೊಂದು ಪಾಸ್ಪೋರ್ಟ್ ಅಳತೆಯ ಭಾವಚಿತ್ರ ಇರಲಿ. ಕೈ ಬರಹದಲ್ಲಿ ಕಳಿಸುವುದಿದ್ದರೆ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ನಮ್ಮ ವಿಳಾಸ: ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು- 560001, ಇ-ಮೇಲ್: anekaby2@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

