

ಅರ್ಧ ರಾತ್ರಿ ನಿದ್ದೆಯಿಂದ ದಿಡೀರ್ ಅಂತ ಎದ್ದವನು ಗೌತಮ ಬುದ್ಧ. ಆದರೆ, ಹಾಡುಹಗಲೇ ಎಲ್ಲೆಂದರಲ್ಲಿ ನಿದ್ದೆಗೆ ಜಾರಿದವರು? 'ಸ್ಯಾಂಡಲ್ವುಡ್ ಸ್ಟಾರ್ಗಳು'! ಅಚ್ಚರಿ ಎನಿಸಿದರೂ ಇದು ನಿಜ. ಬಹುಶಃ ನಮ್ಮ ಸಿನಿಮಾ ಸ್ಟಾರ್ಗಳಷ್ಟು ನಿದ್ದೆಯನ್ನು ಅನುಭವಿಸುವವರು ಬೇರೊಬ್ಬರಿಲ್ಲ. ಈ ವಿಚಾರದಲ್ಲಿ ನಮ್ಮವರು ಯಾರ ಜೊತೆ ಬೇಕಾದರೂ ಸ್ಪರ್ಧೆ ನೀಡುತ್ತಾರೆ. ಹಾಲಿವುಡ್ ನಟ, ನಟಿಯರನ್ನೂ ಹಿಂದಿಕ್ಕುತ್ತಾರೆ!
ಮನುಷ್ಯನಿಗೆ ದಿನಕ್ಕೆ 5ರಿಂದ 6 ಗಂಟೆ ನಿದ್ದೆ ಅಗತ್ಯ ಎನ್ನುತ್ತಾರೆ. ವೈದ್ಯ ನಾರಾಯಣರ ಈ ಮಾತನ್ನು ಸಿನಿಮಾ ನಟರು ಮಾತ್ರ ತುಂಬಾ ಗಂಭೀರವಾಗಿ ಪರಿಗಣಿಸಿದ್ದಾರೆ. ಅದರ ಪರಿಣಾಮವೇ ಗೋಡೆ, ಕಂಬ, ಬೆಟ್ಟ, ಗುಡ್ಡ, ಕಸದ ತೊಟ್ಟಿ, ಶೌಚಾಲಯ, ಮಹಡಿ ಎನ್ನುವ ಯಾವ ತಾರತಮ್ಯವೂ ಇಲ್ಲದೆ ಹಾಯಾಗಿ ನಿದ್ದೆಗೆ ಶರಣಾಗುತ್ತಾರೆ. ನೋಡುಗರ ಪಾಲಿಗೆ ಅವರೊಂಥರಾ 'ಸ್ಲೀಪಿಂಗ್ ಟ್ಯಾಬ್ಲೆಟ್ಸ್'. ಕನ್ನಡ ಸಿನಿಮಾಗಳ ಪೋಸ್ಟರ್ಗಳನ್ನು ನೋಡಿ. ಒಂದೋ ನಮ್ಮ ಸ್ಟಾರ್ಗಳು ನಿದ್ದೆ ಮಾಡುತ್ತಿರುತ್ತಾರೆ, ಇಲ್ಲ ಓಡುತ್ತಿರುತ್ತಾರೆ. ಈ ಎರಡು ಕೆಲಸಗಳಲ್ಲಿ ಅವರು ತುಂಬಾ ಅಚ್ಚುಕಟ್ಟು.
ಸಿನಿಮಾದವರ ಈ ನಿದ್ದೆ ಯಾವ ಮಟ್ಟಿಗೆ ಪ್ರಭಾವಿಸುತ್ತದೆ ಎಂದರೆ ಪ್ರೇಕ್ಷಕ ಕೂಡ ಇಂಟರ್ವೆಲ್ ಬರುವಷ್ಟರಲ್ಲಿ ನೂರಾರು ಬಾರಿ ಆಕಳಿಸುತ್ತಾನೆ. ನಿದ್ದೆ ಮಾಡುವ ವಿಚಾರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್, ಗೋಲ್ಡ್ ಮೆಡೆಲ್ ಸ್ಟೂಡೆಂಟ್. ಅವರ್ಯಾಕೆ ಅಷ್ಟು ಅದ್ಭುತವಾಗಿ ನಿದ್ದೆಯನ್ನು ಅನುಭವಿಸುತ್ತಾರೆ ಎಂದರೆ, ಅವರು ಮಲಗುವ ಜಾಗ ಅಂಥದ್ದು ನೋಡಿ! ಸ್ಪಷ್ಟವಾಗಿ ಹೇಳಬೇಕು ಅಂದರೆ ಕ್ರೇಜಿಸ್ಟಾರ್ ತಮ್ಮ ನಿದ್ದೆ ಮೂಡಿಗೆ ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುವುದು 'ಮಧ್ಯ' ಪ್ರದೇಶವನ್ನೇ. ಏನಿದ್ದರೂ ಅವರದ್ದು 'ಮಧ್ಯ' ಮತ್ತು ಉತ್ತರದ ಆಕರ್ಷಣೆ. ಜೊತೆಗೆ ಈ ಪ್ರದೇಶದಲ್ಲಿ ಹೂವು, ಹಣ್ಣುಗಳನ್ನೂ ಎಸೆಯುತ್ತಾರೆ, ಅದು ಬೇರೆ ವಿಷ್ಯ. ಇನ್ನು ಗೋಲ್ಡನ್ ಸ್ಟಾರ್ ಗಣೇಶ್ ಒಮ್ಮೊಮ್ಮೆ ಕ್ರೇಜಿಸ್ಟಾರ್ ಜೊತೆ ಪೈಪೋಟಿಗಿಳಿಯುತ್ತಾರೆ. ಮಳೆ ಬಂದ್ರು ಸರಿ, ಡ್ಯುಯೆಟ್ ಆದರೂ ಸರಿ, ನಗುವ ದೃಶ್ಯಗಳಿದ್ದರೂ ಸರಿ... ಯಾವ ಮುಜುಗರವೂ ಇಲ್ಲದೆ ಕಣ್ಣು ಮುಚ್ಚುತ್ತಾರೆ.
ಇವರ ಹೊರತಾಗಿ ಅಜಯ್ ರಾವ್, ಪ್ರಜ್ವಲ್ ದೇವರಾಜ್, ದಿಗಂತ್, ನೆನಪಿರಲಿ ಪ್ರೇಮ್, ಸುದೀಪ್, ಪುನೀತ್ ರಾಜ್ಕುಮಾರ್ ಅವರನ್ನು ಸರದಿ ನಿಲ್ಲಿಸಬಹುದು. ಆದರೆ, ನಿದ್ದೆಯಲ್ಲೂ 'ಕಲಾಸಿಪಾಳ್ಯ' ಕೆಂಚನ ಇಮೇಜ್ ನೆನಪಿಸುವುದು ನಟ ದರ್ಶನ್. ಲೂಸ್ ಮಾದ ಯೋಗೀಶ್ ನಿದ್ದೆ ಮಾಡಿದ್ದು ತೀರಾ ಕಡಿಮೆ. ಯಾಕೆಂದರೆ ಅವರ ಮಾತು, ಅಭಿನಯ ಎಲ್ಲವನ್ನೂ ನಿದ್ದೆ ಮಂಪರು ಆವರಿಸಿಕೊಂಡಿರುತ್ತದೆ. ಚಿತ್ರಗುಪ್ತರ ಸಮೀಕ್ಷೆ ಪ್ರಕಾರ ನಮ್ಮ ಸಿನಿಮಾ ಸ್ಟಾರ್ಗಳು ಹೆಚ್ಚು ನಿದ್ದೆಗೆ ಜಾರುವುದು ರೋಮ್ಯಾಂಟಿಕ್ ದೃಶ್ಯಗಳಲ್ಲಿ. ಅಂದರೆ ಕಿಸ್ಸಿಂಗ್, ಡ್ಯುಯೆಟ್, ಮೊದಲ ರಾತ್ರಿ, ತಬ್ಬಿಕೊಳ್ಳುವಾಗ. ಆದರೆ, ತುಂಬಾ ಮಹತ್ವದ ಕೆಲಸವನ್ನೇ ಹೀಗೆ ಕಣ್ಮುಚ್ಚಿಕೊಂಡು ಮಾಡಿದರೆ ಹೇಗೆ? ಅಂತ ಕೇಳಿದರೆ 'ಅಯ್ಯೋ ಇವರಿಗೆ ರಸಿಕತನವೇ ಇಲ್ಲ' ಎಂದು ನಮ್ಮನ್ನೇ ದೂರುವ ಅಪಾಯಗಳಿವೆ. ಅಂದಹಾಗೆ ನಿದ್ರಾಹೀನತೆಯಿಂದ ಯಾರಾದರೂ ಬಳಲುತ್ತಿದ್ದರೆ ಈ ಪೋಸ್ಟರ್ಗಳನ್ನು ಮನೆಯಲ್ಲಿ ನೇತು ಹಾಕಿಕೊಳ್ಳಿ!
- ಆರ್.ಕೇಶವಮೂರ್ತಿ