ರೈನ್ ಟ್ರೈನ್

ರೈನ್ ಟ್ರೈನ್
Updated on: 

ಮಳೆಗಾಲ ಮೈಮನಸುಗಳ ದಣಿವನ್ನು ತಣಿಸಿ ಆತ್ಮವನ್ನು ಒಳಗೊಳಗೇ ಕುಣಿಸುವ ಚೈತನ್ಯ ಉಳ್ಳದ್ದು. ಸುರಿವ ಮಳೆಯ ಸದ್ದಿಗೆ ಕಿವಿ ತೆರೆದು, ಅಮ್ಮ ಕರಿವ ಹಪ್ಪಳಕ್ಕೆ ನಾಸಿಕವರಳಿಸಿ, ಅಟ್ಟದ ಕೋಣೆಯಲ್ಲಿ ಬೆಚ್ಚಗೆ ಕುಳಿತು, ಹಳದಿ ಬಣ್ಣಕ್ಕೆ ತಿರುಗಿದ ಹಳೆ ಪುಸ್ತಕವೋದುವ ಮಜದ ಮುಂದೆ ಸ್ವರ್ಗದ ಕಲ್ಪನೆ ಏನೂ ಅಲ್ಲ. ಹಾಗಂತ ಮಳೆಗೆ ಮೈಯೊಡ್ಡಿ ಇಂಬಳಗಳ ಜೀವಕ್ಕೆರಡು ಹನಿ ರಕ್ತದಾನ ಮಾಡಿ, ಆಗ ತಾನೆ ಮೈತೊಳೆದು ಹೊಳೆವ ಹಚ್ಚಹಸಿರಿನ ದೃಶ್ಯವೈಭವದ ಮಧ್ಯೆ ಕೆಸರೊಳಗೆ ಶೂ ಹುಗಿದೆತ್ತುತ್ತಾ ನಡೆವ ಖುಷಿಯೂ ಕಡಿಮೆಯದೇನಲ್ಲ.  ಮಳೆ ಶುರುವಾಗಿದೆ. ಮನೆಯೊಳಗೆ ಕುಳಿತುಕೊಳ್ಳುವ ಮಜ ಎರಡು ದಿನ ಅನುಭವಿಸಿ ಮತ್ತೆರಡು ದಿನಕ್ಕೆ ಬ್ಯಾಗ್ ಹೊಟ್ಟೆ ತುಂಬಿಸಿ ರೈನ್‌ಕೋಟ್, ಕುರುಕಲು ತಿಂಡಿ, ಕ್ಯಾಮೆರಾದೊಂದಿಗೆ ಹೊರಟರೆ ನೀವು ನಿಲ್ಲಬೇಕಾದ ಜಾಗಗಳನ್ನು ನಾನು ಹೇಳುತ್ತೇನೆ.

ಆಗುಂಬೆ
ನೀವು ಮಲೆನಾಡಿನವರಲ್ಲವಾದರೆ ಆಗುಂಬೆ ನಿಮಗದೆಂತಾ ಹೊಸ ಮುದ ನೀಡಬಲ್ಲುದು ಎಂಬುದನ್ನು ವರ್ಣಿಸಿ ಹೇಳಲೂ ಸಾಧ್ಯವಿಲ್ಲ. ಭಾರತದಲ್ಲೇ ಚಿರಾಪುಂಜಿ ಬಿಟ್ಟರೆ ಅತಿ ಹೆಚ್ಚು ಮಳೆ ಸುರಿವ ಈ ಪಶ್ಚಿಮಘಟ್ಟಗಳ ಹೊಟ್ಟೆಯೊಳಗೆ ಕರುಳಿನಂತೆ ಸುತ್ತಿಕೊಂಡ ಘಾಟಿ ರಸ್ತೆಗಳು ಮಣ್ಣಿನ, ಮಳೆಯ, ಹಸಿರೆಲೆಗಳ ಮಿಶ್ರಣದ ಘಾಟನ್ನು ಮೂಗಿಗೆ ಬಡಿಯುತ್ತವಲ್ಲಾ... ಆಹ್! ಇದೇನು ಮತ್ತು ಬರಿಸುವ ಡ್ರಗ್ಸ್ ಗಿಡಗಳೇ ಎಂಬ ಅನುಮಾನ ಸುಳಿದೀತು. ಇನ್ನು ಜೂನ್ ಜುಲೈನಲ್ಲಂತೂ ಮಂಜಿನ ಬಿಳಿಪರದೆಗೆ ವಾಹನಗಳು ಬೆಳ್ಳಂಬೆಳಗ್ಗೆಯೇ ಲೈಟು ಹಾಯಿಸಿ ಎದುರಿನಲ್ಲಿ ತೆರೆದುಕೊಳ್ಳುವ ಚಲನಚಿತ್ರ ನೋಡುತ್ತಾ ಸಾಗುತ್ತಿರುತ್ತವೆ. ಇಲ್ಲಿ ಆಗುಂಬೆ ರೇನ್‌ಫಾರೆಸ್ಟ್ ರಿಸರ್ಚ್ ಸ್ಟೇಶನ್ ಇದ್ದು, ಪ್ರವಾಸಿಗರು ಉಳಿದುಕೊಳ್ಳಲು ಕಾಟೇಜ್ ಇಲ್ಲವೇ ಇನ್ನೂ ಹಚ್ಚನೆ ಅನುಭವಕ್ಕೆ ಟೆಂಟ್ ವ್ಯವಸ್ಥೆ ಮಾಡಿಕೊಡುತ್ತದೆ. ಇಡೀ ಕಾಡಿನ ಆತ್ಮ ತನ್ನ ಚೈತನ್ಯವನ್ನು ಕಪ್ಪೆಗಳ ವಟಗುಟ್ಟುವಿಕೆಯಲ್ಲಿ, ಹಾವು, ಚೇಳು, ಹಕ್ಕಿ, ಚಿಟ್ಟೆಗಳ ಅಲುಗಾಟದಲ್ಲಿ, ಸಣ್ಣಪುಟ್ಟ ಪ್ರಾಣಿಗಳ ಸಣ್ಣದಾದ ಹೆಜ್ಜೆಸಪ್ಪಳದಲ್ಲಿ ಸಾರುತ್ತಿರುತ್ತದೆ. ಆಗುಂಬೆ ಸುಮಾರು 500 ಜನಗಳ ವಾಸಸ್ಥಾನವಾಗಿದ್ದು ಉಳಿದುಕೊಳ್ಳಲು ಬೇರೆ ವ್ಯವಸ್ಥೆ ನೋಡಿಕೊಳ್ಳಬಹುದು. 'ಮಾಲ್ಗುಡಿ ಡೇಸ್‌'ನ ದೊಡ್ಡ ಮನೆ ಇರುವುದು ಕೂಡಾ ಇಲ್ಲಿಯೇ.


ಮೇಘಮಲೈ (ತಮಿಳುನಾಡು)
ಏಲಕ್ಕಿ ಮತ್ತು ಟೀ ಗಿಡಗಳನ್ನು ಬೆಡ್‌ಶೀಟ್‌ನಂತೆ ಹೊದ್ದ ಹಸಿರು ಪರ್ವತಗಳ ತಾಣ ತಮಿಳುನಾಡಿನ ಥೇನಿ ಜಿಲ್ಲೆಯಲ್ಲಿರುವ ಮೇಘಮಲೈ. ವರ್ಷದಲ್ಲಿ ಒಂಬತ್ತು ತಿಂಗಳು ಮಳೆ ಸುರಿವ ಈ ಭೂಮಿಯ ತೀರದ ಬಾಯಾರಿಕೆಯೇ ಇಲ್ಲಿಗೆ ರಮಣೀಯತೆ ನೀಡಿರುವುದು. ಮೋಡಗಳು ಧರೆಗಿಳಿದು ಗುಂಪಾಗಿ ಕುಳಿತುಕೊಂಡು ಹರಟೆ ಹೊಡೆಯುವ ಈ ಪ್ರದೇಶಕ್ಕೆ ಮೇಘಮಲೈ(ಮೋಡಗಳ ಪರ್ವತ)ಗಿಂತ ಉತ್ತಮ ಹೆಸರಿಡಲು ಯಾರಿಂದ ತಾನೇ ಸಾಧ್ಯ?! ಇಲ್ಲಿನ ಪಶ್ಚಿಮಗಡಿಯಲ್ಲಿ ಕೇರಳದ ಪೆರಿಯಾರ್ ಹುಲಿ ಸಂರಕ್ಷಿತಾರಣ್ಯವಿದೆ. ಉಳಿದುಕೊಳ್ಳಲು ಕ್ಲೌಡ್ ಮೌಂಟೇನ್ ಬಂಗಲೆ, ಸ್ಯಾಂಡ್‌ರಿವರ್ ಕಾಟೇಜ್ ಅದ್ಭುತವಾಗಿದ್ದರೂ ಸ್ವಲ್ಪ ಹೆಚ್ಚೇ ಎನಿಸುವಷ್ಟು ದುಬಾರಿ. ಹೀಗಾಗಿ ಒಂದು ದಿನದ ಟ್ರಿಪ್ ಹಮ್ಮಿಕೊಳ್ಳುವುದು ಸೂಕ್ತ. ಇನ್ನೊಂದು ವಿಷಯ, ಇಂಬಳಗಳಿಗೆ ನಿಮ್ಮ ಅಮೂಲ್ಯವಾದ 4 ಹನಿ ರಕ್ತ ದಾನ ಮಾಡಲು ಮುಂಚಿತವಾಗಿ ಸಿದ್ಧರಾಗಿಯೇ ಹೊರಡಿ. ಪ್ರಾಣಿಪಕ್ಷಿ ಪೋಟೋಗ್ರಫಿ ಸೆಳೆತ ನಿಮಗಿದ್ದರೆ ನಿಮ್ಮ ಕ್ಯಾಮೆರಾಕ್ಕೊಂದಿಷ್ಟು ಒಳ್ಳೆಯ ಆಹಾರ ಸಿಗಬಹುದು.


ಅಲಪ್ಪುಝ(ಆಲೆಪ್ಪಿ)
ಸಣ್ಣದಾಗಿ ಅಲಗುವ ಸಾಲು ಸಾಲು ಬಾಗಿದ ತೆಂಗಿನಮರಗಳ ಪ್ರತಿಫಲನ ಹಸಿರು ಬಣ್ಣದ ನೀರಿಗೆ ಮತ್ತಷ್ಟು ಹಸಿರು ಬಳಿದಿರುತ್ತದೆ. ಹಿನ್ನೀರಿನಲ್ಲಿ ಅಲ್ಲಲ್ಲಿ ಚಿಕ್ಕಕೆ ತೇಲುವ ಮರದ ದೋಣಿಗಳು, ದೋಣಿಮನೆಗಳು, ಕಾಣೋದೆಲ್ಲ ಸ್ವಚ್ಛ ನೀರಿನಲ್ಲಿ ಎರೆಡೆರಡಾಗಿ ಮರುಳು ಹತ್ತಿಸುವ ದೇವರು ಬರೆದ ಚಿತ್ರಕಲೆ ಕೇರಳದ ಅಲಪ್ಪುಝ. ಇಲ್ಲಿನ ಲೊಕ್ಕಡೈವ್ ಸಮುದ್ರ ತೀರದ ಮರಳು ಕೂಡಾ ಮರುಳು ಹತ್ತಿಸಿ ಮನೆಮಠವನ್ನು ಮರೆಸಿಬಿಡುತ್ತದೆ. ಇದನ್ನು 'ಪೂರ್ವ ದೇಶಗಳ ವೆನೀಸ್‌' ಎಂದು ಲಾರ್ಡ್ ಕರ್ಜನ್ ಕರೆದಿದ್ದರಲ್ಲಿಯೂ ಕಲ್ಪನಾಸಾಮರ್ಥ್ಯದ ಕೊರತೆ ಕಾಣಬೇಕು, ಅಷ್ಟು ಚೆಲುವು ಈ ನೆಲದ್ದು. ಕೊಚ್ಚಿಯಿಂದ 62 ಕಿಮೀ ದೂರದಲ್ಲಿ ಕುಳಿತಿರುವ ಈ ಸೌಂದರ್ಯಖನಿಗೆ ಕಾಲಿಡುತ್ತಿದ್ದಂತೆ ನೀವು ಕೂಡಾ ಸುಂದರ ಚಿತ್ರಕಲೆಯೊಂದರ ಭಾಗವಾಗಿ ಕಾಣಿಸುವುದರಲ್ಲಿ ಅನುಮಾನವಿಲ್ಲ.

ಮರ್ಗಾವ್(ಗೋವಾ)
ಕಪ್ಪು ಆಕಾಶದ ಕೆಳಗೆ ಗರ್ಜಿಸುತ್ತಾ ತೀರಕ್ಕೆ ಬಡಿವ ಅಲೆಗಳು, ನೀರ ಅಗಾಧತೆಯನ್ನು ಲೆಕ್ಕಿಸದೆ ಮತ್ತೆ ಆ ಸಮುದ್ರದ ಮೇಲೆ ಸುರಿದು ತನ್ನ ತಾನೇ ಕಳೆದುಕೊಳ್ಳುವ ಮಳೆಹನಿ, ಸುತ್ತಲಿರುವವರಾರೂ ನಿಮ್ಮನ್ನು ಗಮನಿಸದ ಸಮಾಧಾನ, ನೀವು ನೀವಾಗೇ ಇರಬಹುದಾದ ತಾಣ ಗೋವಾದ ರಾಜಧಾನಿ ಮರ್ಗಾವ್. ಅದ ತಲುಪಲು ನೀವು ಕ್ಯಾಸಲ್ ರಾಕ್‌ನಿಂದ ಟ್ರ್ಯಾಕ್ ಟ್ರೆಕ್ ಮಾಡಿಕೊಂಡು ಹೋದರೆ ಮಜವೇ ಬೇರೆ. ಮಧ್ಯದಲ್ಲಿ ಸಿಗುವ ದೂದ್‌ಸಾಗರ ಜಲಪಾತ ಒಮ್ಮೆ ನಿಮ್ಮ ತಲೆಯೊಳಗೆ ಸ್ಥಾನ ಕಂಡುಕೊಂಡರೆ ಈ ನೀರು ವರ್ಷಗಟ್ಟಲೆ ಹರಿಯುತ್ತಲೇ ಇರುತ್ತದೆ, ಅತ್ಯದ್ಭುತ ನೆನಪಾಗಿ. ಮುಂದಿನ ಪ್ರಯಾಣಕ್ಕೆ ಮತ್ತೆ ರೈಲು ಹತ್ತಬಹುದು.

ಬಂಡಿಪುರ(ಕರ್ನಾಟಕ)
ಭಾರತದಲ್ಲೇ ಉತ್ಕೃಷ್ಟ ಹುಲಿ ಅಭಯಾರಣ್ಯವೆನಿಸಿಕೊಂಡ ಬಂಡಿಪುರ ಮಳೆಗಾಲದಲ್ಲಿ ಪ್ರಾಣಿಗಳನ್ನು ನೋಡಲು ಅಷ್ಟಾಗಿ ಒಳ್ಳೆಯ ಸಮಯವಲ್ಲವಾದರೂ ಪ್ರಾಣಿಗಳೇ ನಿಮ್ಮೆದುರು ಬಂದು ಕ್ಯಾಟ್‌ವಾಕ್ ಮಾಡುವುದನ್ನು ನೋಡದೆ ಹಿಂತಿರುಗಲಾರಿರಿ. ಜೊತೆಗೆ ಸ್ನಾನ ಮಾಡಿ ನಿಂತ ಕಾಡಿನ ಸ್ನಿಗ್ಧ ಚೆಲುವು ಅನಾವರಣಗೊಳ್ಳುವುದೂ ಈಗಲೇ. ಇಲ್ಲಿಂದ ಬೆಳಗಿನ ಜಾವದಲ್ಲಿ ಹಿಮವದ್ ಗೋಪಾಲ್ ಸ್ವಾಮಿ ಬೆಟ್ಟಕ್ಕೆ ಒಂದು ಡ್ರೈವ್, ಆಹ್ಲಾದಕರ ಎಂಬ ಪದದ ಅರ್ಥವನ್ನು ನಿಮಗೆ ಮಾಡಿಸುತ್ತದೆ. ಹಿಮ ಆವರಿಸಿಕೊಂಡೇ ಇರುವ ಬೆಟ್ಟದ ಬುಡದಲ್ಲಿ ನಿಂತು ಬಿಸಿಬಿಸಿ ಚಾಯ್ ಹೀರುತ್ತಿದ್ದರೆ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ.


ಚಿಕ್ಕಮಗಳೂರು
ಕಾಲದ ಹಂಗು ತೊರೆದು ಚೆಲುವನ್ನು ಹೊತ್ತು ಕುಳಿತ ಈ ಕಾಫಿನಾಡು ಮಳೆಗಾಲದಲ್ಲಿ ಮಲೆನಾಡಿನ ದಿಗ್ದರ್ಶನ ಮಾಡಿಸಿಯೇ ತೀರುತ್ತದೆ. ಕಾಫಿ, ಟೀ ಪ್ಲಾಂಟೇಶನ್‌ಗಳ ನಡುವೆ ಬಳುಕುವ ರಸ್ತೆಗಳು, ನೀರು ಹರಿವ ಸದ್ದು, ತುಂಬಿ ತುಳುಕುವ ಜಲಪಾತಗಳು, ಕೆಮ್ಮಣ್ಣುಗುಂಡಿ, ಬಾಬಾ ಬುಡನ್‌ಗಿರಿ, ಮುಳ್ಳಯ್ಯನಗಿರಿಯಂಥ ನಾಕಸದೃಶ ಬೆಟ್ಟಗಳ ಬೈತಲೆಯಲ್ಲಿ ನೀವು, ತಲೆಯಿಂದ ಟೋಪಿ ಕೀಳಲೆತ್ನಿಸುವ ತುಂಟ ತಂಗಾಳಿ, ನಾಸಿಕದ ಉದ್ದಗಲವನ್ನೂ ತುಂಬಿ ಉಲ್ಲಸಿತವಾಗಿಡುವ ಕಾಫಿ ಪರಿಮಳ.... ಆ ಥಂಡಾ ಥಂಡಾ ಕೂಲ್ ಕೂಲ್ ವೆದರ್ ನಡುವೆ ಬೆಚ್ಚಗಾಗಲು ಪ್ರಕೃತಿಯೇ ನಿಂತು ಧಮ್ಮೆಳೆದು ಹೊಗೆ ಬಿಡುತ್ತಿದೆಯೇನೋ ಎಂಬಂತೆ ಆವರಿಸಿಕೊಳ್ಳುವ ಮಂಜುಮುಸುಕು... ನಡುಕುವ ಕೈಲಿ ಸ್ಟ್ರಾಂಗ್ ಕಾಫಿ ಹಿಡಿದು ನಾಲ್ಕು ಪುಡಿಕಟ್ಟಿಗೆ ತುಂಡುಗಳನ್ನು ಕಲೆ ಹಾಕಿ ಬೆಂಕಿ ಕೊಟ್ಟು ಕುಳಿತುಕೊಳ್ಳುವ ಸುಖ.. ಆಹ್!! ಅದೊಂದು ಅಮಲೇ ಸರಿ.

= ರೇಶ್ಮಾರಾವ್ ಸೊನ್ಲೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com