ನಾನು ಕೈಬರಹದಿಂದ ಪತ್ರಗಳನ್ನು ಬರೆದು ಕಳುಹಿಸಿದ್ದು 2008ರಲ್ಲಿ. ಅದು ನನ್ನ ಮದುವೆಗಾಗಿ ನನ್ನ ಜತೆ ಹುಬ್ಬಳ್ಳಿಯ ಕೆ.ಎಲ್.ಇ ಕಾಲೇಜ್ನಲ್ಲಿ ಎಮ್.ಬಿ.ಎ ಕಲಿಯುವಾಗ ಜತೆಯಿದ್ದ ಗೆಳೆಯರನ್ನು ಕರೆಯಲು ಮದುವೆ ಪತ್ರದ ಜತೆಗೆ ನನ್ನ ಹಸ್ತಾಕ್ಷರವಿರುವ ಲೆಟರನ್ನು ಬರೆದಿದ್ದೆ. ಅದೇ ಕೊನೆ. ಹಿಂದೆ ಮನೆಯಿಂದ ದೂರವಿದ್ದು ಓದುತಿದ್ದಾಗ ಮನೆಯವರಿಗೆ ವಾರಕ್ಕೊಮ್ಮೆ ಪತ್ರ ಬರೆಯುತಿದ್ದೆವು. ಪತ್ರಗಳಿಗೆ ಭಾವನೆಗಳನ್ನು ಹಂಚಿಕೊಳ್ಳುವ ಹೊಣೆಗಾರಿಕೆ ಇರುತ್ತಿತ್ತು. ನಾವು ಎಷ್ಟು ಅಭಿವೃದ್ಧಿ ಸಾಧಿಸುತ್ತೇವೋ ಅಷ್ಟು ಸಂಬಂಧಗಳಿಂದ ಕಳಚಿಕೊಳ್ಳುತಿದ್ದೇವೆಂಬ ಭಯ.ಟಿ
= ಮಹೇಶ ಬಿ. ಕಿಳ್ಳಿಕ್ಯಾತರ
ಐ.ಸಿ.ಯು.ನಲ್ಲಿ ಕೈ ಬರಹದ ಪತ್ರ
ನಾನು ಕೈ ಬರಹದ ಪತ್ರಗಳಿಗೆ ವಿದಾಯ ಹೇಳಿ ಹಲವು ವರ್ಷಗಳೇ ಉರುಳಿವೆ. ಮೊಬೈಲ್ ಮತ್ತು ಈಮೇಲ್ಗಳಿಂದಾಗಿ ಇಂದು ಕೈ ಬರಹದ ಪತ್ರಗಳು ಇತಿಹಾಸದ ಪುಟ ಸೇರುತ್ತಿವೆ. ಜನರು ಪತ್ರವನ್ನು ಕಾದು ಓದುವ ತಾಳ್ಮೆ ಕಳೆದುಕೊಂಡಿದ್ದಾರೆ. ಕೈ ಬರಹದ ಪತ್ರ ಬರೆಯುವ ತಾಳ್ಮೆ ನಮಗಿಲ್ಲ, ಓದುವ ತಾಳ್ಮೆ ಅವರಿಗಿಲ್ಲವಾಗಿದೆ. ಒಟ್ಟಿನಲ್ಲಿ ಹಿಂದೊಮ್ಮೆ ಜನರ ನಡುವೆ ಸಂಪರ್ಕ ಸೇತುವೆಯಾಗಿ ನಮ್ಮ ಬಾಂಧವ್ಯಗಳ ವಿನಿಮಿಯದ ಅವಿಭಾಜ್ಯ ಅಂಗವಾಗಿದ್ದ ನಮ್ಮ ಕೈ ಬರಹದ ಪತ್ರಗಳು ಇಂದು ಮರೀಚಿಕೆಯಾಗುತ್ತಾ ಐ.ಸಿ.ಯು. ನಲ್ಲಿ ನರಳುತ್ತಿವೆ.ಟಿ
= ಎಲ್. ವಿ. ಕುಮಾರಸ್ವಾಮಿ, ಹಿರಿಯೂರು
ಕೈಬರಹ ಬೇಕೋ ಬೇಡವೋ?
ರಿಪೋರ್ಟಿಂಗ್ನಲ್ಲಿ ಬರೆಯೋದು ಸಲೀಸು. ಅಲ್ಲಿ ಅಕ್ಷರ ದುಂಡಗಿರಬೇಕು ಅಂತೇನಿಲ್ಲ. ಸುದ್ದಿ ಚಂದ ಬರೋದು ಮುಖ್ಯ. ತಾತ ಸಾಹಿತಿ, ಅವರಿಗೆ ಬರೆಯೋದು ಸುಲಭ. ಅಪ್ಪನಿಗೆ ಕಂಪ್ಯೂಟರ್ ಟೈಪ್ ಮಾಡೋಕೆ ಬಂದ್ರೂ ಇಷ್ಟವಿಲ್ಲ. ಹಾಗಾಗಿ ಕೈಬರಹವನ್ನು ಇಬ್ಬರೂ ಪ್ರೀತಿಸ್ತಾರೆ. ಅಮ್ಮನು ಮದುವೆಗೆ ಮುನ್ನ ಅಪ್ಪನಿಗೆ ಪತ್ರ ಬರೆದಿದ್ದರೇನೋ? ಆದರೆ ಈಗ ದಿನಸಿ ಪಟ್ಟಿಗೆ ಸೀಮಿತವಾಗಿದೆ. ಅಜ್ಜಿನೂ ಪಟ್ಟಿ ಮಾಡೋದರಲಿ ಕಮ್ಮಿ ಇಲ್ಲ. ಬರೀತಾರೆ. ಆದರೆ ನನಗೆ ಪರೀಕ್ಷೆಯಲ್ಲಿ ಬರೆಯಬೇಕಲ್ಲ ಅದಕ್ಕಾಗಿ ದುಂಡಗೆ ಬರೆಯೋ ಪ್ರಯತ್ನ ಮಾಡ್ತೀನಿ. ಇಲ್ಲವಾದರೆ ಮೊಬೈಲ್, ಕಂಪ್ಯೂಟರ್ರೇ ಬೆಸ್ಟು.ಟಿ
= ಸುಷ್ಮಾ. ಎನ್. ಎಂ, ತುಮಕೂರು
ಫೋನ್ ಮತ್ತು ಈಮೇಲ್ಗಳ ಭರಾಟೆಯ ನಡುವೆ ಕೈಬರಹದ ಪತ್ರ ಸಂಸ್ಕೃತಿ ಕಳೆದು ಹೋಗುತ್ತಿದೆಯೆಂಬ ವಿಷಾದವಿದೆ. ಈ ಸಲದ ವಿಷಯ 'ನೀವು ಈಗಲೂ ಕೈಬರಹದಲ್ಲಿ ಪತ್ರ ಬರೆಯುತ್ತಿದ್ದೀರಾ?' ಬರವಣಿಗೆ 100 ಪದಗಳ ಮಿತಿ. ಜತೆಗೆ ಪಾಸ್ಪೋರ್ಟ್ ಅಳತೆಯ ಭಾವಚಿತ್ರ. ಕೈ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು-1, ಇ-ಮೇಲ್: anekaby2@gmail.com