2 ಇನ್ 1 ಹೀರೋ ವಿಜಯ್‌ಸೂರ್ಯ

ರವಿಚಂದ್ರನ್ ಸುದೀಪ್‌ಗೆ ಅಪ್ಪನಾಗಿ ನಟಿಸೋದಕ್ಕಿಂತ ಮೊದಲು ತನಗೆ ತಂದೆಯಾಗಿ ನಟಿಸಿದ್ದರು ಎಂಬ...
2 ಇನ್ 1 ಹೀರೋ ವಿಜಯ್‌ಸೂರ್ಯ
Updated on: 

ರವಿಚಂದ್ರನ್ ಸುದೀಪ್‌ಗೆ ಅಪ್ಪನಾಗಿ ನಟಿಸೋದಕ್ಕಿಂತ ಮೊದಲು  ತನಗೆ ತಂದೆಯಾಗಿ ನಟಿಸಿದ್ದರು ಎಂಬ ಹೆಮ್ಮೆ ಈ ಚಿಗುರುಮೀಸೆ ಚೆಲುವನಿಗೆ! ತಮಿಳಿನ ಎರಡು ಸುಪರ್‌ಸ್ಟಾರ್‌ಗಳನ್ನೂ ತನ್ನ ಒಂದೇ ಹೆಸರಲ್ಲಿ ಸೇರಿಸಿಕೊಂಡಿದ್ದಾನೆ. ಯಾರು ಗೊತ್ತೇ? ವಿಜಯಸೂರ್ಯ! ವಿಜಯಸೂರ್ಯ ಅಂದರೆ ಗೊತ್ತಾಗದಿರಬಹುದು. ಅದೇ 'ಸಿದ್ಧಾರ್ಥ' ಅಂದರೆ 'ಯಾರು ಅಗ್ನಿಸಾಕ್ಷಿ ಸಿದ್ದಾರ್ಥನಾ?' ಅಂತ ಕೇಳ್ತೀರಿ. ಹೌದು ವಿಜಯಸೂರ್ಯ ಸಿದ್ದಾರ್ಥನ ಹೆಸರಿನಿಂದಲೇ ಜನಪ್ರಿಯ. ಈಟಿವಿ ಅನುಬಂಧ ಅವಾರ್ಡ್‌ನಲ್ಲಿ ಕ್ಯೂಟ್‌ಕಪಲ್ ಅವಾರ್ಡ್ ವಿಜೇತ. ಅಗ್ನಿಸಾಕ್ಷಿಯ ಸಿದ್ದಾರ್ಥ ಪಾತ್ರದ ಜನಪ್ರಿಯತೆ, ಈವರೆಗೆ ನಡೆದುಬಂದ ಹಾದಿ, ಮುಂದಿನ ಕನಸು ಎಲ್ಲದರ ಬಗ್ಗೆ ವಿಜಯ್ ಮುಕ್ತವಾಗಿ ಮಾತನಾಡಿದ್ದಾರೆ.
ಬಣ್ಣದ ಬದುಕಿನ ಆರಂಭದ ಬಗ್ಗೆ ಹೇಳಿ.
ನಟನಾಗಬೇಕೆಂಬುದು ಬಾಲ್ಯದ ಕನಸು.  ಕ್ರೈಸ್ಟ್ ಕಾಲೇಜಿನಲ್ಲಿ ಪದವಿ ಮುಗಿಸಿ ಮುಂಬೈಗೆ ಹೋದೆ. ಅಲ್ಲಿ ಸುಭಾಷ್‌ಘಾಯ್  ಆ್ಯಕ್ಟಿಂಗ್ ಸ್ಕೂಲ್ನಲ್ಲಿ 2 ವರ್ಷ ತರಬೇತಿ.  2011ರ ಮೆಗಾ ಮಾಡೆಲ್ ಬೆಂಗಳೂರ್ ವಿಜೇತನಾದೆ. ಕ್ರೇಜಿಲೋಕ ನನ್ನ ಮೊದಲ ಚಿತ್ರ. ರವಿಚಂದ್ರನ್‌ರ ಮಗನ ಪಾತ್ರ.

ಸಿನಿಮಾದಿಂದ ಶುರುವಾದ ಬದುಕು ಧಾರಾವಾಹಿ ಕಡೆ ಬಂದದ್ದು ಹೇಗೆ?
ಸನ್ನಿವೇಶ ಹಾಗಿತ್ತು.  ಒಂದು ತಿಂಗಳಷ್ಟೇ ಬರುವ ಪಾತ್ರ ಎಂದು ಒಪ್ಪಿಕೊಂಡಿದ್ದೆ. ಆದರೆ ನನ್ನ ಕ್ಯಾರೆಕ್ಟರ್ ಹೇಗೆ ಬೆಳೆದು ನಿಂತಿದೆಯೆಂದು ಈಗ ಪ್ರೇಕ್ಷಕರಿಗೆಲ್ಲ ತಿಳಿದಿದೆ.

ಕಿರುಕ್ಷೇತ್ರದ ಅನುಭವ ಹೇಗಿದೆ?
ಜನಪ್ರಿಯತೆ ವಿಷಯದಲ್ಲಿ ಇದು ಕಿರುಕ್ಷೇತ್ರ ಖಂಡಿತಾ ಅಲ್ಲ. ನನಗೆ ಇದು ಸ್ಕೂಲ್ ಥರ. ದಿನವೂ ಹೊಸತನ್ನು ಕಲಿಯೋ ಜಾಗ. ತಮಾಷೆ ಏನಂದ್ರೆ ಕಲಿಯೋಕೆ ನಾವು ದುಡ್ಡು ಕೊಡಬೇಕಿಲ್ಲ. ಅವರೇ ದುಡ್ಡು ಕೊಡುತ್ತಾರೆ. 

ಸೀರಿಯಲ್ಲಿಗೆ ಬಂದ್ಮೇಲೆ ಸಿಕ್ಕಾಪಟ್ಟೆ ಹುಡುಗಿಯರು ಫ್ಯಾನ್ಸ್ ಅಂತೆ?
ಹೌದು. ಅದನ್ನು ನನ್ನ ಪಾತ್ರಕ್ಕೆ ಸಿಕ್ತಿರೋ ಕಾಂಪ್ಲಿಮೆಂಟ್. ಕೆಲವೊಮ್ಮೆ ಕಾಟ ಅನಿಸಿದ್ದೂ ಹೌದು.

ಯಾವ ರೀತಿ ಕಾಡುತ್ತಾರೆ?
ಹೇಗಾದರೂ ನನ್ನ ನಂಬರ್ ಪಡೆದುಕೊಳ್ತಾರೆ. ನೀವಿಷ್ಟ ನಿಮ್ಮ ಪಾತ್ರ ಇಷ್ಟ ಎಂದು ಹೇಳಿ ಫೋನಿಟ್ಟರೆ ಓಕೆ. ಅದು ಬಿಟ್ಟು ನೀವೇ ನನ್ನನ್ನು ಮದುವೆಯಾಗಬೇಕು ಎಂದು ಕೈ ಕುಯ್ದುಕೊಳ್ಳುವುದು, ಪೋಟೋ ಕಳಿಸುವುದು ಅತಿಯೆನಿಸುತ್ತದೆ. ಅಂಥ ಕರೆಗಳನ್ನು ಅಮ್ಮನೇ ಉತ್ತರಿಸುತ್ತಾರೆ. ಅದಕ್ಕೇ ನಂಬರ್ ಕೂಡ ಬದಲಿಸ್ತಿರೋ ಹಾಗಾಗಿದೆ.

ಹಾಗಾದ್ರೆ ಸದ್ಯದಲ್ಲೇ ಮದುವೆ ಇದೆಯಾ? ಹೇಗಿರಬೇಕು ನಿಮ್ ಹುಡುಗಿ?
ಅಯ್ಯೋ ಸದ್ಯಕ್ಕೆ ಮದುವೆ ಯೋಚನೆ ಇಲ್ಲ. ಮೊದಲು ಕೆರಿಯರ್. ಆದರೆ ನಟಿಯನ್ನು ಮಾತ್ರ ವಿವಾಹವಾಗೊಲ್ಲ.

ನಟನೆ ನಿಮ್ಮ ಕನಸಾ ಅಥವಾ ನಿಮ್ಮ ತಾಯಿ ಕನಸಾ?
ಅಮ್ಮನಿಗೆ ನಾನು ಐಪಿಎಸ್ ಮಾಡಬೇಕೆಂಬ ಕನಸಿತ್ತು. ನನಗೆ ನಟನಾಗೋ ಕನಸು.  ಫ್ಯಾಶನ್ ಡಿಸೈನಿಂಗ್ ಹೇರ್‌ಸ್ಟೈಲಿಸ್ಟ್ ಕಡೆಗೂ ಒಲವಿತ್ತು. ಸಿನೆಮಾದಲ್ಲಾದ್ರೂ ಐಪಿಎಸ್ ಅಧಿಕಾರಿಯಾಗಿ ನಟಿಸಿ ತಾಯಿಯ ಕನಸು ಈಡೇರಿಸಬೇಕೆಂದಿದ್ದೇನೆ. ಹಹ್ಹ! ಹಾಗಾದ್ರೆ ಸದ್ಯದಲ್ಲೇ ಸಿನಿಮಾ ಹೀರೋ ಆಗ್ತಿದೀರೋ? ಪ್ಲಾನ್ಸ್ ಇದೆ. ಸೂಕ್ತ ಕತೆ ಸಿಕ್ಕರೆ ಮಾತ್ರ. ಸುಮ್ಮಸುಮ್ಮನೇ ಹೀರೋ ಆಗಿ ಹೆಸರು ಕೆಡಿಸಿಕೊಳ್ಳೋದು ಇಷ್ಟವಿಲ್ಲ.

ನಾನು ಹೇಮಂತ್ ಅವಳು ಸೇವಂತಿ ಚಿತ್ರದ ಹಾಡಿನಲ್ಲಿನ ಗೆಸ್ಟ್ ಅಪಿಯರೆನ್ಸ್ ಬಗ್ಗೆ ?  
ಆ ಚಿತ್ರದ ನಿಮರಾಪಕರು ಕುಟುಂಬ ಸಮೇತ ನಮ್ಮ ಮನೆಗೆ ಬಂದು ನನಗಾಗಿ ಕಾದರು. ಅವರು ಪಾತ್ರವನ್ನು ಹೇಳಿ ನನ್ನಲ್ಲಿ ವಿವರಿಸಿದ ರೀತಿ ನನಗೆ ನಿಜಕ್ಕೂ ಇಷ್ಟವಾಯಿತು. ನಮ್ಮಲ್ಲಿ ಬಹಳಷ್ಟು ಮಂದಿಗೆ ಒಬ್ಬ ಕಲಾವಿದನನ್ನು ಹೇಗೆ ಅಪ್ರೋಚ್ಮಾಡಬೇಕೆಂಬುದೇ ಗೊತ್ತಿರುವುದಿಲ್ಲ. ಇದು ಪ್ರೀತಿ ಮಾಡೋ ಟೈಮು.. ಎಂಬ ಆ ಹಾಡು ಈಗಾಗಲೇ ಯೂಟ್ಯೂಬ್ನಲ್ಲಿಯೂ ಜನಪ್ರಿಯವಾಗಿದೆ. ಚಿತ್ರದಲ್ಲಿ ಇಬ್ಬರು ಯುವ ನಾಯಕರಿದ್ದಾರೆ. ಅವರನ್ನು ಪ್ರೋತ್ಸಾಹಿಸುವಂತೆ ನಾನು ಕನ್ನಡಿಗರಲ್ಲಿ ವಿನಂತಿಸುತ್ತೇನೆ. ಯಾಕೆಂದರೆ ಹೊಸಬರ ಕಷ್ಟಗಳ ಅನುಭವ ನನಗೆ ಗೊತ್ತು.

ರಿಯಾಲಿಟಿ ಶೋ ಆಸಕ್ತಿ ಇಲ್ವಾ?

ಉಹುಂ. ಬಿಗ್‌ಬಾಸ್‌ನಿಂದ ಕರೆ ಬಂದಾಗಲೂ ನಾನು ನಯವಾಗಿಯೇ ತಿರಸ್ಕರಿಸಿದ್ದೆ. ನಟನಾಗಿ ಜನಪ್ರಿಯನಾಗಬೇಕೆಂಬುದು ನನ್ನ ಗುರಿ.

ನಿಮ್ಮ ಫೇವರಿಟ್ಸ್ ಬಗ್ಗೆ ಹೇಳಿ.
ಫೇವರಿಟ್ ಫುಡ್  ರಾಗಿಮುದ್ದೆ. ಸ್ವೀಟ್ಸ್‌ಗಳಲ್ಲಿ ರಸಗುಲ್ಲ ಇಷ್ಟ. ಹಳೆಯ ಮೆಲೋಡಿ ಗೀತೆಗಳು ಇಷ್ಟವಾಗುತ್ತವೆ. ಹೊಸದರಲ್ಲಿ ಮುಸ್ಸಂಜೆ ಮಾತು ಚಿತ್ರದ 'ಏನಾಗಲೀ ಮುಂದೆ ಸಾಗು ನೀ'  ಮೆಚ್ಚಿನ ಗೀತೆ. ದೇವರಲ್ಲಿ ಲಕ್ಷ್ಮಿ ಫೇವರಿಟ್.

- ಶಶಿಕರ ಪಾತೂರು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com