ಹೇಳಿದ್ದೇ ಹೇಳೋ ಅರಗಿಣಿ
ಸುವರ್ಣ ವಾಹಿನಿಯ ಅರಗಿಣಿ ಧಾರಾವಾಹಿ ವಾಸ್ತವಕ್ಕೆ ದೂರವಾಗಿ ಕೇವಲ ಕಾಲ್ಪನಿಕವಾಗಿ ಸಾಗುತ್ತಿದೆ. ಸರಿಯಾಗಿ ಮಾಡಿದರೆ ಬರೀ ಒಂದೇ ತಿಂಗಳಲ್ಲಿ ತೋರಿಸಬಹುದಾದ ಕಥೆಯನ್ನು ಎಳೆದು ಎಳೆದು ಕೇವಲ ಕಂತುಗಳನ್ನು ಹೆಚ್ಚಿಸುವುದಕ್ಕಾಗಿಯೇ ಮಾಡಲಾಗಿದೆ. ರವಿ ಗರಣಿಯವರ ಎಲ್ಲಾ ಧಾರಾವಾಹಿಗಳಲ್ಲೂ ಒಂದೇ ಕಥೆ. ಅವರ ಅಮೃತವರ್ಷಿಣಿ, ಪ್ರಿಯದರ್ಶಿನಿ, ಅರಗಿಣಿ ಎಲ್ಲದರಲ್ಲೂ ಅಕ್ಕ-ತಂಗಿ, ಅಣ್ಣ-ತಮ್ಮ ಇರಲೇಬೇಕು. ಅದರಲ್ಲಿ ಅಕ್ಕ ತಮ್ಮನನ್ನು, ಅಣ್ಣ ತಂಗಿಯನ್ನು ಪ್ರೀತಿಸಿ ಮದುವೆಯಾಗಬೇಕು. ಇದನ್ನು ಬಿಟ್ಟು ಬೇರೆ ಕಥೆಯೇ ಇಲ್ಲ ಅಂದಮೇಲೆ ಒಳ್ಳೆ ಧಾರಾವಾಹಿ ಬರಲಿಕ್ಕೆ ಹೇಗೆ ಸಾಧ್ಯ? ಎಲ್ಲ ಧಾರಾವಾಹಿಗಳನ್ನೂ ಅದೇ ರೀತಿ ಎಳೆದು ಕಂತುಗಳನ್ನು ಹೆಚ್ಚಿಸಿ, ನಮ್ಮ ಧಾರಾವಾಹಿ 1000 ಕಂತು ಓಡಿದೆ ಎಂದು ಹೇಳುವುದರಲ್ಲಿ ಯಾವುದೇ ಅರ್ಥವಿಲ್ಲ. ಇಂಥ ಧಾರಾವಾಹಿಗಳನ್ನು ಪ್ರಸಾರಮಾಡಿ ಪ್ರೇಕ್ಷಕರ ತಾಳ್ಮೆ ಪರೀಕ್ಷೆ ಮಾಡುವುದರ ಉದ್ದೇಶವೇನು ಎಂದು ವಾಹಿನಿಯ ನಿರ್ದೇಶಕರಾದ ಸುಧೀಂದ್ರ ಭಾರದ್ವಾಜರವರೇ ಹೇಳಬೇಕು. ಪ್ರೇಕ್ಷಕರು ಮೆಚ್ಚುವಂಥ ಉತ್ತಮ ಧಾರಾವಾಹಿಗಳು ಬರಲಿ. ಹಿಂದಿ ಸೀರಿಯಲ್ ರೀಮೇಕ್ಗಳನ್ನು ದಯಮಾಡಿ ಪ್ರಸಾರ ಮಾಡಬೇಡಿ ಎಂದು ಸುವರ್ಣ ವಾಹಿನಿಯವರಲ್ಲಿ ನನ್ನ ಮನವಿ.
-ದೀಶಾ ಭಕ್ತ, ಸಾಗರ
ಮಧುರ-ಮಂಜುಳ ಚಂದನ
ಮಧ್ಯಾಹ್ನ ಚಂದನದಲ್ಲಿ ಪ್ರಸಾರವಾಗುವ ಮಧುರ ಮಧುರವೀ ಮಂಜುಳಗಾನ ಕಾರ್ಯಕ್ರಮ ಸುಶ್ರಾವ್ಯ ಸಂಗೀತ ಗೊಂಚಲು. ಮಧುರ ಚಿತ್ರಗೀತೆಗಳನ್ನು ಅಪೂರ್ವ ಗಾಯನದಲ್ಲಿ ಕೇಳುತ್ತಿದ್ದರೆ ಮೈಮನಗಳಲ್ಲಿ ರೋಮಾಂಚನ. ಸಂಗೀತ ಸುಖಧಾರೆ ಬಿಪಿ ಶುಗರ್ಗಳನ್ನೂ ಕೂಡ ಗುಣಪಡಿಸುತ್ತದೇನೋ ಎಂಬ ಭಾವ. ಹಳೆಯ ಅರ್ಥಬದ್ಧ ಸಾಹಿತ್ಯದ ಮೆಲುಕು, ಅಂದಿನ ಕರ್ಕಶವಲ್ಲದ ಸಂಗೀತ, ಎಲ್ಲವನ್ನೂ ಉಣಬಡಿಸುತ್ತಿರುವ ಚಂದನ ವಾಹಿನಿಗೆ ವಂದನೆ ಮತ್ತು ಅಭಿನಂದನೆಗಳು. ಅರ್ಧ ಗಂಟೆಯ ಈ ಕಾರ್ಯಕ್ರಮವನ್ನು ಒಂದು ಗಂಟೆಗೆ ವಿಸ್ತರಿಸಲು ಈ ಮೂಲಕ ಮನವಿ ಸಲ್ಲಿಸುತ್ತೇನೆ.
- ಹೆಚ್ . ಆನಂದ್ ಕುಮಾರ್, ಚಿತ್ರದುರ್ಗ
ಪ್ಲೀಸ್ ಸ್ಟಾಪ್ ಇಟ್ ಸಾರ್...
ಚಿತ್ರಲೇಖಾ ಧಾರಾವಾಹಿ ದಿನೇದಿನೇ ಹದಗೆಡುತ್ತಲೇ ಹೋಗುತ್ತಿದೆ. ಈ ಧಾರಾವಾಹಿ ಕಷ್ಟ ಪಟ್ಟು ನೋಡುವ ಕರ್ಮ ನಮ್ಮದು. ಯಾವಾಗ ಮುಗಿಯುತ್ತದೋ, ಯಾವತ್ತು ಆ ಜಾಗದಲ್ಲಿ ಬೇರೆ ಧಾರಾವಾಹಿ ಬರುತ್ತದೋ ಎಂದು ಕಾಯುವ ಹಾಗಾಗಿದೆ. ಅನಿರುದ್ಧ ಪಾತ್ರವಂತೂ ಅಸಹ್ಯದ ಪರಮಾವಧಿ ಅನಿಸುತ್ತಿದೆ. ದಯವಿಟ್ಟು ಈ ಧಾರಾವಾಹಿ ನಿಲ್ಲಿಸಿ.
-ಎನ್. ಕೆ. ಹಿರಿಯಣ್ಣ, ಊರುಗಡೂರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

