ಅಲೆಲೆ ಅಲಿಯಾ

ಅಂದು ಅಲಿಯಾ ಭಟ್‌ಳ ಮೊದಲ ಚಿತ್ರ 'ಸ್ಟೂಡೆಂಟ್ ಆಫ್ ದ ಇಯರ್‌' ಬಿಡುಗಡೆಯಾಗಲಿತ್ತು....
ಅಲೆಲೆ ಅಲಿಯಾ
Updated on: 

ಅಂದು ಅಲಿಯಾ ಭಟ್‌ಳ ಮೊದಲ ಚಿತ್ರ 'ಸ್ಟೂಡೆಂಟ್ ಆಫ್ ದ ಇಯರ್‌' ಬಿಡುಗಡೆಯಾಗಲಿತ್ತು. ಅವಳಿಗೋ ಟೆನ್ಷನ್ ಬಾಲ ಸುಟ್ಟ ಬೆಕ್ಕಿನಂತಾಡಿಸುತ್ತಿತ್ತು. ಕಾರು ತೆಗೆದುಕೊಂಡು ಸೀದಾ ಅಪ್ಪ ಮಹೇಶ್ ಭಟ್ ಆಫೀಸಿಗೆ ಹೋಗಿ 'ಜೀವನವಿಡೀ ಯಾವುದಕ್ಕಾಗಿ ಹಂಬಲಿಸುತ್ತೀರೋ ಅದನ್ನು ಪಡೆಯಲು ಬೇಕಾದ ಪ್ರತಿಭೆಯೇ ನಿಮ್ಮಲ್ಲಿಲ್ಲ ಎಂದು ತಿಳಿದರೆ ಏನಾಗಬಹುದು?' ಎಂದು ಪ್ರಶ್ನಿಸಿದಳು. ಅಪ್ಪನಿಗೆ ತನ್ನ ಹದಿಹರೆಯದ ಮಗಳ ಟೆನ್ಷನ್ ಅರ್ಥವಾಯಿತು. ರೂಂನ ತುಂಬಾ ಜನರಿದ್ದ ಸಂದರ್ಭದಲ್ಲಿ ತನ್ನ ಪ್ರತಿಭೆಯ ಬಗ್ಗೆಯೇ ಅನುಮಾನ ವ್ಯಕ್ತಪಡಿಸಲು ಧೈರ್ಯ ಬೇಕು, ಪ್ರಾಮಾಣಿಕತೆಯೂ. ಅದು ಅವಳಲ್ಲಿತ್ತು ಎಂದು ಮೆಚ್ಚುತ್ತಾರೆ ನಿರ್ಮಾಪಕ ಮಹೇಶ್ ಭಟ್.
ಮಗಳು ಶಾಲೆಗೆ ಹೋಗುವಾಗ ಪೇರೆಂಟ್ಸ್ ಮೀಟಿಂಗಿಗೆ ಹೋಗಿ ಕುಳಿತಾಗಲೂ ಆಕೆಯ ತರಗತಿ ಯಾವುದೆಂದು ತಿಳಿದಿರುತ್ತಿರಲಿಲ್ಲ ಅಪ್ಪನಿಗೆ! ಹೀಗಾಗಿ 'ಅಂಥಾ ಅಪ್ಪನ ಮಗಳಾಗಿದ್ದರಿಂದಲೇ...' ಎನ್ನುವ ಮಾತುಗಳು ನನ್ನ ಮಗಳಿಗೆ ಹೊಂದುವುದಿಲ್ಲ. ದೊಡ್ಡ ಮಗಳು ಪೂಜಾಳಿಗಾದರೂ ಅವಳ ಚಿತ್ರ 'ಡ್ಯಾಡಿ' ತೆಗೆಯುವಾಗ ಅಪ್ಪ ನಿರ್ದೇಶಕನಾಗಿದ್ದ ಎಂಬ ಬಲವಿತ್ತು. ಆದರೆ 1999ರಲ್ಲೇ ನಿರ್ದೇಶನಕ್ಕೆ ತಿಲಾಂಜಲಿ ಇಟ್ಟಿದ್ದರಿಂದ ಅಲಿಯಾಳಿಗೆ ಸ್ವತಃ ತನ್ನ ದಾರಿ ಕಂಡುಕೊಳ್ಳಬೇಕಾದ ಅನಿವಾರ್ಯತೆ ಇತ್ತು. ಈಗ ಆಕೆ ಚಿತ್ರಗಳಲ್ಲಿ ತೊಡಗಿಸಿಕೊಂಡ ಮೇಲೆಯೇ ಅಪ್ಪ- ಮಗಳ ನಡುವೆ ತಾರ್ಕಿಕ, ಏಕಆಸಕ್ತಿಯ ಸಂಬಂಧವೊಂದು ಬೆಳೆಯುತ್ತಿರುವುದು. ಆಕೆಯ ಮೊದಲ ಆಟೋಗ್ರಾಫ್ ಅಪ್ಪನಿಗೇ ಕೊಟ್ಟದ್ದು. ಅದರಲ್ಲಿ ಆಕೆ 'ನನಗೆ ಸಹಾಯ ಮಾಡದೆ ಇದ್ದುದಕ್ಕೆ ಥ್ಯಾಂಕ್ಸ್‌' ಎಂದು ಬರೆದಿದ್ದಳು ಎಂದು ನೆನೆದು ಖುಷಿ ಪಡುತ್ತಾರೆ ಮಹೇಶ್.
ಕರಣ್ ಜೋಹರ್ 'ಸ್ಟೂಡೆಂಟ್ ಆಫ್ ದ ಇಯರ್‌' ಚಿತ್ರಕ್ಕೆ ತನ್ನನ್ನು ಕೇಳಿಕೊಂಡು ಬಂದಾಗ ಏನು ಮಾಡುವುದೆಂದು ಯೋಚಿಸಿದೆ. ಏಕೆಂದರೆ ಆಗಿನ್ನೂ ಓದುತ್ತಿದ್ದೆ. ಆದರೆ ಅದೊಂದು ಬಿಟ್ಟುಕೊಡಲಾಗದ ದೊಡ್ಡ ಅವಕಾಶವಾಗಿತ್ತು. ನಾನು ನಾಟಕ ಶಾಲೆಗೆ ಹೋಗಿಲ್ಲದಿರಬಹುದು. ಆದರೆ ಶೂಟಿಂಗ್‌ನಲ್ಲಿ ಪ್ರತಿ ಕ್ಷಣವೂ ಅಭಿನಯ ತರಬೇತಿ ಪಡೆಯುತ್ತಿದ್ದೇನೆ ಎನ್ನುತ್ತಾಳೆ ಅಲಿಯಾ.
ಮೊದಲ ಚಿತ್ರಕ್ಕೆ ಬಂದ ಟೀಕೆಟಿಪ್ಪಣಿಗಳಿಗೆ ಉತ್ತರವಾಗಿ ಅಪ್ಪನಂತೆ ಮೊನಚಾದ ವಾಕ್ಯಗಳನ್ನು ಬಳಸದೆ 'ಹೈವೇ'ಯಂಥ ಚಾಲೆಂಜಿಂಗ್ ಚಿತ್ರವನ್ನು ಆಯ್ಕೆ ಮಾಡಿಕೊಂಡಳು. ಮೇಕಪ್ ಇಲ್ಲದೆ, ಅಷ್ಟೊಂದು ಕಮರ್ಶಿಯಲ್ಲೂ ಅಲ್ಲದ ಚಿತ್ರದಲ್ಲಿ ತನ್ನೆಲ್ಲ ಎಳಸುತನವನ್ನು ಬದಿಗೊತ್ತಿ ಅಭಿನಯದ ಮೂಲಕ ಗಮನ ಸೆಳೆದಳು.
'ಆಕೆ ಯಾವುದೇ ಅಭಿನಯ ತರಬೇತಿ ಪಡೆದಿಲ್ಲ. ಹಾಗಾಗೇ ಆಕೆಯನ್ನು ಯಾರೂ ಜಡ್ಜ್ ಮಾಡುವುದಿಲ್ಲ. ಅದೇ ಅವಳ ಸ್ಟ್ರೆಂತ್‌' ಎನ್ನುತ್ತಾರೆ ನಿರ್ದೇಶಕ ಇಮ್ತಿಯಾಜ್ ಅಲಿ.
ನಂತರದ ಚಿತ್ರ 'ಟು ಸ್ಟೇಟ್ಸ್‌' ಬಾಕ್ಸ್ ಆಫೀಸ್‌ನಲ್ಲೂ ಬಂಪರ್ ಬಾರಿಸಿ ಅಲಿಯಾಳಿಗೆ ಹೆಚ್ಚು ಅಭಿಮಾನಿಗಳನ್ನು ಹುಟ್ಟುಹಾಕಿತು.
'ನನ್ನ ತಂದೆ ಎಂದಿಗೂ ನನ್ನನ್ನು ಚಿಕ್ಕವಳಂತೆ ಕಂಡೇ ಇಲ್ಲ. ಬಾಲ್ಯದಿಂದಲೂ ಒಂದು ಹಾಡನ್ನು ಕೇಳಿಸಿ ನನಗೇನನ್ನಿಸಿತು ಎಂದು ಅಭಿಪ್ರಾಯ ಕೇಳುತ್ತಿದ್ದರು. ಈಗೀಗ ಅಪ್ಪನಂತೆ ಮಾತನಾಡಿಸುವುದಕ್ಕಿಂತ ಚಿತ್ರ ತಯಾರಕರೊಬ್ಬರ ಅಭಿಪ್ರಾಯ, ಸಲಹೆಗಳೆಂಬಂತೆ ಮಹೇಶ್ ಭಟ್‌ರೊಡನೆ ಮಾತನಾಡುತ್ತೇನೆ. ನನಗೆ ರೋಹಿತ್ ಶೆಟ್ಟಿ ಚಿತ್ರಗಳಲ್ಲಿ ನಟಿಸಬೇಕು. ಅವರೆ ಚಿತ್ರವೆಂದರೆ ಐನೂರು ಮಹೇಶ್ ಭಟ್‌ಗಳ ಐಡಿಯಾವಿರುತ್ತದೆ' ಎಂದು ಅಪ್ಪನನ್ನೂ ಸಂಬಂಧವನ್ನು ಹೊರತುಪಡಿಸಿ ವಿಮರ್ಶಿಸಬಲ್ಲಳು ಅಲಿಯಾ.
ನನಗೆ ನನ್ನ ಕೆಲಸವನ್ನು ನಾನೇ ಮಾಡಿಕೊಳ್ಳುವುದೆಂದರೆ ಇಷ್ಟ. ಸುತ್ತಲೂ ನೂರಾರು ಮಂದಿ ನಿಮಗೆ ಸಹಾಯಕ್ಕೆ ನಿಂತರೆ ಗೊಂದಲದ ಹೊರತು ಕೆಲಸವಾಗುವುದಿಲ್ಲ. ಇಪ್ಪತ್ತೊಂದು ವರ್ಷದ ಯಾರಿಗೇ ಆದರೂ ಏನೇನೆಲ್ಲ ಅನಿಸುತ್ತದೋ ನನಗೂ ಅದೇ ಅನಿಸುತ್ತದೆ. ನಾನೇನು ಅವರಿಗಿಂತ ಭಿನ್ನವಲ್ಲ. ಒಂದು ವೇಳೆ ನನಗೆ ಯಾರದಾದರೂ ಮೇಲೆ ಪ್ರೀತಿಯಾದರೆ, ನನ್ನೆಲ್ಲ ಕೆಲಸಗಳಿಗಿಂತ ಪ್ರೀತಿಗೆ ಹೆಚ್ಚಿನ ಮಹತ್ವ ಕೊಡುತ್ತೇನೆ. ಪ್ರೀತಿಸಲು ಸಮಯವಿಲ್ಲ ಎಂಬ ಜನರ ಮಾತು ನನಗೆ ಸುಳ್ಳಿನಂತೇ ಕೇಳುತ್ತದೆ ಎನ್ನುತ್ತಾಳೆ ಈ ಮುದ್ದು ಮುಖದ ನಟಿ.
'ಕಾಫಿ ವಿಥ್ ಕರಣ್‌' ಕಾರ್ಯಕ್ರಮದಲ್ಲಿ ಪೆದ್ದುಪೆದ್ದಾಗಿ ಉತ್ತರ ನೀಡಿ, ಅಲಿಯಾ ಭಟ್ ಜೋಕ್ಸ್ ಸೀರೀಸ್‌ಗೆ ಕಾರಣವಾಗಿ ಸಾಮಾನ್ಯ ಜ್ಞಾನ ಕೊಂಚ ಕಡಿಮೆ ಎನಿಸಿದರೂ, ಆಕೆಯ ಭಾವಕೋಶದ ಬೆಳವಣಿಗೆ ಚೆನ್ನಾಗೇ ಆಗಿದೆ ಎನಿಸುವುದಿಲ್ಲವೇ ಈ ಮಾತುಗಳನ್ನು ಕೇಳಿದರೆ?


ನೀವು ಅಲಿಯಾ ಆಗಬೇಕಾದರೆ...
    ಅಪ್ಪ, ಅಮ್ಮನ ನೆರಳಿನಿಂದ ಹೊರಬರುವ ಸ್ವಾಭಿಮಾನವಿರಲಿ.
    ನನ್ನ ಪ್ರತಿಭೆ ಯಾವುದರಲ್ಲಿದೆ ಎಂದು ಕಂಡುಕೊಳ್ಳುವ ಆತ್ಮವಿಮರ್ಶೆಯಿರಲಿ.
    ಸೌಂದರ್ಯದ ಜತೆ ಅವಕಾಶಗಳನ್ನು ಕಂಡುಕೊಳ್ಳುವ ಜಾಣತನವಿರಲಿ.
    ಸ್ವಲ್ಪ ಪೆದ್ದುತನ, ಅದನ್ನು ಮೀರಿ ಜ್ಞಾನಕ್ಕಾಗಿ ಹಸಿವು ಇರಲಿ.
    ಗುಂಪಿನಿಂದ ಬೇರೆಯಾಗಿ ನಿಲ್ಲುವ ಅನನ್ಯತೆ ಇರಲಿ.


- ರೇಶ್ಮಾ ರಾವ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com