

ಆದರೆ, ಈ ಮೂರೂ ರೀತಿಯ ನೋವುಗಳಿಗಿಂತ ಭಿನ್ನವಾದದ್ದು ಎಂದರೆ ಟೆನ್ಷನ್ ತಲೆನೋವು. ಶೇ. 90ರಷ್ಟು ತಲೆನೋವು ಇದೇ ರೀತಿಯದ್ದು. ಹೆಸರಿನಲ್ಲೇ ಟೆನ್ಷನ್ ಇರುವುದರಿಂದ ಇದಕ್ಕೆ ಕಾರಣವಾಗುವ ಸಂಗತಿಗಳ ಬಗ್ಗೆ ವಿವರಿಸಿಯೇನೂ ಹೇಳಬೇಕಾಗಿಲ್ಲ. ಒತ್ತಡ, ಖಿನ್ನತೆ, ಆತಂಕ, ನಿದ್ರಾಹೀನತೆ ಇತ್ಯಾದಿಗಳು ಈ ರೀತಿಯ ತಲೆನೋವು ತಂದೊಡ್ಡುವ ಸಾಮಾನ್ಯ ಸಂಗತಿಗಳು. ಮುಖ ಮತ್ತು ಕತ್ತಿನ ಭಾಗದ ಮಾಂಸಖಂಡಗಳು ಬಿಗಿದುಕೊಂಡಾಗ ಅಥವಾ ಒತ್ತಡಕ್ಕೆ ಒಳಗಾದಾಗ ಈ ರೀತಿಯ ನೋವು ಶುರುವಾಗುತ್ತದೆ. ಜಾಗತಿಕ ಜನಸಂಖ್ಯೆಯ ಶೇ. 3ರಷ್ಟು ಮಂದಿ ಒತ್ತಡದ ತಲೆನೋವಿನಿಂದ ಬಳಲುತ್ತಾರೆ ಎನ್ನುವುದು ಒಂದು ಅಂದಾಜು. ಸಾಮಾನ್ಯವಾಗಿ ವಯಸ್ಕರಲ್ಲಿಯೇ ಇದು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಕೆಲವರಲ್ಲಿ ಮಾತ್ರ ಹದಿಹರೆಯದಲ್ಲೂ ಕಾಣಿಸಿಕೊಳ್ಳಬಹುದು.
ಒತ್ತಡದ ತಲೆನೋವು ಬಂದಾಗ ತಲೆಯ ನಿರ್ದಿಷ್ಟ ಭಾಗ, ತಲೆಬುರುಡೆ ಅಥವಾ ಕತ್ತಿನ ಭಾಗದಲ್ಲಿ ಮಾಂಸಖಂಡಗಳು ಬಿಗಿದುಕೊಂಡಿರುವ ಅನುಭವ ಆಗುತ್ತದೆ. ನೋವು ಅಷ್ಟು ತೀವ್ರವಾಗಿರುವುದಿಲ್ಲ. ಆದರೆ ಕಿರಿಕಿರಿ ನೀಡುತ್ತಿರುತ್ತದೆ. ಮತ್ತೆ ಸಾಮಾನ್ಯವಾಗಿ ಇಡೀ ತಲೆಯನ್ನು ಆವರಿಸಿಕೊಂಡಿರುತ್ತದೆ. ಮಾಂಸಖಂಡಗಳ ಬಿಗಿತಕ್ಕೆ ಖಿನ್ನತೆ, ಒತ್ತಡ, ಆತಂಕ ಅಥವಾ ಗಾಯಗಳು ಕಾರಣವಾಗಿರಬಹುದು. ನಿರ್ದಿಷ್ಟ ಕಾರಣವೇನು ಎನ್ನುವುದು ಇನ್ನೂ ಪತ್ತೆಯಾಗಿಲ್ಲ.
ವೈದ್ಯಕೀಯ ಪರಿಭಾಷೆಯಲ್ಲಿ ನೋಡಿದಾಗ ತಲೆನೋವಿಗೆ ಬೇರೆ ಬೇರೆ ಕಾರಣಗಳಿವೆ ಎನ್ನುವುದು ಸ್ಪಷ್ಟ. ಹೀಗಿರುವಾಗ ತಲೆನೋವಿಗೂ, ಆಹಾರಕ್ಕೂ ಎಂತಹ ಸಂಬಂಧ ಎಂಬ ಪ್ರಶ್ನೆ ಮೂಡಿದರೆ ಅಸಹಜವೇನಲ್ಲ. ಟೆನ್ಷನ್ ತಲೆನೋವಿಗೆ ಮುಖ್ಯ ಕಾರಣ ಮೆದುಳಿನ ರಾಸಾಯನಿಕಗಳಲ್ಲಿ ಆಗುವ ವ್ಯತ್ಯಯ ಎನ್ನುವುದು ಇತ್ತೀಚಿನ ಸಂಶೋಧನೆಗಳ ಸಾರ. ಸೆರೋಟೊನಿನ್, ಎಂಡೊರ್ಫಿನ್ಸ್ ಮೊದಲಾದ ರಾಸಾಯನಿಕಗಳ ಏರಿಳಿತ. ಈ ರಾಸಾಯನಿಕಗಳು ನರವ್ಯೂಹದೊಂದಿಗೆ ಸಂವಹನ ನಡೆಸುವಂತಹವು. ಮೆದುಳಿನ ಆರೋಗ್ಯದ ಮೇಲೆ ಆಹಾರ ಯಾವ ರೀತಿಯ ಪರಿಣಾಮ ಬೀರುತ್ತದೆ ಎನ್ನುವುದನ್ನು ವಿವರವಾಗಿಯೇ ಚರ್ಚಿಸಿದ್ದೇವೆ. ಆದ್ದರಿಂದ ಜಗತ್ತಿನಲ್ಲಿ ಸಾಮಾನ್ಯವಾಗಿರುವ ಒತ್ತಡದ ತಲೆನೋವಿಗೂ, ನಮ್ಮ ಆಹಾರ ಪದ್ಧತಿಗೂ ನೇರ ಸಂಬಂಧವಿದೆ ಎನ್ನುವ ನಿಲುವಿಗೆ ಬರಲು ಯಾವ ಅಡ್ಡಿಯೂ ಇಲ್ಲ ಅಲ್ಲವೆ? ಕೆಲವರಲ್ಲಿ ಕೆಫೀನ್ನ ಅತಿಯಾದ ಸೇವನೆ ಹಾಗೂ ಆಹಾರ ಅಲರ್ಜಿಗಳೂ ಈ ರೀತಿಯ ತಲೆನೋವು ತರಬಲ್ಲದು ಎಂದು ಊಹಿಸಲಾಗಿದೆ. ಹೀಗಾಗಿ ಪದೇಪದೆ ತಲೆನೋವಿಗೆ ತುತ್ತಾಗುವವರು ತಮ್ಮ ಆಹಾರದ ವಿಚಾರದಲ್ಲಿ ಸಾಧ್ಯವಾದಷ್ಟು ಎಚ್ಚರವಹಿಸುವುದು ಒಳಿತು.
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
(ಮುಂದುವರಿಯುವುದು)
ಮೊ.9900113699 (ಎಸ್ಎಂಎಸ್ಗೆ ಮಾತ್ರ)