

ಉದಾಸೀನ ಹೊಂದಿರುವವರಲ್ಲಿ ಮತ್ತೊಂದು ರೀತಿಯವರು ಕೂಡ ಇರುತ್ತಾರೆ. ರಾತ್ರಿ ಒಂದು ಗಂಟೆಗೆ ನೀವು ನಡೆಯುತ್ತಾ ಹೋಗುತ್ತಿದ್ದೀರಿ. ರಸ್ತೆ ಪಕ್ಕದ ಫುಟ್ಪಾತ್ನಲ್ಲಿ ಒಬ್ಬ ಭಿಕ್ಷುಕಿ ಛಳಿಗೆ ನಡುಗುತ್ತಾ ಮಲಗಿರುತ್ತಾಳೆ. ದುಪ್ಪಟಿ ದೂರ ಹಾರಿಹೋಗಿ ಗಿಡದ ಪೊದೆಯೊಂದರಲ್ಲಿ ಸಿಕ್ಕಿಕೊಂಡಿದೆ ಎಂದುಕೊಳ್ಳೋಣ. ಪಕ್ಷವಾತ ದಿಂದಾಗಿ ಅವಳು ಅದನ್ನು ಹತ್ತಿರಕ್ಕೆ ತೆಗೆದುಕೊಳ್ಳಲಾರದೇ ಹೋಗಿರುತ್ತಾಳೆ. ನೀವು ಕನಿಷ್ಠಪಕ್ಷ ನಿಮ್ಮ ಕಾಲಿನಿಂದಾದರೂ ಆ ದುಪ್ಪಟಿಯನ್ನು ಅವಳಿಗೆ ಕೊಡುವಿರಾ, ಇಲ್ಲವಾ? ಹಾಗೆ ಮಾಡದಿರುವವರೂ ಇರುತ್ತಾರೆಂದರೆ ನೀವು ನಂಬುವಿರಾ?
ಈ ಕೆಲಸದಿಂದ ನಮಗೇನೂ ಶ್ರಮವಿಲ್ಲದಿದ್ದರೂ, ಇತರರಿಗೆ ಅದು ಬಹಳ ಉಪಯೋಗವಾಗುತ್ತದೆಂದು ತಿಳಿದೂ, ಯಾವ ಸಹಾಯವನ್ನೂ ಮಾಡದೇಹೋಗುವುದು ಉದಾಸೀನತೆಯ ಪರಾಕಾಷ್ಠೆ. ಇಲ್ಲಿ ಒಂದು ಸತ್ಯಘಟನೆಯನ್ನು ಪ್ರಸ್ತಾಪ ಮಾಡುತ್ತೇನೆ.
ತಿರುಪತಿಯಲ್ಲಿ ಸೆಮಿನಾರ್ ನಿರ್ವಹಿಸುತ್ತಿದ್ದಾಗ, ಇಂಜಿನಿಯರಿಂಗ್ ಮೂರನೆಯ ವರ್ಷ ಓದುತ್ತಿದ್ದ ಯುವತಿ ನಾನು ಕೇಳಿದ ಪ್ರಶ್ನೆಗಳಿಗೆ ತುಂಬಾ ಚೆನ್ನಾಗಿ ಉತ್ತರ ನೀಡಿದಳು. ನಿಮ್ಮಲ್ಲಿ ಎಷ್ಟು ಜನ ಇಲ್ಲಿಯವರೆಗೆ ಕನಿಷ್ಠ ಒಂದು ರೂಪಾಯಿ ಹಣವನ್ನಾದರೂ ಸಂಪಾದಿಸಿದ್ದೀರಿ? ಎಷ್ಟು ಜನ ರಜೆಯಲ್ಲಿ ಪಾಟರ್್ಟೈಮ್ ಉದ್ಯೋಗ ಮಾಡುತ್ತಾ ನಿಮ್ಮ ತಾಯ್ತಂದೆಯರಿಗೆ ಆಥರ್ಿಕ ಸಹಾಯ ಮಾಡಿದ್ದೀರಿ? ಇಲ್ಲವೇ ಕನಿಷ್ಠ ನಿಮ್ಮ ಖಚರ್ುಗಳನ್ನು ನೀವು ಸಂಪಾದಿಸಿಕೊಂಡಿದ್ದೀರಿ? ಎಂದು ಕೇಳಿದಾಗ ಆ ಯುವತಿ ಕೂಡಾ ಕೈ ಮೇಲಕ್ಕೆತ್ತಿದಳು. ಯಾವ ಕೆಲಸ ಮಾಡಿದೆ ಎಂದು ಕೇಳಿದಾಗ, ವ್ಯವಸಾಯಕೂಲಿ ಕೆಲಸಗಳಿಗೆ ಹೋಗುತ್ತಿದ್ದೆ ಎಂದು ಹೇಳಿದಳು. ಅವಳ ತಂದೆ ತಾಯಿಯರು ಕೂಡಾ ರೈತ ಕೂಲಿಗಳಂತೆ.
ನನ್ನ ಸರಸ್ವತಿ ವಿದ್ಯಾಪೀಠದ ವತಿಯಿಂದ ವಿದ್ಯಾಥರ್ಿಗಳಿಗೆ ನೀಡುವ ಹಣದಿಂದ ಸ್ವಲ್ಪ ಆ ಯುವತಿಗೆ ಕಳಿಸಲೆಂದು ಅವಳ ಹೆಸರು, ಬ್ರ್ಯಾಂಚಿನ ವಿವರಗಳಿಗಾಗಿ ಆ ಕಾಲೇಜ್ ಪ್ರಿನ್ಸಿಪಾಲ್ಗೆ ಫೋನ್ ಮಾಡಿ ಕೇಳಿದಾಗ, ವಿಚಾರಿಸಿ ಹೇಳುತ್ತೇನೆ ಎಂದರು. ಒಂದು ವಾರವಾದರೂ ಉತ್ತರ ಬರಲಿಲ್ಲ. ನಾಲ್ಕೈದು ಸಲ ಫೋನ್ ಮಾಡಿದೆ. ಮಾಡಿದಾಗಲೆಲ್ಲಾ, ನಾಳೆ ಹೇಳ್ತೀನಿ ಸಾರ್. ಕ್ಷಮಿಸಿ ಸಾರ್.. ಮರೆತುಹೋದೆ... ಆ ಡಿಪಾಟರ್್ಮೆಂಟ್ ಹೆಡ್ ರಜೆಯಲ್ಲಿದ್ದಾರೆ... ಬಂದೊಡನೆ ನಾನೇ ಫೋನ್ ಮಾಡಿ ಹೇಳುತ್ತೇನೆ... ಇತ್ಯಾದಿ ಉತ್ತರಗಳಿಂದ ತಪ್ಪಿಸಿಕೊಳ್ಳುತ್ತಿದ್ದ. ಮತ್ತೊಂದು ರೀತಿಯಲ್ಲಿ ವಿವರಗಳನ್ನು ಕಂಡುಕೊಂಡು ಅವಳಿಗೆ ಸಹಾಯ ಮಾಡಿ ದ್ದಾಯಿತು. ಅದು ಬೇರೆ ವಿಷಯ.
ಚಿಕ್ಕ ಚಿಕ್ಕ ಬದಲಾವಣೆಗಳ ಮೂಲಕ ಜನರು ಮತ್ತಷ್ಟು ಸುಖವಾಗಿ ಬದುಕಲು ಸಾಧ್ಯವಾಗುವ ಎಲ್ಲ ಅವಕಾಶಗಳಿದ್ದರೂ ಸಕರ್ಾರ ಆ ಕೆಲಸಗಳನ್ನು ಕೈಗೆತ್ತಿಕೊಳ್ಳುವುದಿಲ್ಲ. ಒಂದು ವೇಳೆ ಆರಂಭಿಸಿದರೂ, ಸ್ವಾಥರ್ಿಗಳು ಅದನ್ನು ನಿಲ್ಲಿಸಿಬಿಡುತ್ತಾರೆ. ಅದರಿಂದ ನಮಗೆ ನಷ್ಟವಾಗುತ್ತಿದೆಯೆಂದು ತಿಳಿದು ಕೂಡ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ಸುತ್ತಲೂ ಇರುವ ಸಾಮಾಜಿಕ ಪರಿಸ್ಥಿತಿಗಳ ಬಗ್ಗೆ ನಾವೆಷ್ಟು ಉದಾಸೀನದಿಂದ ಇರುತ್ತೇವೋ ಎನ್ನಲು ಈ ಉದಾಹರಣೆ ನೋಡಿರಿ.
ಒಂದು ಟಾಡಿ ಕಾಂಪೌಂಡಿನಲ್ಲಿ ಅತ್ಯಂತ ಅಗ್ಗದ ಸಾರಾಯಿಗಿಂತ ರೇಲ್ವೆ ಸ್ಟೇಷನ್ನಲ್ಲಿ ಸಿಗುವ ಕುಡಿಯುವ ನೀರು ಹೆಚ್ಚು ಅಪಾಯಕಾರಿ. ಆ ನೀರು ಕುಡಿದರೆ, ಅದು ಸಕಲ ರೋಗಗಳಿಗೆ ದಾರಿಯಾಗುತ್ತದೆ ಎನ್ನುವ ವಿಷಯ ಎಲ್ಲರಿಗೂ ತಿಳಿದಿದ್ದೇ. ಅದಕ್ಕೇ ಪ್ರಯಾಣಿಕರು ಹದಿನೈದು ರುಪಾಯಿಗಳನ್ನು ಕೊಟ್ಟು ಬಾಟಲ್ ಕೊಳ್ಳುತ್ತಾರೆ. ಅದು ಕೂಡ ಹಾನಿಕರವೇ ಎಂದು ಬಹಳ ಜನಕ್ಕೆ ತಿಳಿದಿಲ್ಲ. ಜನರು ಕುಡಿದು ಬಿಸಾಡಿದ ನೀರಿನ ಬಾಟಲ್ಗಳಲ್ಲಿ ಮತ್ತೆ ಮಾಮೂಲೀ ನೀರು ತುಂಬಿ, ಸ್ಲಮ್ ಡಾಗ್ ಮಿಲಿಯನೇರ್ ಸಿನಿಮಾದಲ್ಲಿ ತೋರಿಸಿದ ಹಾಗೆ ಫೆವಿಕಾಲ್ನಿಂದ ಮುಚ್ಚಳವನ್ನು ಅಂಟಿಸಿ ಮತ್ತೆ ನಮಗೇ ಮರಳಿ ಮಾರುತ್ತಾರೆ.
ರೇಲ್ವೆ ಸ್ಟೇಷನ್ಗಳಲ್ಲಿ ನೀರಿನ ಪರಿಶುಭ್ರತೆಯ ಯಂತ್ರಗಳಿಗೆ ಸಕರ್ಾರವೇನಾದರೂ ಅನುಮತಿಸಿದರೆ, ನೀರು (ಪ್ಲಾಸ್ಟಿಕ್ ಸೀಸೆಯೊಂದಿಗೆ) ಐದು ರುಪಾಯಿಗಳಿಗೆ ಮಾರಬಹುದು. ಒಂದೊಂದು ಯಂತ್ರದ ಬೆಲೆ ಒಂದು ಕೋಟಿ ರುಪಾಯಿಗಳಿರುತ್ತವೆ. ಆದರೆ ಇದರ ಖಚರ್ು ಒಂದು ವರ್ಷಕ್ಕೆಲ್ಲಾ ಮತ್ತೆ ಸಂಪಾದಿಸಬಹುದು. ಆದರೆ ದೊಡ್ಡ ದೊಡ್ಡ ಕಂಪೆನಿಗಳು ಇದನ್ನು ಸ್ಥಾಪಿಸಲು ಬಿಡುವುದಿಲ್ಲ. ಮಂತ್ರಿಗಳೂ ಸೇರಿದಂತೆ ಅಧಿಕಾರಿಗಳೆಲ್ಲರಿಗೆ ಲಂಚವನ್ನಿತ್ತು ಈ ಪ್ರಯತ್ನವನ್ನು ತಡೆಯುತ್ತಾರೆ. ಏಕೆಂದರೆ ಒಮ್ಮೆ ಶುದ್ಧ ನೀರು ಪ್ರಯಾಣಿಕರಿಗೆ ಅಗ್ಗವಾಗಿ ಸಿಕ್ಕಿದರೆ ಅವರು ಅದೇ ನೀರನ್ನು ಹದಿನೈದು ರು.ಗಳಿಗೆ ಕೊಂಡುಕೊಳ್ಳುವುದಿಲ್ಲ ಅಲ್ಲವೇ?
ಅದೇ ರೀತಿ, ರೇಲ್ವೆ ಕಂಪಾಟರ್್ಮೆಂಟುಗಳಲ್ಲಿ ಇಷ್ಟಬಂದ ಬೆಲೆಗೆ ಪದಾರ್ಥಗಳನ್ನು ನಮ್ಮ ತಲೆಗೆ ಕಟ್ಟುತ್ತಾ ಇರುತ್ತಾರೆ. ಪ್ರತಿ ಕಂಪಾಟರ್್ಮೆಂಟಿನಲ್ಲೂ ಆಯಾ ವಸ್ತುಗಳ ಬೆಲೆ ಮುದ್ರಿಸಿ ಅಂಟಿಸಬಹುದು. ಆದರೆ ಮಾರುವವರು ಇದನ್ನು ಮಾಡಲು ಬಿಡುವುದಿಲ್ಲ. 10 ರು.ಗಳ ವಡೆಯನ್ನು 12 ರು.ಗಳಿಗೆ ಮಾರುವುದಕ್ಕೆ ಆಗ ಸಾಧ್ಯವಿಲ್ಲ ಅಲ್ಲವೇ?
ಇವೆಲ್ಲಾ ಪರಸ್ಪರಾಧಾರಿತಗಳು. ಒಂದಕ್ಕೆ ಮತ್ತೊಂದಕ್ಕೆ ಲಿಂಕ್. ರೇಲ್ವೆ ಸ್ಟೇಷನ್ನಲ್ಲಿ ಕ್ಯಾಂಟೀನ್ ಇಡಲು ಒಬ್ಬ ಕಂಟ್ರ್ಯಾಕ್ಟರು ಸುಮಾರು 30 ಲಕ್ಷ ರೂಪಾಯಿಗಳ ಲಂಚವನ್ನು ಕೊಡಬೇಕಾಗಿ ಬರುತ್ತದೆ. ಅದಲ್ಲದೇ ಆ ಏರಿಯಾದ ಇನ್ಸ್ಪೆಕ್ಟರ್ಗೆ ತಿಂಗಳಿಗೆ 30 ಸಾವಿರ ಲಂಚ ನೀಡಬೇಕು. ತಿಂಗಳ ಹಿಂದೆ ಒಬ್ಬ ಇನ್ಸ್ಪೆಕ್ಟರ್ ಮೇಲೆ ಆರೋಪ ಬಂದು ಆತ ಟ್ರಾನ್ಸ್ಫರ್ ಆಗಿ 15ನೆಯ ತಾರೀಕು ರಿಲೀವ್ ಆದ. ಆ ಹದಿನೈದು ದಿನಗಳ ಲಂಚವನ್ನು ಕೂಡ ಕಂಟ್ರ್ಯಾಕ್ಟರುಗಳಿಂದ ವಸೂಲು ಮಾಡಿದ. ಈ ವಿಧವಾದ ಅಕ್ರಮವನ್ನು ತಡೆಯಲು ದಾರಿಗಳೇ ಇಲ್ಲವೇ?
ರೇಲ್ವೆ ನಿಲ್ದಾಣಗಳಲ್ಲಿ ನಾಲ್ಕೈದು ರೆಸ್ಟುರಾಂಟ್ಗಳ ವಿಧಾನವನ್ನು ಆಚರಣೆಗೆ ತಂದರೆ ಯಾರಿಗೆ ಯಾವ ರೀತಿಯ ಆಹಾರ ಪದಾರ್ಥಗಳು ಬೇಕೋ ಅದು ಅವರಿಗೆ ಸಿಗುತ್ತವೆ. ಸ್ವಲ್ಪ ಅಗ್ಗವಾಗಿ ತಿನಿಸುಗಳು ಬೇಕಾದವರು ಚಿಕ್ಕ ಹೋಟೆಲುಗಳಿಗೆ ಹೋಗುತ್ತಾರೆ. ಇಲ್ಲದಿದ್ದರೆ ದೊಡ್ಡ ಹೊಟೇಲುಗಳಿಗೆ ಹೋಗುತ್ತಾರೆ. ಪೈಪೋಟಿಯಿಂದಾಗಿ ಗುಣಮಟ್ಟ ಚೆನ್ನಾಗಿರುತ್ತದೆ. ಆದರೆ ರೇಲ್ವೆ ಕಂಟ್ರ್ಯಾಕ್ಟರುಗಳು ಇದನ್ನು ಮಾಡಲು ಬಿಡುವುದಿಲ್ಲ. ಅವರು ಕೊಟ್ಟಿದ್ದೇ ಪ್ರಯಾಣಿಕರು ತಿನ್ನಬೇಕು. ಅವರು ಹೇಳಿದ ದರಕ್ಕೇ ಕೊಂಡುಕೊಳ್ಳಬೇಕು. ಇದಕ್ಕಿಂತ ದೊಡ್ಡ ಅನ್ಯಾಯ ಇದೆಯೇ? ಇದರ ಬಗ್ಗೆ ನಮ್ಮ ಎಂ.ಪಿ.ಗಳು ಹೋರಾಡುವುದಿಲ್ಲ.
ಈ ಉದಾಸೀನತೆ ಎನ್ನುವುದು ವ್ಯವಸ್ಥೆಯಲ್ಲಿ ಪೂತರ್ಿಯಾಗಿ ಬೇರೂರಿದೆ. ಏನೋ ಮಾಡಿಬಿಡುತ್ತೇನೆಂದುಕೊಂಡು ಏನೂ ಮಾಡಲಾಗದೇ ತಮ್ಮ ಕೈಲಾಗದ್ದಕ್ಕೆ ಸುಂದರವಾದ ಮುಸುಕುಗಳನ್ನು ಹಾಕಿಕೊಳ್ಳುತ್ತಾರೆಂದು ಹೇಳಲು ಒಂದು ಅನುಭವವನ್ನು ಹೇಳುತ್ತೇನೆ:
ಜನರಿಗೆ ಒಳ್ಳೆಯದು ಮಾಡಬೇಕೆಂಬ ಉದ್ದೇಶದೊಂದಿಗೆ ಒಬ್ಬ ಅಧಿಕಾರಿ, ಆ ಜಿಲ್ಲಾ ಸರಪಂಚರಿಗೋಸ್ಕರ ಒಂದು ಸೆಮಿನಾರ್ ಏಪರ್ಾಡು ಮಾಡಿದ. ಅದರಲ್ಲಿ ಪಾಲ್ಗೊಳ್ಳಲು ನಾನೂ ಹೋದೆ. ಸುಮಾರು ಇನ್ನೂರು ಜನ ಸರಪಂಚರು ಬಂದಿದ್ದರು.
ಮೀಟಿಂಗ್ ಪ್ರಾರಂಭವಾದೊಡನೆ, ಅವರಲ್ಲೊಬ್ಬ ಸರಪಂಚ ಬಹಳ ಉದ್ವೇಗಪೂರ್ಣ ನಿರಾಶೆಯೊಂದಿಗೆ, ನಾವು ಸೇವೆ ಮಾಡಬೇಕೆಂದು ಚುನಾವಣೆಯಲ್ಲಿ ನಿಂತು ಗೆದ್ದುಬಂದೆವು. ಈಗ ಜನರಿಗೆ ಏನು ಮಾಡಬೇಕೆಂದುಕೊಂಡರೂ ಫಂಡ್ ಇಲ್ಲ. ಕನಿಷ್ಠಪಕ್ಷ ಚೆಕ್ ಡ್ರಾಯಿಂಗ್ ಪವರ್ ಕೂಡ ಇಲ್ಲ. ಏನು ಮಾಡುವುದು? ಎಷ್ಟು ಕಾಲ ನಮ್ಮ ಸ್ವಂತ ಹಣದಲ್ಲಿ ಜನರ ಸೇವೆ ಮಾಡಬಲ್ಲೆವು? ಎಂದು ಮೈಕ್ ಹಿಡಿದುಕೊಂಡು ಆವೇಶದಿಂದ ಮಾತಾಡಿದೊಡನೆ ಎಲ್ಲರೂ ಚಪ್ಪಾಳೆ ಹೊಡೆದು ಅವನ ವಾದವನ್ನು ಬೆಂಬಲಿಸಿದರು. ಸಭೆಯಲ್ಲಿ ರಸಾಭಾಸವಾಗಿತ್ತು.
ಬಹಳ ಒಳ್ಳೆಯ ಉದ್ದೇಶದೊಂದಿಗೆ ಸೆಮಿನಾರ್ ಏಪರ್ಾಡು ಮಾಡಿದ್ದ ಸಕರ್ಾರಿ ಅಧಿಕಾರಿ ಸ್ವಲ್ಪ ಪೆಚ್ಚಾಗಿ, ನಿಮ್ಮ ಅಭಿಪ್ರಾಯಗಳನ್ನೂ, ಸಮಸ್ಯೆಗಳನ್ನೂ ಖಚಿತವಾಗಿ ಸಕರ್ಾರದ ಮುಂದೆ ಇಡುತ್ತೇನೆ ಎಂದು ವಚನ ನೀಡಿದ. ಆದರೂ ಅವರು ಶಾಂತಿಯಿಂದಿರಲಿಲ್ಲ.
ಆಗಲೇ ನನಗೊಂದು ಆಲೋಚನೆ ಬಂದಿತು. ಆ ನಂತರ ಆರಂಭವಾದ ನನ್ನ ಸೆಮಿನಾರ್ನಲ್ಲಿ ಒಂದು ಪ್ರತಿಪಾದನೆ ಮುಂದಿಟ್ಟೆ. ಜನರಿಗೆ ಸೇವೆ ಮಾಡಬೇಕೆಂದುಕೊಂಡಿರುವ ಇಷ್ಟು ಜನ ಸರಪಂಚರ ಸದುದ್ದೇಶ ನೋಡುತ್ತಿದ್ದರೆ ನಿಜಕ್ಕೂ ಹೆಮ್ಮೆಯಾಗುತ್ತಿದೆ. ಕಾಕಿನಾಡದಲ್ಲಿ ಜಿಲ್ಲಾಧಿಕಾರಿಯ ಸಹಾಯ, ಸಹಕಾರಗಳೊಂದಿಗೆ ನಾವು ವಿದ್ಯಾಥರ್ಿಗಳಿಗೆ ವಿಚಾರ ಸಂಕಿರಣಗಳನ್ನು ನಿರ್ವಹಿಸಿದೆವು. ಮೂರು ದಿನಗಳ ಕಾಲ ಸುಮಾರು ಮೂರುಸಾವಿರ ಬಡ, ಗ್ರಾಮೀಣ, ಗಿರಿಜನ ವಿದ್ಯಾಥರ್ಿಗಳು ಇದರ ಲಾಭ ಪಡೆದುಕೊಂಡರು. ಸುಮಾರು ಒಂದು ಲಕ್ಷ ಖಚರ್ಾಯಿತು. ಅದನ್ನು ನಾನು ಕೊಡುತ್ತೇನೆ ಎಂದು ಹೇಳಿ, ಅವರಿಗೆ ಏನು ಮಾಡಬೇಕೋ ಹೇಳಿದೆ.
ಅವರ ಪ್ರಾಂತ್ಯದ ಹಳ್ಳಿಗಳಲ್ಲಿ ಇನ್ನೂರು ಜನ ವಿದ್ಯಾಥರ್ಿಗಳನ್ನು ಸೇರಿಸಿದಾಗ ನನ್ನ ಸ್ವಂತ ಖಚರ್ಿನಿಂದ ಅವರಿಗೆ ಒಂದು ದಿನದ ಶಿಕ್ಷಣಾಶಿಬಿರವನ್ನು ನಿರ್ವಹಿಸುವೆನೆಂದೂ, ನನ್ನ ದಾರಿ ಖಚರ್ುಗಳೂ ಸೇರಿದಂತೆ, ಮಕ್ಕಳ ಮಧ್ಯಾಹ್ನದ ಊಟದ ಖಚರ್ುಗಳನ್ನು ಕೂಡ ನಾನೇ ಕೊಡುತ್ತೇನೆಂದೂ ಹೇಳಿದೆ.
ಹಾಗಲ್ಲದೇ, ನಾಲ್ಕೈದು ಸರಪಂಚರು ಸೇರಿ ಆ ಜಿಲ್ಲೆಯ ಮುಖ್ಯಪಟ್ಟಣದಲ್ಲಿ ಸಾವಿರ ಜನ ವಿದ್ಯಾಥರ್ಿಗಳಿಗೆ ಸೆಮಿನಾರ್ ನಡೆಸುತ್ತೇನೆಂದಾಗ, ಅವರನ್ನು ಅಲ್ಲಿಗೆ ಕರೆತರಲು ಆಗುವ ಸಾರಿಗೆ ಖಚರ್ು, ಎಲ್ಲರ ಊಟಕ್ಕೆ ಆಗುವ ಖರ್ಚನ್ನು ಕೂಡ ನಾನೇ ಕೊಡುತ್ತೇನೆಂದು ಹೇಳಿದೆ. ಹಾಲ್ನಲ್ಲಿ ಚಪ್ಪಾಳೆ ಮಾಮರ್ೊಳಗಿತು.
ಒಂದು ತಿಂಗಳಲ್ಲಿ ನನಗೆ ಫೋನ್ ಮಾಡಿರೆಂದು ನನ್ನ ನಂಬರ್ ಅವರಿಗಿತ್ತೆ. ಈ ಪುಸ್ತಕ ಪ್ರಿಂಟ್ ಆಗುವ ಸಮಯಕ್ಕೆ ಆರು ತಿಂಗಳು ಕಳೆದಿವೆ. ಕನಿಷ್ಠಪಕ್ಷ ಒಬ್ಬರಿಂದ ಕೂಡ ಫೋನ್ ಕರೆ ಬರಲಿಲ್ಲ. ಅವರಿಗಾಗಿ ತೆಗೆದಿಟ್ಟಿದ್ದ ಹಣದಲ್ಲಿ ನಾನು ಚಿಕ್ಕಂದಿನಲ್ಲಿ ಓದುತ್ತಿದ್ದ ಕಡಪದಲ್ಲಿನ ಅನಾಥ ಮಕ್ಕಳ ಹೋಮ್ನಲ್ಲಿ ಬೋರ್ವೆಲ್ ತೆಗೆಯಲು ನೀಡಿದೆ.
(ಮುಂದುವರಿಯುವುದು )
-ಯಂಡಮೂರಿ ವೀರೇಂದ್ರನಾಥ್
ಕನ್ನಡಕ್ಕೆ ಯತಿರಾಜ್ ವೀರಾಂಬುಧಿ