

ಮನುಷ್ಯ ಎಲ್ಲ ಕಾಯಿಲೆಗಳಿಗೂ ಮದ್ದು ಕಂಡುಹಿಡಿದ. ಪ್ಲೇಗ್, ಮಲೇರಿಯಾ, ಕ್ಯಾನ್ಸರ್... ಎಲ್ಲದಕ್ಕೂ ವಿಜ್ಞಾನ ಆನ್ಸರ್ ಕೊಟ್ಟಿದೆ. ಆದರೆ, ಒಂದು ಕಾಯಿಲೆ ಮಾತ್ರ ಈ ದಿನಗಳಲ್ಲಿ ಸಾಂಕ್ರಾಮಿಕದಂತೆ ಪೇಟೆ, ಹಳ್ಳಿ ಎಂಬ ಭೇದವಿಲ್ಲದೆ, ಮೇಲು-ಕೀಳು, ವಿದ್ಯಾವಂತ- ಹೆಡ್ಡ ಎಂಬ ತಾರತಮ್ಯವಿಲ್ಲದೆ ಹೆಚ್ಚುತ್ತಿದೆ. ಈ ಕಾಯಿಲೆ ಈಗಿನದ್ದೇನೂ ಅಲ್ಲ. ಮೊದಲೂ ಇತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಇದರ ಅಟ್ಟಹಾಸ ಮೇರೆ ಮೀರುತ್ತಿದೆ. ಅಂಥ ಮಹಾರೋಗದ ಹೆಸರು 'ಅತ್ಯಾಚಾರ'!
ಯಾವ ರೋಗಿಷ್ಟ ಮನಸ್ಸಿನ ಮನುಷ್ಯನಲ್ಲಿ ಈ ರೋಗದ ವೈರಾಣುಗಳಿವೆಯೋ ಅವನು ಸಮಾಜಕ್ಕೆ, ಸಮಾಜದ ಆರೋಗ್ಯಕರ ಚಿಂತನೆಗಳಿಗೆ ಮಾರಕಪ್ರಾಯನಾಗಿ ಪರಿಣಮಿಸುತ್ತಾನೆ. ಇವರಿಗೆ ವಯಸ್ಸಿನ ಮಿತಿಯಿಲ್ಲ. ಬಾಲಕನಿಂದ ಹಿಡಿದು ಮುದುಕನವರೆಗೆ, ಶ್ರೀಮಂತನಿಂದ ಹಿಡಿದು ಬಡವನವರೆಗೆ ಈ ಮನಸ್ಥಿತಿ ಇರಬಹುದು. ಅವರ ದೃಷ್ಟಿ ಕೂಡ ಸೌಂದರ್ಯ, ಉಡುಗೆ ತೊಡುಗೆಗಳ ಕಡೆಗೆ ಇರುವುದಲ್ಲ. ಸುಲಭ ಲಭ್ಯತೆ ಮಾತ್ರ ಅವರ ಗುರಿ. ಹಾಗಾಗಿ ಹೊರ ಜಗತ್ತಿಗೆ ಸಂಭಾವಿತನಂತೆ ತೋರುವವನೂ ಸಮಯ ತನಗೆ ಅನುಕೂಲವಾಗಿದೆ ಎಂದಾದಾಗ ರಾಕ್ಷಸಿ ಪ್ರವೃತಿಯನ್ನು ಹೊರ ಹಾಕಬಹುದು.
ಈ ರೀತಿಯ ಅತ್ಯಾಚಾರ ಗುರುತು ಪರಿಚಯ ಇಲ್ಲದೇ ಇರುವ ಜನಗಳಿಂದ ಮಾತ್ರ ನಡೆಯುವುದು ಎಂದೇನಿಲ್ಲ. ಎಷ್ಟೇ ಹತ್ತಿರದವರು ಎನ್ನಿಸಿಕೊಂಡಿರುವವರಿಂದಲೂ ನಡೆಯಬಹುದು ಎನ್ನುವುದಕ್ಕೆ ಅಪ್ಪನಿಂದಲೇ ಬಸುರಾಗುತ್ತಿರುವ ಬಾಲೆಗಳೇ ಸಾಕ್ಷಿ. ಮನುಷ್ಯ ಮನುಷ್ಯರ ನಡುವೆ ಸಂಬಂಧಗಳು ಸತ್ತು ಕೊಳೆತು ನಾರುತ್ತಿರುವುದಕ್ಕೆ ಇದೊಂದು ಜ್ವಲಂತ ನಿದರ್ಶನ.
ಒಲೆ ಹತ್ತಿ ಉರಿದೊಡೆ ನಿಲಬಹುದಲ್ಲದೆ
ಇಳೆ ಹತ್ತಿ ಉರಿದೊಡೆ...
ಆಧಾರಕ್ಕಾಗಿ ಯಾರನ್ನು ಅರಸಬಹುದು? ರಕ್ಷಣೆಗಾಗಿ ಯಾರ ಮುಖ ನೋಡಬಹುದು ದೂರದಲ್ಲೆಲ್ಲೋ ಇದೆ ಎಂದು ದಾರಿಯ ಕಡೆ ನೋಡುತ್ತಾ ನಿಂತ ನಮಗೆ ಹಿಂಬಾಗಿಲಿನಿಂದ ನುಗ್ಗಿ ನಮ್ಮ ಮನೆಯೊಳಗೇ ನಡೆಯುವ ಈ ಅನಾಚಾರದ ಬಗೆಗೆ ತಿಳಿಯುವ ಹೊತ್ತಿಗೆ ಹೊತ್ತು ಮೀರಿರುತ್ತದೆ. ಪ್ರತಿಯೊಬ್ಬ ಹೆಣ್ಣು ತನ್ನ ದೇಹದ ಮೇಲೆ ತನ್ನ ಅಧಿಕಾರ ಹೊಂದಿರುತ್ತಾಳೆ. ಬಲಾತ್ಕಾರವಾಗಿ ಇನ್ನೊಬ್ಬರ ಅತಿಕ್ರಮಣವಾಗುವುದನ್ನು ಅವಳೆಂದೂ ಇಷ್ಟಪಡುವುದಿಲ್ಲ. ಅದೂ ಮೃಗೀಯ ವಾಂಛೆಯನ್ನು ತೀರಿಸಿಕೊಳ್ಳಲೆತ್ನಿಸುವ ಪ್ರಾಣಿಯ ಅಧೀನಳಾಗುವುದು ಅವಳ ಮನಸ್ಸಿನ ಮೇಲೆ ಕೂಡಾ ಮರೆಯಲಾರದ ಆಘಾತ ತರುತ್ತದೆ. ಇದು ಜೀವಮಾನವಿಡೀ ಆಕೆ ಗಂಡುಕುಲವನ್ನು ದ್ವೇಷಿಸುವಂತೆ ಮಾಡಬಹುದು ಅಥವಾ ಖಿನ್ನತೆಗೆ ತಳ್ಳಬಹುದು.
ವಿಕೃತ ಮನಸ್ಥಿತಿಗೆ ಕಾರಣ?
ಹೆಚ್ಚುತ್ತಿರುವ ಸ್ವೇಚ್ಛಾಚಾರ, ಮೊಬೈಲ್ನಲ್ಲಿ ಸುಲಭವಾಗಿ ನೋಡಬಹುದಾದಂಥ ಕಾಮೋತ್ತೇಜಕ ದೃಶ್ಯಗಳ ವೀಕ್ಷಣೆ, ನಿರುದ್ಯೋಗ, ಅಧಿಕಾರ ಮತ್ತು ಹಣದ ಮದ, ಮದ್ಯಪಾನ, ಡ್ರಗ್ಸ್ ಸೇವನೆ... ಪುರುಷನೆಂಬ ಅಹಂಭಾವ... ಇದೆಲ್ಲವೂ ಹೌದು ಮತ್ತು ಇದೆಲ್ಲವೂ ಅಲ್ಲದ ಹಲವು ಕಾರಣಗಳೂ ಹೌದು.
ಹಾಗಿದ್ದರೆ ಕಾರಣಗಳು ಇದ್ದೂ ಇಲ್ಲದಂತಿರುವ ಇವುಗಳಿಗೆ ಪರಿಹಾರ? ಸಮಾಜದಲ್ಲಿ ಬದುಕುವಾಗ ಹಲವು ಕಟ್ಟುಪಾಡುಗಳಿಗೆ ಒಳಗಾಗಲೇ ಬೇಕು. ಸಂಸ್ಕಾರ, ನೈತಿಕತೆ ಎಂದೆಲ್ಲ ಹೇಳುವುದು ಇದನ್ನೇ.
ನಿಮ್ಮ ನಿಲುವಿಂಗೆ ನೀವು ನಾಚಬೇಡವೇ
ಅನ್ಯರ ಕೈಲಿ ಅಲ್ಲ ಎನ್ನಿಸಿಕೊಂಬ ನಡೆ ನುಡಿ ಏಕೆ..?
ಹೀಗೊಂದು ವಚನ ವಾಣಿ ನುಡಿಯುತ್ತದೆ. ಇದು ಎಲ್ಲರಿಗೂ ಸಲ್ಲುವಂಥ ಮಾತು. ನಮ್ಮ ತಲೆ, ಕಣ್ಣೋಟ ನೇರವಾಗಿ ಇರಬೇಕಾದರೆ ಸಮಾಜವನ್ನು, ಜನರನ್ನು ಧೈರ್ಯದಿಂದ ನೋಡಬೇಕಾದರೆ ನಾವು ಸರಿ ಇರಬೇಕು. ಸರಿ ಇರುವುದೆಂದರೆ ಏನು? ನಮ್ಮಿಂದ ಇನ್ನೊಬ್ಬರಿಗೆ ಉಪಕಾರವಾಗದಿದ್ದರೂ ಅಪಕಾರವಾಗದಂತೆ ಬದುಕಬೇಕು. ಇದು ತುಂಬಾ ಸುಲಭ ಅನ್ನಿಸಿದರೂ ಕಷ್ಟ. ಇನ್ನು ಅಂಥ ಕೆಟ್ಟ ರೋಗಿಷ್ಟ ಮನಸ್ಥಿತಿ ಉಳ್ಳವರಿಂದಾಗಿ ಇಡೀ ಸಮಾಜದ ಗಂಡು ಕುಲವನ್ನು ಸಂದೇಹದ ದೃಷ್ಟಿಯಲ್ಲಿ ನೋಡುವಂತಾಗುತ್ತದೆ.
ಇದು ಗಂಡಸಿನ ಮೇಲ್ಮೈಯನ್ನು ತೋರಿಸುವ ವಿಕೃತಿ. ಹೆಣ್ಣನ್ನು ಮಣಿಸಿದ್ದೇನೆ ಎಂಬ ಕ್ರೂರ ಅಹಂ. ಇಂಥವರು ಬೆಳೆಯಲು ಕಾರಣ. ಇದರ ಬಲೆಗೆ ಸಿಕ್ಕ ಹೆಣ್ಣುಮಕ್ಕಳು ಮರ್ಯಾದೆಗೆ ಅಂಜಿ, ಭವಿಷ್ಯದಲ್ಲಿ ಇದರಿಂದ ತಮ್ಮ ಬದುಕಿಗಾಗುವ ತೊಂದರೆಗೆ ಹೆದರಿ ಇದನ್ನು ಮುಚ್ಚಿಡುವುದು. ಇದರಿಂದಾಗಿ ಆರೋಪಿ ಎದುರೇ ಇದ್ದರೂ ರಾಜಾರೋಷವಾಗಿ ತಿರುಗಾಡುವುದು. ಇದು ಗೊತ್ತಾಗುವ ಹೊತ್ತಿಗೆ ಇನ್ನಷ್ಟು ಜನ ಅವನಿಂದ ವಂಚನೆಗೊಳಗಾಗುತ್ತಾರೆ.
ಕಠಿಣ ಶಿಕ್ಷೆ ಇವರಿಗಾಗುವುದು ಮುಖ್ಯ. ಚಿಕ್ಕಂದಿನಿಂದಲೇ ಗಂಡಿಗೆ ಸಿಗುವ ಹೆಚ್ಚುವರಿ ಸ್ವಾತಂತ್ರ್ಯ ಮತ್ತು ದೊರಕಬೇಕಾದ ನೈತಿಕ ಶಿಕ್ಷಣದ ಕೊರತೆಯೂ ಇದಕ್ಕೆ ಕಾರಣ ಎಂದು ಬೆಂಗಳೂರಿನ ಕ್ರೈಸ್ಟ್ ಕಾಲೇಜಿನ ವಿದ್ಯಾರ್ಥಿನಿ ಅಮೃತಾ ಭಟ್ ಬೊಟ್ಟು ಮಾಡುತ್ತಾರೆ.
ಬೇಕಾಬಿಟ್ಟಿಯಾಗಿ ನೋಡಬಹುದಾದ ಮೊಬೈಲಿನಲ್ಲಿ ಹರಿದು ಬರುವ ವಿಡಿಯೋಗಳು ಮತ್ತು ಅಂಥದ್ದೇ ರೀತಿಯ ಸಿನಿಮಾಗಳು. ಇದು ಹದಿ ಹರೆಯದವರನ್ನು ತಪ್ಪಿಗೆ ಉತ್ತೇಜಿಸುತ್ತದೆ. ಇದರ ಜೊತೆ ಇಂಥ ಅಕ್ಷಮ್ಯವಾದ ತಪ್ಪನ್ನು ವಯಸ್ಸಿನ ಮೂಲಕ ಸಮೀಕರಿಸಿ ಶಿಕ್ಷೆಯ ಅವಧಿಯನ್ನು ಕಡಿತಗೊಳಿಸಿರುವುದು, ಅತ್ಯಾಚಾರ ನಿರ್ಮೂಲನಕ್ಕೆ ತಕ್ಕ ಕಾನೂನು ಇಲ್ಲದಿರುವುದು ಮತ್ತು ಅಪರಾಧಿಗಳು ಸುಲಭದಲ್ಲಿ ನುಣುಚಿಕೊಳ್ಳುವುದು ಇದು ತಪ್ಪಿನ ಪುನರಾವರ್ತನೆಗೆ ಅನುವು ಮಾಡಿಕೊಡುತ್ತದೆ ಎನ್ನುತ್ತಾರೆ ಮಂಗಳೂರಿನ ಅಲೋಶಿಯಸ್ ವಿದ್ಯಾರ್ಥಿನಿ ಸ್ಫೂರ್ತಿ ಕಜೆ.
ವಿಚಿತ್ರ ಎಂದರೆ ಇದಕ್ಕಿರುವ ಸರ್ಕಾರದ ಪರಿಹಾರ ಹೆಣ್ಣುಮಗಳು ಸಾಯುವಲ್ಲಿಯವರೆಗೆ ಕಾದು ಸತ್ತ ನಂತರ ಇಂತಿಷ್ಟು ಹಣ ನೀಡುವುದು. ಅಪರಾಧಿಗಳು ಸಿಕ್ಕರೆ ಸಿಕ್ಕರು, ಇಲ್ಲದಿದ್ದರೆ ಇಲ್ಲ... ಅದೂ ಪ್ರಭಾವಿ ವ್ಯಕ್ತಿಗಳ ಕೈವಾಡ ಇದ್ದರಂತೂ ಮತ್ತೆ ಅವರ ಹೆಸರೇ ಕಾಣಿಸದು. ಇಲ್ಲದಿದ್ದರೆ ಆ ಕಾಮುಕನನ್ನು ಮಾನಸಿಕ ರೋಗಿ ಎಂದು ಸರ್ಟಿ ಫೈ ಮಾಡಿ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವುದು. ಇಂಥದ್ದೇ ಸ್ಥಿತಿ ಮುಂದುವರಿದಲ್ಲಿ ಹೆಣ್ಣುಮಕ್ಕಳು ತಮ್ಮ ಕೈಯಲ್ಲಿ 'ಲೈಸೆನ್ಸ್ಡ್ ಟು ಕಿಲ್' ಎಂಬ ಪರವಾನಗಿ ಹೊತ್ತ ಲೋಡೆಡ್ ಪಿಸ್ತೂಲನ್ನು ಸದಾ ಇಟ್ಟುಕೊಳ್ಳಬೇಕಾದೀತು. ಆದರೆ, ಇದರಿಂದ ಹೊರ ಬಂದ ಗುಂಡಿಗೆ ಆ ಕ್ರೂರಿ ಸತ್ತರೂ ಅದು ಅವನ ಪಾಲಿಗೆ ಕಡಿಮೆ ಶಿಕ್ಷೆಯೇ.
ನಮ್ಮೊಬ್ಬರಿಂದ ಸಮಾಜ ಪರಿವರ್ತನೆಯಾಗದು ನಿಜ. ಆದರೆ, ಒಬ್ಬ ಮುಂದುವರಿದಲ್ಲಿ ಹಲವು ಹೆಜ್ಜೆಗಳು ಹಿಂಬಾಲಿಸಿ ಬರಬಹುದು. ಅತ್ಯಾಚಾರಕ್ಕೆ ಕಠಿಣ ಶಿಕ್ಷೆಯ ಕಾನೂನು ಜಾರಿಗೊಳ್ಳಲಿ. ಅತ್ಯಾಚಾರಕ್ಕೆ ಒಳಗಾದವಳನ್ನು ದೂರವಿಡಬೇಡಿ. ಯಾಕೆಂದರೆ ಅಪರಾಧಿ ಅವಳಲ್ಲ. ಬೀದಿ ಕಾಮಣ್ಣರ ಉಪಟಳ ಇದ್ದಲ್ಲಿ ಹಿರಿಯರಿಗೆ ತಿಳಿಸಿ. ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಇದನ್ನು ಶಾಲೆ ಕಮಿಟಿ ಮತ್ತು ಪ್ರಿನ್ಸಿಪಾಲರ ಗಮನಕ್ಕೂ ತನ್ನಿ. ಮೊದಲೆಲ್ಲ ಕುಷ್ಠ ರೋಗ ಬಂದವರನ್ನು ಸಮಾಜದಿಂದ ಬೇರಾಗಿಸುತ್ತಿದರು. ಯಾರೂ ಅವರನ್ನು ನೋಡುವುದಾಗಲಿ, ಮುಟ್ಟುವುದಾಗಲಿ ಮಾಡುತ್ತಿರಲಿಲ್ಲ. ಅಂಥದ್ದೇ ನಡವಳಿಕೆಯನ್ನು ಅತ್ಯಾಚಾರಿಗಳಿಗೆ ತೋರಿಸಿ. ಅಂಥ ಯಾವುದೇ ವಿಷಯವನ್ನು ನಮಗ್ಯಾಕೆ ಇದು ಎಂಬ ಭಾವ ತೋರದೆ ಪ್ರತಿಭಟಿಸಿ. ಎಲ್ಲರ ಗಮನಕ್ಕೆ ತನ್ನಿ. ಅತ್ಯಾಚಾರಿಗಳು ಹೇಡಿಗಳಾಗಿರುತ್ತಾರೆ. ಅವರಿಗೆ ಹೆದರಿಕೆ ಹುಟ್ಟಿಸಿ. ಹೆಣ್ಣು ಮರ್ಯಾದೆಗೆಂದು ತಲೆ ಬಗ್ಗಿಸಿ ನಡೆದಷ್ಟು ಅದನ್ನು ಅವಳ ಬಲಹೀನತೆ ಎಂದುಕೊಳ್ಳುವುದೇ ಜಾಸ್ತಿ.
ಪ್ರಾಣಿಗಳೂ ತಮಗೆ ಅಪಾಯ ಉಂಟಾಗುತ್ತದೆ ಎಂದಾದಾಗ ತಿರುಗಿ ಬೀಳುತ್ತವೆ. ನಾವೇಕೆ ಅಳುಕಬೇಕು. ಕೊಚ್ಚೆಗೆ ಕಲ್ಲು ಹಾಕಿ ಮುಖಕ್ಕೆ ರಟ್ಟಿಸಿಕೊಳ್ಳಬೇಕಂತಲೇ ಇಲ್ಲ. ಆದರೆ, ಕೊಚ್ಚೆಯಾದ ಜಾಗ ಸ್ವಚ್ಛ ಆಗುವಂತೆ ಜಾಗೃತಿ ಏಕೆ ವಹಿಸಬಾರದು?
ಮನುಷ್ಯರೂ ಮೃಗಗಳಂತೆ ವರ್ತಿಸುತ್ತಿರುವುದು ನೋಡಿದರೆ ಆಘಾತವಾಗುತ್ತದೆ. ಮನೆ, ಕಾಲೇಜ್, ರಸ್ತೆ... ಎಲ್ಲೂ ನಮಗೆ ಸುರಕ್ಷತೆ ಇಲ್ಲ ಅನಿಸುತ್ತಿದೆ. ಸರ್ಕಾರವೇ ಮಹಿಳೆಯರ ಸುರಕ್ಷತೆಗೆ ಕಟ್ಟುನಿಟ್ಟಿನ ಕಾನೂನು ಜಾರಿಗೆ ತರಬೇಕು. ಅತ್ಯಾಚಾರಿಗಳನ್ನು ಶಿಕ್ಷಿಸಲು ಕಾನೂನು ವ್ಯವಸ್ಥೆಯಲ್ಲಿ ಸಾಧ್ಯವಿಲ್ಲವೆಂದಾದರೆ ಅವರನ್ನು ಸಾರ್ವಜನಿಕರ ಕೈಗೆ ಒಪ್ಪಿಸಲಿ. ಜನರೇ ಶಿಕ್ಷಿಸುತ್ತಾರೆ.
- ಅಪೇಕ್ಷಾ, ಪ್ರಥಮ ಬಿಕಾಂ., ಬೆಸೆಂಟ್ ಕಾಲೇಜ್, ಮಂಗಳೂರು
ಹೆಣ್ಣು ಮಕ್ಕಳು ಯಾವುದೇ ಸಂದರ್ಭದಲ್ಲೂ ಧೈರ್ಯಗೆಡಬಾರದು. ಧೈರ್ಯ ತೋರಿದರೆ ಆಕೆಯನ್ನು ಮುಟ್ಟುವ ಧೈರ್ಯ ಯಾರೂ ತೋರಲಾರರು. ಇತ್ತೀಚೆಗೆ ನಡೆದ ಪ್ರಕರಣಗಳನ್ನು ಖಂಡಿಸಿ ನನ್ನ ಸ್ನೇಹಿತರೆಲ್ಲಾ ಸೇರಿಕೊಂಡು ವಾಟ್ಸ್ಆಪ್, ಫೇಸ್ಬುಕ್ನಲ್ಲಿ ಪ್ರತಿಭಟನಾರ್ಥ ಕಪ್ಪು ಚಿಹ್ನೆ ಬಳಸುತ್ತಿದ್ದೇವೆ. ಲೈಂಗಿಕ ದೌರ್ಜನ್ಯದ ಬಗ್ಗೆ ವಿದ್ಯಾರ್ಥಿನಿಯರಿಗೆ ಮಾಹಿತಿ ನೀಡಿ ಅವರಲ್ಲಿ ಧೈರ್ಯ ತುಂಬುವ ಕೆಲಸವಾಗಬೇಕು.
- ಸಂಜನಾ, ದ್ವಿತೀಯ ಪಿಯುಸಿ, ಕೆನರಾ ಕಾಲೇಜ್, ಮಂಗಳೂರು
ಮಗಳು ಮನೆಯಿಂದ ಹೊರಹೋಗಿ ವಾಪಸ್ ಬರುವವರೆಗೆ ತಂದೆತಾಯಿಗೂ ನೆಮ್ಮದಿ ಇಲ್ಲದಂತಾಗಿದೆ. ಎಲ್ಲೂ ನಾವು ಸುರಕ್ಷಿತವಾಗಿಲ್ಲ. ಹೀಗಾಗಿ ನಮ್ಮ ರಕ್ಷಣೆಗೆ ನಾವೇ ಕ್ರಮ ಕೈಗೊಳ್ಳಬೇಕಿದೆ. ದೌರ್ಜನ್ಯ ಪ್ರಕರಣಗಳ ವಿರುದ್ಧ ಒಗ್ಗಟ್ಟಾಗಿ ಹೋರಾಡಬೇಕು. ಸುರಕ್ಷತೆಗಾಗಿ ಪೆಪ್ಪರ್ ಸ್ಪ್ರೇ, ಬ್ಲೇಡ್, ಚಾಕು ನಮ್ಮಲ್ಲಿ ಇರಬೇಕು.
- ಪಾವನ, ಪ್ರಥಮ ಬಿಕಾಂ, ಬೆಸೆಂಟ್ ಕಾಲೇಜ್, ಮಂಗಳೂರು
ಅತ್ಯಾಚಾರ ಪ್ರಕರಣಗಳ ತ್ವರಿತ ವಿಚಾರಣೆ ನಡೆಸಿ ಆರೋಪಿಗಳಿಗೆ ಶೀಘ್ರ ಕಠಿಣ ಶಿಕ್ಷೆ ವಿಧಿಸಬೇಕು. ಹೆಣ್ಣು ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಅಲ್ಲಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು, ಪೊಲೀಸ್ ಭದ್ರತೆ ಒದಗಿಸಬೇಕು. ಹೆಣ್ಣುಮಕ್ಕಳನ್ನು ಚುಡಾಯಿಸುವವರ ಮೇಲೂ ಕ್ರಮ ಕೈಗೊಳ್ಳಬೇಕು. ಕಾಲೇಜ್ಗಳಲ್ಲಿ ಮೊಬೈಲ್ ಫೋನ್ ನಿಷೇಧಿಸಲಾಗಿದೆ. ಅದ್ದರಿಂದ ಕೆಲ ಬಾರಿ ನಾವು ಎಲ್ಲಿರುತ್ತೇವೆ, ಹೇಗಿರುತ್ತೇವೆ ಎಂಬುದು ಮನೆಯವರಿಗೂ ತಿಳಿದಿರುವುದಿಲ್ಲ.
- ರಾಗಿಣಿ ಆರ್., ಅಂತಿಮ ಬಿಕಾಂ, ಶ್ರೀ ವೆಂಕಟರಮಣ ಮಹಿಳಾ ಕಾಲೇಜ್, ಕಾರ್ಕಳ
ಈ ರಾಕ್ಷಸರು ಮಹಿಳೆಯರು ಮಾತ್ರವಲ್ಲ ಮಕ್ಕಳನ್ನೂ ಬಿಡುತ್ತಿಲ್ಲ. ಇದರಿಂದ ಹೆಣ್ಣುಮಕ್ಕಳಿಗೆ ಸುರಕ್ಷತೆಯೇ ಇಲ್ಲದಂತಾಗಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಜನ ಬೀದಿಗಿಳಿಯೋದು, ಕಾನೂನು ಕೈಗೆ ತೆಗೆದುಕೊಳ್ಳೋದು ಗ್ಯಾರಂಟಿ.
- ದೀಪಿಕಾ, ಮಳಲಗದ್ದೆ
ಗುರು ಅಂದರೆ ಸಾಕ್ಷಾತ್ ಬ್ರಹ್ಮ, ವಿಷ್ಣು, ಮಹೇಶ್ವರ ಸ್ವರೂಪಿ ಎಂದು ಪೂಜಿಸೋ ದೇಶ ನಮ್ಮದು. ಇಂದು ತ್ರಿಮೂರ್ತಿ ಸ್ಥಾನದಲ್ಲಿರುವವರೇ ಮುಗ್ಧ ಕಂದಮ್ಮಗಳನ್ನು ಹಿಂಸಿಸಿ ಕಾಮತೃಷೆಗೆ ಬಳಸಿಕೊಳ್ಳುತ್ತಿದ್ದಾರೆ. ಹೀಗಾದರೆ ಮಕ್ಕಳ ಗತಿಯೇನು? ಇಂಥ ಕಾಮುಕರು ಮತ್ತೊಮ್ಮೆ ಈ ರೀತಿಯ ಕೃತ್ಯಕ್ಕೆ ಕೈಹಾಕದಂತೆ ಸರಿಯಾದ ಪಾಠ ಕಲಿಸಬೇಕು.
- ಸೌಜನ್ಯ ಮಾನ್ವಿ, ಸಾಗರ
- ಅನಿತಾ ನರೇಶ್ ಮಂಚಿ