ಬಟ್ಟಲು ಕಣ್ಣು

ಮುಸ್ಸಂಜೆ ಹೊತ್ತು. ಮಯ್ಯಾಸ್ ರೆಸ್ಟೊರೆಂಟ್ನ ಕೌಂಟರ್ ಬಳಿ ಓಬ್ಬ ಹಸನ್ಮುಖಿ ನಿಂತಿದ್ದಾರೆ. ಅವರನ್ನು ನೋಡಿದ ಕೆಲವು ...
ಬಟ್ಟಲು ಕಣ್ಣು
Updated on: 

ಮುಸ್ಸಂಜೆ ಹೊತ್ತು. ಮಯ್ಯಾಸ್ ರೆಸ್ಟೊರೆಂಟ್ನ ಕೌಂಟರ್ ಬಳಿ ಓಬ್ಬ ಹಸನ್ಮುಖಿ ನಿಂತಿದ್ದಾರೆ. ಅವರನ್ನು ನೋಡಿದ ಕೆಲವು ಗ್ರಾಹಕರು ಮುಗುಳ್ನಗೆ ಬೀರುತ್ತಾರೆ. ಅವರಿಗೆ ಅರ್ಥವಾಗುತ್ತದೆ, `ಇವರು ಬೆಳ್ಳಿತಟ್ಟೆ ಓದುಗರು ಎಂದು. ಆಮೇಲೆ ಇದ್ದೇ ಇದೆಯಲ್ಲ, ಒಂದಷ್ಟು ಮಾತುಕತೆ, ಪ್ರಶ್ನೋತ್ತರಗಳು.
-
ಆಕೆ ಮಾಜಿ ಸಚಿವರೊಬ್ಬರ ಪತ್ನಿ. `ನೀವು ಬೆಳ್ಳಿತಟ್ಟೆ ಮಯ್ಯ ಅಲ್ಲವಾ? ನಿಮ್ಮ ಅಂಕಣ ತುಂಬಾ ಉಪಯುಕ್ತ ಮಾಹಿತಿಗಳಿಂದ ಕೂಡಿರುತ್ತದೆ. ಆದರೆ ಈ ಹೋಟೆಲ್ ಬಳಿ ಏಕೆ ನಿಂತಿದ್ದೀರಿ ಎಂದು ಕುತೂಹಲದಿಂದ ಪ್ರಶ್ನಿಸುತ್ತಾರೆ. ಇವರಿಗೆ ಒಳಗೊಳಗೇ ಪುಳಕ.
­

`ಬೈಟು ಕಾಫಿಯ `ಬೆಳ್ಳಿತಟ್ಟೆಗಿಂದು 500 ಸಂಭ್ರಮ. ಅದು ಎಷ್ಟ ಜನಪ್ರಿಯವಾಗಿದೆ ಎನ್ನುವುದನ್ನು ಉದಾಹರಣೆಗಳ ಸಹಿತ ಡಾ.ಪಿ.ಸದಾನಂದ ಮಯ್ಯ ವಿವರಿಸಿದ್ದು ಹೀಗೆ. ಮಯ್ಯ ಆಹಾರೋದ್ಯಮಿ ಮಾತ್ರವಲ್ಲ, ಆಹಾರ ತಜ್ಞ ಕೂಡ. ಪುರವಣಿ ಆರಂಭದ ದಿನವೇ ಶುರುವಾದ ಅವರ ಕಾಲಂ ಒಂದು ದಿನವೂ ನಿಂತಿಲ್ಲ ಎನ್ನುವುದು ವಿಶೇಷ. ಎಷ್ಟೇ ಕೆಲಸದ ಒತ್ತಡವಿರಲಿ, ಸ್ವದೇಶದಲ್ಲಿರಲಿ ಅಥವಾ ವಿದೇಶ ಪ್ರವಾಸದಲ್ಲೇ ಇರಲಿ. ಸಮಯಕ್ಕೆ ಸರಿಯಾಗಿ ಅಂಕಣ ಕೊಡುವುದನ್ನು ತಪ್ಪಿಸಿದವರಲ್ಲ ಮಯ್ಯ.
ಆಹಾರದ ಕುರಿತು ಮಯ್ಯ ಹೇಳುತ್ತಾರೆ ಅಂತಾದರೆ ಅದು ವಿಶ್ವಾಸಾರ್ಹ ಮಾತು ಎನ್ನುವುದು ಓದುಗರ ನಂಬಿಕೆ. ಅವರಿಗೆ ಮಯ್ಯ ಎಂದರೆ ಅಧಿಕೃತತೆ. ಅಂಕಣಕಾರನಾಗಿ ಮಯ್ಯ ಬೆಳೆಸಿಕೊಂಡು ಬಂದಿರುವ ನಂಬಿಕೆ ಅಂತಾಹದ್ದು. ಸ್ವತಃ ಪ್ರಯೋಗಿಸದೇ ಯಾವುದನ್ನೂ ಒಪ್ಪುವ ಜಾಯಮಾನವಲ್ಲ ಅವರದು. ಮಯ್ಯಾಸ್ ಫುಡ್ಸ್ ಅಂಡ್ ಬೆವರೇಜಸ್, ಮಯ್ಯಾಸ್ ರೆಸ್ಟೊರೆಂಟ್ಗಳ ಮಾಲೀಕರಾಗಿದ್ದರೂ ತಮ್ಮ ಅಂಕಣದಲ್ಲಿ ಎಂದೂ ಅವುಗಳ ಪ್ರಸ್ತಾಪ ಮಾಡಿಲ್ಲ. ಏಕೆಂದರೆ ಅಂಕಣವೇ ಬೇರೆ, ವ್ಯವಹಾರವೇ ಬೇರೆ ಎನ್ನುವ ದೃಢ ನಿಲುವು.
`ಬೆಳ್ಳಿತಟ್ಟೆ 500 ರ ಸಂಭ್ರಮವನ್ನು ಡಾ.ಪಿ.ಸದಾನಂದ ಮಯ್ಯ ಹಂಚಿಕೊಂಡಿದ್ದು ಹೀಗೆ..

ಆಹಾರದ ಬಗ್ಗೆ ಇಂಥದ್ದೊಂದು ಅಂಕಣ ಆರಂಭಿಸಿದ ಹಿನ್ನೆಲೆ?
ಇವತ್ತಿನ ಎಷ್ಟೋ ಆರೋಗ್ಯ ಸಮಸ್ಯೆಗಳಿಗೆ ಆಹಾರವೂ ಕಾರಣ. ಹೀಗಾಗಿ ಆಹಾರದ ವಿಚಾರವಾಗಿ ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯ. ಅದು ನನ್ನ ಅಂಕಣದ ಆಶಯ. ನನಗೆ ಗೊತ್ತಿರುವುದನ್ನು ಜನರಿಗೆ ಹೇಳುತ್ತಿದ್ದೇನೆ. ಅವರು ಅನುಷ್ಠಾನಕ್ಕೆ ತಂದರೆ ಬಹಳ ಸಂತೋಷ.

ನೀವು ಓದಿದ್ದು ಎಂಜಿನಿಯರಿಂಗ್. ವೃತ್ತಿಯಲ್ಲಿ ಉದ್ಯಮಿ. ಬರವಣಿಗೆಗೆ ಇಳಿಯುವಾಗ ಕಷ್ಟ ಅನ್ನಿಸಲಿಲ್ಲವೆ?
ವಿಶ್ವೇಶ್ವರ ಭಟ್ ಸಂಪಾದಕರಾಗಿದ್ದ ಹಿಂದಿನ ಪತ್ರಿಕೆಯಲ್ಲೂ ಅಂಕಣ ಬರೆಯುತ್ತಿದ್ದೆ. ನನ್ನನ್ನು ಪ್ರೇರೇಪಿಸಿ ಬರವಣಿಗೆಗೆ ಹಚ್ಚಿದವರೇ ಅವರು. ಕನ್ನಡಪ್ರಭಕ್ಕೆ ಬಂದಮೇಲೆ ನಿಲ್ಲಿಸೋಣ ಅಂದುಕೊಂಡಿದ್ದೆ. ಆದರೆ ಪಟ್ಟುಬಿಡದೇ ಬರೆಸುತ್ತಿದ್ದಾರೆ. ಭಟ್ಟರು ಬರೆಯಿರಿ ಎಂದು ಒತ್ತಾಯಿಸಿದರು, ಬರೆಯಲು ಶುರು ಮಾಡಿದೆ. ಪ್ರಾಮಾಣಿಕವಾಗಿ ಒಪ್ಪಿಕೊಳ್ಳಬೇಕೆಂದರೆ ನನಗೆ ಸಾಹಿತ್ಯದ ಗಂಧಗಾಳಿ ಇಲ್ಲ. ಬರವಣಿಗೆಯಲ್ಲಿ ಸಾಹಿತ್ಯಕ ಭಾಷೆಗಿಂತ ಜನರಿಗೆ ವಿಷಯವನ್ನು ಅರ್ಥ ಮಾಡಿಸುವುದು ಮುಖ್ಯ ಎನ್ನುವುದನ್ನು ಬಹುಬೇಗ ಅರಿತುಕೊಂಡೆ. ಅದರಲ್ಲೂ ಆಹಾರ ವಿಜ್ಞಾನದಂತಹ ಕ್ಲಿಷ್ಟಕರ ವಿಚಾರವನ್ನು ಸರಳ ಉದಾಹರಣೆಗಳ ಮೂಲಕ ವಿವರಿಸಿದರೆ ಬಹುಬೇಗ ಅರ್ಥವಾಗುತ್ತದೆ ಎನ್ನುವುದನ್ನು ತಿಳಿದುಕೊಂಡೆ.

ಅಂಕಣದಲ್ಲಿ ಒಮ್ಮೊಮ್ಮೆ ಉದ್ಯಮದ ಕೆಲವು `ರಹಸ್ಯಗಳನ್ನೂ ಬಿಚ್ಚಿಡುತ್ತೀರಿ. ಇದರಿಂದ ತೊಂದರೆ ಆಗಿಲ್ಲವೆ?
ನನ್ನ ಕೆಲವು ಬಂಧುಗಳೂ ಇದೇ ಪ್ರಶ್ನೆ ಎತ್ತಿದ್ದರು. ಉದ್ಯಮಕ್ಕಿಂತ ಜನರ ಆರೋಗ್ಯ ಮುಖ್ಯ ಮಾತನ್ನೇ ಅವರ ಬಳಿಯೂ ಹೇಳಿದೆ. ನೋಡಿ, ಯಾವುದೇ ಅಡುಗೆ ಭಟ್ಟರು ಪೂತರ್ಿ ಗುಟ್ಟು ಬಿಟ್ಟುಕೊಡಲ್ಲ. ಏಕೆಂದರೆ ಅವರಿಗೆ ಜೀವನದ ಪ್ರಶ್ನೆ. ನನಗೆ ಅಂತಹ ಹೆದರಿಕೆ ಇಲ್ಲ. ಏಕೆಂದರೆ ಬ್ಯುಸಿನೆಸ್ಗಿಂತ ಜನರ ಆರೋಗ್ಯ ಮುಖ್ಯ ಎಂದು ಭಾವಿಸಿಕೊಂಡಿರುವವ ನಾನು. ನನ್ನ ಉದ್ದೇಶ ಜನರಿಗೆ ಒಳ್ಳೆಯದಾಗಲಿ ಎನ್ನುವುದು. ಬರೆದ್ದನ್ನು ಎಲ್ಲರೂ ಕಾಪಿ ಮಾಡಲು ಸಾಧ್ಯವಿಲ್ಲ. ನಿಮಗೊಂದು ಉದಾಹರಣೆ ಹೇಳುತ್ತೇನೆ. ನಮ್ಮ ಬಾಣಸಿಗರಿಗೆ ಪ್ರತಿ ಅಡುಗೆ, ಆಹಾರದ ಕುರಿತು ವೈಜ್ಞಾನಿಕವಾಗಿ ತರಬೇತಿ ನೀಡುತ್ತೇವೆ. ಅವರು ನಮ್ಮ ಸಂಸ್ಥೆ ತೊರೆದು ಹೋದಮೇಲೆ ಇಲ್ಲಿ ಮಾಡುತ್ತಿದ್ದುದನ್ನೇ ಬೇರೆಕಡೆ ಮುಂದುವರಿಸಲು ಸಾಧ್ಯವಾಗುತ್ತಿಲ್ಲ. ಏಕೆ ಹೇಳಿ? ಅನುಕರಣೆ ಬೇರೆ, ಆಚರಣೆ ಬೇರೆ. ಇನ್ನು ಇಂಥವನ್ನು ಹಂಚಿಕೊಳ್ಳುವಾಗ ನಮ್ಮ ಹೃದಯ ದೊಡ್ಡದಿರಬೇಕು.
 
ಹಲವಾರು ದೇಶಗಳನ್ನು ಸುತ್ತಿದ್ದೀರಿ. ಭಾರತೀಯ ಆಹಾರ ಪದ್ಧತಿಗೂ, ಅಲ್ಲಿನ ಆಹಾರ ಪದ್ಧತಿಗೂ ಕಂಡುಕೊಂಡಿರುವ ವ್ಯತ್ಯಾಸವೇನು?
ಪ್ರತಿ ದೇಶದಲ್ಲಿಯೂ ಅಲ್ಲಿನ ಸ್ಥಳೀಯ ಸಂಸ್ಕೃತಿ, ವಾತಾವರಣ ಮತ್ತು ಕೃಷಿ ವಿಧಾನಕ್ಕೆ ಪೂರಕವಾದ ಆಹಾರ ಪದ್ಧತಿ ಬಹುಹಿಂದಿನಿಂದಲೂ ರೂಢಿಯಲ್ಲಿದೆ. ನಮ್ಮಲ್ಲೆ ತೆಗೆದುಕೊಂಡರೆ ಆಂಧ್ರಪ್ರದೇಶದಲ್ಲಿ ಬಿಸಿಲು ಹೆಚ್ಚು, ಖಾರ ಜಾಸ್ತಿ ತಿನ್ನುತ್ತಾರೆ. ದೆಹಲಿಯಲ್ಲಿ ಚಳಿಗಾಲದಲ್ಲಿ ಕೊಬ್ಬಿನ ಪದಾರ್ಥಗಳನ್ನು ಜಾಸ್ತಿ ಸೇವಿಸಿದರೆ, ಬೇಸಿಗೆಯಲ್ಲಿ ಕೊಬ್ಬು ಕಡಿಮೆ ಇರುವ ಪದಾರ್ಥಗಳ ಬಳಕೆ ಹೆಚ್ಚು. ಅದರ ಹಿಂದಿನ ವೈಜ್ಞಾನಿಕ ಉದ್ದೇಶ ಎಂದರೆ ಆಯಾ ಸನ್ನಿವೇಶಕ್ಕೆ ತಕ್ಕಂತೆ ದೇಹದ ತಾಪಮಾನ ಕಾಪಾಡಿಕೊಳ್ಳುವುದು. ಜಾಗತೀಕರಣದ ಪ್ರಭಾವದಿಂದ ಅಲ್ಲಲ್ಲಿ ಆಹಾರ ಪದ್ಧತಿ ಬದಲಾಗಿರುವುದನ್ನೂ, ಅದರ ಪರಿಣಾಮವಾಗಿ ಜೀವನಶೈಲಿ ಮತ್ತು ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತಿರುವುದನ್ನೂ ಗಮನಿಸಿದ್ದೇನೆ. 20 ವರ್ಷ ಹಿಂದೆ ಚೀನಾ, ಜಪಾನ್ಗೆ ಹೋದಾಗ ಅಲ್ಲಿ ಹೆಚ್ಚಿನವರು ತೆಳ್ಳಗಿದ್ದರು. ಈಗ ಅಂತಹವರನ್ನು ಹುಡುಕುವುದು ಕಷ್ಟ. ತಮ್ಮದಲ್ಲದ ಆಹಾರ ಪದ್ಧತಿಗೆ ಒಗ್ಗಿಕೊಳ್ಳಲು ಅವರ ಯತ್ನಿಸುತ್ತಿರುವುದೇ ಆದಕ್ಕೆ ಕಾರಣ. ಆದರೆ ನಮ್ಮ ಅಂದರೆ ಭಾರತೀಯರ ಫುಡ್ ಹ್ಯಾಬಿಟ್ ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ. ಕಾನರ್್ಫ್ಲೇಕ್ ಪರಿಚಯಿಸಿದ ಕಂಪನಿ ಭಾರತೀಯ ಆಹಾರ ಪದ್ಧತಿ ಬದಲಿಸುವ ಮಾತನಾಡಿತ್ತು. ಈಗ ಏನಾಗಿದೆ? ಮೆಕ್ಡೊನಾಲ್ಡ್. ಡಾಮಿನೊಸ್ ಮತ್ತಿತರ ಸಂಸ್ಥೆಗಳು ಈಗ ನಿಧಾನವಾಗಿ ಭಾರತೀಯ ತಿನಿಸುಗಳನ್ನು ಪರಿಚಯಿಸುತ್ತಿರುವುದನ್ನು ಗಮನಿಸಬಹುದು.



ಎಸ್ಎಂಎಸ್ ಸಂದೇಹಕ್ಕೆ ಅಂಕಣದಲ್ಲೇ ಉತ್ತರ

`ನನ್ನ ಬಗ್ಗೆ ಬಹಳಷ್ಟು ಜನರ ದೂರು ಎಂದರೆ ವೈಯಕ್ತಿಕವಾಗಿ ಎಸ್ಎಂಎಸ್ಗಳಿಗೆ ಉತ್ತರಿಸುವುದಿಲ್ಲ ಎಂದು. ನೋಡಿ, ನನಗೆ ಉದ್ಯಮಕ್ಕೆ ಸಂಬಂಧಿಸಿ ನಿತ್ಯ 150 ಇ-ಮೇಲ್ಗಳು ಬರುತ್ತವೆ. ಅವೆಲ್ಲಕ್ಕೂ ಉತ್ತರಿಸುತ್ತ ಕುಳಿತರೆ ಒಂದು ದಿನವೂ ಸಾಲದು.  ಅವನ್ನೆಲ್ಲ ಕಾರ್ಯದಶರ್ಿಗಳಿಗೆ ವಗರ್ಾಯಿಸುತ್ತೇನೆ. ಅಂಕಣಕ್ಕೆ ಸಂಬಂಧಿಸಿದ ಎಸ್ಎಂಎಸ್ಗಳೂ ಹಾಗೆಯೇ. ದಿನವೂ ನೂರಾರು ಸಂದೇಶಗಳು ಬರುತ್ತವೆ. ಎಲ್ಲವನ್ನೂ ಖುದ್ದು ಓದುತ್ತೇನೆ. ವೈಯಕ್ತಿಕವಾಗಿ ಉತ್ತರಿಸುವ ಬದಲು ಅವರು ಕೇಳಿದ ಮಾಹಿತಿಗಳನ್ನು ಅಂಕಣದಲ್ಲಿಯೇ ಒದಗಿಸುತ್ತೇನೆ. ಒಮ್ಮೆ ಆ ಕುರಿತು ಬರೆದಿದ್ದರೂ ಮತ್ತೊಂದು ಸಲ ಪುನರಾವರ್ತನೆಯಾದರೂ ಪುನಃ ಬರೆಯುತ್ತೇನೆ. ಹೀಗಾಗಿ ವೈಯಕ್ತಿಕವಾಗಿ ಉತ್ತರಿಸುವುದಿಲ್ಲ ಎಂದು ಯಾವ ಓದುಗರೂ ನಿರಾಶರಾಗಬೇಕಿಲ್ಲ ಎಂದರು ಮಯ್ಯ.

ನಾನು ಇಷ್ಟು ವರ್ಷ ಆಹಾರೋದ್ಯಮದಲ್ಲಿದ್ದೇನೆ. ಆದರೆ ಜನ ಈಗ ನನ್ನನ್ನು ಗುರುತಿಸುತ್ತಿರುವುದು ಅಂಕಣಕಾರನಾಗಿಯೇ ವಿನಾ ಉದ್ಯಮಿಯಾಗಿ ಅಲ್ಲ. ಈ ಹಿರಿಮೆ ಕನ್ನಡಪ್ರಭ, ಅದರ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಮತ್ತು ಬೈಟು ಕಾಫಿಗೆ ಸಲ್ಲಬೇಕು.
- ಡಾ.ಪಿ.ಸದಾನಂದ ಮಯ್ಯ



- ರಾಜೇಶ ಮುಂಡಿಗೇಸರ
rajeshkhegde@gmail.com



Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com