ಬೆಳ್ಳಿತಟ್ಟೆ ಬಗ್ಗೆ
ಹೋಟೆಲ್ ಉದ್ಯಮಿ, ಆಹಾರ ವಿಜ್ಞಾನಿ ಡಾ.ಸದಾನಂದ ಮೈಯ್ಯ ಬೈಟು ಕಾಫಿಯಲ್ಲಿ ಬರೆಯುತ್ತಿರುವ 'ಬೆಳ್ಳಿ ತಟ್ಟೆ' ಅಂಕಣಕ್ಕೆ 500 ತುಂಬಿದೆ. ಈ ಹಿನ್ನೆಲೆಯಲ್ಲಿ ಅದನ್ನು ನಿರಂತರವೂ ಓದುವ ಹಲವಾರು ಗಣ್ಯ ಓದುಗರು ತಮ್ಮ ಅನಿಸಿಕೆಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.
ಅದ್ಭುತ ಸಮನ್ವಯ
ಆಹಾರ ಒಂದು ಪದ್ಧತಿ. ಶುಚಿ, ರುಚಿ, ಆರೋಗ್ಯಭರಿತ ಆಹಾರದ ಬಗ್ಗೆ 'ಬೆಳ್ಳಿತಟ್ಟೆ' ಅಂಕಣದಲ್ಲಿ ತಿಳಿಸಿಕೊಡುತ್ತಿರುವುದು ಮಹಿಳೆಯರು ಸೇರಿದಂತೆ ಎಲ್ಲರಿಗೂ ಉಪಯುಕ್ತ. 'ಕನ್ನಡಪ್ರಭ' ಆಹಾರದ ಬಗ್ಗೆ ಮಾಹಿತಿ ಕೊಟ್ಟರೆ ಮಯ್ಯಾಸ್ ಉತ್ಪನ್ನ ರುಚಿಯ ಅನುಭವ ನೀಡುತ್ತಿದೆ. ಇದೊಂದು ಅದ್ಭುತ ಸಮನ್ವಯ.
-ಆರೂರು ಲಕ್ಷ್ಮಣ ಶೇಟ್, ಸಾಹಿತಿ, ಹುಬ್ಬಳ್ಳಿ
ಕೇವಲ ಆಹಾರ ಅಂಕಣವಲ್ಲ
ಮೈಯ್ಯ ಅವರ ಈ ಅಂಕಣ ಕೇವಲ ಇತರ ಆಹಾರತಜ್ಞರ ಅಂಕಣವಲ್ಲ. ಸಾಹಿತ್ಯಿಕವಾಗಿಯೂ ಅದೊಂದು ಖುಷಿ ಕೊಡುವ ಅಂಕಣ. ಆಹಾರದ ಬಗ್ಗೆ ಅವರ ವಿಫುಲ ಅನುಭವದ ಜೊತೆಗೆ ದೇಶವಿದೇಶದ ಲೋಕಾನುಭವ ಕೂಡ ಮಿಳಿತವಾಗಿ ಈ ಅಂಕಣ ಇನ್ನಷ್ಟು ರುಚಿಕರವಾಗಿರುತ್ತದೆ. ಅವರ ಅಂಕಣದಲ್ಲಿನ ಸಲಹೆಗಳಿಂದ ತುಂಬಾ ಜನರು ಪ್ರಯೋಜನ ಪಡೆದುಕೊಂಡಿದ್ದಾರೆ.
-ನೀಲಾವರ ಸುರೇಂದ್ರ ಅಡಿಗ, ಉಡುಪಿ ಜಿಲ್ಲಾ ಕ.ಸಾ.ಪ. ಅಧ್ಯಕ್ಷ
ವಿಜ್ಞಾನಿಯಾಗಿ ಬರೆದರು
ಆರೋಗ್ಯದ ಬಗ್ಗೆ ಒಬ್ಬ ವೈದ್ಯ, ಆಹಾರದ ಬಗ್ಗೆ ಅಡುಗೆ ಭಟ್ಟನೂ ಬರೆಯಲು ಅಸಾಧ್ಯವಾದದ್ದನ್ನು ವಿಜ್ಞಾನಿಯಾಗಿ ಸದಾನಂದ ಮಯ್ಯ ಬರೆದಿದ್ದಾರೆ. 'ಬೆಳ್ಳಿತಟ್ಟೆ' ಅತ್ಯುತ್ತಮ ಅಂಕಣ. ಇಂಥದ್ದೊಂದು ಪುಸ್ತಕ ಪ್ರಕಟಗೊಂಡಿಲ್ಲ, ಅಂಕಣವಂತೂ ಇಲ್ಲವೇ ಇಲ್ಲ. ಮೊದ ಮೊದಲು ಅಂಕಣದಲ್ಲಿ ಕೇವಲ ಆಹಾರಕ್ಕೆ ಪ್ರಾಧಾನ್ಯವಿತ್ತು, ಇದೀಗ ಆಹಾರದ ಔಷಧೀಯ ಗುಣವನ್ನೂ ತಿಳಿಸಿಕೊಡಲಾಗುತ್ತಿದೆ.
-ಎಂ.ಎ. ಸುಬ್ರಹ್ಮಣ್ಯ, ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ
ಪತ್ರಿಕೆ ಎದುರು ನೋಡುವಂತೆ
'ಬೆಳ್ಳಿ ತಟ್ಟೆ' ತುಂಬಾ ಉಪಯುಕ್ತ ಅಂಕಣವಾಗಿದೆ. ದಿನವೂ ನಾವು ಉಪಯೋಗಿಸುವ ಹಣ್ಣು-ತರಕಾರಿಗಳಲ್ಲಿಯೇ ನಮಗೇ ಗೊತ್ತಿರದ ಔಷಧೀ ಗುಣಗಳನ್ನು ತಿಳಿಸಿಕೊಡುವ ರೀತಿ ಮೆಚ್ಚುಗೆಯಾಗುವಂತಿದೆ. 40 ವರ್ಷ ದಾಟಿದ ಹೆಣ್ಣುಮಕ್ಕಳಲ್ಲಿನ ಕ್ಯಾಲ್ಸಿಯಂನ ಕೊರತೆ ಬಗ್ಗೆ ತಿಳಿ ಹೇಳಿ ಅನುಸರಿಸಬೇಕಾದ ಆಹಾರ ಕ್ರಮವನ್ನು ಚೆನ್ನಾಗಿ ತಿಳಿಸುತ್ತಿದ್ದಾರೆ. ಕ್ಯಾನ್ಸರ್ನಂತಹ ಕಾಯಿಲೆಯಲ್ಲದೆ ತಲೆನೋವಿನ ಬಗ್ಗೆ ಕೂಡ ಕಾಳಜಿ ತೋರಿದ್ದಾರೆ. ಕುತೂಹಲದಿಂದ ನಾಳೆಯ ಪತ್ರಿಕೆ ಎದುರು ನೋಡುತ್ತಿರುವಂತೆ ಮಾಡಿದ್ದಾರೆ.
-ಕುಸುಮಾ ಉಮರ್ಜಿ, ಗೃಹಿಣಿ, ಬೆಂಗಳೂರು
ವೈಜ್ಞಾನಿಕ ಮತ್ತು ದೇಸಿ ಜ್ಞಾನ
ಆಹಾರದ ಕುರಿತಾಗಿ ಡಾ. ಮೈಯ್ಯ ಬೆಳ್ಳಿ ತಟ್ಟೆಯಲ್ಲಿ ತುಂಬಾ ಅಪರೂಪದ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಸರಳ ಮತ್ತು ಆಪ್ತವಾಗಿ ಪರಿಪೂರ್ಣ ಮಾಹಿತಿಗಳೊಂದಿಗೆ ತಮ್ಮ ಬರಹಕ್ಕೆ ಒಂದು ಅರ್ಥಪೂರ್ಣತೆ ಪ್ರಾಪ್ತವಾಗುವಂತೆ ಮಾಡಿದ್ದಾರೆ. ಅಡುಗೆ, ಶುಚಿ, ರುಚಿ, ಹಣ್ಣು ಹಂಪಲ, ಸ್ವಚ್ಛ, ಶುಭ್ರತೆ ಎಲ್ಲವೂಗಳ ಕುರಿತು ವೈಜ್ಞಾನಿಕ ಮತ್ತು ದೇಸಿ ಜ್ಞಾನವನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಅವರನ್ನು ಅಭಿನಂದಿಸುತ್ತೇನೆ.
-ಡಾ. ಪ್ರಕಾಶ ಗ.ಖಾಡೆ, ಸಾಹಿತಿ, ಬಾಗಲಕೋಟೆ
ಅಂಕಣವೂ ಅವರಂತೆ ಸರಳ
ಮೈಯ್ಯ ಅವರದ್ದು ಸರಳ, ನಿಗರ್ವಿ ವ್ಯಕ್ತಿತ್ವ. ಅವರ ಅಂಕಣವೂ ಅಷ್ಟೇ ಬಹಳ ಸರಳವಾಗಿರುತ್ತದೆ. ಎಲ್ಲರಿಗೂ ಅರ್ಥವಾಗುತ್ತದೆ, ಇಷ್ಟವಾಗುತ್ತದೆ. ಅದೊಂದು ರೀತಿಯಲ್ಲಿ ಅಕ್ಷಯ ಪಾತ್ರೆ ಇದ್ದ ಹಾಗೆ. ಇಂತಹ ಸರಳ ವ್ಯಕ್ತಿ ಊಟೋಪಚಾರಗಳ ಬಗ್ಗೆ ಇಷ್ಟೊಂದು ಜ್ಞಾನ ಹೇಗೆ ಸಂಪಾದಿಸಿಕೊಂಡರು ಎನ್ನುವುದೇ ಅಚ್ಚರಿ.
-ಕು.ಗೋ., ಹಾಸ್ಯ ಸಾಹಿತಿ, ಉಡುಪಿ
ಆಹಾರ ವಿಜ್ಞಾನಿಯ ಪ್ರಯತ್ನ
ಉತ್ತಮ ಆಹಾರ ಸೇವನೆಯು ಆರೋಗ್ಯ ಕಾಪಾಡುತ್ತದೆ. ಆರೋಗ್ಯ ದೃಷ್ಟಿಯಿಂದ ಯಾವ ರೀತಿಯ ಆಹಾರ ಮುಖ್ಯ ಎಂಬುದು ಜನಸಾಮಾನ್ಯರಿಗೆ ತಿಳಿಸಿ ಕೊಡುವ ಪ್ರಯತ್ನವನ್ನು 'ಬೈಟುಕಾಫಿ'ಯು ಡಾ. ಪಿ. ಸದಾನಂದ ಮೈಯ್ಯ ಅವರ ಬೆಳ್ಳಿತಟ್ಟೆ ಕಾಲಂ ಮೂಲಕ ಮಾಡಿದೆ. ಇದು ಜನಸಾಮಾನ್ಯರಿಗೆ ಆಹಾರ ತಿಳಿವಳಿಕೆಯನ್ನು ಸರಳ ರೀತಿಯಲ್ಲಿ ಕಟ್ಟಿಕೊಡುವ ಒಳ್ಳೆಯ ಪ್ರಯತ್ನ. ಮೈಯ್ಯ ಅವರು ಆಹಾರೋದ್ಯಮಿ ಮಾತ್ರವಲ್ಲ, ಆಹಾರ ವಿಜ್ಞಾನಿಯಾಗಿದ್ದಾರೆ. ಇದು ಬಹಳ ಉಪಯುಕ್ತ ಲೇಖನ. 'ಊಟ ಬಲ್ಲವನಿಗೆ ರೋಗವಿಲ್ಲ' ಎಂಬ ಗಾದೆ ಮಾತನ್ನು ಈ ಕಾಲಂನಿಂದ ತಿಳಿಯಬಹುದು.
-ಕುಂ. ವೀರಭದ್ರಪ್ಪ, ಕಾದಂಬರಿಕಾರ
ರುಚಿಕಟ್ಟಾದ ಬರಹ
ಸದಾನಂದ ಮೈಯ್ಯ ಅವರ ತುಂಬ ರುಚಿಕಟ್ಟಾಗಿರುವ ಬರಹಗಳನ್ನು ಪ್ರತಿ ವಾರ ತಪ್ಪದೇ ಓದುತ್ತೇನೆ. ಆಹಾರ ವಿಷಯವಾಗಿ ತಮಗಾದ ಅನುಭವವನ್ನು ಕಂತು-ಕಂತಾಗಿ ಓದುಗರಿಗೆ ಬಿಚ್ಚಿಡುತ್ತಿರುವುದು ಆಹಾರ ವಿಷಯ ಕುರಿತು ಹೆಚ್ಚಿನ ಆಸಕ್ತಿ ಬೆಳೆಸಿದಂತಾಗಿದೆ. ಇದೀಗ 500 ಲೇಖನ ಬರುತ್ತಿರುವುದು ಸಂತಸದ ಸಂಗತಿ.
-ಡಾ. ರಮಾಕಾಂತ ಜೋಶಿ, ಮನೋಹರ ಗ್ರಂಥಮಾಲಾ ಮುಖ್ಯಸ್ಥರು, ಧಾರವಾಡ
ಸಮಗ್ರ ಪ್ರಕಟಗೊಳ್ಳಲಿ
ಆರೋಗ್ಯವನ್ನು ವಿಶೇಷವಾಗಿ ಲಕ್ಷ್ಯದಲ್ಲಿಟ್ಟು ಬರೆಯುತ್ತಿರುವ ಮೈಯ್ಯ ಅವರ ಬೆಳ್ಳಿತಟ್ಟೆ ಪ್ರತಿ ಕಾಲಂನ ಹಿಂದೆ ಓದುಗರ ಮಾನಸಿಕ, ದೈಹಿಕ ಒತ್ತಡಗಳನ್ನು ಕಡಿಮೆ ಮಾಡುವ ಚಿಂತನೆ ಇದೆ. ಅವರ ಎಲ್ಲ 500 ಲೇಖನಗಳನ್ನು ಸೇರಿಸಿ ಪುಸ್ತಕ ರೂಪದಲ್ಲಿ ಹೊರತರಬೇಕು. ಅದನ್ನು 'ಕನ್ನಡಪ್ರಭ' ಪತ್ರಿಕೆಯೇ ಮುದ್ರಿಸಿದರೆ ಒಳಿತು. ಇಂಥ ಪ್ರಯತ್ನವಾದರೆ ಅವರ ಬರಹಗಳಿಗೆ ಇನ್ನಷ್ಟು ಮನ್ನಣೆ ದೊರೆಯುತ್ತದೆ.
-ಹ.ವೆಂ. ಕಾಖಂಡಕಿ, ಬರಹಗಾರರು, ಧಾರವಾಡ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

