ಹಿರಿಯ ನಾಯಕಿ

ಉಕ್ರೇನ್ ಬೆಡಗಿ ನಾಯಕಿಯಾಗುತ್ತಿದ್ದಾಳೆ ಎನ್ನುವುದರಿಂದ ಸದ್ದು ಮಾಡಿದ 'ಯುವ ಸಾಮ್ರಾಟ್' ಚಿತ್ರಕ್ಕೆ ನಟ ನೆನಪಿರಲಿ ಪ್ರೇಮ್ ಒಂದು ಹಾಡನ್ನು ಹಾಡುವ ಮೂಲಕ ಚಿತ್ರತಂಡಕ್ಕೆ ಮತ್ತಷ್ಟು ಚೈತನ್ಯ ತುಂಬಿದರು. ಈಗ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಚಿತ್ರದಲ್ಲಿ ಬಹು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವಲ್ಲಿಗೆ 'ಯುವ ಸಾಮ್ರಾಟ್' ಚಿತ್ರತಂಡ ಬಂದು ನಿಂತಿದೆ. ಆ ಮೂಲಕ ಭಾರತಿ ವಿಷ್ಣುವರ್ಧನ್ ದೀರ್ಘ ಬಿಡುವಿನ ನಂತರ ಮತ್ತೆ ಬಣ್ಣ ಹಾಕಿಕೊಂಡು ಕ್ಯಾಮೆರಾ ಮುಂದೆ ನಿಲ್ಲುವ ತಾಲಿಮು ನಡೆಸಿಕೊಂಡಿದ್ದಾರೆ.
ಈ ಹಿಂದೆ 'ಗುಡ್ ಲಕ್' ಎನ್ನುವ ಚಿತ್ರವನ್ನು ನಿರ್ಮಾಣ ಮಾಡಿದ್ದ ಹಿರಿಯ ಸಿನಿಮಾ ಪತ್ರಕರ್ತ ನಂದಕುಮಾರ್ ಅವರ ಪುತ್ರ ಯಶವಂತ್ಕುಮಾರ್ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿರುವ ಚಿತ್ರವಿದು. ಚಿತ್ರದ ನಾಯಕ ನಂದಕುಮಾರ್ ಅವರ ಮತ್ತೊಬ್ಬ ಪುತ್ರ ಕಿರಣ್ ಕುಮಾರ್. ನಿರ್ಮಾಣದ ಜವಾಬ್ದಾರಿಯನ್ನು ಲಕ್ಷ್ಮಿ ನಂದಕುಮಾರ್ ವಹಿಸಿಕೊಂಡಿದ್ದಾರೆ. ಸಿನಿಮಾ ಪತ್ರಿಕೋದ್ಯಮದಲ್ಲಿ ಸಾಕಷ್ಟು ವರ್ಷಗಳಿಂದ ತೊಡಗಿಸಿಕೊಂಡಿರುವ ಈ ದಂಪತಿ ತಮ್ಮ ಮಕ್ಕಳ ಮೂಲಕ ಮತ್ತೊಮ್ಮೆ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇದೊಂದು ರೀತಿಯಲ್ಲಿ ಫ್ಯಾಮಿಲಿ ಪ್ಯಾಕೇಜ್ ಚಿತ್ರ ಎನ್ನಬಹುದು. ಎರಡನೇ ಇನ್ನಿಂಗ್ಸ್ನಲ್ಲಿ ನಂದಕುಮಾರ್ ದಂಪತಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದು, ತಮ್ಮ ಚಿತ್ರದಲ್ಲಿ ಭಾರತಿ ವಿಷ್ಣುವರ್ಧನ್ ಅಭಿನಯಿಸುವುದಕ್ಕೆ ಒಪ್ಪಿಕೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸುತ್ತಾರೆ. ಈಗಾಗಲೇ ಅರ್ಧ ಚಿತ್ರೀಕರಣ ಮುಗಿಸಿರುವ 'ಯುವ ಸಾಮ್ರಾಟ್' ಚಿತ್ರದಲ್ಲಿ ಭಾರತಿ ವಿಷ್ಣುವರ್ಧನ್ ಅವರು ಯಾವ ರೀತಿಯ ಪಾತ್ರ ಮಾಡಲಿದ್ದಾರೆ ಎಂಬುದನ್ನು ಸದ್ಯಕ್ಕೆ ಗಟ್ಟಾಗಿ ಇಡಲಾಗಿದೆ.
ಆದರೆ, ಹೆಚ್ಚು ಕಮ್ಮಿ ಬಣ್ಣದ ಲೋಕದಿಂದ ಮರೆಯಾದಂತೆ ಕಂಡ ಭಾರತಿ ವಿಷ್ಣುವರ್ಧನ್ ತುಂಬಾ ದಿನಗಳ ನಂತರ ಮತ್ತೆ ನಟಿಸಲು ಮುಂದೆ ಬಂದಿರುವುದೇ 'ಯುವ ಸಾಮ್ರಾಟ್' ಚಿತ್ರದ ವಿಶೇಷತೆ. 'ಕ್ರೇಜಿ ಲೋಕ' ಚಿತ್ರದ ನಂತರ ಯಾವುದೇ ಚಿತ್ರದಲ್ಲಿ ಭಾರತಿ ವಿಷ್ಣುವರ್ಧನ್ ಅವರು ನಟಿಸಿಲ್ಲ. 'ಕಥೆ ಬರೆಯುವಾಗಲೇ ಭಾರತಿ ಅಮ್ಮನವರಿಗಂತಲೇ ಒಂದು ಪಾತ್ರವನ್ನು ಸೃಷ್ಟಿ ಮಾಡಲಾಗಿತ್ತು. ಆ ಪಾತ್ರವನ್ನು ಅವರ ಹೊರತಾಗಿ ಬೇರೊಬ್ಬರು ಮಾಡಲಾಗದು. ಹೀಗಾಗಿ ಅವರ ಮನೆಗೆ ತೆರಳಿ ಕಥೆ ಪೂರ್ತಿ ಹೇಳಿದ ಮೇಲೆ ಮೆಚ್ಚಿಕೊಂಡು ನಮ್ಮ ಚಿತ್ರದಲ್ಲಿ ಅಭಿನಯಿಸಲು ಒಪ್ಪಿಕೊಂಡಿದ್ದಾರೆ' ಎನ್ನುತ್ತಾರೆ ಯುವ ನಿರ್ದೇಶಕ ಯಶವಂತ್ಕುಮಾರ್.
ಇನ್ನು ಚಿತ್ರದ ನಾಯಕಿ ವಿಚಾರಕ್ಕೆ ಬರುವುದಾದರೆ ಈಕೆ ಉಕ್ರೇನ್ ದೇಶದ ಬೆಡಗಿ. ಸಿಲಿಕಾನ್ ಸಿಟಿಯ ಮಾಡೆಲ್ ಜಗತ್ತಿನಲ್ಲಿ ಮಿಂಚುತ್ತಿದ್ದ ಸ್ನಿಝಾಳಿಗೆ ನಂದುಕುಮಾರ್ ಕುಟುಂಬದ ಚಿತ್ರದಲ್ಲಿ ನಾಯಕಿಯಾಗುವ ಅವಕಾಶ ಸಿಕ್ಕಿದೆ.
-ಕೇಶು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


