

ಪ್ರೇಮಿಗಳಿಗೆ 'ಎಲ್ಲಾ ಅಯೋವುಯ' ಅನಿಸುವುದು ಹೊಸದಲ್ಲ. ಇದು ಪ್ರೇಮಿಗಳಿಗೆ ಮತ್ತು ಸ್ಕಿಝೋಫ್ರೇನಿಕ್ ರೋಗಿಗಳಿಗೆ ಮಾತ್ರ ಲಭ್ಯವಿರುವ ವಿಶೇಷ ಮನಸ್ಥಿತಿ. ಉತ್ಕಟಾವಸ್ಥೆಯಲ್ಲಿದ್ದಾಗ ಅವನೇ ತಾನೋ, ತಾನೇ ಅವನೋ ಎಂದೆಲ್ಲ ಅನಿಸುತ್ತದೆ. ಜಯದೇವನ 'ಗೀತಗೋವಿಂದ'ದ ಸೊಗಸಾದ ಪದ್ಯವೊಂದರಲ್ಲಿ ಇದು ಅಭಿವ್ಯಕ್ತವಾಗಿದೆ.
ಪ್ರಾತರ್ನೀಲನಿಚೋಲಮಚ್ಯುತಮುರಃ ಸಂವೀತಪೀತಾಂಬರಂ
ರಾಧಾಯಾಶ್ಚಕಿತಂ ವಿಲೋಕ್ಯ ಹಸತಿ ಸ್ವೈರಂ ಸಖೀಮಂಡಲೇ
ವ್ರೀಡಾಚಂಚಲಮಂಚಲಂ ನಯನಯೋರಾಧಾಯ ರಾಧಾನನೇ
ಸ್ವಾದುಸ್ಮೇರಮುಖೋಯಮಸ್ತು ಜಗದಾನಂದಾಯ ನಂದಾತ್ಮಜಃ
ರಾಧೆ- ಕೃಷ್ಣರು ಒಂದಾಗಿ ಸುರತ ಸುಖವೆಂಬ ಕಡಲನ್ನು ಮೊಗೆಮೊಗೆದು ಕುಡಿದಿದ್ದಾರೆ. ರಾತ್ರಿ ಕಳೆದು ಬೆಳಗಾಗಿದೆ. ಹಾಗೇ ಕೈಗೆ ಸಿಕ್ಕಿದ ದುಕೂಲವನ್ನುಟ್ಟುಕೊಂಡು ಪವಡಿಸಿ ನಿದ್ದೆ ಹೋಗಿದ್ದಾರೆ. ಬೆಳಗ್ಗೆದ್ದು ನೋಡಿದರೆ, ರಾಧೆಯ ನೀಲಿ ಸೀರೆಯನ್ನು ಕೃಷ್ಣ ಉಟ್ಟುಕೊಂಡಿದ್ದಾನೆ. ಕೃಷ್ಣನ ಪೀತಾಂಬರವನ್ನು ರಾಧೆ ಧರಿಸಿದ್ದಾಳೆ. ಇವರ ಅವಸ್ಥೆಯನ್ನು ನೋಡಿ ಸಖಿಯರು ನಕ್ಕುಬಿಟ್ಟಿದ್ದಾರೆ. ರಾಧಿಕೆಯ ಮುಖ ನಾಚಿಕೆಯಿಂದ ಕೆಂಪಾಗಿ ಹೋಗಿದೆ. ಕೃಷ್ಣನ ಮುಖ ಲಜ್ಜೆಯಿಂದ ಬೆವರಿದೆ. ಇಂಥ ನೀಲಮೇಘಶ್ಯಾಮ ನಮಗೆ ಸುಖ ಕೊಡಲಿ.
ಇದರಿಂದ ಕಲಿಯಬೇಕಾದ ಪಾಠ: ಅಂತಃಪುರದಲ್ಲಿ ಸಂಪೂರ್ಣ ಕತ್ತಲಿಗಿಂತ ಮಂದವಾದ ಬೆಳಕಿರುವುದೇ ವಾಸಿ. ರತಿಗೆ ಸೊಗಸಿರುತ್ತದೆ, ಪೇಚು ತಪ್ಪುತ್ತದೆ.ಟಿ
-ಹರಿಹರ