ಕಾಸು ಮರಿ

ನಮ್ಮಪ್ಪನ ಕಾಲದಲ್ಲಿ ನೂರು ರೂಪಾಯಿಗೆ 15 ದಿನ ಸಂಸಾರ ನಡೆಸಬಹುದಿತ್ತು. ಆದರೆ ಈಗ, 1000 ರು...
ಕಾಸು ಮರಿ
Updated on: 

ನಮ್ಮಪ್ಪನ ಕಾಲದಲ್ಲಿ ನೂರು ರೂಪಾಯಿಗೆ 15 ದಿನ ಸಂಸಾರ ನಡೆಸಬಹುದಿತ್ತು. ಆದರೆ ಈಗ, 1000 ರು. ಇದ್ದರೂ ಸಾಲದು ಎಂದು ನಮ್ಮಪ್ಪ ಹೇಳುವುದನ್ನು ಆಗಾಗ ಕೇಳುತ್ತಲೇ ಇರುತ್ತೇವೆ. ನಮ್ಮಪ್ಪನಿಗೆ ಅವರಪ್ಪ 10 ರೂಪಾಯಿಯಲ್ಲಿ 15 ದಿನ ಸಂಸಾರ ದೂಡಬಹುದಿತ್ತು ಎಂದು ಹೇಳಿರುತ್ತಾರೆ. ಹಾಗಾದರೆ ಪ್ರತಿ ಹತ್ತಿಪ್ಪತ್ತು ವರ್ಷಕ್ಕೊಮ್ಮೆ ಹಣದ ಮೌಲ್ಯ ಬದಲಾಗುತ್ತಾ ಸಾಗುತ್ತದೆಯೇ? ಈ ಬದಲಾವಣೆ ಇಷ್ಟೊಂದು ಅಗಾಧ ಪ್ರಮಾಣದಲ್ಲಿರುತ್ತದೆಯೇ? ಹಣದ ಮೌಲ್ಯದಲ್ಲಿ ಇಷ್ಟೊಂದು ತಾರುಮಾರಾಗಲು ಕಾರಣವೇನು?
ಇದಕ್ಕೆ ಪ್ರಮುಖ ಕಾರಣ ಹಣದುಬ್ಬರ ಎಂದು ತಜ್ಞರು ಹೇಳುತ್ತಾರೆ. ಜತೆಗೆ ಇನ್ನೊಂದಷ್ಟು ಅಂಶಗಳು ಸಹಾ ಇದಕ್ಕೆ ಕಾರಣವಾಗುತ್ತದೆ.
ಒಂದು ಉದಾಹರಣೆಯನ್ನು ಗಮನಿಸೋಣ. ರಂಗಸ್ವಾಮಿ ಕಾರು ಕೊಳ್ಳಲು ನಿರ್ಧರಿಸಿದರು. ಕಾರಿನ ಬೆಲೆ ಸುಮಾರು 4.30 ಲಕ್ಷ ರೂ. ಇತ್ತು. ಆದರೆ ಕೆಲವು ಅನಿವಾರ್ಯ ಕಾರಣಗಳಿಂದ ಕಾರು ಖರೀದಿ ಮುಂದೂಡಿದರು. ಆ ದುಡ್ಡನ್ನು ಬ್ಯಾಂಕ್‌ನಲ್ಲಿ ಠೇವಣಿ ಇಟ್ಟರು. ಒಂದು ವರ್ಷದ ನಂತರ ರಂಗಸ್ವಾಮಿ
ಬ್ಯಾಂಕ್‌ನಲ್ಲಿಟ್ಟ ಹಣ ವಾಪಸ್ ಪಡೆದು ಕಾರು ಖರೀದಿಗೆ ತೆರಳಿದರು. ಬ್ಯಾಂಕ್ ಶೇ. 9.5ರ ಬಡ್ಡಿ ಪಾವತಿಸಿತ್ತು.
ಇವರ ಕೈಗೆ ಸುಮಾರು 43,000 ರೂ. ಹೆಚ್ಚು ಬಂದಿತ್ತು. ಆದರೆ ಕಾರಿನ ಬೆಲೆ, ಕಳೆದ ವರ್ಷಕ್ಕಿಂತ 70 ಸಾವಿರ ಹೆಚ್ಚಾಗಿತ್ತು. ಅಂದರೆ ಸುಮಾರು ಶೇ. 15ರಷ್ಟು ಏರಿಕೆ ಆಗಿತ್ತು. ಶೇ. 9.5ರ ಬಡ್ಡಿದರದ ಮೊತ್ತ, ತೆರಿಗೆ ಕಡಿತದ ನಂತರ ಶೇ. 6.50ರಷ್ಟೇ ಗಳಿಕೆ ನೀಡಿತ್ತು. ಕಳೆದ ವರ್ಷ ಸುಲಭವಾಗಿ ಕೈಗೆಟುಕುತ್ತಿದ್ದ ವಸ್ತು ಇದೀಗ ಕೈಗೆಟುಕದ ಸ್ಥಿತಿ ತಲುಪಿತ್ತು.
ಇದಕ್ಕೆ ಕಾರಣ, ಹಣದುಬ್ಬರ. ಹಣದುಬ್ಬರ ಎಂಬುದು ಕ್ರಮೇಣ ನಿಮ್ಮ ಹಣದ ಖರೀದಿ ಸಾಮರ್ಥ್ಯವನ್ನು ಕಬಳಿಸುತ್ತಾ ಸಾಗುತ್ತದೆ. ಅಷ್ಟೇ ಅಲ್ಲ, ಪ್ರತಿ ವರ್ಷ, ನಿಮ್ಮನ್ನು ಬಡವರನ್ನಾಗಿಸುತ್ತಾ ಹೋಗುತ್ತದೆ.
ಕಾಲ ಬದಲಾಗಿದೆ. ಈ ಹಿಂದೆ ಹೂಡಿಕೆಗೆ ಇದ್ದ ಅವಕಾಶಗಳು ಸೀಮಿತವಾಗಿದ್ದವು. ಬ್ಯಾಂಕುಗಳ ಠೇವಣಿ ಜತೆಗೆ ಇದೀಗ ಮ್ಯೂಚುವಲ್ ಫಂಡ್, ಜೀವವಿಮೆ, ಷೇರುಗಳು, ನಿಶ್ಚಿತಾವಧಿಯ ಠೇವಣಿಗಳು, ಬಾಂಡ್ ಇತ್ಯಾದಿ ಅವಕಾಶಗಳು ಈಗ ಲಭ್ಯವಿದೆ. ನಮ್ಮ ಆಯಸ್ಸಿನ ಪ್ರಮಾಣವೂ ಹೆಚ್ಚಾಗುತ್ತಾ ಸಾಗಿದೆ. ಪ್ರತಿ ಮೂರು ವರ್ಷಕ್ಕೆ ಒಂದರಂತೆ ನಮ್ಮ ಆಯಸ್ಸು ಹೆಚ್ಚಾಗುತ್ತಿದೆ ಎಂದು ತಜ್ಞರು ಹೇಳುತ್ತಾರೆ. ನಾವೀಗ ಬದುಕುತ್ತಿರುವುದು, ವಾರ್ಷಿಕ ಶೇ. 8ರಿಂದ ಶೇ.10ರವರೆಗೆ ಹಣದುಬ್ಬರದ ದರ ಹೆಚ್ಚಾಗುತ್ತಾ ಸಾಗಿರುವ ಕಾಲದಲ್ಲಿ. 30 ವರ್ಷಗಳ ಹಿಂದಿನ 100 ರೂ. ಈಗಿನ 14 ರು.ಗಳ ದಿನಸಿಯನ್ನು ನಿಮಗೆ ಒದಗಿಸುತ್ತದೆ. ಜತೆಗೆ, ಇದು ಸಾಲದು ಎಂಬಂತೆ ಬಹಳಷ್ಟು ಮಂದಿ ಬೇಗ ನಿವೃತ್ತಿ ಹೊಂದಲು ಬಯಸುತ್ತಿದ್ದಾರೆ. ಕಡಿಮೆ ಅವಧಿಯ ಉದ್ಯೋಗ ಜೀವನ ಮತ್ತು ದೀರ್ಘಾವಧಿಯ ಜೀವನಾವಧಿ ಎಂಬುದು 15-25 ವರ್ಷಗಳ ಗಳಿಕೆ ಅವಧಿ ಮತ್ತು ನಿವೃತ್ತಿ ನಂತರದ ಬದುಕಿನ ಅವಧಿಯನ್ನು 35-40 ವರ್ಷಕ್ಕೇರಿಸಿದೆ. ನಿಮ್ಮ ಸುದೀರ್ಘ ಅವಧಿಯ ಬದುಕಿನಲ್ಲಿ ನಿಮ್ಮ ಆದಾಯ ಸಹಾ ಅದೇ ವೇಗದಲ್ಲಿ ಬೆಳೆಯುವಂತೆ ಮಾಡಬೇಕಾದ್ದು ಅತ್ಯಗತ್ಯವಾಗಿಬಿಟ್ಟಿದೆ.
ಇಲ್ಲಿ ನಿಮ್ಮ ನೆರವಿಗೆ ಬರುವುದು ಯೋಜನಾಬದ್ಧ ಆರ್ಥಿಕ ಪ್ರಣಾಳಿಕೆ. ಏನಿದು ಯೋಜನಾಬದ್ಧ ಆರ್ಥಿಕ ಪ್ರಣಾಳಿಕೆ? ತೆರಿಗೆ ಪಾವತಿ ನಂತರ, ನಿಮ್ಮ ಒಟ್ಟು ಗಳಿಕೆಯನ್ನೆಲ್ಲ ಒಗ್ಗೂಡಿಸಿ ಪ್ರತಿ ವರ್ಷ ಹಣದುಬ್ಬರದಿಂದ ಪಾರು ಮಾಡುವಂತೆ ಮಾಡುವ ಕ್ರಮ ಇದಾಗಿದೆ. ಇದಕ್ಕೆ ಸ್ವಲ್ಪ ಮಟ್ಟಿನ ಚಾತುರ್ಯ ಅಗತ್ಯ. ಇದರಲ್ಲಿ ವಾಸ್ತವ ಆದಾಯದ ಬಗ್ಗೆ ಹೆಚ್ಚು ಗಮನ ಹರಿಸಲಾಗುತ್ತದೆ. ಇಲ್ಲಿ ವಾಸ್ತವ ಆದಾಯ ಎಂದರೆ ಹಣದುಬ್ಬರವನ್ನು ಕಳೆದ ನಂತರ ಉಳಿಯುವ ಆದಾಯ. ಕಾಲ್ಪನಿಕ ಆದಾಯಕ್ಕಿಂತಲೂ ವಾಸ್ತವ ಆದಾಯ ಬಹಳ ಮುಖ್ಯ. ಮಕ್ಕಳ ಕಾಲೇಜು ವಿದ್ಯಾಭ್ಯಾಸ, ಮಗಳ ಮದುವೆ, ನಿವೃತ್ತಿ ನಂತರದ ಜೀವನ ಮುಂತಾದ ದೀರ್ಘಾವಧಿ ಗುರಿಗಳ ಈಡೇರಿಕೆಯ ನಿಟ್ಟಿನಲ್ಲಿ ವಾಸ್ತವ ಆದಾಯ, ಸಕಾರಾತ್ಮಕ ಮತ್ತು ಆರೋಗ್ಯಕರ ಆದಾಯದ ಕಡೆಗೆ ಲಕ್ಷ್ಯ ಕೇಂದ್ರೀಕರಿಸಬೇಕಾದ್ದು ಅವಶ್ಯ. ಇದು, ಸಾಧ್ಯವಾದಷ್ಟೂ ಮಧ್ಯದಲ್ಲೇ ಹಣಕಾಸಿನ ಕೊರತೆ ಉಂಟಾಗುವುದನ್ನು ತಡೆಯುತ್ತದೆ.
ಹಾಗೆ ನೋಡಿದರೆ, ರೂಢಿಯಲ್ಲಿರುವ ನಿಶ್ಚಿತಾವಧಿ ಠೇವಣಿಗಳು ಹಣದುಬ್ಬರದ ಏಟಿನಿಂದ ನಿಮ್ಮನ್ನು ಪಾರು ಮಾಡುವ ಸಾಮರ್ಥ್ಯ ಪಡೆದಿಲ್ಲ ಎಂದೇ ಹೇಳಬೇಕು. ಸಾಮಾನ್ಯವಾಗಿ ಇಂತಹ ಉಳಿತಾಯಗಳ ವಾಸ್ತವಿಕ ಆದಾಯ ನಕಾರಾತ್ಮಕವಾಗಿರುತ್ತದೆ. ಹೆಚ್ಚು ಆದಾಯ ತಂದುಕೊಡುವ ಮತ್ತಷ್ಟು ಆರ್ಥಿಕ ಸದುಪಾಯಗಳೂ ಇವೆ. ನಿಶ್ಚಿತಾವಧಿಯ ಠೇವಣಿ ಯೋಜನೆಗಳು, ನಿಶ್ಚಿತಾವಧಿ ಠೇವಣಿಗಿಂತ ಹೆಚ್ಚಿನ ಆದಾಯ ನೀಡುವ ಮ್ಯೂಚುವಲ್ ಫಂಡ್‌ಗಳು, ತೆರಿಗೆಯನ್ನು ಸರಿಹೊಂದಿಸಿಕೊಳ್ಳುವ ಆದಾಯ ತಂದು ಕೊಡುವ ಯೋಜನೆಗಳೂ ಇವೆ. ಇಲ್ಲಿ ಒಂದು ವರ್ಷಕ್ಕೂ ಮೇಲ್ಪಟ್ಟು ಠೇವಣಿ ಇಟ್ಟರೆ ಇದರ ಲಾಭ ಪಡೆಯಬಹುದಾಗಿದೆ. ಈಕ್ವಿಟಿ ಮತ್ತು ಈಕ್ವಿಟಿ ಮ್ಯೂಚುವಲ್ ಫಂಡ್‌ಗಳು ಒಂದು ವರ್ಷದ ನಂತರ ತೆರಿಗೆ ಮುಕ್ತವಾಗಿದ್ದು, ದೀರ್ಘಾವಧಿಯಲ್ಲಿ ಹಣದುಬ್ಬರದ ಹೊಡೆತ ತಾಳಿಕೊಳ್ಳುವಲ್ಲಿ ಪರಿಣಾಮಕಾರಿ.
ಈಕ್ವಿಟಿ ಮತ್ತು ಬಾಂಡ್‌ಗಳ ನಡುವೆ ನಿಮ್ಮ ಹಣಕಾಸಿನ ಸೂಕ್ತ ವಿಭಜನೆ, ಹಣದುಬ್ಬರದ ಹೊಡೆತದಿಂದ ಪಾರಾಗಲು ಇರುವ ಸುಲಭ ವಿಧಾನ. ಉದಾಹರಣೆಗೆ ನಿಮ್ಮ ವಯಸ್ಸು 35 ಇದ್ದರೆ ಶೇ. 35ನ್ನು ಬಾಂಡ್‌ಗಳು ಹಾಗೂ ಉಳಿದ ಮೊತ್ತವನ್ನು ಈಕ್ವಿಟಿಯಲ್ಲಿ ಹೂಡುವುದು ಉತ್ತಮ. ಬಾಂಡ್‌ಗಳು ನಿಮ್ಮ ಹಣಕಾಸಿಗೆ ಸುರಕ್ಷತೆಯನ್ನು ಒದಗಿಸುತ್ತವೆ. ಆದರೆ, ಆದಾಯದ ಜತೆಗೆ ತೆರಿಗೆಯ ಲಾಭವನ್ನೂ ತರಬಲ್ಲ ಬಾಂಡ್‌ಗಳನ್ನು ಆರಿಸಿಕೊಳ್ಳಬೇಕಾದ್ದು ಅವಶ್ಯ. ಈಕ್ವಿಟಿ ಎಂಬುದು ಅಧಿಕ ಏರುಪೇರುಗಳನ್ನು ಒಳಗೊಂಡಿರುತ್ತದೆ.
ಆದರೆ ದೀರ್ಘಾವಧಿಯಲ್ಲಿ ಹಣದುಬ್ಬರದ ಹೊಡೆತವನ್ನು ನಿವಾರಿಸುತ್ತದೆ. ಈಕ್ವಿಟಿಯಲ್ಲಿ ಹೂಡಿಕೆ ಮಾಡಬೇಕಾದರೆ, ಮ್ಯೂಚುವಲ್ ಫಂಡ್‌ಗಳು ಲಾಭಗಳಿಕೆಯ ಜತೆಜತೆಗೆ ವಿಭಿನ್ನತೆಯ ಆಯ್ಕೆಗಳನ್ನೂ ಹೆಚ್ಚು ಪ್ರಮಾಣದಲ್ಲಿ ಒದಗಿಸುತ್ತವೆ.
ಆರ್ಥಿಕ ಯೋಜನಾ ತಜ್ಞರು ನಿಮಗೆ ಈ ವಿಷಯದಲ್ಲಿ ನೆರವಾಗಬಲ್ಲರು. ಗ್ರಾಹಕರ ಅಗತ್ಯಗಳನ್ನು ಮನಗಂಡು, ಪ್ರತಿ ಗ್ರಾಹಕನಿಗೆ ಅವರವರ ಅಗತ್ಯಕ್ಕೆ ಹೊಂದಾಣಿಕೆಯಾಗುವ ಪರಿಹಾರ ಸೂತ್ರಗಳನ್ನು ರೂಪಿಸಿ ಕೊಡುವಲ್ಲಿ ಇವರು ನೆರವಾಗುತ್ತಾರೆ. ನಿಮ್ಮ ಹಣವನ್ನು ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ ವಿಭಜಿಸಿ, ನಿಮಗೆ ಲಾಭ ತಂದುಕೊಡುವಲ್ಲಿ ಸಹಾಯ ಮಾಡುತ್ತಾರೆ. ಬದಲಾಗುತ್ತಿರುವ ಕಾಲದಲ್ಲಿ ಆರ್ಥಿಕ ಏರುಪೇರುಗಳ ಆಘಾತಗಳಿಂದ ಪಾರು ಮಾಡುವಲ್ಲಿ ಸಹಾಯಹಸ್ತ ಚಾಚುತ್ತಾರೆ. ಹಣ ಬೆಳೆಯುವುದರ ಜತೆಗೆ ಅದರ ಸುರಕ್ಷತೆಗೂ ಸಲಹೆ ನೀಡುತ್ತಾರೆ. ಹೀಗಾಗಿ ಪ್ರತಿಯೊಬ್ಬನೂ ಇಂದು ಹಣಕಾಸು ತಜ್ಞರ ಸಲಹೆ ಪಡೆಯುವುದು ಅಗತ್ಯ. <


ಹಣದುಬ್ಬರಕ್ಕೆ ಕಡಿವಾಣ


- ಈಕ್ವಿಟಿ, ಈಕ್ವಿಟಿ ಮ್ಯೂಚುವಲ್ ನಿಧಿಗಳಲ್ಲಿ ತೊಡಗಿಸಿ. ಇದಕ್ಕೆ ಒಂದು ವರ್ಷದ ಬಳಿಕ ತೆರಿಗೆ ಇರುವುದಿಲ್ಲ. ಡಿವಿಡೆಂಡ್‌ಗಳು ಕರಮುಕ್ತ.

- ಡೆಬಿಟ್ ಮ್ಯೂಚುವಲ್ ಫಂಡ್‌ಗಳಲ್ಲಿ ದೀರ್ಘಕಾಲಿಕ ಹೂಡಿಕೆ ಮಾಡಿದಷ್ಟೂ ತೆರಿಗೆ ವಿನಾಯಿತಿಸಿಗುತ್ತದೆ.

- ಪಿಪಿಎಫ್ (ಸಾರ್ವಜನಿಕ ಪಿಂಚಣಿ ನಿಧಿ)ಯಲ್ಲಿ ತೊಡಗಿಸಿ, ಪ್ರತಿವರ್ಷ ಅದಕ್ಕೆ ಹೂಡಿ. ಇದಕ್ಕೆ ಯಾವುದೇ ತೆರಿಗೆ ಇಲ್ಲ.

- ಅಲ್ಪಕಾಲಿಕ ಬಳಕೆಗೆ ಮನಿ ಮಾರ್ಕೆಟ್ ಫಂಡ್ ತೆರೆಯಿರಿ. ಇದಕ್ಕೆ ಸೇವಿಂಗ್ಸ್ ಖಾತೆಗಿಂತ ಹೆಚ್ಚು ಬಡ್ಡಿಯಿದೆ.

- ರಜಾ ಪ್ರವಾಸ, ಶಾಲಾ ಫೀಸ್, ವಿಮೆ ಕಂತು ಮುಂತಾದ ವಾರ್ಷಿಕ ಖರ್ಚುಗಳಿಗೆ ಡೆಬಿಟ್ ಫಂಡ್ ತೆರೆದು ಅದರಲ್ಲಿ ಆಗಾಗ ಕೂಡಿಡುವುದು ಸೇವಿಂಗ್ಸ್ ಖಾತೆಗಿಂತ ಉತ್ತಮ.

- ನಿಗದಿತ ಏರಿಕೆ ಸೂಚಿಸುವ, ರಿಸ್ಕ್ ರಹಿತ ಬಾಂಡ್‌ಗಳಲ್ಲಿ ಹಣ ತೊಡಗಿಸಬಹುದು.

- ಚಿನ್ನ ಮತ್ತು ರಿಯಲ್ ಎಸ್ಟೇಟ್‌ನಲ್ಲಿ ತೊಡಗಿಸುವುದು ಒಳ್ಳೆಯದೇ. ಆದರೆ ರಿಯಲ್ ಎಸ್ಟೇಟ್ ನಿಮ್ಮ ಸಂಪೂರ್ಣ ಆಸ್ತಿಯ 60 ಶೇ.ಕ್ಕಿಂತ ಹೆಚ್ಚಿರಬಾರದು.

- ಪ್ರೇಮರಾಜ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com