ಹಳೆ ಪಾತ್ರೆ ಹಳೆ ಕಬ್ಬಿಣ ಹೊಸಾ ಸಮಸ್ಯೆ

ಚಿಂದಿಯ ರಾಶಿಯಲ್ಲಿ ಕುಳಿತ ಬಾಲಕ, ಬೇಲಿಯ ಹಿಂದೆ ಹರಿದ ಬಟ್ಟೆಯಲ್ಲಿ ನಗುವ ಮಗು, ಮುರಿದ ...
ಹಳೆ ಪಾತ್ರೆ ಹಳೆ ಕಬ್ಬಿಣ ಹೊಸಾ ಸಮಸ್ಯೆ
Updated on: 

ಚಿಂದಿಯ ರಾಶಿಯಲ್ಲಿ ಕುಳಿತ ಬಾಲಕ, ಬೇಲಿಯ ಹಿಂದೆ ಹರಿದ ಬಟ್ಟೆಯಲ್ಲಿ ನಗುವ ಮಗು, ಮುರಿದ ಜೋಪಡಿಯಲ್ಲಿ ಅಡುಗೆ ಮಾಡುವ ಮಹಿಳೆ, ಕಸ ಆಯುವುದನ್ನೇ ವೃತ್ತಿ ಮಾಡಿಕೊಂಡಿರುವ ಯುವಕರು, ಮುಂದೇನು ಎಂದು ಪ್ರಶ್ನಾರ್ಥಕವಾಗಿ ಕುಳಿತ ವೃದ್ಧ.
ಈ ದೃಶ್ಯಗಳನ್ನು ನೋಡಿದ ಕೂಡಲೇ ನಿಮಗೆ ಅಯ್ಯೋ ಪಾಪ ಎನಿಸಬಹುದು. ಅದರೆ ಈ ದೃಶ್ಯಗಳ ಹಿಂದಿರುವ ಸತ್ಯವೇ ಬೇರೆ. ಬಹುಶಃ ಆ ಸತ್ಯ ತಿಳಿದ ಮೇಲೆ ನೀವು ಸಹ ಗಾಬರಿಯಾಗಬಹುದು. ಏಕೆಂದರೆ ಮೇಲಿನ ದೃಶ್ಯಗಳಲ್ಲಿದ್ದವರು ಭಾರತೀಯರಲ್ಲ. ಬಾಂಗ್ಲಾದೇಶದಿಂದ ಅಕ್ರಮವಾಗಿ ಭಾರತಕ್ಕೆ ವಲಸೆ ಬಂದಿರುವವರು.
ಈ ರೀತಿ ಭಾರತಕ್ಕೆ ಬಂದವರು ಒಬ್ಬರು ಇಬ್ಬರಲ್ಲ, ಬರೋಬ್ಬರಿ 28000 ಸಾವಿರ ಜನ. ಇಲ್ಲಿರುವ ಜನರಲ್ಲಿ ಅನೇಕರ ಬಳಿ ಭಾರತದ ಗುರುತಿನ ಚೀಟಿ, ಆಧಾರ್ ಸಂಖ್ಯೆಯಿದೆ. ನಾವು ದೂರದ ಆಸ್ಸಾಂನಲ್ಲೆಲ್ಲೋ ಈ ರೀತಿ ವಲಸೆ ಬಂದವರಿಗೆ ಗುರುತಿನ ಚೀಟಿ ಮಾಡಿಸುವ ಜಾಲಗಳಿವೆ ಎಂದು ಕೇಳಿದ್ದೆವು. ಆದರೆ ಇದು ಬೆಂಗಳೂರಿನಲ್ಲೇ ಇದೆ.
ಎಲ್ಲ ಕೊಳಗೇರಿಗಳಂತೆ ಬೆಂಗಳೂರಿನ ಮಾರತ್ತಹಳ್ಳಿ, ಜಕ್ಕಸಂದ್ರದ ಕೊಳಗೇರಿಗಳಲ್ಲ. ಅವು ಬಾಂಗ್ಲಾದೇಶಿಗರ ವಾಸಸ್ಥಳ. ಈ ಕೊಳಗೇರಿಯ ಜನರ ಬದುಕನ್ನು ಚಿತ್ರದಲ್ಲಿ ಸೆರೆಹಿಡಿದವರು ಛಾಯಾಗ್ರಾಹಕ ಸುಧೀರ್ ಶೆಟ್ಟಿ. ಕೇವಲ ಕಣ್ಣಿಗೆ ಕಾಣುವ ದೃಶ್ಯಗಳಷ್ಟೇ ಅಲ್ಲದೆ ಅವುಗಳ ಹಿಂದಿನ ಸತ್ಯವನ್ನೂ ಜನರಿಗೆ ತಿಳಿಸಲು ಅವರು ಹೊರಟಿದ್ದಾರೆ. ಕೊಳಗೇರಿಯ ಜನ ಈಗಲೂ ಬಾಂಗ್ಲಾ ದೇಶದೊಂದಿಗೆ ಸಂಪರ್ಕದಲ್ಲಿದ್ದಾರೆ. ಮೇಲ್ನೋಟಕ್ಕೆ ಕೊಳಗೇರಿಯಂತೆ ಕಾಣುವ ಈ ಪ್ರದೇಶ ಆಂತರಿಕ ವೈರಿಗಳ ತಯಾರಿಕಾ ತಾಣವಾಗಬಹುದು. ಅಕ್ರಮವಾಗಿ ಭಾರತಕ್ಕೆ ನುಗ್ಗಿರುವ ಇವರು ಭವಿಷ್ಯದಲ್ಲಿ ಎಂತಹ ಅಪಾಯವನ್ನೂ ಸೃಷ್ಟಿಸಬಹುದು ಎಂದು ಸುಧೀರ್ ಶೆಟ್ಟಿ ಆತಂಕ ವ್ಯಕ್ತಪಡಿಸುತ್ತಾರೆ.
ಸರ್ಕಾರ ಕೊಳಚೆ ಪ್ರದೇಶದ ನಿವಾಸಿಗಳಿಗೆ ಮನೆ ಕೊಡಿಸುವ ಯೋಜನೆಯಲ್ಲಿದೆ. ಇಲ್ಲಿನ ಕೆಲವು ಮಕ್ಕಳು ಈಗಾಗಲೇ ಸರ್ಕಾರಿ ಶಾಲೆಗಳಿಗೆ ದಾಖಲಾಗಿದ್ದಾರೆ. ಹೀಗೇ ಮುಂದುವರಿದರೆ ಇವರೆಲ್ಲ ಭಾರತೀಯ ಬಾಂಗ್ಲಾರೆಂದು ಗುರುತಿಸಿಕೊಳ್ಳುವ ದಿನಗಳು ದೂರವಿಲ್ಲ. ಕೊಳಗೇರಿಯಲ್ಲಿರುವ ಜನರು ಭಾರತದ ನಿವಾಸಿಗಳಲ್ಲ, ಯಾವುದೇ ಸಮಯದಲ್ಲಿ ಅವರು ಬಾಂಗ್ಲಾಕ್ಕೆ ಮರಳಿ ಹೋಗಬಹುದು. ಆದರೆ ಅವರು ಭಾರತದಲ್ಲಿ ಯಾವುದೇ ದುರಂತ ಸೃಷ್ಟಿಸಿದರೆ ಅವರ ಪತ್ತೆಗೆ ಯಾವುದೇ ಆಧಾರಗಳಿಲ್ಲ ಎಂದು ಸುಧೀರ್ ವಿವರಿಸುತ್ತಾರೆ.
ಕೊಳಗೇರಿಯ ಬಗ್ಗೆ ಇಷ್ಟೆಲ್ಲ ಕೇಳಿದ ಮೇಲೆ ನಿಮಗೆ ಆ  ಛಾಯಾಚಿತ್ರಗಳು ಬೇರೆಯದೇ ರೀತಿಯಾಗಿ ಕಾಣಿಸಬಹುದು. ಆದ್ದರಿಂದಲೇ ಭವಿಷ್ಯದ ಅಪಾಯಗಳಿಗೆ ಮುನ್ಸೂಚನೆಯಾಗಿ ಸುಧೀರ್ ಶೆಟ್ಟಿ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಿದ್ದರು. ಬೆಂಗಳೂರಿನ ಎಂ.ಜಿ.ರಸ್ತೆಯ ರಂಗೋಲಿ ಮೆಟ್ರೋದಲ್ಲಿ ಆಯೋಜಿಸಿದ್ದ ಪ್ರದರ್ಶನ, ಸಾರ್ವಜನಿಕರು ಮತ್ತು ಸರ್ಕಾರಕ್ಕೆ ಜಾಗೃತಿ ಮೂಡಿಸುವ ಉದ್ದೇಶ ಹೊಂದಿತ್ತು.

- ಶಾಲಿನಿ ಬಿ. ಭಂಡಾರಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com