ಅಮೃತವಂತೆ ದೇವರ ಧ್ಯಾನ

200 ವರ್ಷಗಳಿಂದ ದೀಪವೊಂದು ಬೆಳಗುತ್ತಲೇ ಇದೆ...!ಎಲ್ಲಿ? ಇದು ಸಾಧ್ಯಾನಾ? ಎಂದು ಅಚ್ಚರಿ ಪಡುವವರು ಅದರ ನೇರದರ್ಶನ ಪಡೆಯೋಕೆ ತರೀಕೆರೆ ತಲುಪುವ ಮುನ್ನ ಒಂದು ಸಣ್ಣ ಡೀವಿಯೇಶನ್ ತೆಗೆದುಕೊಂಡು ಸುಮಾರು 3 ಕಿ.ಮೀ. ಒಳಗೆ ಸಾಗಿದರೆ ಅಲ್ಲಿ ಸಿಗುವ ಅತಿ ಸುಂದರ ದೇವಾಲಯದೊಳಗೆ ಹೊಕ್ಕರೆ ಸಾಕು. ಇದೇ ದೀಪದ ಬೆಳಕಲ್ಲಿ ಮಿಂಚುತ್ತಿರುವ ಸಾಕ್ಷಾತ್ ಅಮೃತೇಶ್ವರನ ದರ್ಶನವನ್ನೂ ಮಾಡಬಹುದು.
ಹೌದು. ಇದು ಅಮೃತಪುರ. 200 ವರ್ಷದ ಇತಿಹಾಸದ ಕಥೆಯನ್ನು ಇಲ್ಲಿನ ಪ್ರತಿ ಕಲ್ಲಿನ, ಪ್ರತಿ ಕಂಬದ ಕೆತ್ತನೆಯಲ್ಲಿ ಕಣ್ಣಾರೆ ಕಾಣಬಹುದು. ಹೊಯ್ಸಳ ರಾಜ ವಿಷ್ಣುವರ್ಧನ ಜೈನ ಧರ್ಮವನ್ನು ಪರಿಪಾಲಿಸುತ್ತಿದ್ದರೂ ಕನ್ನಡನಾಡಿನ ತುಂಬೆಲ್ಲಾ ಈಶ್ವರನ ವಿವಿಧ ರೂಪಗಳ ದೇವಾಲಯಗಳ ಕೊಡುಗೆ ನೀಡಿದ್ದಾನೆ. ವಿಶ್ವವಿಖ್ಯಾತ ಬೇಲೂರು ದೇವಾಲಯದ ಶಿಲ್ಪಕಲಾನ್ಯಾಸ ಮಾಡಿದಂತಹ ಜಕ್ಕಣಾಚಾರಿಯ ಎರಡನೇ ಶಿಷ್ಯಪರಂಪರೆಯ ಮಲ್ಲಿತಮ್ಮ ಈ ಅಮೃತೇಶ್ವರ ದೇವಾಲಯದ ಕೆತ್ತನೆ ಕೆಲಸವನ್ನು ಸುಮಾರು 42 ವರ್ಷಗಳ ಕಾಲ ಮಾಡಿದನೆಂದು ಇಲ್ಲಿನ ಕಥೆ ಹೇಳುತ್ತಿದೆ. ಅದರ ಕುರುಹಾಗಿ ದೇವಾಲಯಲ್ಲಿ 42 ಕಂಬಗಳಿರುವುದೂ ಇದೇ ಕಾರಣದಿಂದೇನೋ. ಈ ಕಂಬಗಳನ್ನು ಪಂಚಶಿಲಾನ್ಯಾಸದಲ್ಲಿ ಕೆತ್ತಿ ಗೋಪುರಗಳಿಗೆ ಜೋಡಿಸಲಾಗಿದೆ. ಈ ದೇವಾಲಯವೂ ಕೂಡಾ ಬೇಲೂರು, ಹಳೇಬೀಡು, ಬಳ್ಳಿಗಾವೆಯಲ್ಲಿರುವ ದೇವಾಲಯಗಳಂತೇ ನಕ್ಷತ್ರದ ಮಾದರಿಯಲ್ಲಿದೆ. ಅಂದರೆ ಒಟ್ಟು ಐದು ದ್ವಾರಗಳು. ಮುಖ್ಯದ್ವಾರದ ಬಲಭಾಗದಲ್ಲಿ ಭಾಗವತದ ಕಥೆಯ ಶಿಲ್ಪಕಥಾನಕವನ್ನು ಕೆತ್ತಿದ್ದರೆ, ಎಡಗಡೆ ಭಾಗದ ಶಿಲ್ಪಕಲೆಗಳು ಮಹಾಭಾರತದ ಕಥೆಯನ್ನು ಹೇಳುತ್ತವೆ. ಒಂದೊಂದು ಕೆತ್ತನೆ ಕೆಲಸವೂ ಅಪೂರ್ವ, ಅಮೋಘ. ಗೋಪುರದ ಪ್ರತಿ ಅಂಚಿನಲ್ಲೂ ಹೊಯ್ಸಳ ರಾಜ ಲಾಂಛನವಿದೆ. ಮುಖ್ಯದೇವಾಲಯದ ಗರ್ಭಗುಡಿಯಲ್ಲಿ ರಾರಾಜಿಸುತ್ತಿರುವ ಅಮೃತೇಶ್ವರ ಕೇದಾರದಿಂದ ವಿಶೇಷವಾಗಿ ತಂದಂತಹ ಸಾಲಿಗ್ರಾಮವಾಗಿದ್ದು, ಬೆಳಗಿನ ಪ್ರಥಮ ಸೂರ್ಯಕಿರಣ ನೇರವಾಗಿ ಲಿಂಗದ ಮೇಲೆ ಬೀಳುತ್ತದಂತೆ.
ಇಂತಹ ಸುಂದರ ಮೂರ್ತಿಯ ಬಲಭಾಗದಲ್ಲೇ ಈ ನಂದಾದೀಪವೂ ಪ್ರಜ್ವಲಿಸುತ್ತಾ ವಿಶೇಷ ಕಳೆಯಿತ್ತಿದೆ. ಅಮೃತೇಶ್ವರನು ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರನ ಸಮಾಗಮದ ಪ್ರತಿರೂಪ ಎಂದು ಗರ್ಭಗುಡಿಯ ಮೇಲೆ ಕೆತ್ತಲಾಗಿರುವ ಶಿಲೆಯಲ್ಲಿ ಹೇಳಲಾಗಿದೆ. ಸಾಮಾನ್ಯವಾಗಿ ಶಿವನ ಮೂರ್ತಿಯಿದ್ದಲ್ಲಿ ಅಮ್ಮನವರ ದೇವಾಲಯವೂ ಇರುವುದು ವಾಡಿಕೆ. ಇಲ್ಲಿಯೂ ಅಮ್ಮನವರಿದ್ದಾರೆ, ಆದರೆ ಪಾರ್ವತಿಯಲ್ಲ. ಶ್ರೀ ಶಾರದಾಂಬ! ಇಲ್ಲಿ ಇವಳನ್ನು 'ಅಮೃತೇಶ್ವರಿ' ಎಂದು ಕರೆಯಲಾಗುತ್ತದೆ. ವಿದ್ಯಾಧಿದೇವತೆಯಾದ ಈ ತಾಯಿಯ ದರ್ಶನಕ್ಕೆ ವಿದ್ಯಾರ್ಥಿಗಳ ದಂಡೇ ಬರುತ್ತದೆ. ಇಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದರೆ ಅತೀ ವಿದ್ಯಾವಂತರಾಗುವರೆಂಬ ನಂಬಿಕೆಯಿದೆ. ನಂಬಿ ಬಂದು ಪೂಜೆ ಮಾಡಿಸುವ ಮಕ್ಕಳ ನಾಲಿಗೆಯ ಮೇಲೆ ತಾಯಿಯ ಕುಂಕುಮದಿಂದ ಬೀಜಾಕ್ಷರವನ್ನು ಬರೆಯಲಾಗುತ್ತದೆ. ಅಮೃತೇಶ್ವರಿಯ ಅತಿ ಸುಂದರ ಪುರಾತನ ವಿಗ್ರಹವನ್ನು ಈಗ ಹದಿನೈದು ದಿನಗಳ ಹಿಂದೆಯಷ್ಟೇ ಅದರ ಮೂಲಸ್ಥಾನಕ್ಕೆ ವರ್ಗಾಯಿಸಿ ಪ್ರತಿಷ್ಠಾಪಿಸಲಾಗಿದೆ. ಈಗ ದೇವಾಲಯವು ಮುಜರಾಯಿ ಇಲಾಖೆಗೆ ಸೇರಿದ್ದು ದೇವಾಲಯದ ಶಿಲ್ಪಕಲೆಯ ಸಮಗ್ರ ಉಸ್ತುವಾರಿಯನ್ನು ಕರ್ನಾಟಕ ಪ್ರಾಚ್ಯವಸ್ತು ಸಂಶೋಧನಾ ಇಲಾಖೆ ನೋಡಿಕೊಳ್ಳುತ್ತಿದೆ. ಬೆಳಗ್ಗೆ 6 ರಿಂದ ಸಂಜೆ 6 ರವರೆಗೆ ದರ್ಶನ, ಪೂಜೆ, ಮಂಗಳಾರತಿ, ಇತ್ಯಾದಿ ಸೇವೆಗಳು ನಡೆಯುತ್ತವೆ. ಅಲ್ಲದೇ ಇಲ್ಲಿ ದಾಸೋಹವೂ ಲಭ್ಯವುಂಟು. ಬಂದವರು ಹಸಿದು ಹಿಂತಿರುಗುವಂತಿಲ್ಲ. 12 ಗಂಟೆಯ ನಂತರ ಅಚ್ಚುಕಟ್ಟಾದ ಭೋಜನ ವ್ಯವಸ್ಥೆಯಿದೆ. ಬಿಸಿಬಿಸಿ ಅನ್ನ, ಸಾಂಬಾರು, ಖೀರು, ಮಜ್ಜಿಗೆ ಬಡಿಸಲಾಗುತ್ತದೆ. ದಾನಿಗಳು ಹುಂಡಿಯಲ್ಲಿ ಕಾಣಿಕೆ ಹಾಕಬಹುದಷ್ಟೇ ಹೊರತು, ಊಟಕ್ಕೆ ದುಡ್ಡೇನೂ ಕೊಡುವಂತಿಲ್ಲ. ಬೆಂಗಳೂರಿಗರು ಆರಾಮಾಗಿ ಬೆಳಗ್ಗೆ ಹೊರಟು ತರೀಕೆರೆಗೆ ಮಧ್ಯಾಹ್ನ ತಲುಪಿ ಅಲ್ಲಿನ ಏಳುಹೆಡೆಯ ಸುಬ್ರಹ್ಮಣ್ಯದೇವರ ದರ್ಶನ ಮಾಡಿಕೊಂಡು ಅಮೃತಪುರಕ್ಕೆ ಬಂದು, ಈಶ್ವರನ, ಶಾರದಾಂಬೆಯನ್ನೂ ದರ್ಶಿಸಿ, ಇಲ್ಲಿನ ಅದ್ಭುತ ಕೆತ್ತನೆಯನ್ನು ಆಸ್ವಾದಿಸಿ, ರುಚಿಶುಚಿಯಾದ ಪ್ರಸಾದ ಸೇವಿಸಿ ಮತ್ತೆ ಸಂಜೆಯೊಳಗೆ ಹಿಂತಿರುಗಬಹುದು. ಶಿವಮೊಗ್ಗೆಯಿಂದ ಕೇವಲ 35 ಕಿಮೀ ಅಂತರದಲ್ಲಿರುವ ಅಮೃತಪುರಕ್ಕೆ ಒಮ್ಮೆ ಭೇಟಿ ಕೊಡಿ.
-ಕುಮುದವಲ್ಲಿ ಅರುಣ್ಮೂರ್ತಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


