ಬೈಟುಕಾಫಿ

ಮೆಣಸು ತಿನ್ನಿ, ಭೀತಿ ಬಿಡಿ

ಮೆಣಸು ತಿನ್ನಿ, ಭೀತಿ ಬಿಡಿ
Published On :

ಹಣ್ಣು, ತರಕಾರಿಗಳನ್ನು ಇಷ್ಟಪಡದೇ ಇರುವವರು ಬಹಳ ಕಡಿಮೆ. ಕೆಲವು ಹಣ್ಣು ಅಥವಾ ಕೆಲವು ತರಕಾರಿಗಳನ್ನು ದೂರ ಇಡಬಹುದು. ಆದರೆ 'ಹಣ್ಣನ್ನೇ ತಿನ್ನುವುದಿಲ್ಲ, ತರಕಾರಿ ಮುಟ್ಟುವುದಿಲ್ಲ' ಎನ್ನುವವರು ಕಡಿಮೆ. ಹಣ್ಣು, ತರಕಾರಿಗಳು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಎನ್ನುವುದು ಲಾಗಾಯ್ತಿನಿಂದಲೂ ನಮಗೆ ಗೊತ್ತಿರುವಂಥದ್ದೇ. ಅವುಗಳಲ್ಲಿ ವಿಟಮಿನ್ ಸಿ ಹೇರಳವಾಗಿರುತ್ತದೆ. ಈ ವಿಟಮಿನ್ ಸಿ ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿರುವವರಿಗೆ ರಾಮಬಾಣ. ಬೇಗ ಚೇತರಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ ಎನ್ನುವುದು ಜಗತ್ತಿನ ಹಲವು ಸಂಸ್ಥೆಗಳು ನಡೆಸಿದ ಡಜನ್‌ಗೂ ಅಧಿಕ ಪ್ರಯೋಗಗಳಿಂದ ಸಾಬೀತಾಗಿದೆ. ಎಲ್ಲ ವಯೋವಾನದ ಮಹಿಳೆಯರಲ್ಲೂ ವಿಟಮಿನ್ ಸಿ ಪರಿಣಾಮಕಾರಿ.
ಇನ್ನು ಚಿಕ್ಕ ವಯಸ್ಸಿನ ಸ್ತ್ರೀಯರು ವಿಟಮಿನ್ ಸಿ ಅನ್ನು ಅಧಿಕವಾಗಿ ಸೇವಿಸಿದಷ್ಟೂ ಒಳ್ಳೆಯದು. ಇದರಿಂದ ಸ್ತನ ಕ್ಯಾನ್ಸರ್ ಸಂಭವನೀಯತೆಯನ್ನು ಕಡಿಮೆ ಮಾಡಿಕೊಳ್ಳಬಹುದು ಎನ್ನುವುದು ತಜ್ಞರ ಅಭಿಪ್ರಾಯ. ನಿತ್ಯ 380 ಮಿಲಿಗ್ರಾಂ ಸೇವನೆ ಸ್ತನ ಕ್ಯಾನ್ಸರ್ ರಿಸ್ಕ್ ಅನ್ನು ಗಣನೀಯವಾಗಿ ಕಡಿಮೆ ಮಾಡಬಲ್ಲದು. ಇಷ್ಟು ಪ್ರಮಾಣದ ವಿಟಮಿನ್ ಸಿ ಅನ್ನು ಪಡೆಯುವುದು ಕಷ್ಟವೇನೂ ಅಲ್ಲ. ಮುಟ್ಟು ನಿಂತ ನಂತರ, ಅಧಿಕ ಕೊಬ್ಬಿನ ಪದಾರ್ಥಗಳನ್ನು ತಿನ್ನುವ ಅಭ್ಯಾಸ ಬೆಳೆಸಿಕೊಂಡ ಮಹಿಳೆಯರಲ್ಲೂ ವಿಟಮಿನ್ ಸಿ ಪರಿಣಾಮಕಾರಿ ಎನ್ನುವುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ (ಹಾಗಂತ ಅಧಿಕ ಕೊಬ್ಬು ಇರುವ ತಿನಿಸುಗಳನ್ನು ಬೇಕಾಬಿಟ್ಟಿ ಸೇವಿಸಬಹುದು ಅಂತಲ್ಲ!). ವಿಟಮಿನ್ 'ಸಿ'ಯಷ್ಟೇ ಶಕ್ತಿಶಾಲಿ ವಿಟಮಿನ್ ಡಿ. ಇದು ಸಾಮಾನ್ಯವಾಗಿ ಜಲಚರಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತದೆ. ಸಸ್ಯಾಹಾರಿಗಳು ಔಷಧ ರೂಪದಲ್ಲಿ ಮೀನೆಣ್ಣೆ ಬಳಸಬಹುದು. ಅದರಲ್ಲಿ ವಿಟಮಿನ್ ಡಿ ಹೇರಳವಾಗಿರುತ್ತದೆ. ವಯಸ್ಸಾದ ಮಹಿಳೆಯರ ಮೇಲೆ ವಿಟಮಿನ್ ಡಿ ಹೆಚ್ಚು ಪರಿಣಾಮ ಬೀರುತ್ತದೆ.

ಸೀಬೆಹಣ್ಣು ವಿಟಮಿನ್‌ಗಳ ಕಣಜ. ಒಂದು ಸೀಬೆಹಣ್ಣಿನಲ್ಲಿ 165 ಮಿಲಿಗ್ರಾಂ ವಿಟಮಿನ್ ಸಿ ಇರುತ್ತದೆ. ಕೆಂಪು  ಡೊಳ್ಳು ಮೆಣಸು (ಮೆಣಸಿನ ಹಣ್ಣು ಅಂತಲೂ ಕರೆಯಬಹುದು), ಹಸಿಮೆಣಸು, ಕರಬೂಜ, ಪಪ್ಪಾಯ (ಮಧ್ಯಮ ಗಾತ್ರದ ಅರ್ಧ ಹಣ್ಣಿನಲ್ಲಿ 95 ಮಿಲಿಗ್ರಾಂ), ಸ್ಟ್ರಾಬೆರಿ, ಚಕೋತಾ, ಕಿತ್ತಳೆ, ಟೊಮೆಟೊ, ಬ್ರಕೋಲಿ, ಕ್ಯಾಲಿಫ್ಲವರ್, ಅವರೆಕಾಳು ಇವುಗಳಲ್ಲಿ ವಿಟಮಿನ್ ಸಿ ಜಾಸ್ತಿ ಇರುತ್ತದೆ. ಇವೆಲ್ಲ ನಮಗೆ ಸುಲಭವಾಗಿ ಸಿಗುವಂಥವೇ. ಇನ್ನು ಬೆಂಗಳೂರಿನಂಥ ನಗರಗಳಲ್ಲಿ ಈಗೀಗ ಸಿಗುತ್ತಿರುವ ನ್ಯೂಜಿಲೆಂಡ್ ಮೂಲದ ಕಿವಿ ಹಣ್ಣು ವಿಟಮಿನ್ ಸಿ ಅನ್ನು ಹೇರಳವಾಗಿ ಹೊಂದಿರುತ್ತದೆ.

-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.