ಬೈಟುಕಾಫಿ

ಸಾಲ ಮಾಡಿ ತರಕಾರಿ ತಿನ್ನಿ

ಸಾಲ ಮಾಡಿ ತರಕಾರಿ ತಿನ್ನಿ
Published On :

ರೈತರ ಹೆಸರು ಹೇಳಿ ಹುಟ್ಟಿಕೊಂಡ ಸಹಕಾರ ಸಂಸ್ಥೆಗಳು, ಸಂಘ ಸಂಸ್ಥೆಗಳು ಲಾಭ ಗಳಿಕೆಯತ್ತ ಮುಖ ಮಾಡಿ ರೈತರನ್ನು ಮರೆತ ಉದಾಹರಣೆ ಸಾಕಷ್ಟಿವೆ. ಆದರೆ ಲಾಭ ಗಳಿಕೆಯ ಉದ್ದೇಶದಿಂದಲೇ ಆರಂಭವಾದ ರಾಷ್ಟ್ರೀಕೃತ ಬ್ಯಾಂಕೊಂದು ತಾರಸಿ ತೋಟ ಮೂಲಕ ತರಕಾರಿ ಬೆಳೆಯುತ್ತಿರುವ ನಗರವಾಸಿ ಗ್ರಾಹಕರನ್ನು ಕೇಂದ್ರೀಕರಿಸಿ ಅವರ ಅನುಕೂಲಕ್ಕಾಗಿ ಸಾವಯವ ಗೊಬ್ಬರ, ಮಣ್ಣು, ತರಕಾರಿ ಬೀಜ ವಿತರಿಸಲು ಪ್ರಾರಂಭಿಸಿದೆ.
ಮಂಗಳೂರು ನಗರದ ದೇರೇಬೈಲ್ನ ಇಂಡಿಯನ್ ಓವರ್ಸೀಸ್ ಬ್ಯಾಂಕ್ ಶಾಖೆ ಹಟ್ಟಿ ಗೊಬ್ಬರ ಸೇರಿದಂತೆ ಮಣ್ಣು, ತರಕಾರಿ ಬೀಜ ವಿತರಿಸುವ ಮೂಲಕ ಗ್ರಾಹಕರಿಗೆ ಕೈತೋಟ ಬೆಳೆಸಲು ಪ್ರೋತ್ಸಾಹ ನೀಡುತ್ತಿದೆ. ಬ್ಯಾಂಕ್ಗಳ ಇತಿಹಾಸದಲ್ಲೇ ಇದು ಪ್ರಥಮ ದಾಖಲೆ.
'ಟೆರೇಸ್ ಗಾರ್ಡನ್ ಮೂಲಕ ತರಕಾರಿ ಬೆಳೆಯಲು ಬ್ಯಾಂಕ್ನಿಂದ ಸಾಲವನ್ನೇನೋ ಕೊಟ್ಟಿದ್ದೀರಿ, ಆದರೆ ತರಕಾರಿ ಬೆಳೆಯಲು ನಗರ ಪ್ರದೇಶಗಳಲ್ಲಿ ಗೊಬ್ಬರ, ಮಣ್ಣು ಎಲ್ಲಿಂದ ತರುವುದು?' ಎಂದು ಪ್ರತಿದಿನ ಒಬ್ಬರಲ್ಲ ಒಬ್ಬ ಗ್ರಾಹಕರು ತಮ್ಮ ಸಮಸ್ಯೆ ಬಗ್ಗೆ ಹೇಳಿಕೊಂಡಾಗ, ಬ್ಯಾಂಕ್ ವ್ಯವಸ್ಥಾಪಕರಿಗೆ ಸಮಸ್ಯೆ ಪರಿಹಾರಕ್ಕೆ ಏನಾದರೂ ಕ್ರಮ ತೆಗೆದುಕೊಳ್ಳಲೇ ಬೇಕಾದ ಅನಿವಾರ್ಯತೆ ಎದುರಾಗಿತ್ತು. ಹೇಗಾದರೂ ಯೋಜನೆಯನ್ನು ಮುಂದುವರಿಸಲು ನಿಶ್ಚಯಿಸಿ ಬ್ಯಾಂಕ್ ಮೂಲಕವೇ ಗೊಬ್ಬರ, ಮಣ್ಣು ಪೂರೈಕೆಗೆ ಕ್ರಮ ಕೈಗೊಳ್ಳಲು ಬ್ಯಾಂಕ್ ವ್ಯವಸ್ಥಾಪಕರು ಯೋಜನೆ ರೂಪಿಸಿದರು. ಅದರ ಪರಿಣಾಮವೇ ಬ್ಯಾಂಕ್ ಪರಿಸರದಲ್ಲೀಗ ಗೊಬ್ಬರ, ಮಣ್ಣು ಬಂದು ಬಿದ್ದಿದೆ. ಬೇಕಾದ ಗ್ರಾಹಕರಿಗೆ ಕೈತೋಟಕ್ಕೆ ಸಾಲದ ಜತೆ ಸೆಗಣಿ ಗೊಬ್ಬರ, ಮಣ್ಣು, ತರಕಾರಿ ಬೀಜಗಳನ್ನೂ ವಿತರಿಸಲಾಗುತ್ತಿದೆ. ಬ್ಯಾಂಕ್ನ ಈ ಯೋಜನೆಗೆ ಜಿಲ್ಲಾ ತೋಟಗಾರಿಕಾ ಇಲಾಖೆಯೂ ಕೈಜೋಡಿಸಿದ್ದು, ಇಲಾಖೆ ವತಿಯಿಂದ ಆಸಕ್ತರಿಗೆ ಮಾಹಿತಿ, ತರಬೇತಿ ಹಾಗೂ ಕಿಟ್ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.
ಏನಿದು ನಗರ ತೋಟಗಾರಿಕೆ?
ನಗರದ ಜಂಜಾಟದ ನಡುವೆಯೂ ಕೆಲವರಲ್ಲಾದರೂ ಹಸಿರುಪ್ರೇಮ ಇದ್ದೇ ಇರುತ್ತದೆ. ಹಳ್ಳಿಯಿಂದ ಬಂದು ನಗರದಲ್ಲಿ ವಾಸಿಸಿದವರಿಗೆ ಇಲ್ಲೂ ಏನಾದರೂ ಬೆಳೆಯಬೇಕೆಂಬ ಆಸೆ, ಆದರೆ ಜಾಗದ ಕೊರತೆ, ಜಾಗವಿದ್ದವರಿಗೆ ಹಣಕಾಸು ಕೊರತೆ. ಅದಕ್ಕೆಂದೇ ಕಳೆದ ವರ್ಷ ಪ್ರಾರಂಭವಾಗಿದ್ದು, ಐಓಬಿ ನಗರ ತೋಟಗಾರಿಕೆ ಸಾಲ ಯೋಜನೆ. ತಾರಸಿತೋಟ, ಕೈತೋಟ, ಹೂತೋಟ ಬೆಳೆಸಲು ಸಾಲ ನೀಡುವ ಯೋಜನೆ ರೂಪಿಸಲಾಗಿತ್ತು. ಕನಿಷ್ಠ 500 ಚದರ ಅಡಿ ಜಾಗವಿರುವ ವ್ಯಕ್ತಿಗಳಿಗೆ ಅಥವಾ 1000 ಚದರ ಅಡಿವರೆಗೆ ಜಾಗ ಹೊಂದಿರುವ ಸಂಘ ಸಂಸ್ಥೆಗಳಿಗೆ ಈ ಸಾಲ ನೀಡಲಾಗುತ್ತಿದೆ. ಬ್ಯಾಂಕ್ನಿಂದ ಇದುವರೆಗೆ ರು.    27 ಸಾವಿರದಿಂದ ರು.    25 ಲಕ್ಷ ರುಪಾಯಿ ವರೆಗೂ ಈ ಯೋಜನೆಯಡಿ ಸಾಲ ಸೌಲಭ್ಯ ನೀಡಲಾಗಿದೆ.
ಕಳೆದ ವರ್ಷ ಆರಂಭವಾದ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿ, ಹಲವು ಗ್ರಾಹಕರು ಮನೆಯಲ್ಲೇ ತರಕಾರಿ ಬೆಳೆಯಲು ಪ್ರಾರಂಭಿಸಿದರು. ಜಾಸ್ತಿಯಾದದ್ದನ್ನು ಮಾರಿ ವರ್ಷದಲ್ಲೇ ಸಾಲದ ಮೊತ್ತ ಮರುಪಾವತಿ ಮಾಡಿದವರೂ ಇದ್ದಾರೆ. ಯೋಜನೆಯಡಿ ದೇರೇಬೈಲ್ ಬ್ರಾಂಚ್ನಿಂದ ಒಟ್ಟು 50 ಗ್ರಾಹಕರಿಗೆ ಸುಮಾರು ರು.    1 ಕೋಟಿ ಸಾಲ ನೀಡಲಾಗಿದೆ ಎಂದು ಬ್ಯಾಂಕ್ ವ್ಯವಸ್ಥಾಪಕ ರವೀಂದ್ರ ಪೈ ಮಾಹಿತಿ ನೀಡಿದ್ದಾರೆ.

ಸಾಲ ಪಡೆದು ಸುವರ್ಣಗಡ್ಡೆ ಬೆಳೆಸಿದ್ದೆ. ಸುವರ್ಣಗಡ್ಡೆ ಮಾರಾಟ ಮಾಡಿ ರು.    38,000 ಬಂದಿದೆ. ಬ್ಯಾಂಕ್ನವರು ನೀಡಿದ ಸಾಲ ಯಾವಾಗ್ಲೊ ತೀರಿದ್ದು, ಈಗ ಏನಿದ್ದರೂ ಲಾಭವೇ ಸಿಗುತ್ತಿದೆ. ಅಷ್ಟೇ ಅಲ್ಲ, ಕಳೆದ ಒಂದು ವರ್ಷದಿಂದ ಮನೆಗೆ ಮಾರುಕಟ್ಟೆಯಿಂದ ತರಕಾರಿ ತಂದಿಲ್ಲ.
- ಮಧ್ವರಾಯ ಭಟ್, ಕೊಂಚಾಡಿ



ತರಕಾರಿ ಬೆಳೆಯಲು ಬ್ಯಾಂಕ್ನಿಂದ ಸಾಲವನ್ನೇನೋ ಕೊಟ್ಟಿದ್ದಾರೆ, ಆದರೆ ತರಕಾರಿ ಬೆಳೆಯಲು ನಗರ ಪ್ರದೇಶಗಳಲ್ಲಿ ಗೊಬ್ಬರ, ಮಣ್ಣು ಎಲ್ಲಿಂದ ಹುಡುಕಿ ತರುವುದು? ಎಂಬ ಸಮಸ್ಯೆಯಿತ್ತು. ಈಗ ಐಓಬಿಯಿಂದ ಅದನ್ನೂ ವಿತರಿಸುತ್ತಿರುವುದರಿಂದ ಸಮಸ್ಯೆಗೆ ಪರಿಹಾರ ದೊರಕಿದೆ.
- ಶಾಂಭವಿ ಕಲ್ಲೂರಾಯ, 
ನಿವೃತ್ತ ಶಿಕ್ಷಕಿ, ಲ್ಯಾಂಡ್ಲಿಂಕ್ಸ್ ಮಂಗಳೂರು



ನಗರ ಹಸಿರೀಕರಣಕ್ಕೆ ಒತ್ತು ನೀಡುವ ಉದ್ದೇಶದಿಂದ ಬ್ಯಾಂಕ್ ಸಿಎಂಡಿ ನರೇಂದ್ರ ಅವರು ಕಳೆದ ವರ್ಷ ಐಓಬಿ ನಗರ ತೋಟಗಾರಿಕೆಗೆ ಚಾಲನೆ ನೀಡಿದರು. ಅದರ ಮುಂದುವರಿದ ಭಾಗವಾಗಿ ಮಂಗಳೂರಿನ ಹಿರಿಯ ಪ್ರಾದೇಶಿಕ ವ್ಯವಸ್ಥಾಪಕ ಸುಧಾಕರನ್ ಅವರ ಪ್ರೋತ್ಸಾಹದಿಂದ ಗೊಬ್ಬರ, ಬೀಜ ಹಾಗೂ ಮರಳು ಮಿಶ್ರಿತ ಮಣ್ಣನ್ನು ವಿತರಿಸಲಾಗುತ್ತಿದೆ. ಯೋಜನೆ ಪ್ರಾಯೋಗಿಕವಾಗಿ ಆರಂಭಿಸಲಾಗಿದ್ದು, ಗ್ರಾಹಕರ ಪ್ರತಿಕ್ರಿಯೆ ನೋಡಿ ಯೋಜನೆಯ ವಿಸ್ತಾರದ ಬಗ್ಗೆ ನಿರ್ಧರಿಸಲಾಗುವುದು.
- ರವೀಂದ್ರ ಪೈ, ವ್ಯವಸ್ಥಾಪಕರು ಐಓಬಿ ದೇರೇಬೈಲ್

-ರಾಘವೇಂದ್ರ ಅಗ್ನಿಹೋತ್ರಿ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.