ಮೇರೆ ಪಾಸ್ ಮಾ ನಹೀ ಹೈ!

ಕನ್ನಡದ ಹೆಸರಾಂತ ನಟಿ ಮಂಜುಳಾರ ಮಗ ತಾಯಿಯ ಮುಖವನ್ನು ಕಂಡಿದ್ದು ಟಿವಿ ಪರದೆ ಮೇಲೆ. ಮಗ ಅಭಿಷೇಕ್ನ ಅಂತರಾಳದಲ್ಲಿ 'ವಿಶ್ವ ಅಮ್ಮಂದಿರ ದಿನ'ದ ವಿಶಿಷ್ಟರೂಪ ಹೇಗಿರಬಹುದು?
ನಾಳೆ ಅಮ್ಮನನ್ನು ಆತ್ಮೀಯತೆಯಿಂದ ನೆನೆಯುವ ದಿನ. ಹೆತ್ತ ಕರುಳ ಕುರಿತು ಮಾತನಾಡುವ ಅವಕಾಶ ಮಕ್ಕಳದ್ದು. ನನ್ನಮ್ಮ ಹೀಗೆ- ಹಾಗೆ; ನನ್ನ ಅಷ್ಟು ಮುದ್ದಾಗಿ ಸಾಕಿದ್ದಾಳೆ; ಬೇಕಾದ್ದನ್ನು ಕೊಡಿಸುತ್ತಾಳೆ; ಅಮ್ಮ ಐ ಲವ್ ಯೂ ಅಂತ ಪಕ್ಕದಲ್ಲೇ ಅಮ್ಮನ್ನು ಕೂರಿಸಿಕೊಂಡು ಮಾತನಾಡುವ ಮಕ್ಕಳು ಬೇಕಾದಷ್ಟು ಮಂದಿ ಸಿಗುತ್ತಾರೆ. ಆದರೆ, ಅಮ್ಮ ಹೇಗಿದ್ಳು ಅಂತ ನೇರವಾಗಿ ನೋಡಿರದ ಮಗ ಆ ತಾಯಿಯ ಬಗ್ಗೆ ಏನು ಹೇಳಬಹುದು? ತಿಳಿವಳಿಕೆ ಬರುವ ಮುನ್ನವೇ ಈ ಲೋಕ ಬಿಟ್ಟು ಹೋದ ತಾಯಿಯನ್ನು ಈ ಕರುಳು ಬಳ್ಳಿ ನೆನೆಯುವುದಾರೂ ಹೇಗೆ? ಹೌದು, ಅಮ್ಮನ ಮುಖವನ್ನೇ ನೋಡಿರದ ಮಗ ತನ್ನ ತಾಯಿ ಬಗ್ಗೆ ಈ ಕ್ಷಣಕ್ಕೂ ಅತ್ಯಂತ ಗಾಢ ಪ್ರೀತಿಯನ್ನು ಬೆಳೆಸಿಕೊಂಡಿದ್ದಾನೆ.
ಹಾಗೆ ಅಮ್ಮನ ಮುಖವನ್ನೇ ನೇರವಾಗಿ ನೋಡದ ಆ ಮಗನ ಹೆಸರು ಅಭಿಷೇಕ್. ಯಾರು ಈ ಅಭಿಷೇಕ್? ಎನ್ನುವ ಪ್ರಶ್ನೆ ನಿಮ್ಮದಾದರೆ ಧೀಮಂತ ನಟಿ ಮಂಜುಳಾರನ್ನು ನಿಮ್ಮ ಗಮನಕ್ಕೆ ತರಬೇಕು. ಒಂದೊಮ್ಮೆ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ಪಟ್ಟದಲ್ಲಿ ಕೂತು ಬಣ್ಣದ ಜಗತ್ತನ್ನು ಆಳಿದ, ಬಹುಬೇಗ ನಮ್ಮಿಂದ ಕಣ್ಮರೆಯಾದ ನಟಿ ಮಂಜುಳಾರ ಪುತ್ರನೇ ಈ ಅಭಿಷೇಕ್. ಸೇಲ್ಸ್ ಎಕ್ಸಿಕ್ಯೂಟಿವ್ ಆಗಿರುವ ಅಭಿಷೇಕ್ ತನ್ನ ತಾಯಿ ಮಂಜುಳಾರನ್ನು ನೋಡಿದ್ದು 7ನೇ ತರಗತಿಯಲ್ಲಿ. ಅದೂ ಟಿವಿ ಪರದೆ ಮೇಲೆ! ತನ್ನಮ್ಮ ನಟಿಸಿದ ಚಿತ್ರ ಟಿವಿಯಲ್ಲಿ ಮೂಡಿದಾಗ ಪಕ್ಕದಲ್ಲೇ ಕೂತಿದ್ದ ಚಿಕ್ಕಪ್ಪ ಕಾಳಿಪ್ರಕಾಶ್, 'ನೋಡು ಇವರೇ ನಿನ್ನ ತಾಯಿ' ಅಂತ ಹೇಳಿದಾಗಲೇ ಅಭಿಷೇಕ್ಗೆ ತಾನು ಮಂಜುಳಾ ಪುತ್ರ, ಆಕೆ ಚಿತ್ರರಂಗದ ಬಹುದೊಡ್ಡ ನಟಿ ಅಂತ ಗೊತ್ತಾಗಿದ್ದು! ನಂಬಿ, ಅಲ್ಲಿಂದ ಇಲ್ಲಿಯ ತನಕ ತನ್ನ ತಾಯಿಯನ್ನು ಅಭಿಷೇಕ್ ನೋಡಿದ್ದು, ನೋಡುತ್ತಿರುವುದೂ ಕೇವಲ ಟಿವಿ ಪರದೆ ಮೇಲಷ್ಟೇ.
ನಟಿ ಮಂಜುಳಾರ ಮಗ ಅಭಿಷೇಕ್ಗೆ ಈಗ 29 ವರ್ಷ ದಾಟಿದೆ. ತಾಯಿ ಈ ಲೋಕವನ್ನು ಬಿಟ್ಟು ಹೊರಟಾಗ ಅಭಿಷೇಕ್ ಕೇವಲ ಎರಡು ವರ್ಷದ ಮಗು. ಅಮ್ಮ ಹೀಗೇ ಇದ್ದರು, ಇವರೇ ತನ್ನ ತಾಯಿ ಎಂದು ತಿಳಿಯದ ವಯಸ್ಸು. ಹಾಗಾಗಿ ಮುಂದೆ ಅಭಿಷೇಕ್ ತನ್ನ ತಾಯಿಯ ಸ್ಪಷ್ಟ ಮುಖವನ್ನು ಸಿನಿಮಾಗಳಲ್ಲೇ ನೋಡಿ ತಿಳಿಯಬೇಕಾಯಿತು. ಮುಂದೆ ತನ್ನ ತಾಯಿಯನ್ನು ಪತ್ರಿಕೆಗಳಲ್ಲಿನ ಫೋಟೋಗಳಲ್ಲಿ, ಟಿವಿಯಲ್ಲಷ್ಟೇ ನೋಡಿಕೊಂಡು ಅಭಿ ಬೆಳೆದಿದ್ದಾರೆ. 'ನಾನು ಅಮ್ಮನ ಸಾವು ನೋಡಿಲ್ಲ. ಆದರೆ ಅವರ ಸಿನಿಮಾಗಳನ್ನು ನೋಡಿದ್ದೇನೆ. ಇದು ಬೇರೆಯವರಿಗೆ ರೀಲ್ ಪಾತ್ರಗಳಾಗಿರಬಹುದು. ಅದೇ ನನಗೆ ರಿಯಲ್. ಹಾಗಾಗಿ ಈಗಲೂ ನನ್ನ ತಾಯಿ ಬದುಕಿದ್ದಾರೆ' ಎನ್ನುವ ಅಭಿಷೇಕ್, ಯಾರಾದರೂ 'ಏಯ್ ನೀನು ಸಿನಿಮಾ ನಟಿ ಮಂಜುಳಾರ ಮಗನಾ?' ಎಂದಾಗ ತಾಯಿ ಬಗ್ಗೆ ಅಭಿಷೇಕ್ಗೆ ಗೌರವ, ಹೆಮ್ಮೆ, ಪ್ರೀತಿ ಇಮ್ಮಡಿಗೊಳ್ಳುತ್ತದೆ. 'ಅಮ್ಮನ ಈ ಧೈರ್ಯದಲ್ಲಿ ನನಗೆ ಅರ್ಧ ಬಂದರೂ ಸಾಕು. ಅಮ್ಮ ನೆನಪಾದರೆ ಗಿಲ್ಟಿತನ ಕಾಡುತ್ತದೆ. ತುಂಬಾ ಮಿಸ್ ಮಾಡಿಕೊಂಡೆ. ತಿಳಿವಳಿಕೆ ಬರುವ ಮುನ್ನವೇ ಅಮ್ಮ ನನ್ನನ್ನು ಬಿಟ್ಟು ಹೋಗಿದ್ದು ದೊಡ್ಡ ಲಾಸ್' ಎನ್ನುತ್ತ ಅಭಿಷೇಕ್ ಮೌನಕ್ಕೆ ಜಾರಿದರು. ನಿತ್ಯ ಮನೆಯಿಂದ ಹೊರಡುವ ಮುನ್ನ ಗಣೇಶನ ಫೋಟೋ, ಪಕ್ಕದಲ್ಲೇ ಇರುವ ಅಮ್ಮನ ಭಾವಚಿತ್ರವನ್ನು ಒಮ್ಮೆ ನೋಡಿ ನಮಸ್ಕಾರ ಮಾಡಿಕೊಂಡೇ ಹೊರ ನಡೆಯುತ್ತಾರೆ.
ಹ್ಞಾಂ, ಈಗ ಲೆಕ್ಕ ಕೊಡಿ... ತಾಯಿಯ ಮುಖವನ್ನೇ ಕಾಣದ ಅದೆಷ್ಟು ಜನ ನಾಳೆ 'ವಿಶ್ವ ಅಮ್ಮಂದಿರ ದಿನ' ಆಚರಿಸಲಿದ್ದಾರೆ?
= ಆರ್. ಕೇಶವಮೂರ್ತಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


