ಬತ್ತಳಿಕೆ ರಹಿತ ಮಹಾಭಾರತ
ಸ್ಟಾರ್ ಪ್ಲಸ್ ಹಿಂದಿ ಟಿವಿ ವಾಹಿನಿಯಲ್ಲಿ ಸೋಮವಾರದಿಂದ ಶನಿವಾರದವರೆಗೆ ಪ್ರತಿ ದಿನವೂ ಮಹಾಭಾರತ ಧಾರಾವಾಹಿ ಅದ್ದೂರಿಯಾಗಿ ಪ್ರಸಾರವಾಗುತ್ತಿರುವುದು ಸರಿಯಷ್ಟೆ. ನಿಧಾನಗತಿಯಲ್ಲಿ ಸವಿಸ್ತಾರವಾಗಿ ಸಾಗುತ್ತಿದ್ದ ಮಹಾಭಾರತ 14 ವರ್ಷ ವನವಾಸವನ್ನು ಕೇವಲ ಐದೇ ದಿನ, ಒಂದು ವರ್ಷದ ಅಜ್ಞಾತವಾಸವನ್ನು ಕೇವಲ ಒಂದೇ ದಿನದಲ್ಲಿ ಮುಗಿಸಿದ್ದು ಕೂಡ ಒಂದು ದಾಖಲೆಯೇ. ಕೋಟಿಗಟ್ಟಲೆ ಖರ್ಚು ಮಾಡಿದರೂ ಇಡೀ ಧಾರಾವಾಹಿಯಲ್ಲಿ ಕೇವಲ ಗ್ರಾಫಿಕ್ಸ್ ಮತ್ತು ಕೃತಕತೆಯೇ ವಿಜೃಂಭಿಸಿ, ಸಹಜತೆ ಮರೆಯಾಗಿದೆ. ವನವಾಸದಲ್ಲಿ ವರಿಸಿದ ಹಿಡಿಂಬೆಯನ್ನು ಯುದ್ಧ ಶುರುವಾದರೂ ಈವರೆಗೂ ಭೀಮ ಕ್ಯಾರೇ ಅನ್ನದಿರುವುದರಿಂದ ಆಕೆ ಕೋರ್ಟ್ನ ಮೊರೆ ಹೋಗುವ ಎಲ್ಲಾ ಸಾಧ್ಯತೆ ಇದೆ. ಈ ಧಾರಾವಾಹಿಯಲ್ಲಿ ಒಂದು ವಿಚಿತ್ರವಂತೂ ಬಹಳ ಸೋಜಿಗವಾಗಿದೆ. ಈ ಮಹಾಭಾರತದಲ್ಲಿನ ಯಾವ ಧನುರ್ಧಾರಿಗಳಿಗೂ ಬತ್ತಳಿಕೆಯೇ ಇಲ್ಲ. ಬಾಣ ಪ್ರಯೋಗಿಸಬೇಕಾದರೆ ಕೇವಲ ಕಣ್ಮುಚ್ಚಿ ಬಿಲ್ಲನ್ನು ಕೈಲಿ ಹಿಡಿದರೆ ಥಟ್ ಅಂತ ಬಾಣ ಪ್ರತ್ಯಕ್ಷವಾಗುತ್ತದೆ. ಇಷ್ಟು ವರ್ಷ ನಾವು ಕಂಡು-ಕೇಳಿದ್ದ ಬತ್ತಳಿಕೆ ಇಲ್ಲಿ ನೇಪಥ್ಯಕ್ಕೆ ಸೇರಿದೆ. ಎಷ್ಟೋ ಮಹಾಭಾರತ ಓದಿದ್ದೇವೆ, ಕೇಳಿದ್ದೇವೆ. ಎಲ್ಲೂ ಬತ್ತಳಿಕೆ ಶಾಪಗ್ರಸ್ಥವಾಗಿರಲಿಲ್ಲ. ಇಲ್ಲೇಕೆ ಬತ್ತಳಿಕೆಗೆ ಇಂತಹ ಸ್ಥಿತಿ ಬಂತೋ ದೇವರೇ ಬಲ್ಲ. ಕೋಟಿಗಟ್ಟಲೆ ಖರ್ಚು ಮಾಡಿದ ಈ ಧಾರಾವಾಹಿಗೆ ಬತ್ತಳಿಕೆಗೇನೂ ಹೆಚ್ಚು ಖರ್ಚು ಬರುತ್ತಿರಲಿಲ್ಲ. ಆದರೂ ಬತ್ತಳಿಕೆಯನ್ನೇ ಬತ್ತಳಿಕೆಗೆ ಸೇರಿಸಿದ ಹೆಗ್ಗಳಿಕೆ ಈ ಮಹಾಭಾರತದ್ದು. ನೋಡದಿದ್ದವರು ನೋಡಿ ಆನಂದಿಸಿ.
- ಎಲ್.ವಿ.ಕೆ. , ಚಿತ್ರದುರ್ಗ
(ವಿ)ಚಿತ್ರ ಲೇಖ
ಈ ಟಿವಿ ಕನ್ನಡ ವಾಹಿನಿಯಲ್ಲಿ ಮಧ್ಯಾಹ್ನ 1.30ಕ್ಕೆ ಮತ್ತೊಂದು ಮುಗಿಯದ ಧಾರಾವಾಹಿ ಚಿತ್ರಲೇಖ ಶುರುವಾಗಿ ವರ್ಷಗಳೇ ಉರುಳಿವೆ. ಇಂಪಾಗಿ ಮೂಡಿಬರುತ್ತಿದ್ದ ಶೀರ್ಷಿಕೆ ಸಂಗೀತ ಇತಿಹಾಸ ಸೇರಿದೆ. ಇಡೀ ಕುಟುಂಬದ ಕಥೆಯಾಗಿ ಸಾಗುತ್ತಿದ್ದ ಧಾರಾವಾಹಿ ಈಗ ಕೇವಲ ಅನಿರುದ್ಧ ಮತ್ತು ತೇಜಸ್ವಿನಿ ನಡುವಿನ ದ್ವೇಷದ ಎಪಿಸೋಡ್ ಆಗಿ ಮುಂದುವರಿಯುತ್ತದೆ. ಇದು ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಅನಿರುದ್ಧನ ವಿರುದ್ಧ ಸಾವಿರ ಸಾಕ್ಷಿಗಳಿದ್ದರೂ ಆತನನ್ನು ಏನೂ ಮಾಡಲಾಗುತ್ತಿಲ್ಲ. ಹಾರ್ಟ್ ಆಪರೇಷನ್ ಆದವರೇ ಎರಡು ದಿನದಲ್ಲಿ ಡಿಸ್ಚಾರ್ಜ್ ಆಗಿ ತನ್ನ ಎಂದಿನ ಕೆಲಸ ಕಾರ್ಯದಲ್ಲಿ ತೊಡಗುವಂತಹ ಈ ಕಾಲದಲ್ಲಿ ಅಪರಾಧಿ ಅನಿರುದ್ಧ ಹಣೆಯ ಮೇಲಿನ ಸಣ್ಣ ಗಾಯವೊಂದಕ್ಕೆ ತಿಂಗಳುಗಟ್ಟಲೆ ಆಸ್ಪತ್ರೆಯಲ್ಲಿ ಅನಾಯಾಸವಾಗಿ ಕಳೆದಿದ್ದು ಅಚ್ಚರಿಯೇ ಸರಿ. ವೀಕ್ಷಕರ ತಾಳ್ಮೆ ಪರೀಕ್ಷಿಸುವ ಕಾರ್ಯ ಯಶಸ್ವಿಯಾಗಿ ನಡೆಯುತ್ತಿದೆ. ಈ ಮಧ್ಯೆ ಸತ್ಯದೇವ್ರವರ ಮಗಳು, ಅಳಿಯ ಕಾಣೆಯಾಗಿ ತಿಂಗಳುಗಳೇ ಕಳೆದಿವೆ. ಮೊದಲು ದಯವಿಟ್ಟು ಅವರನ್ನು ಹುಡುಕಿಕೊಡಿ. ಸಾಕ್ಷಿ ಪಾತ್ರಧಾರಿ ಗರ್ಭಿಣಿಯಾಗಿ ನಿಜವಾಗಿಯೂ ಏಳೆಂಟು ತಿಂಗಳು ಕಳೆದಿವೆ. ಇನ್ನೂ ಹೆರಿಗೆಯಾಗುವ ಸೂಚನೆ ಕಾಣುತ್ತಿಲ್ಲ. ಮಗು ಹೊಟ್ಟೆಯೊಳಗೆ ಇದೆಯೋ ಇಲ್ಲವೇ ಎಂದು ಮೊದಲು ಸ್ಕ್ಯಾನ್ ಮಾಡಿಸುವುದು ಒಳಿತು. ಧಾರಾವಾಹಿಯಲ್ಲಿ ಸತ್ಯದೇವ್ರವರ ಹೆಂಡತಿ ಪಾತ್ರ ಬದಲಾಗಿದೆ. ಮಗ ಆದಿ ಪಾತ್ರ ಬದಲಾಗಿದೆ. ಸಾಕ್ಷಿಯ ಮಗುವಂತೂ ದಿನಕ್ಕೊಂದು ಬದಲಾಗುತ್ತಿದೆ. ಪ್ರೇಕ್ಷಕರು ಈ ಧಾರಾವಾಹಿಯನ್ನು ಬದಲಿಸುವ ಮೊದಲು ಈ ಧಾರಾವಾಹಿಗೊಂದು ಅಂತ್ಯ ಕರುಣಿಸಿದರೆ ನಿರ್ದೇಶಕರಿಗೆ ಪುಣ್ಯ ಬರುತ್ತದೆ.
- ಕುಮಾರಸ್ವಾಮಿ, ಹಿರಿಯೂರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

