ಆಫ್ರಿಕದ ಜನಪದ ಕತೆ ಸಿಂಹದ ಯುದ್ಧ
'ಕೇಳಿರಿ, ಕೇಳಿರಿ. ನಾವೊಂದು ಯುದ್ಧಕ್ಕೆ ಹೋಗಬೇಕಾಗಿದೆ' ಎಂದು ವನರಾಜ ಸಿಂಹ ಕೂಗಿ ಹೇಳಿತು. ನಿಮಿಷಮಾತ್ರದಲ್ಲಿ ಕಾಡಿನ ಎಲ್ಲ ಪ್ರಾಣಿಗಳು ಬಂದು ವನರಾಜನ ಮನೆಯ ಮುಂದೆ ನೆರೆದವು.
'ನಾವೀಗ ಒಂದು ಯುದ್ಧಕ್ಕೆ ಹೋಗಬೇಕಾಗಿದೆ. ಈ ಯುದ್ಧ ಕೀಟಸಾಮ್ರಾಜ್ಯದ ವಿರುದ್ಧ. ಹಗಲೂರಾತ್ರಿ ನಮಗೆ ತೊಂದರೆ ಕೊಡುತ್ತ ನಮ್ಮ ಕಣ್ಣಮುಂದೆ ಕುಣಿಯುತ್ತ, ಕಿವಿಯ ಬಳಿ ಸಂಗೀತ ಹಾಡುತ್ತ, ಮೈಮೇಲೆ ಬೊಕ್ಕೆ ಬರುವಂತೆ ಕಚ್ಚುತ್ತ, ನಮಗೆ ತಲೆನೋವಾಗಿರುವ ಈ ಕೀಟಗಳನ್ನು ಈ ಜಗತ್ತಿನಿಂದಲೇ ನಿವಾರಿಸಿಬಿಡಬೇಕು. ಅದಕ್ಕೇ ಈ ಯುದ್ಧ' ಎಂದು ಸಿಂಹ ಘೋಷಿಸಿತು. ಸೊಳ್ಳೆಗಳ ಕಾಟದಿಂದ ರಾತ್ರಿಯೆಲ್ಲ ನಿದ್ದೆಗೆಟ್ಟು ಊದಿಕೊಂಡ ಕಣ್ಣುಗಳೇ ಅದರ ಯುದ್ಧಕ್ಕೆ ಕಾರಣ ಹೇಳಿದವು. ಸಿಂಹರಾಜನ ಆಣತಿಗೆ ಪ್ರಾಣಿಗಳೆಲ್ಲ ತಲೆದೂಗಿದವು.
'ಆದರೆ ನೆನಪಿಡಿ, ಅವುಗಳು ಸಾವಿರ ಸಂಖ್ಯೆಯಲ್ಲಿದ್ದಾವೆ. ನಾವಾದರೋ ಕೇವಲ ನೂರರಷ್ಟು ಇರುವವರು. ಹಾಗಾಗಿ ಪ್ರತಿಯೊಬ್ಬನೂ ವೀರಾವೇಶದಿಂದ ಹೋರಾಡುತ್ತ ಹತ್ತು-ನೂರು ಕ್ರಿಮಿಕೀಟಗಳನ್ನು ಕೊಲ್ಲಬೇಕಾಗುತ್ತದೆ. ಮುಖಮೂತಿ ನೋಡದೆ ಅವುಗಳನ್ನು ಚಚ್ಚಿಬಿಡಿ. ಯಾವುದೇ ಕಾರಣಕ್ಕೂ ಅವುಗಳು ನಮ್ಮ ಮೇಲೆ ಸವಾರಿ ಮಾಡಲು ಬಿಡಬಾರದು' ಎಂದು ಹೇಳಿತು ಸಿಂಹ. ಆದರೆ, ಅದಕ್ಕೆ ತನ್ನ ಮಾತಿನ ಮೇಲೆ ಪೂರ್ತಿ ಧೈರ್ಯ ಇರಲಿಲ್ಲ. ಈ ಕೀಟಪ್ರಪಂಚವೇ ವಿಚಿತ್ರ. ಅಲ್ಲಿರುವ ಕಣಜಗಳೋ, ಜೇನುಹುಳುಗಳೋ ಕೆರಳಿ ದಾಳಿ ಮಾಡಿದವೆಂದರೆ ಜೀವ ಉಳಿಸಿಕೊಳ್ಳಲು ಓಡುವುದು ಬಿಟ್ಟರೆ ಬೇರೆ ಮಾರ್ಗವೇ ಇಲ್ಲ. ಹಾಗಾಗಿ ಸಿಂಹವು 'ನೋಡಿ, ಅಲ್ಲಿ ಕೆಲವು ವಿಷಜಂತುಗಳೂ ಇವೆ. ಅವು ಕೆರಳಿ ನಮ್ಮ ಮೇಲೆ ದಾಳಿ ಮಾಡಲು ಅವಕಾಶ ಕೊಡಬಾರದು. ಹಾಗೇನಾದರೂ ಜೇನುಹುಳುಗಳೋ ಇನ್ನಿತರ ಕೀಟಗಳೋ ಉಗ್ರವಾಗಿ ದಾಳಿ ಮಾಡತೊಡಗಿದರೆ ನಾವೆಲ್ಲ ಎಷ್ಟು ಸಾಧ್ಯವೋ ಅಷ್ಟು ವೇಗವಾಗಿ ಹಿಂದಕ್ಕೆ ಓಡಿಹೋಗಬೇಕು. ಅವುಗಳ ಕೈಯಿಂದ ಕಚ್ಚಿಸಿಕೊಂಡು ಮೈಯೆಲ್ಲ ಊದಿಸಿಕೊಂಡು ನೋವಿಂದ ಸಾಯುವುದು ಯಾರಿಗೆ ಬೇಕು!' ಎಂದಿತು.
ಪ್ರಾಣಿಗಳು ಸಿಂಹದ ಮಾತಿಗೆ ಸಮ್ಮತಿ ಸೂಚಿಸಿದವು. ಎಲ್ಲವೂ ಒಟ್ಟಾಗಿ ರಣೋತ್ಸಾಹದಿಂದ ಯುದ್ಧಕ್ಕೆ ಹೊರಟವು. ದಾರಿ ಮಧ್ಯೆ ಸಿಂಹಕ್ಕೆ ಇನ್ನೊಂದು ಯೋಚನೆ ಬಂತು. ಮತ್ತೆ ಪ್ರಾಣಿಗಳನ್ನೆಲ್ಲ ಸೇರಿಸಿ 'ನಾನು ನನ್ನ ಬಾಲವನ್ನು ಎತ್ತಿ ಹಿಡಿದಿದ್ದರೆ ಜಯ ನಮ್ಮ ಕಡೆಗಿದೆ ಎಂದು ಅರ್ಥ. ಆಗ ನೀವು ಯಾವುದನ್ನೂ ಲೆಕ್ಕಿಸದೆ ವೀರಾವೇಶದಿಂದ ಹೋರಾಡತಕ್ಕದ್ದು. ಒಂದು ವೇಳೆ ನಾನೇನಾದರೂ ಬಾಲವನ್ನು ಕೆಳಕ್ಕಿಳಿಸಿದರೆ ನಾವು ಸೋಲುತ್ತಿದ್ದೇವೆ ಅಂತ ಅರ್ಥ. ಆಗ ನೀವು ಯುದ್ಧವನ್ನು ತಕ್ಷಣವೇ ಕೈಬಿಟ್ಟು ಹಿಂದಕ್ಕೆ ಓಡಬೇಕು' ಎಂದು ಗುಟ್ಟಾಗಿ ಹೇಳಿತು. ಪ್ರಾಣಿಗಳು ಅದನ್ನು ಒಪ್ಪಿಕೊಂಡವು. ಅವುಗಳ ದುರದೃಷ್ಟಕ್ಕೆ ಈ ಗುಟ್ಟನ್ನು ಅಲ್ಲೇ ಎಲೆಯ ಹಿಂದೆ ಕೂತಿದ್ದ ಜೇನ್ನೊಣವೊಂದು ಕೇಳಿಸಿಕೊಂಡು ಬಿಡಬೇಕೆ!
ಪ್ರಾಣಿ ಮತ್ತು ಕೀಟರಾಜ್ಯಗಳ ಯುದ್ಧ ಶುರುವಾಯಿತು. ಪ್ರಾಣಿಗಳು ಹುಚ್ಚು ಹಿಡಿದವರಂತೆ ಕೀಟಗಳ ಮೇಲೆ ಏರಿ ಹೋಗಿ ಅವುಗಳನ್ನು ಹೊಸಕಿ ಹೊಸಕಿ ಸಾಯಿಸಿದವು. ಜೇಡ, ನೊಣ, ಸೊಳ್ಳೆ, ಜೇನು - ಎಲ್ಲವೂ ಪ್ರಾಣಿಗಳ ಕೈಯಲ್ಲಿ ಅಪ್ಪಚ್ಚಿಯಾಗಿ ಸತ್ತು ಉರುಳತೊಡಗಿದವು. ಕೀಟ ರಾಜ್ಯದ ದೊರೆಗೆ ಪೇಚಿಗಿಟ್ಟುಕೊಂಡಿತು. ಹೀಗೇ ಮುಂದುವರಿದರೆ ಇನ್ನು ಕೆಲಹೊತ್ತಿನಲ್ಲೇ ಕೀಟಗಳು ಈ ಜಗತ್ತಿನಿಂದ ನಾಮಾವಶೇಷವಾಗಲಿದ್ದವು.
ಆಗ ಕೀಟದೊರೆಯ ಹತ್ತಿರ ಬಂದ ಜೇನ್ನೊಣ 'ಅಪ್ಪಣೆಯೆ?' ಎಂದು ಕೇಳಿತು. ಜೇನ್ನೊಣದ ಯೋಜನೆಯನ್ನು ಅರಿತಿದ್ದ ಕೀಟರಾಜ, 'ಸರಿ, ಮುಂದುವರೆಸು' ಎಂದು ಸೂಚ್ಯವಾಗಿ ಒಪ್ಪಿಗೆಯನ್ನು ಕೊಟ್ಟಿತು. ಜೇನ್ನೊಣ ರೊಂಯ್ ಎನ್ನುತ್ತ ತನ್ನ ಪರಾಕ್ರಮ ತೋರಿಸಲು ಹಾರಿಹೋಯಿತು.
ಪ್ರಾಣಿಗಳ ಕೈ ಮೇಲಾಗುತ್ತಿರುವಾಗಲೇ ಇಷ್ಟು ಹೊತ್ತು ಆಕಾಶದಲ್ಲಿ ಧ್ವಜದಂತೆ ಹೆಮ್ಮೆಯಿಂದ ಹಾರಾಡುತ್ತಿದ್ದ ಸಿಂಹದ ಬಾಲ ಈಗ ತಟ್ಟನೆ ಕೆಳಗಿಳಿದದ್ದನ್ನು ಉಳಿದ ಪ್ರಾಣಿಗಳು ನೋಡಿದವು. ಯಾವುದೋ ಭೀಕರ ಸಮಸ್ಯೆ ಎದುರಾಗಿ ತಮ್ಮ ಸೋಲು ಹತ್ತಿರವಾಗುತ್ತಿದೆ ಅಂದುಕೊಂಡ ಪ್ರಾಣಿಗಳು ಕ್ಷಣಮಾತ್ರವೂ ಅಲ್ಲಿ ನಿಲ್ಲದೆ, ಹಿಂದೆ ನೋಡದೆ ದಿಕ್ಕಾಪಾಲಾಗಿ ಓಡತೊಡಗಿದವು. ಕಾದಾಟದಿಂದ ಗಿಜಿಗುಡುತ್ತಿದ್ದ ಕಾಡಿನ ಯುದ್ಧಭೂಮಿ ಒಂದೆರಡು ನಿಮಿಷಗಳಲ್ಲೇ ಖಾಲಿಯಾಗಿ ಭಣಗುಡತೊಡಗಿತು.
ಅಂದಹಾಗೆ, ಜೇನ್ನೊಣ ಹೋಗಿ ಯಾವ ಜಾಗದಲ್ಲಿ ಕಚ್ಚಿತು ಎಂಬ ರಹಸ್ಯವನ್ನು ನೋವಿನಿಂದ ಸಾಯುತ್ತಿದ್ದರೂ ಸಿಂಹ ಯಾರ ಮುಂದೆಯೂ ಬಾಯಿಬಿಡಲಿಲ್ಲ. ಪ್ರಾಣಿಗಳ ಸೋಲಿನ ಗುಟ್ಟು - ಗುಟ್ಟಾಗಿಯೇ ಉಳಿದುಕೊಂಡಿತು!
- ರೋಹಿತ್ ಚಕ್ರತೀರ್ಥ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

