ಗೆದ್ದಲು
ಕೊನೆಗೂ ಅವಳು ನಿರಪರಾಧಿಯಾದಳು. ನಡೆದದ್ದು ಇಷ್ಟೇ.
ಅವಳ ಗಂಡನಿಗೆ ಗಂಡೇ ಬೇಕೆಂಬ ಹಠ. ಆದರೆ ಒಂದರ ಮೇಲೊಂದರಂತೆ ಎರಡು ಹೆಣ್ಣು ಹೆತ್ತಿದ್ದ ಅವಳನ್ನು ಮಕ್ಕಳೆದುರೇ ಮೂದಲಿಸುವುದರ ಜೊತೆ ಕುಡಿದುಕೊಂಡು ಅವಳ ಜೊತೆ ಕಾದಾಡುತ್ತಿದ್ದ. ಬಹಳ ಸಹಿಸಿಕೊಂಡಿದ್ದ ಆಕೆ ಎಂದೂ ತಿರುಗಿ ಕೈ ಮಾಡಿರಲಿಲ್ಲ. ಆದರೆ ಆ ದಿನ ಮರದ ದೊಣ್ಣೆಯನ್ನೆತ್ತಿ ಹೊಡೆಯಲು ಮುಂದೆ ಬರುತ್ತಿದ್ದ ಗಂಡನಿಂದ ದೊಣ್ಣೆ ಕಸಿಯುವ ಭರಾಟೆಯಲ್ಲಿದ್ದಾಗ ಆಕಸ್ಮಿಕವಾಗಿ ಅವನ ತಲೆಗೆ ದೊಣ್ಣೆ ತಾಗಿ ಕಣ್ಣೆದುರಲ್ಲೇ ಗಂಡ ಕಣ್ಮುಚ್ಚಿದ್ದ. ಎರಡೂ ಕಂದಮ್ಮಗಳ ಎದುರಿನಲ್ಲೇ ಇದು ನಡೆದಿದ್ದರೂ ತಾಯಿ ನಿರಪರಾಧಿ ಎಂದು ಅವರು ಸಾಕ್ಷಿ ಹೇಳುವಷ್ಟೂ ದೊಡ್ಡವರಿರಲಿಲ್ಲ. ನಂತರ ಕೊಲೆ ಆರೋಪ ಅವಳ ಮೇಲಾದರೆ, ದೊಣ್ಣೆ ಕೊಲೆಯ ಸಾಕ್ಷ್ಯಾಧಾರವಾಯಿತು. ಆಕೆಯ ಕೇಸು ವಿಚಾರಣೆಯಿಂದ ವಿಚಾರಣೆಗೆ ಮುಂದೂಡಲ್ಪಡುತ್ತಿತ್ತು. ಕೆಲವು ವಿಚಾರಣೆಗಳಲ್ಲಿ ಆಕೆ ತಾನು ಕೊಲೆ ಮಾಡಿಲ್ಲ ಎಂದು ಪರಿಪರಿಯಾಗಿ ಬೇಡಿಕೊಂಡಿದ್ದರೂ ಫಲ ಕಂಡಿರಲಿಲ್ಲ. ಅವಳ ಹೆಣ್ಣು ಮಕ್ಕಳು ಈಗ ಮದುವೆಯ ವಯಸ್ಸು ಮೀರಿ ಬೆಳೆದಿದ್ದರೂ ಕೇಸು ಮುಗಿದಿರಲಿಲ್ಲ.
ಕೊನೆಗೊಂದು ವಾದ-ವಿವಾದದ ದಿನ. ಕೊಲೆಯ ಅಸ್ತ್ರವಾಗಿ ಬಳಸಿದ್ದ ದೊಣ್ಣೆಯನ್ನು ಭದ್ರತಾ ಕೊಠಡಿಯಿಂದ ಹೊರತೆಗೆದು ಪ್ರದರ್ಶಿಸಿದಾಗ, ಅದನ್ನು ನೋಡಿ, ಅವಳ ಪರ ವಕಾಲತ್ತು ವಹಿಸಿದ್ದವನು 'ಈ ದೊಣ್ಣೆಯಿಂದ ಹೊಡೆದು ಯಾರನ್ನೂ ಕೊಲೆ ಮಾಡಲು ಸಾಧ್ಯವಿಲ್ಲ ಮಹಾಪ್ರಭುಗಳೇ, ಬೇಕಿದ್ದರೆ ನೀವೇ ನೋಡಿರಿ' ಎನ್ನುತ್ತಾ ದೊಣ್ಣೆಯನ್ನು ತನ್ನ ಎಡಗೈಗೆ ಜೋರಾಗಿ ಬಡಿಯುತ್ತಿದ್ದಂತೆಯೇ ಕಟ ಕಟ ಎನ್ನುತ್ತಾ ಮುರಿದು ಬಿದ್ದಿತ್ತು. ನಂತರ ಕಟಕಟೆಯಲ್ಲಿರುವ ಅವಳು ನಿರಪರಾಧಿ ಎನ್ನುವ ತೀರ್ಪೂ ಹೊರಬಿದ್ದಿತ್ತು.
ಅಂದು ಅವಳ ಗಂಡ ಆಕೆಗೆ ಹೊಡೆಯಲು ಬಳಸಿದ್ದ ಆ ದೊಣ್ಣೆಯೊಳಗಿದ್ದ ಗೆದ್ದಲು ಇದೆಲ್ಲವನ್ನೂ ನೋಡಿತ್ತು. ಇಂದು ದೊಣ್ಣೆ ಮುರಿಯುತ್ತಿದ್ದಂತೆಯೇ ಆ ಗೆದ್ದಲು ಇನ್ನೊಂದು ಮರದ ಬೆಂಚಿನೊಳಗೆ ನುಸುಳುತ್ತಾ ಹೋಯಿತು.
- ಬಿ.ಎಸ್.ವೆಂಕಟಾಚಲ ಭಟ್ಟ
venkatachalabhatta@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

