ನಂಬಿಕಸ್ತನ ಲಾವಣಿ
ಕೇವಲ ಕ್ರೈಸ್ತ ಮಿಷನರಿಗಳಲ್ಲದೆ ಸರ್ಕಾರದ ವಿವಿಧ ಹುದ್ದೆಗಳಲ್ಲಿದ್ದವರು ಕನ್ನಡ ಸಾಹಿತ್ಯ ಸಂಸ್ಕೃತಿಯಲ್ಲಿ ಆಸಕ್ತಿಯನ್ನು ತೋರಿಸಿ ಕನ್ನಡ ಸಾಹಿತ್ಯದ ನವೋದಯಕ್ಕೆ ಕಾರಣರಾದರು. ಅಂಥ ಮಹನೀಯರಲ್ಲಿ ಡಾ. ಜಾನ್ ಫೆಯ್ತ್ಫುಲ್ (ನಂಬಿಕಸ್ತ) ಫ್ಲೀಟ್ ಅವರು ಒಬ್ಬರು. ಕನ್ನಡ ಶಾಸನ ಅಧ್ಯಯನ ಹಾಗೂ ಜಾನಪದ ಅಧ್ಯಯನದಲ್ಲಿ ಅವರು ಅಮೂಲ್ಯ ಕೊಡುಗೆ ನೀಡಿದ್ದಾರೆ. ಫ್ಲೀಟರು ಹದಿನೇಳಕ್ಕೂ ಅಧಿಕ ಲಾವಣಿಗಳನ್ನು ಸಂಗ್ರಹಿಸಿದ್ದರು. ಆದರೆ ಅವುಗಳಲ್ಲಿಯ ಐದನ್ನು ಮಾತ್ರ ಪ್ರಕಟಿಸಿದರು. ತಮ್ಮಲ್ಲಿ ಉಳಿದ ಸಂಗ್ರಹವನ್ನು ತಮ್ಮ ಸಾವಿಗೆ ಮೊದಲು ಲಂಡನ್ನಿನ ಬ್ರಿಟಿಷ್ ಮ್ಯೂಸಿಯಂಗೆ ನೀಡಿದ್ದರು. ಈ ಕೃತಿಯಲ್ಲಿ ಪ್ರಕಟಿತ ಐದು ಮತ್ತು ಅಪ್ರಕಟಿತ ಹನ್ನೆರಡು ಲಾವಣಿಗಳು, ನಾಲ್ಕು ಜೋಗುಳದ ಪದಗಳು, ನಾಲ್ಕು ದಂಡಕಗಳು, ಅವರ ಎಂಟು ಇಂಗ್ಲಿಷ್ ಬರೆಹಗಳು, ಹದಿನಾಲ್ಕು ಪದಗಳು, ಒಂದು ಮರಾಠಿ ಲಾವಣಿ ಮತ್ತು ಅದರ ಕನ್ನಡ ಅನುವಾದ ಇಲ್ಲಿವೆ. ಇವನ್ನು ಕ್ಯಾತನಹಳ್ಳಿ ರಾಮಣ್ಣ ಸಂಪಾದಿಸಿದ್ದಾರೆ.
ಕೃತಿ: ಫ್ಲೀಟರು ಸಂಗ್ರಹಿಸಿದ ಸಮಗ್ರ ಲಾವಣಿಗಳು
ಪ್ರಕಾರ: ಸಂಪಾದನೆ
ಏಕೆ ಓದಬೇಕು?: ವಿದೇಶಿಗನ ಕನ್ನಡ ಪ್ರೀತಿ ಅರಿಯಲು
ಪ್ರ: ಸಾಗರ್ ಪ್ರಕಾಶನ, ಬೆಂಗಳೂರು, ಪುಟಗಳು 376, ಬೆಲೆ ರು. 190
ಸ್ವಾಮಿ ವಿವೇಕಾನಂದ
2013ನೇ ಇಸ್ವಿ ಸ್ವಾಮಿ ವಿವೇಕಾನಂದರ 150ನೆ ಜನ್ಮದಿನದ ವರ್ಷ. ಒಂದೂಕಾಲು ಶತಮಾನ ಕಾಲ ಇಡೀ ಭರತಖಂಡವನ್ನು ವಿವಿಧ ನೆಲೆಯಲ್ಲಿ ಪ್ರಭಾವಿಸುತ್ತ ಬಂದ ವಿವೇಕಾನಂದರ ಜೀವನ- ಸಾಧನೆಯನ್ನು ಜಿ.ಬಿ. ಹರೀಶ ಅವರು ಬರೆದಿರುವರು. ದೇಶವಾಸಿಗಳು ವಿವೇಕಾನಂದರನ್ನು ಯುಗಪುರುಷ ಎಂದು ಗೌರವಿಸುತ್ತಾರೆ. ಮೇಷ ರಾಶಿಯ ಭಾರತೀಯರನ್ನು ಸಿಂಹ ರಾಶಿಯವರನ್ನಾಗಿ ಪರಿವರ್ತಿಸಿದವರು ವಿವೇಕಾನಂದರು. ಸನಾತನ ಧರ್ಮದ ತಿರುಳನ್ನು ಸರಳವಾಗಿ ಜನರಿಗೆ ತಲುಪಿಸಿ ನಮ್ಮತನದ ಬಗ್ಗೆ ಅಭಿಮಾನವನ್ನು ಮೂಡಿಸಿದ್ದು ಅವರ ಮಹತ್ವದ ಸಾಧನೆ. ಈ ಎಲ್ಲ ಅಂಶಗಳನ್ನು ಈ ಕೃತಿಯಲ್ಲಿ ದಾಖಲಿಸಲಾಗಿದೆ. ವಿವೇಕಾನಂದರು ವಿದೇಶಗಳಲ್ಲೂ ಈ ಸನಾತನ ಧರ್ಮದ ಶ್ರೇಷ್ಠತೆಯನ್ನು ಸ್ಥಾಪಿಸಿ ದೇಶದ ಗೌರವವನ್ನು ಹೆಚ್ಚಿಸಿದವರು. ವಿವೇಕಾನಂದರ ಅಪರೂಪದ ಚಿತ್ರಗಳು ಈ ಕೃತಿಯಲ್ಲಿರುವುದು ವಿಶೇಷ. ನಮ್ಮನ್ನು ನಾವು ಅರಿಯಲು ಈ ಕೃತಿ ಸಹಾಯಕ. ಸರಳವಾದ ಭಾಷೆಯಲ್ಲಿ ಬರೆದಿರುವ ಈ ಕೃತಿ ವಿವೇಕಾನಂದರನ್ನು ನಮಗೆ ಇನ್ನಷ್ಟು ಹತ್ತಿರವಾಗಿಸುತ್ತದೆ.
ಕೃತಿ: ಸ್ವಾಮಿ ವಿವೇಕಾನಂದ ಜೀವನ-ಸಾಧನೆ
ಪ್ರಕಾರ: ಜೀವನ ಚರಿತ್ರೆ
ಏಕೆ ಓದಬೇಕು?: ರಾಷ್ಟ್ರಾಭಿಮಾನಿಯಾಗಲು
ಪ್ರ: ಅಂಕಿತ ಪುಸ್ತಕ, ಬೆಂಗಳೂರು, ಪುಟಗಳು 152, ಬೆಲೆ ರು. 120
ಕೊಂಬೆ ಚಿಗುರಿದೆ
ಕಾವ್ಯಕ್ಕಾಗಿ ಹಲವು ಪ್ರಶಸ್ತಿ ಗಿಟ್ಟಿಸಿಕೊಂಡಿರುವ ಸ್ಮಿತಾ ಮಾಕಳ್ಳಿಯವರ ಗದ್ಯದಲ್ಲೂ ಕಾವ್ಯದ ಒರತೆ ಇರುವುದನ್ನು ಅವರ ಲೇಖನಗಳ ಸಂಕಲನ 'ಕೈಗೆಟಕುವ ಕೊಂಬೆ' ಕೃತಿಯಲ್ಲಿ ಕಾಣಬಹುದು. ಪತ್ರಿಕೆಯೊಂದಕ್ಕೆ ಅಂಕಣಕ್ಕಾಗಿ ಬರೆದ ಇಪ್ಪತ್ತೊಂದು ಬರೆಹಗಳು ಇವು. ಇದಕ್ಕೆ ಮುನ್ನುಡಿಯನ್ನು ಬರೆದಿರುವ ಜ.ನಾ. ತೇಜಶ್ರೀಯವರು, 'ಈ ಪುಟ್ಟಪುಟ್ಟ ಬರಹಗಳ ಗುಚ್ಛವನ್ನು ಓದಿ ನಾನು ನನ್ನ ಬಾಲ್ಯಲೋಕದೊಳಗೆ ನಡೆದಾಡಿ ಬಂದ ಅನುಭವವಾಯಿತು. ಇವೆಲ್ಲ ನಾನು ಬರೆಯಬೇಕಿದ್ದ ಅನುಭವಗಳು ಅನ್ನಿಸುವಷ್ಟು ಇಲ್ಲಿನ ಬಾಲ್ಯಲೋಕ ಮುಗ್ಧತೆಯಿಂದ ಕಣ್ದೆರೆದಿರುವುದೇ ಅದಕ್ಕೆ ಕಾರಣ ಎಂದು ನಾನು ತಿಳಿದಿದ್ದೇನೆ' ಎಂದು ಹೇಳಿದ್ದಾರೆ. ಕೇವಲ ಅವರಿಗಷ್ಟೇ ಅಲ್ಲ, ಇವುಗಳನ್ನು ಓದಿದವರಿಗೆ ಎಲ್ಲರಿಗೂ ಹಾಗೆ ಅನಿಸುವಷ್ಟು ಸಹಜತೆ ಮತ್ತು ಆಪ್ತತೆ, ಸಮಾಜಮುಖಿ ಮಾನವೀಯ ಚಿಂತನೆಗಳು ಇಲ್ಲಿಯ ಬರೆಹಗಳಲ್ಲಿ ಇವೆ. ಅಧ್ಯಯನ ಅವರ ಬರೆಹಗಳನ್ನು ಇನ್ನಷ್ಟು ಗಟ್ಟಿಗೊಳಿಸಬಲ್ಲುದು.
ಕೃತಿ: ಕೈಗೆಟಕುವ ಕೊಂಬೆ, ಪ್ರಕಾರ: ಲೇಖನಗಳು
ಏಕೆ ಓದಬೇಕು?: ಬಾಲ್ಯದ ಅಚ್ಚರಿ ಅನುಭವಿಸಲು
ಪ್ರ: ಬಿಸಿಲ ಕೋಲು ಪ್ರಕಾಶನ, ತುಮಕೂರು, ಪುಟಗಳು 88, ಬೆಲೆ ರು. 100
ಜನಪದ ಕಲಾ ಪ್ರವೇಶ
ಹಾಗೆ ನೋಡಿದರೆ ಮನುಷ್ಯನ ಅಭಿವ್ಯಕ್ತಿಯೆಲ್ಲವೂ ಕಲೆಯೇ. ಜನರಿಂದ ಜನರಿಗಾಗಿ ಜನರಿಗೋಸ್ಕರ ಹುಟ್ಟಿಕೊಂಡ ಜನಪದ ಕಲೆಗಳು ಜನಪದರ ಕಲಾತ್ಮಕ ಅಭಿವ್ಯಕ್ತಿ, ವರ್ಣರಂಜಿತ ವೇಷಭೂಷಣಗಳು, ವಾದ್ಯಮೇಳಗಳು, ಸಂಭಾಷಣೆ, ಹಾಡುಗಾರಿಕೆ, ಕುಣಿತ, ಅಭಿನಯ ಇವೆಲ್ಲ ಜನಪದ ಕಲೆಗಳೆಂದು ವಿಶೇಷವಾಗಿ ಗುರುತಿಸಿಕೊಂಡಿವೆ. ಇವೆಲ್ಲ ಜನಪದ ಸಂಸ್ಕೃತಿಯ ಕುರುಹುಗಳು. ಜ್ಞಾನ, ಸಂಸ್ಕೃತಿಗಳ ಪ್ರಸಾರ ಮಾಧ್ಯಮವಾಗಿರುವ ಜನಪದ ಕಲೆಗಳು ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿವೆ. ನಮ್ಮ ಜನಪದ ಕಲೆಗಳ ಪ್ರಾಚೀನತೆಯನ್ನು ಗುರುತಿಸಲು ಹೊರಟವರಿಗೆ ನಿಖರವಾದ ಕಾಲದ ಸಮಸ್ಯೆ ಮತ್ತು ಅಧಿಕೃತ ಚರಿತ್ರೆಯ ಸಮಸ್ಯೆ ಎದುರಾಗುತ್ತದೆ. ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಜಾನಪದ ವಿದ್ವಾಂಸರಾದ ಡಾ. ಚಕ್ಕೆರೆ ಶಿವಶಂಕರ್ ಅವರು ತಮ್ಮ 'ಕನ್ನಡ ಜನಪದ ಕಲಾ ಪ್ರವೇಶ' ಕೃತಿಯಲ್ಲಿ ಜನಪದ ಕಲೆಗಳನ್ನು ಸರಳವಾಗಿ ಪರಿಚಯಿಸುವ ಪ್ರಯತ್ನ ಮಾಡಿದ್ದಾರೆ. 72 ಪುಟಗಳಷ್ಟು ವರ್ಣ ಚಿತ್ರಗಳು ಇರುವುದು ವಿಶೇಷ.
ಕೃತಿ: ಕನ್ನಡ ಜನಪದ ಕಲಾ ಪ್ರವೇಶ, ಪ್ರಕಾರ: ಸಂಶೋಧನೆ
ಏಕೆ ಓದಬೇಕು?: ಜನಪದ ಕಲೆ ಅರಿಯಲು
ಪ್ರ: ಸಾಗರ್ ಪ್ರಕಾಶನ, ಬೆಂಗಳೂರು, ಪುಟಗಳು 296, ಬೆಲೆ ರು. 245
ಗ್ರಹಿಕೆಯಲ್ಲಿ ಬದುಕು
ಹಿರಿಯ ಲೇಖಕಿ ಪ್ರೇಮಾ ಭಟ್ ಅವರು ಕತೆ, ಕಾದಂಬರಿ ಬರೆದು ಪ್ರಸಿದ್ಧರಾದವರು. ಇದೀಗ ಅವರು ತಮ್ಮ ಅಂಕಣ ಬರೆಹಗಳ ಸಂಕಲನ 'ಬದುಕು ಮತ್ತು ಗ್ರಹಿಕೆ' ಮೂಲಕ ಹೊಸ ರೂಪದಲ್ಲಿ ನಿಮ್ಮ ಮುಂದೆ ಬಂದಿದ್ದಾರೆ. ಅಂಕಣ ಬರೆಹಗಾರರಿಗೆ ಒಂದು ಕಾಲಮಿತಿ ಇರುತ್ತದೆ. ಬರೆಯುವ ವಸ್ತು ಸಮಕಾಲೀನವಾಗಿರಬೇಕು ಮತ್ತು ಆ ಮೂಲಕ ಸಾರ್ವಕಾಲಿಕ ಸತ್ಯಗಳನ್ನು ಪ್ರತಿಪಾದಿಸಬೇಕು. ಶೈಲಿ ಮಿತ್ರಸಮ್ಮಿತವಾಗಿರಬೇಕು. ಸೂಕ್ಷ್ಮ ನಿರೀಕ್ಷಣೆ ಇನ್ನೊಂದು ಮುಖ್ಯ ಅರ್ಹತೆ. ಪ್ರೇಮಾ ಭಟ್ರ ಈ ಸಂಗ್ರಹದ ಲೇಖನಗಳಲ್ಲಿ ಈ ಎಲ್ಲ ಅಂಶಗಳು ಮಿಳಿತಗೊಂಡು ಓದುಗರ ಗಮನ ಸೆಳೆಯುತ್ತವೆ. ಒಂದು ರೀತಿಯಲ್ಲಿ ಇವು ಮಹಿಳಾ ಧ್ವನಿಯಾಗಿವೆ. ಪುರುಷಪ್ರಧಾನ ಸಮಾಜದಲ್ಲಿ ಮಹಿಳಾ ಸಾಧನೆಯ ಕೇತನ ಎತ್ತಿ ಹಿಡಿಯುತ್ತವೆ ಇವು. ಸ್ಥಿತ್ಯಂತರಗೊಂಡ ಕಾಲಘಟ್ಟಗಳಲ್ಲಿ ಮಹಿಳೆಯ ಪಾತ್ರ ಹೇಗೆ ಬದಲಾಗಿದೆ ಎಂಬ ಸೂಕ್ಷ್ಮ ನಿರೀಕ್ಷಣೆಯೂ ಇಲ್ಲಿಯ 53 ಲೇಖನಗಳಲ್ಲಿವೆ.
ಕೃತಿ: ಬದುಕು ಮತ್ತು ಗ್ರಹಿಕೆ, ಪ್ರಕಾರ: ಅಂಕಣ ಬರೆಹ
ಏಕೆ ಓದಬೇಕು?: ಸ್ತ್ರೀ ಚಿಂತನೆ ಅರಿಯಲು
ಪ್ರ: ಶ್ರೀ ಪ್ರೇಮಸಾಯಿ ಪ್ರಕಾಶನ, ಬೆಂಗಳೂರು, ಪುಟಗಳು 136, ಬೆಲೆ ರು. 75
ಸಲೀಸು ಕತೆಗಳು
ಎಂ.ಎಸ್. ಶ್ರೀರಾಮ್ ಅವರ 'ಸಲ್ಮಾನ್ ಖಾನನ ಡಿಫಿಕಲ್ಟೀಸು' ಎಂಬ ಕಥಾಸಂಕಲನ ಇದೀಗ ಬಂದಿದೆ. ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ಇಲ್ಲಿಯ ಕತೆಗಳು ಕತೆಗಾರರೇ ಹೇಳಿಕೊಂಡಂತೆ ಆ ಕಾಲದ ಒತ್ತಡಕ್ಕೆ ಒಳಗಾಗಿ ರೂಪುಗೊಂಡಿರುವಂಥದ್ದು. ಇದರಲ್ಲಿ ಆರು ಕತೆಗಳಿವೆ. ಕೊನೆಯಲ್ಲಿ 'ಕಥೆ ಕಟ್ಟುವ ಪರಿ- ಅಸ್ತಿತ್ವ ಕಥೆಯ ಬಗ್ಗೆ ಕೆಲವು ಟಿಪ್ಪಣಿಗಳು' ಎಂಬ ಅನುಬಂಧವಿದೆ. 'ನನ್ನ ಒಟ್ಟಾರೆ ಕಥಾ ಯಾತ್ರೆಯಲ್ಲಿ ನನಗೆ ಖಳನಾಯಕರಂತೆ ಯಾವ ಪಾತ್ರವೂ ಕಾಣುವುದಿಲ್ಲ. ಪ್ರತೀ ಪಾತ್ರಕ್ಕೂ ತನ್ನದೇ ತರ್ಕ, ತನ್ನದೇ ದೃಷ್ಟಿಕೋನವಿರುವುದರಿಂದ ತಮ್ಮ ತಮ್ಮ ಚೌಕಟ್ಟಿನಲ್ಲಿ ತಾವು ಸರಿ ಎಂದೇ ಯೋಚಿಸುವ ಮನಸ್ಥಿತಿಯನ್ನು ಚಿತ್ರಿಸಲು ಪ್ರಯತ್ನಿಸುತ್ತೇನೆ' ಎಂದು ಅವರು ಹೇಳಿಕೊಂಡಿದ್ದಾರೆ. ಕತೆಗಾರನೊಬ್ಬ ತನ್ನ ಕಥಾನಕದ ಸಾಂದರ್ಭಿಕ ಹಿನ್ನೆಲೆ ಹೇಳಿಕೊಂಡಿರುವುದು ವಿಮರ್ಶಕರ ಕೆಲಸ ಹಗುರ ಮಾಡಬಹುದು. ಓದುಗ ಇವುಗಳ ಪರಿವೆ ಇಲ್ಲದೆಯೂ ಶ್ರೀರಾಮ್ ಅವರ ಕತೆಗಳನ್ನು ಡಿಫಿಕಲ್ಟೀಸ್ ಇಲ್ಲದೆ ಸಲೀಸಾಗಿ ಆಸ್ವಾದಿಸುವುದಕ್ಕೆ ಅವಕಾಶವಿದೆ.
ಕೃತಿ: ಸಲ್ಮಾನ್ ಖಾನನ ಡಿಫಿಕಲ್ಟೀಸು, ಪ್ರಕಾರ: ಕತೆಗಳು, ಏಕೆ ಓದಬೇಕು?: ಕತೆ ಓದಲು ಕಾರಣ ಬೇಕಿಲ್ಲ
ಪ್ರ: ಅಂಕಿತ ಪುಸ್ತಕ, ಬೆಂಗಳೂರು, ಪುಟಗಳು 136, ಬೆಲೆ ರು. 95
ಮಣ್ಣಿನ ವಾಸನೆಯ ಕತೆಗಳು
ಸುನಂದಾ ಬೆಳಗಾಂವಕರ ಅವರು 1999ರಲ್ಲಿ ಪ್ರಕಟಿಸಿದ ಕತೆಗಳ ಸಂಕಲನ 'ಮೃದ್ಗಂಧ' ಈಗ ಮರುಮುದ್ರಣಗೊಂಡಿದೆ. ಮೃದ್ಗಂಧ ಎಂದರೆ ಮಣ್ಣಿನ ವಾಸನೆ ಎಂದರ್ಥ. ಧಾರವಾಡದ ಮಣ್ಣಿನಲ್ಲಿ ಬೆಳೆದು ಅಲ್ಲಿಯ ಬದುಕಿನ ಸಾರವನ್ನು ಗ್ರಹಿಸಿದ್ದ ಸುನಂದಾ ಅವರು ಉತ್ತರ ಕರ್ನಾಟಕದ ಅಪ್ಪಟ ದೇಸಿಯಲ್ಲಿ ತಮ್ಮ ಕತೆಗಳನ್ನು ಹೆಣೆದಿರುವರು. ಇದರಲ್ಲಿ ಹತ್ತು ಕತೆಗಳಿವೆ. ಕತೆಗಳನ್ನು ಅವರು ತಮ್ಮ ಆತ್ಮತೃಪ್ತಿಗಾಗಿ ಬರೆದುಕೊಂಡರೂ ಸ್ತ್ರೀಯರ ನೋವಿನ ಚಿತ್ರಣಕ್ಕೆ ಆದ್ಯತೆ ನೀಡಿದ್ದಾರೆ. ಹೆಣ್ಣಿನ ವೈಧವ್ಯ, ಕೇಶವಪನದ ಅಪಮಾನ, ಶೋಷಣೆ ಇತ್ಯಾದಿ ಪರಿಣಾಮಕಾರಿಯಾಗಿ ಚಿತ್ರಿತವಾಗಿವೆ. ಎನ್ಕೆಯವರು ಗುರುತಿಸಿರುವಂತೆ ವೈವಾಹಿಕ, ಕೌಟುಂಬಿಕ ಚಿತ್ರಣವೇ ಕತೆಗಾರ್ತಿಯ ಕತೆಗಾರಿಕೆಯ ಕೇಂದ್ರ ದ್ರವ್ಯ. ಬೇಂದ್ರೆಯವರ ಸಖೀಗೀತದ ಕಾವ್ಯ ಸ್ವಾರಸ್ಯವೆಲ್ಲ ಕತೆಗಾರ್ತಿಯ ಗದ್ಯಕಥಾ ಕಾವ್ಯದಲ್ಲಿ ಕೆನೆಗಟ್ಟಿ ನಿಂತಿದೆ ಎಂದು ಹೇಳಿದ್ದಾರೆ. ಕತೆಗಾರ್ತಿಯೊಬ್ಬರಿಗೆ ಇದಕ್ಕಿಂತ ದೊಡ್ಡ ಸಮ್ಮಾನ ಯಾವುದಿದೆ?
ಕೃತಿ: ಮೃದ್ಗಂಧ, ಪ್ರಕಾರ: ಕಥೆಗಳು, ಏಕೆ ಓದಬೇಕು?: ಸ್ತ್ರೀ ಚಿಂತನೆ ಅರಿಯಲು
ಪ್ರ: ಅಂಕಿತ ಪುಸ್ತಕ, ಬೆಂಗಳೂರು, ಪುಟಗಳು 208, ಬೆಲೆ ರು. 150
ಮಾರ್ಗದ ಮಹಾವಾಕ್ಯಗಳು
ಕನ್ನಡದ ಹಿರಿಯ ಸಂಶೋಧಕ ಡಾ.ಎಂ.ಎಂ. ಕಲಬುರ್ಗಿಯವರು ಕಳೆದ ಅರ್ಧ ಶತಮಾನದ ಅವಧಿಯಲ್ಲಿ ನಿರಂತರವಾಗಿ ಕೈಗೊಂಡ ಸಂಶೋಧನೆಯ ಫಲವಾಗಿ ನೂರಕ್ಕೂ ಹೆಚ್ಚು ಕೃತಿಗಳು ಬಂದಿವೆ. 'ಮಾರ್ಗ' ಹೆಸರಿನಲ್ಲಿ ಅವರ ಸಂಶೋಧನ ಲೇಖನಗಳ ಆರು ಸಂಪುಟಗಳು ಬಂದಿವೆ. ಅವರ ಕೃತಿಗಳಲ್ಲಿ ಬೀಜವಾಕ್ಯಗಳಂತಿರುವ ಹಲವು ಮಾತುಗಳು ಬಂದಿವೆ. ಹಲವು ವಿಷಯಗಳಲ್ಲಿ ಕಲಬುರ್ಗಿಯವರೇ ಪ್ರಥಮರಾಗಿರುವ ಕಾರಣ ಅನೇಕ ವ್ಯಾಖ್ಯೆಗಳನ್ನು ಅವರು ನೀಡುವುದು ಅನಿವಾರ್ಯವೂ ಆಗಿತ್ತು. ಅವರ ಕೃತಿಗಳಲ್ಲಿಯ ಮಹತ್ವದ ವಾಕ್ಯಗಳನ್ನು 'ಮಾರ್ಗದ ಮಹಾವಾಕ್ಯಗಳು' ಎಂಬ ಕೃತಿಯಲ್ಲಿ ಡಾ.ಎಫ್.ಟಿ. ಹಳ್ಳಿಕೇರಿ ಮತ್ತು ಎನ್.ಬಿ. ನಿರ್ವಾಣಿ ಸಂಪಾದಿಸಿಕೊಟ್ಟಿದ್ದಾರೆ. 'ಸಂಶೋಧನೆ ಎನ್ನುವುದು ಅಲ್ಪವಿರಾಮ, ಅರ್ಧವಿರಾಮಗಳ ಮೂಲಕ ಪೂರ್ಣವಿರಾಮಕ್ಕೆ ಸಾಗುವ ಕ್ರಿಯೆಯಾಗಿದೆ' ಎನ್ನುವಂಥ ಸೂತ್ರರೂಪದ ವಾಕ್ಯಗಳು ಇಲ್ಲಿವೆ. ಸಂಶೋಧನೆಯಲ್ಲಿ ತೊಡಗುವವರಿಗೆ ಇದೊಂದು ಮಾರ್ಗದರ್ಶಿ ಕೃತಿಯಾಗಿದೆ.
ಕೃತಿ: ಮಾರ್ಗದ ಮಹಾವಾಕ್ಯಗಳು, ಪ್ರಕಾರ: ಸಂಪಾದನೆ
ಏಕೆ ಓದಬೇಕು?: ಬೀಜ ರೂಪದಲ್ಲಿ ಸಂಶೋಧನೆ ಅರಿಯಲು
ಪ್ರ: ವಿಕಾಸ ಪ್ರಕಾಶನ, ಹೊಸಪೇಟೆ, ಪುಟಗಳು 228, ಬೆಲೆ ರು. 200
ಶನಿವಾರ ಸಂತೆ
ಕತೆಗಾರರೂ, ಪ್ರಬಂಧಕಾರರೂ ಎಂದು ಈಗಾಗಲೆ ಹೆಸರು ಮಾಡಿರುವ ಎಂ.ಎಸ್. ಶ್ರೀರಾಮ್ ಅವರ ಹೊಸ ಪ್ರಬಂಧ ಸಂಕಲನ 'ಶನಿವಾರ ಸಂತೆ' ಇದೀಗ ಬಂದಿದೆ. ಇದಕ್ಕೆ ಅವರು ವಿಕಾಸದ ವಿಚಾರಗಳು ಎಂಬ ಅಡಿ ಶೀರ್ಷಿಕೆಯನ್ನು ನೀಡಿದ್ದಾರೆ. ಪತ್ರಿಕೆಯೊಂದರಲ್ಲಿ ಅಂಕಣ ರೂಪದಲ್ಲಿ ಇವೆಲ್ಲ ಪ್ರಕಟವಾದವು. ಸಮಕಾಲೀನ ವಿಷಯದೊಂದಿಗೆ ತನ್ನ ಆಲೋಚನೆಗಳನ್ನು ಮಸೆದು ಚರ್ಚೆಯನ್ನು ಬೆಳೆಸುವ ಉದ್ದೇಶದ ಅಂಕಣ ಬರೆಹಕ್ಕೆ ಚಿಕಿತ್ಸಕ ಬುದ್ಧಿ ಬೇಕು. ಇಲ್ಲಿ ತಮ್ಮದೇ ತೀರ್ಮಾನವನ್ನು ಹೇಳದೆ ಓದುಗರನ್ನು ಆಲೋಚನೆಗೆ ಹಚ್ಚುವಂತೆ ಮಾಡುವುದು ಮಹತ್ವದ್ದು. ಇಲ್ಲಿರುವ 28 ಲೇಖನಗಳಲ್ಲಿ ಆಲೋಚನೆಗೆ ಹಚ್ಚುವ ಬೀಜಗಳನ್ನು ಎಂ.ಎಸ್. ಶ್ರೀರಾಮ್ ಬಿತ್ತಿದ್ದಾರೆ. ಯಾವುದೇ ಸಿದ್ಧಾಂತವನ್ನು ಮಂಡಿಸಲು ಅವರು ಹೋಗುವುದಿಲ್ಲ. 'ಮಹಾತ್ಮ ಗಾಂಧಿ ಮತ್ತು ಮಾಬ್ಲಾ ಪೆನ್ನು' ಈ ಸಂಕಲನದಲ್ಲಿಯ ಒಂದು ಅತ್ಯುತ್ತಮ ಲೇಖನ.
ಕೃತಿ: ಶನಿವಾರ ಸಂತೆ
ಪ್ರಕಾರ: ಪ್ರಬಂಧಗಳು
ಏಕೆ ಓದಬೇಕು?: ಸಮಕಾಲೀನ ವಿಷಯಗಳ
ಚರ್ಚೆಯಲ್ಲಿ ಭಾಗಿಯಾಗಲು
ಪ್ರ: ಅಂಕಿತ ಪುಸ್ತಕ, ಬೆಂಗಳೂರು, ಪುಟಗಳು 160, ಬೆಲೆ ರು. 120
- ಡಾ. ವಾಸುದೇವ ಶೆಟ್ಟಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

