ಬೆಳದಿಂಗಳ ಜಳಕ
ಅವನು ಹಾಗಲ್ಲಿ ಇದ್ದಿರಬಹುದಾದ ಕಲ್ಪನೆಯೂ ನನ್ನ ಬಳಿ ಸುಳಿದಿರಲಿಲ್ಲ. ಏನನ್ನಬೇಕು ಅವನನ್ನ? ಕಳ್ಳ, ತುಂಟ, ಪೋಲಿ, ಫಟಿಂಗ... ಊಹೂಂ, ಹಾಗೇನನ್ನೂ ಹೇಳಲು ಮನಸ್ಸೇ ಬರುವುದಿಲ್ಲ. ಆ ಕ್ಷಣ ನನ್ನ ಮುಖಕ್ಕೆ ದೀಢೀರನೆ ರಕ್ತ ನುಗ್ಗಿ ಬಂದು ಒಂದಷ್ಟು ಕೋಪ ತರಿಸಿದ್ದಂತೂ ಸತ್ಯ. ಅದು ಕೋಪವೋ, ಹುಸಿ ಮುನಿಸೋ, ನಾಚಿಕೆಯೋ, ರೋಮಾಂಚನವೋ, ಮುಜುಗರವೋ, ಉದ್ವೇಗವೋ, ಗಾಬರಿಯೋ, ತಲ್ಲಣವೋ, ಬಯಕೆಯೋ, ಉದ್ದೀಪನವೋ....ಅಥವಾ ಇವೆಲ್ಲದರ ಒಟ್ಟು ಹರಿವೋ. ಅಂತೂ ಅದು ನನ್ನ ಅರಿವಿಗೆ ಬಂದಾಕ್ಷಣ ನನ್ನ ಮುಖ ಕೆಂಪಡರಿದ್ದಂತೂ ನಿಜ. ಮೈಯ್ಯೆಲ್ಲಾ ಬಿಸಿಯಾದ ಅನುಭವ. ಒಂದರೆಗಳಿಗೆ ನನಗೇನಾಗುತ್ತಿದೆ ಎಂಬುದೇ ತಿಳಯದೇ ಗಾಬರಿಗೆ ಒಳಗಾಗಿದ್ದೆ. ಆ ಹೊತ್ತಿನಲ್ಲಿ ಆದದ್ದನ್ನು ಪದಗಳಲ್ಲಿ ಹಿಡಿದಿಡುವುದಂತೂ ಅಸಾಧ್ಯ.
ಅವನಲ್ಲದೇ ಬೇರಾರೇ ಆಗಿದ್ದರೂ ರಾಣರಂಪಾಟ ಮಾಡಿಬಿಡುತ್ತಿದ್ದೆನೇನೋ. ಮುಖಕ್ಕೆ ಉಗಿದು ನೀರಿಳಿಸಿಬಿಡುತ್ತಿದ್ದೆನೇನೋ. ಮನೆಯವರೂ, ಅಕ್ಕಪಕ್ಕದವರನ್ನೆಲ್ಲ ಕರೆದು, ಕೂಗಾಡಿ ಅಲ್ಲೊಂದು ಪುಟ್ಟ ರಣರಂಗವನ್ನೇ ಸೃಷ್ಟಿ ಮಾಡುತ್ತಿದ್ದೆನೇನೋ. ಆತನ ತಪ್ಪಿಗೆ ಪ್ರತಿಯಾಗಿ ನ್ಯಾಯ ಕೋರಿ, ಎಲ್ಲೆಲ್ಲಿಗೆ ದೂರು ಒಯ್ಯುತ್ತಿದ್ದೆನೇನೋ. ಆದರೆ, ಇವನನ್ನ ಹಾಗೆ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಏಕೋ ಮನಸ್ಸೇ ಬರುತ್ತಿಲ್ಲ. ಇದಾಗಿ ವಾರಗಳೇ ಕಳೆದಿವೆ. ಆದರೂ ಆ ಘಟನೆಯನ್ನು ಮನಸ್ಸಿನಿಂದ ಕಿತ್ತೊಗೆಯಲೇ ಆಗುತ್ತಿಲ್ಲ ನನ್ನಿಂದ. ಅವನು ಹಾಗೊಂದು ಕಣ್ಣಾಮುಚ್ಚಾಲೆ ಆಡುತ್ತಾನೆ ಎಂದು ಎಣಿಸಿಯೇ ಇರಲಿಲ್ಲ. ಕನಿಷ್ಠ ನಾಚಿಕೆಯಾದರೂ ಬೇಡವೇ ಆತನಿಗೆ? ಆ ಮಟ್ಟಗಿನ ಸಲುಗೆಯನ್ನು ಆತನಿಗೆ ಕೊಟ್ಟವರಾದರೂ ಯಾರು? ನೋಡಲು ಸಂಪನ್ನನಂತೆ ಕಾಣುವ ಅವನು ಪಕ್ಕಾ ಸೋಗುಗಾರ. ಸಭ್ಯತೆಯ ಎಲ್ಲ ಎಲ್ಲೆಗಳನ್ನೂ ಮೀರಿ, ಚಿಗುರಿದ ಯವ್ವನದ ಹುಡುಗಿಯೊಬ್ಬಳೊಂದಿಗೆ ಆತ ಹೀಗೆಲ್ಲ ವರ್ತಿಬಹುದೇ? ತಾನು ಅತಿ ಸುಂದರ, ಚತುರ, ಮಾರ, ಜವ್ವನಿಗ ಎಂಬ ಅವನ ಅಹಂ ಹೀಗಾಡಿಸಿದ್ದಿರಬಹುದು. ಎಲ್ಲರೂ ಅವನನ್ನು ಇಷ್ಟಪಡುತ್ತಾರೆ, ಹೊಗಳುತ್ತಾರೆ ಎಂದ ಮಾತ್ರಕ್ಕೆ ಒಬ್ಬಳು ಅಸಹಾಯಕ ಒಂಟಿ ಹುಡುಗಿಯ ಜತೆಗೆ ಹೀಗೆಲ್ಲ ತುಂಟಾಟವನ್ನು ಆಡಬಹುದೇ? ಕೇಳುತ್ತೇನೆ ಹಾಗಾದರೆ. ಅವನನ್ನು ಹದ್ದುಬಸ್ತಿನಲ್ಲಿಡುವವರು ಯಾರೂ ಇಲ್ಲವೇ? ಚೆಂದವಿದ್ದ ಮಾತ್ರಕ್ಕೆ ಎಲ್ಲರೂ ಪ್ರೀತಿಸುತ್ತಾರೆ ಎಂದ ಮಾತ್ರಕ್ಕೆ ಅವನು ನನ್ನಂಥ ಚಂಚಲೆಯ ಜತೆ ಹೇಗೆ ಬೇಕಾದರೂ ವರ್ತಿಸಬಹುದೇ?
ಅದು ವಸಂತದ ಇರುಳು. ತಣ್ಣನೆಯ ತಿಳಿಗಾಳಿ ಲಾಸ್ಯವಾಡುತ್ತಲೇ ಇತ್ತು. ಸುತ್ತೆಲ್ಲ ಪಸರಿಸಿದ ಪರಿಮಳ. ನಾನು ನಾನಾಗಿರಲು ಸಾಧ್ಯವೇ ಇರಲಿಲ್ಲ. ಹುಚ್ಚುಕೋಡಿ ಮನಸ್ಸು ಹೇಗೆಹೇಗೋ ನರ್ತಿಸುತ್ತಿತ್ತು. ಆ ಅಂಗಳದಲ್ಲಿ ಇದ್ದವಳು ನಾನೊಬ್ಬಳೇ. ಜತೆಗೆ ಬಯಕೆಗಳ ಬೆಂಬಿಡದ ಸಾಥ್. ಮೈಮನಗಳಲ್ಲಿ ಸುಳಿದಾಡುತ್ತಿದ್ದ ಕಲ್ಪನೆಗಳ ಭಾರದಲ್ಲೇ ಬಳುಕುತ್ತಿದ್ದೆ. ನನ್ನ ನಿಯಂತ್ರಣದಲ್ಲಿ ನಾನಿರಲಿಲ್ಲ. ಮೈಚಳಿಬಿಟ್ಟು ಕುಣಿಯಲಾರಂಭಿಸಿದೆ. ಅಲ್ಲಿ ನಿರ್ಮಿಸಿದ್ದ ಕುಟೀರದ ಗುಂಟ ಹಬ್ಬಿದ್ದ ಬಳ್ಳಿಗಳೂ ನನ್ನೊಂದಿಗೇ ನರ್ತಿಸುತ್ತಿದ್ದವು. ತಲೆದೂಗಲು ಕಾದಿದ್ದವರಂತೆ ತೊನೆಯುತ್ತಿದ್ದವು ಚೆಂಗುಲಾಬಿ, ಲಾಲಿ, ಜಾಜಿಯರು. ಅವುಗಳ ಸಂತಸದ ಪ್ರತೀಕವೋ ಎಂಬಂತೆ ಆ ಸುಪಷ್ಪಗಳಿಂದ ಅವ್ಯಕ್ತ ಗಂಧ ನನ್ನ ಮೈ ತೀಡಿ ಹೋಗುತ್ತಿತ್ತು. ಗಿಡಮರಗಳೂ ಪ್ರೇಕ್ಷಕಗಣದಲ್ಲಿ. ಗಾಳಿಯ ಸುಳಿದಾಟದಲ್ಲಿ ಕೇಳುತ್ತಿದ್ದ ಸೂಮಯ ಗಾನವೇ ಶ್ರುತಿಹಿಡಿದಿತ್ತು ನನ್ನ ನರ್ತನಕ್ಕೆ. ಕಾನನದ ಜೀರುಂಟೆಗಳ ಸದ್ದೇ ಗಾಯನ. ಉಳಿದೆಲ್ಲ ನೀರವ. ಅದೆಷ್ಟು ಹೊತ್ತು ಹಾಗೆ ಹುಚ್ಚೆದ್ದು ಕುಣಿಯುತ್ತಿದ್ದೆನೋ. ಕೊನೆಗೊಮ್ಮೆ ಮೈಯೆಲ್ಲಾ ಬೆವರಲ್ಲಿ ನೆನೆದು ತೊಪ್ಪೆಯಾಗಿ, ಉಡುಪುಗಳು ಅಂಟತೊಡಗಿದವು. ಮನಸ್ಸು ಹಗುರಾಗಿತ್ತು. ಆಗಿನಿಂದಲೂ ಆತ ಮರೆಯಲ್ಲಿ ಕುಳಿತು ಇಣುಕುತ್ತಲೇ ಇದ್ದನೆನಿಸುತ್ತದೆ. ನನಗೋ ಅದ್ಯಾವುದರ ಅರಿವೇ ಇಲ್ಲ. ಕುಣಿದು ಮುಗಿಸಿ, ಆ ಕ್ಷಣದ ಉಲ್ಲಾಸವನ್ನು ದುಪ್ಪಟ್ಟುಗೊಳಿಸಿಕೊಳ್ಳುವ ಬಯಕೆ ಮೊಳೆಯಿತು. ತಣ್ಣನೆ ರಾತ್ರಿಯಲ್ಲಿ ಹನಿಯಡಿಗೆ ನಿಂತು ಹದವಾಗಿ ಮಿಂದರೆ... ಆ ಯೋಚನೆ ಬಂದದ್ದೇ ತಡ ಬಯಲ ಬಚ್ಚಲು ಹೊಕ್ಕಿದ್ದೆ. ಹಿಂಬಾಲಿಸಿದ್ದಿರಬೇಕು ಆತ. ಬಚ್ಚಲಿನ ಸಂದಿನ ಕಳ್ಳಗಿಂಡಿಯಲ್ಲಿ ಆತ ಹಾಗೆ ಕದ್ದು ನೋಡುತ್ತಿದ್ದಿರಬಹುದು ಎಂದು ಹೇಗೆ ತಾನೇ ಊಹಿಸಲಿ?
ಅಂಬರಗಳನ್ನು ಒಂದೊಂದಾಗಿ ಕಳೆದು ನಿಚ್ಚಳ ಬತ್ತಲಾಗಿದ್ದೆ. ಅಲ್ಲಿ ನನ್ನುಳಿದು ಯಾರೂ ಇಲ್ಲವೆಂಬುದು ನನ್ನ ಭ್ರಮೆಯಷ್ಟೇ ಅಂತ ತಿಳಿದದ್ದು ಆಮೇಲಷ್ಟೇ. ಬಯಲ ಬಚ್ಚಲಲ್ಲಿ ಹಂಡೆಯ ಹಬೆಯಾಡುವ ನೀರ ಮೊಗೆಮೊಗೆದು ಸುರುವಿಕೊಳ್ಳುತ್ತಲೇ ಇದ್ದೆ. ನನ್ನ ದೇಹದ ಏರಿಳಿತಗಳು ನನ್ನನ್ನೇ ಉದ್ರೇಕಿಸುತ್ತಿದ್ದವು. ಒಮ್ಮೆ ಅಲ್ಲೆಲ್ಲ ಕೈಯಾಡಿಸಿಕೊಂಡು ನನ್ನ ಸೌಂದರ್ಯಕ್ಕೆ ನನ್ನಷ್ಟಕ್ಕೆ ಹೆಮ್ಮೆಯಿಂದ ಪುಳಕಗೊಂಡೆ. ಆಗಲೂ ಆತ ತದೇಕಚಿತ್ತದಿಂದ ನೋಡುತ್ತಲೇ ಇದ್ದನಿರಬೇಕು. ಅವನ ಪೋಲಿ ಕಣ್ಣುಗಳು ಎಲ್ಲೆಲ್ಲಿ ಹರಿದಾಡಿರಬೇಡ? ಎಷ್ಟು ಆಳಕ್ಕೆ, ಯಾವ ಎತ್ತರಕ್ಕೆ, ಉದ್ದ- ಎತ್ತರಕ್ಕೆಲ್ಲ ಓಡಾಡಿ ಸಂಪೂರ್ಣ ಸ್ಕ್ಯಾನ್ ಮಾಡಿದ್ದರಲ್ಲಂತೂ ಅನುಮಾನವಿಲ್ಲ. ಹೇಗೂ ಇದ್ದುದ್ದು ನಾನೊಬ್ಬಳೆ ಎಂಬ ನಂಬಿಕೆ, ಮುದಗೊಂಡ ಮನಸ್ಸಿನ ಉತ್ಸಾಹದಲ್ಲಿ ಅವನ ಕಣ್ಣುಗಳು ಹೀಗೆ ನನ್ನ ಬಳಸಿ ನಿಂತಿರುವುದು ಗೊತ್ತೇ ಆಗಲಿಲ್ಲ. ನಿಸ್ಸಂಕೋಚ, ನಿರ್ಭೆಡೆಯಲ್ಲಿ ಮೀಯುತ್ತಿದ್ದ ನನ್ನ ದೃಷ್ಟಿ ಅದೇಕೋ ಅತ್ತ ಆಗಸದತ್ತ ಹೊರಳಿತು. ಆಗಲೇ ಅಲ್ಲಿ ಇದ್ದದ್ದು ನಾನೊಬ್ಬಳೇ ಅಲ್ಲ ಎಂಬ ಅನುಮಾನ ಕಾಡಿದ್ದು. ಅದು ಭ್ರಮೆಯೇ, ನಿಜವೇ ಎಂದು ಖಚಿತಪಡಿಸಿಕೊಳ್ಳಲೋಸಗ ಮತ್ತೆ ಮುಖ ಎತ್ತಲೋ, ದಿಟ್ಟಿಸಲೂ ಆಗದಷ್ಟು ಸಂಕೋಚ, ಭಯ ಒಮ್ಮೆಲೆ ನನ್ನನ್ನಾವರಿಸಿತು. ಥಟ್ಟನೆ ಎದೆಯುಬ್ಬರವನ್ನು ಕೈಗಳಲ್ಲಿ ಮುಚ್ಚಿಡಲು ಯತ್ನಿಸಿದೆ. ತೊಡೆಗಳು ತನ್ನಿಂದ ತಾನೆಯೇ ಬೆಸೆದುಕೊಂಡು ಕಾಣಬಾರದ್ದನ್ನು ಮರೆ ಮಾಡುವ ಸರ್ಕಸ್ಗೆ ತೊಡಗಿದವು. ಹೇಗೆ ಹೇಗೋ ಸಾವರಿಸಿಕೊಂಡು ಮೆತ್ತಗೆ ಮುಖ ಎತ್ತಿ ಕಿಟಕಿಯಿಂದಾಚೆಗೆ ಒಮ್ಮೆ ಬೆದರುತ್ತಲೇ ನೋಡಿದೆ. ಹೌದು, ನನ್ನ ಅನುಮಾನ ನಿಜವಾಗಿತ್ತು. ಆತ ತುಂಟ ನಗು ನಗುತ್ತಿದ್ದ. ಆ ನೋಟದಲ್ಲಿ ಇದ್ದ ರಸಿಕತನವನ್ನು ಅಂಥ ಗಾಬರಿಯಲ್ಲೂ ಗುರುತಿಸದಿರಲಾಗಲಿಲ್ಲ. ಅಷ್ಟೇ ಕೈಗೆ ಸಿಕ್ಕ ಬಟ್ಟೆಗಳನ್ನು ಅವುಚಿಕೊಂಡು ಒಳಗೋಡಿಬಿಟ್ಟೆ....
ಅಬ್ಬಾ ಇವತ್ತಿಗೂ ಬಚ್ಚಲಿಗೆ ಬಂದರೆ ಸಾಕು. ಆ ಹುಣ್ಣಿಮೆಯ ಇರುಳಲ್ಲಿ ಆಗಸದಲ್ಲೇ ನಿಂತು ಹಾಗೆ ನಾಚಿಕೆ ಬಿಟ್ಟು ನನ್ನ ಬಿರುಸು ದೇಹವ ಕಣ್ಣಲ್ಲೆ ಇರಿದ ಕಳ್ಳ ಚೆಂದಿರನ ನೆನಪೇ. ಅಷ್ಟೆ, ಮತ್ತೆಂದೂ ಬೆತ್ತಲಾಗಿ ಮೀಯುವ ಧೈರ್ಯ ನನ್ನಲ್ಲುಳಿದಿಲ್ಲ.
- ರಾಧಾ ಸೋಚನಿ
abhyagatha@yahoo.co.in
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

