ಸಾಪ್ತಾಹಿಕಪ್ರಭ

ಯಾಜ್ಞಸೇನಿಯ ಆತ್ಮನಿವೇದನೆ

Published On :

ಒರಿಯಾ ಖ್ಯಾತ ಲೇಖಕಿ, ಜ್ಞಾನಪೀಠ ಪುರಸ್ಕೃತೆ ಪ್ರತಿಭಾ ರೇ ಅವರ 'ಯಾಜ್ಞಸೇನಿ- ಒಂದು ಆತ್ಮ ನಿವೇದನೆ' ಕೃತಿಯನ್ನು ಮುಂಬೈ ಕನ್ನಡಿಗ, ಸಾಹಿತಿ ಡಾ. ವಿಶ್ವನಾಥ್ ಕಾರ್ನಾಡ್ ಕನ್ನಡೀಕರಿಸಿದ್ದಾರೆ. ಪ್ರತಿಷ್ಠಿತ ಮೂರ್ತಿದೇವಿ ಪ್ರಶಸ್ತಿ ಪಡೆದಿರುವ 'ಯಾಜ್ಞಸೇನಿ' ಹಂಗೇರಿಯನ್, ಇಂಗ್ಲಿಷ್ ಸೇರಿ ಭಾರತದ ಅನೇಕ ಭಾಷೆಗಳಿಗೆ ಭಾಷಾಂತರಗೊಂಡಿದೆ.  
ಯಾಜ್ಞಸೇನಿ ಅಂದರೆ ದ್ರೌಪದಿ. ಯಜ್ಞದಿಂದ ಜನಿಸಿದವಳು. ಪ್ರತಿಭಾ ರೇ ಅವರು ಯಾಜ್ಞಸೇನಿಯ ಆತ್ಮನಿವೇದನೆಯಲ್ಲಿ ಓದುಗರಿಗೆ ಹೊಸ ಆಲೋಚನೆ, ಅನುಭವವನ್ನು ಕಟ್ಟಿಕೊಟ್ಟಿದ್ದಾರೆ. ಮಹಾಭಾರತವನ್ನು ಅನೇಕ ದಾರ್ಶನಿಕರು, ಲೇಖಕರು ತಮ್ಮದೇ ದೃಷ್ಟಿಕೋನದಲ್ಲಿ ನೋಡಿದ್ದಾರೆ. ಅಂಥದ್ದೇ ಪ್ರಯತ್ನವೇ 'ಯಾಜ್ಞಸೇನಿ'. ದ್ರೌಪದಿಯನ್ನು ವರ್ತಮಾನದಲ್ಲಿ ನಿಂತು ನೋಡುವ ಪ್ರತಿಭಾ ಪ್ರಯತ್ನಕ್ಕೆ ವ್ಯಾಸ ಮಹರ್ಷಿಗಳ ಮೂಲ ಮಹಾಭಾರತವೇ ಪ್ರೇರಕ.
'ಪಾಂಚಾಲಿ'ಯನ್ನು ಕೇಂದ್ರಬಿಂದುವನ್ನಾಗಿಟ್ಟುಕೊಂಡು ಮಹಾಭಾರತಕ್ಕೆ ಹೊಸ ಆಯಾಯವನ್ನು, ದೃಷ್ಟಿಕೋನದ ದಿಶೆಯನ್ನು ಬದಲಾಯಿಸುವ ಪ್ರಯತ್ನವನ್ನು ಉದ್ದೇಶಪೂರ್ವಕವಾಗಿಯೇ ಪ್ರತಿಭಾ ಮಾಡಿದ್ದಾರೆ ಮತ್ತು ಅವರ ಈ ಪ್ರಯತ್ನ ಓದುಗರಿಗೆ ಖುಷಿ ಕೊಡುತ್ತದೆ. ಇಂಥದ್ದೇ ಪ್ರಯತ್ನವನ್ನು 'ಪರ್ವ'ದಲ್ಲಿ ಎಸ್.ಎಲ್. ಭೈರಪ್ಪ ಅವರೂ ಮಾಡಿದ್ದನ್ನು ಸ್ಮರಿಸಬಹುದು.
ಆದರೆ, ಪ್ರತಿಭಾ ರೇ ಅವರು ದ್ರೌಪದಿಯನ್ನು ಕೇವಲ ಹೆಣ್ಣು ಅಥವಾ ಮಹಾಭಾರತಕ್ಕೆ ಕಾರಣೀಭೂತಳು ಅನ್ನುವ ಲೆಕ್ಕದಲ್ಲಿ ನೋಡಿಲ್ಲ. ಆಕೆಯ ಮೂಲಕ ಇಡೀ ಜಗತ್ತಿನ ಹೆಣ್ಣುಮಕ್ಕಳನ್ನು ನಮ್ಮ ವ್ಯವಸ್ಥೆ ಅನಾದಿ ಕಾಲದಿಂದ ಈ ಕ್ಷಣದವರೆಗೂ ಹೇಗೆ ನಡೆಸಿಕೊಳ್ಳತ್ತಾ ಬಂದಿದೆ. ತನ್ನ ಅನುಕೂಲಸಿಂಧುವಿಗಾಗಿ ಆಕೆಯನ್ನು ಹೇಗೆ ರಮಿಸಿದೆ? ಯಾವುದೋ ಕೆಲಸಕ್ಕೆ ತಯಾರುಗೊಳಿಸಿದೆ? ಸಮಯ ಬಂದಾಗ ಆಕೆಯನ್ನು ತಲೆಮೇಲೆ ಹೊತ್ತುಕೊಂಡು, ಕೆಲಸವಾದ ಮೇಲೆ ಕಾಲ ಕೆಳಗೆ ಹಾಕಿ ತುಳಿಯುವುದನ್ನು ದ್ರೌಪದಿ ಮೂಲಕ ನಿರೂಪಿಸುತ್ತಾ ಹೋಗಿರುವುದು ರೇ ಅವರ ಹೆಚ್ಚುಗಾರಿಕೆ.
ರೇ ಮಹಾಭಾರತದಲ್ಲಿ ದ್ರೌಪದಿಯೇ ನಾಯಕಿ ಮತ್ತು ಅವಳೇ ನಿರೂಪಕಿ. ಆಕೆ ತನ್ನ ಕಥೆಯನ್ನು ಹೇಳುತ್ತಾ ಹೋದಂತೆ ಇಡೀ ಮಹಾಭಾರತ ತೆರೆದುಕೊಳ್ಳುತ್ತದೆ. ಎಲ್ಲದಕ್ಕೂ ಕಾರಣವಾಗುವ ಮತ್ತು ಕಾರಣವಾಗದ ರೀತಿಯಲ್ಲಿ ನಡೆದುಕೊಳ್ಳುವ 'ಪರಮಾತ್ಮ ಶ್ರೀಕೃಷ್ಣ'ನ ಇಚ್ಛೆಯಂತೆ ದ್ರೌಪದಿಯ ನಡೆ- ನುಡಿ, ಬದುಕು ಅನಾವರಣಗೊಳ್ಳುತ್ತದೆ.
ದ್ರೋಣಾಚಾರ್ಯರ ಮೇಲಿನ ದ್ವೇಷ ತೀರಿಸಿಕೊಳ್ಳಲು ರಾಜ ದ್ರುಪದ ಯಜ್ಞ ಮಾಡಿ ಯಾಜ್ಞಸೇನಿಯ ಹುಟ್ಟಿಗೆ ಕಾರಣವಾಗುತ್ತಾನೆ. ಅಪೂರ್ವ ಸೌಂದರ್ಯವತಿ, ಲಾವಣ್ಯವತಿಯಾದ ಯಾಜ್ಞಸೇನಿಗೆ ಶ್ರೀಕೃಷ್ಣನ ಮೇಲೆ ಮೋಹ. ಆತ ಹೇಳಿಕೇಳಿ ಮನಮೋಹನ. ಆದರೆ, ಅಷ್ಟೇ ಚಾಲಾಕಿ. ಕೃಷ್ಣನನ್ನು ಮೋಹಿಸಿದ ಕೃಷ್ಣೆಯನ್ನು ಮದುವೆಯಾಗುವಂತೆ ಆಕೆಯ ತಂದೆ ಕೇಳಿಕೊಂಡಾಗ ಅಷ್ಟೇ ನಯವಾಗಿ ತಿರಸ್ಕರಿಸಿ, ತನ್ನಷ್ಟೇ ಸೌಂದರ್ಯವಂತ, ಸಾಹಸಿಗ ಮತ್ತು ಅಪ್ರತಿಮ ಶೂರ ಮಧ್ಯಮ ಪಾಂಡವನಾದ ಪಾರ್ಥ ಯಾಜ್ಞಸೇನಿಯನ್ನು ವರಿಸುತ್ತಾನೆ. ಅದಕ್ಕಾಗಿ ಸ್ವಯಂವರ ಏರ್ಪಡಿಸುವಂತೆ ದ್ರುಪದಗೆ ಸೂಚಿಸಿತ್ತಾನೆ. ಇಲ್ಲಿಂದಲೇ ಹೆಣ್ಣಿನ ಎಲ್ಲ ಆಶೆ, ಆಕಾಂಕ್ಷೆಗಳು, ಭಾವನೆಗಳು ಮತ್ತೊಬ್ಬರ ನಿರ್ದೇಶನದಲ್ಲಿ ಅಡಗಿ ಕುಳಿತಿವೆ ಎಂಬುದನ್ನು ಮನದಟ್ಟು ಮಾಡುತ್ತಾರೆ ರೇ.
ದ್ರೌಪದಿ ತನ್ನ ಸ್ಥಿತಿಯನ್ನು ಕೃಷ್ಣನಿಗೆ ಪತ್ರ ಬರೆಯುವ ಮೂಲಕ ನಿವೇದನೆ ಮಾಡಿಕೊಳ್ಳುತ್ತಾ ಹೋಗುತ್ತಾಳೆ. ದ್ರೌಪದಿ ಎಂದರೆ ಯಾತನೆ, ವಂಚನೆ, ಮಾನಸಿಕ ಸಂಕಟ ಮತ್ತು ಸಂಘರ್ಷಗಳನ್ನು ಅನುಭವಿಸುವ ಹಾಗೂ ಎದುರಿಸುವ ನಾರಿ. ಹಾಗೆ ನೋಡಿದರೆ, ಜಗತ್ತಿನ ಯಾವೊಬ್ಬ ಹೆಣ್ಣು ಇದರಿಂದ ಹೊರತಾಗಿಲ್ಲ!
ಯಾಜ್ಞಸೇನಿಯ ಆತ್ಮನಿವೇದನೆ ಭೂತ ಮತ್ತು ವರ್ತಮಾನ ಮಧ್ಯೆ ಸೇತುವೆಯಾಗಿರುವಂತೆ ಭಾಸವಾಗುತ್ತದೆ. ಯಾಕೆಂದರೆ, ಆಕೆ ಎದುರಿಸುವ ಮತ್ತು ಅನುಭವಿಸುವ ಪ್ರತಿ ದುಃಖ, ಸಂತೋಷ, ನೋವು, ಅವಮಾನ, ಅನುಮಾನ, ಗೌರವ ಎಲ್ಲವನ್ನೂ ವರ್ತಮಾನದ ಹೆಣ್ಣುಮಕ್ಕಳೊಂದಿಗೆ ಸಮೀಕರಿಸುತ್ತಾರೆ ಲೇಖಕಿ. ಹಾಗಾಗಿಯೇ ವರ್ತಮಾನದಲ್ಲಿ ಇದ್ದುಕೊಂಡೇ ಮಹಾಭಾರತವನ್ನು ನೋಡುವ ಪ್ರಯತ್ನ ಇದು.
'ಭೂಮಾತೆ ನಿನ್ನ ಮಡಿಲಲ್ಲಿ ನನ್ನನ್ನು ಹಾಕಿಕೊಂಡು ಲೋಕ ಲಜ್ಜೆಯಿಂದ ಪಾರು ಮಾಡು. ನಾನು ಸೀತೆಯಷ್ಟು ಸಹಿಷ್ಣು ಅಲ್ಲ, ಸರ್ವ ಸಹನೆವುಳ್ಳವಳಲ್ಲ. ಅವಶ್ಯಕತೆ ಉಂಟಾದಲ್ಲಿ ನಾನು ವಿಪ್ಲವ ಮಾಡಬಲ್ಲೆ, ಪ್ರತಿ ಹಿಂಸೆಯನ್ನೂ ಮಾಡಬಲ್ಲೆ...' ಯಾಜ್ಞಸೇನಿಯ ಈ ಮಾತುಗಳು ಆಧುನಿಕ ಕಾಲದ ಮಹಿಳೆಯರನ್ನು ಮನಸ್ಸಿನಲ್ಲಿಟ್ಟುಕೊಂಡು ಹೇಳಿರುವಂತಿದೆ.
ಹಿಂದಿನ ಕಾಲದಲ್ಲಿ ಮಹಿಳೆ ಎಲ್ಲವನ್ನೂ ಸಹಿಸಿಕೊಳ್ಳುತ್ತಿದ್ದಳು. ವ್ಯವಸ್ಥೆಯ ಎಷ್ಟೇ ದಬ್ಬಾಳಿಕೆ ಇರಲಿ, ಹಿಂಸೆಯಿರಲಿ. ಅದಕ್ಕೆ ಪ್ರತ್ಯುತ್ತರ ಇರುತ್ತಿರಲಿಲ್ಲ. ಆದರೆ, ದ್ರೌಪದಿ ಮಾತ್ರ ಹಾಗಲ್ಲ. ಆಕೆ ಪ್ರತಿರೋಧದ ಪ್ರತೀಕವಾಗಿ ನಿಲ್ಲುತ್ತಾಳೆ. ಹಾಗಾಗಿಯೇ ನಾನು ಸೀತೆಯಷ್ಟು ಸಹನೆವುಳ್ಳವಳಲ್ಲ. ನಾನು ವಿಪ್ಲವ ಸೃಷ್ಟಿಸಬಲ್ಲೆ ಎಂಬುದನ್ನು ತೋರಿಸುತ್ತಾಳೆ.
ಮತ್ತೊಂದು ಸಂದರ್ಭದಲ್ಲಿ ಯಾಜ್ಞಸೇನಿ ಹೀಗೆ ನಿವೇದಿಸಿಕೊಳ್ಳುತ್ತಾಳೆ- 'ಧರ್ಮ ರಕ್ಷಣೆ ಮತ್ತು ದುಷ್ಟ ಸಂಹಾರಕ್ಕಾಗಿ ನಾರಿಯೇ ಎಷ್ಟು ಯುಗದ ಮಾಧ್ಯಮವಾಗಬೇಕಾಗಿದೆಯೋ? ಲಂಕೆಯ ನಾಶಕ್ಕೆ ಮತ್ತು ರಾಮರಾಜ್ಯದ ಸ್ಥಾಪನೆಗಾಗಿ ಸತಿ ಸೀತೆಯಾಗಿ, ತನ್ನ ಜೀವನದ ಎಲ್ಲಾ ಸುಖಗಳನ್ನು ತ್ಯಜಿಸಿ, ವನವಾಸಿನಿಯಾಬೇಕಾಯಿತು. ರಾವಣನ ಲಾಲಸೆ ಅವಳನ್ನು ಅಶೋಕವನದ ಬಂಧನದಲ್ಲಿಟ್ಟು ಕಳಂಕಿತಳನ್ನಾಗಿ, ದುಃಖಿಯನ್ನಾಗಿ ಮಾಡಿತು. ಕೊನೆಗೆ ಧರ್ಮದ ಪ್ರತಿಷ್ಠೆಯ ಪ್ರಶ್ನೆ ಹುಟ್ಟಿತು. ಪ್ರಭು ರಾಮನ ಜನನದ ಉದ್ದೇಶ ಪೂರ್ಣಗೊಂಡಿತು. ಆದರೆ, ಸೀತೆಗೆ ಆದ ಲಾಭವೇನು? ರಾಮನಿಂದ ಬಿಡುಗಡೆಯ ದಂಡನೆ ಸರ್ವರ ಸಮಕ್ಷಮದಲ್ಲಿ ಸತೀತ್ವದ ಪರೀಕ್ಷೆ! ಈ ಅಪಮಾನದಿಂದ ಭೂಮಿ ಬಿರಿಯಿತು. ಸೀತೆ ತನ್ನ ದುಃಖ, ಲಜ್ಜೆ, ಅಪಮಾನಗಳಿಂದ ಅಡಗಿಕೊಳ್ಳಲು ಭೂ ಮಡಿಲು ಸೇರಬೇಕಾಯಿತು....' ಇಲ್ಲಿ ಯಾಜ್ಞಸೇನಿ ಮತ್ತು ಸೀತೆಯ ನಡುವೆ ಸಾಮ್ಯತೆ ಇದೆ. ಇಡೀ ಕೌರವವರೆದುರೇ ದ್ರೌಪದಿ ವಸ್ತ್ರಾಪಹರಣ ನಡೆಯಿತು. ಸೀತೆಗೂ ತನ್ನ ಪಾವಿತ್ರ್ಯತೆಯನ್ನು ಸಾಬೀತುಪಡಿಸಲು ಅಗ್ನಿಪರೀಕ್ಷೆ ಎದುರಿಸಬೇಕಾಯಿತು. ಆದರೆ, ಸೀತೆ ಎಲ್ಲವನ್ನೂ ಮೌನವಾಗಿ ನುಂಗಿಕೊಂಡಳು. ಆದರೆ, ದ್ರೌಪದಿ ಹಾಗಲ್ಲ. ಕೃಷ್ಣನ ಉದ್ದೇಶ ಈಡೇರಿಸುವ ಫಲವಾಗಿಯೇ ಆಕೆ ಅವಮಾನ ಅನುಭವಿಸಬೇಕಾಯಿತು ಮತ್ತು ಅದಕ್ಕೆ ಕೌರವವ ತಕ್ಕ ಪ್ರತಿಫಲ ಉಣ್ಣಬೇಕಾಯಿತು.
ಇಡೀ ಕೃತಿಯಲ್ಲಿ ಯಾಜ್ಞಸೇನಿ ಬಂಡಾಯದ ಹರಿಕಾರಳಾಗಿ ಕಾಣುತ್ತಾಳೆ. ವಿನೂತನ ಮತ್ತು ಆಧುನಿಕತೆಯ ವಕ್ತಾರಳಂತೆ ಗೋಚರಿಸುತ್ತಾಳೆ. ಪುರಾಣ ಪ್ರಸಿದ್ಧ ಮಹಿಳೆಯರಂತೆ ನಾನಲ್ಲ ಎಂಬುದನ್ನು ಬಿಂಬಿಸುತ್ತಾ ಹೋಗುತ್ತಾಳೆ. ಹೀಗಿದ್ದಾಗ್ಯೂ, ದ್ರೌಪದಿಯೂ ಎಷ್ಟಾದರೂ ಹೆಣ್ಣಲ್ಲವೇ? ಹಾಗಾಗಿ ಆಕೆಯೂ ವ್ಯವಸ್ಥೆಯ ವ್ಯವಸ್ಥಿತ ಸಂಚಿಗೆ ಒಳಗಾಗುತ್ತಳೆ.
ಅದು ಹೇಗೆಂದರೆ, ಸ್ವಯಂವರಲ್ಲಿ ಮಧ್ಯಮ ಪಾಂಡವ ದ್ರೌಪದಿಯನ್ನು ಗೆದ್ದು ತರುತ್ತಾನೆ. ತಾಯಿ ಕುಂತಿಯ ಆಶೀರ್ವಾದ ಪಡೆಯುವಾಗ ಧರ್ಮರಾಜ, 'ನಾವು ಹಣ್ಣು ತಂದಿದ್ದೇವೆ' ಎಂದು ಉದ್ದೇಶಪೂರ್ವಕವಾಗಿಯೇ ಹೇಳುತ್ತಾನೆ. ಕುಂತಿಯೂ ಹಿಂದೆ ಮುಂದೆ ಯೋಚಿಸದೆ, 'ಐವರು ಸಮನಾಗಿ ಹಂಚಿಕೊಳ್ಳಿ' ಎಂದು ಹೇಳುವುದರಲ್ಲಿ ಯಾವುದೋ ಉದ್ದೇಶಿತ ಸಂಚಿನ ಭಾಗಿದಾರರು ಎಂಬಂತೆ ದ್ರೌಪದಿಗೆ ಗೋಚರಿಸುತ್ತಾರೆ. ತನ್ನೊಳಗಿನ ಎಲ್ಲ ತುಮುಲಗಳನ್ನು, ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಯತ್ನಿಸುತ್ತಾಳೆ. ಆದರೆ, ಉತ್ತರ ಸಿಕ್ಕಲ್ಲ. ಎಲ್ಲದಕ್ಕೂ ಆ ಶ್ರೀಕೃಷ್ಣನೇ ಕಾರಣ. ಹಾಗೆ ನೋಡಿದರೆ, ದ್ರೌಪದಿಯ ಜೀವನದಲ್ಲಿ ಶ್ರೀಕೃಷ್ಣ ಅತಿದೊಡ್ಡ ಸಂಚುಗಾರ! ಆತನಿಗೆ ಎಲ್ಲವೂ ಗೊತ್ತು. ಆದರೆ, ಏನೂ ಗೊತ್ತಿಲ್ಲದಂತೆ ನಟಿಸುವ ನಟಸಾರ್ವಭೌಮ!
ಭಾರತೀಯ ಮಹಿಳೆಯರಿಗೆ ದ್ರೌಪದಿ ಎಂಬುದು ಒಂದು ಆಹ್ವಾನ, ಕರ್ಮ, ಜ್ಞಾನ, ಭಕ್ತಿ ಮತ್ತು ಶಕ್ತಿಯ ಮೂರ್ತರೂಪ ಎನ್ನುತ್ತಾರೆ ಲೇಖಕಿ ರೇ. ಯಾಜ್ಞಸೇನಿಯ ನಿವೇದನೆ ಕೇಳಿದರು ಇದು ನಿಜ ಎನಿಸುತ್ತದೆ.

-ಮಲ್ಲಿಕಾರ್ಜುನ ತಿಪ್ಪಾರ
mtippar@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.