ಸಾಪ್ತಾಹಿಕಪ್ರಭ

ವಿಚಿತ್ರ ತಿರುವು , ಹೆಚ್ಚು ಥ್ರಿಲ್

Published On :

ಟೆಸ್ಟ್ ಮ್ಯಾಚ್ ಆಯ್ತು. ಒಂಡೇ ಮ್ಯಾಚೂ ಆಯ್ತು. ಈಗ ಟಿ-ಟ್ವೆಂಟಿ. ಅದರ ರೋಚಕತೆಯೇ ಬೇರೆ. ಅತ್ಯಂತ ಕಡಿಮೆ ಅವಧಿಯಲ್ಲಿ ಹೆಚ್ಚು ಥ್ರಿಲ್.
ಕಥೆಗಳಲ್ಲಿ ಕಥೆ, ಸಣ್ಣಕಥೆ, ಅತೀ ಸಣ್ಣಕಥೆ ಈಗಾಗಲೇ ಚಾಲ್ತಿಯಲ್ಲಿದ್ದರೂ 'ಸಣ್‌ಸ್ಟೋರಿ ಸ್ಪರ್ಧೆ' ಹೆಚ್ಚು ನಡೆದಿಲ್ಲವೇನೋ. ಈ ಸಣ್ಣಕಥೆಯಲ್ಲಿ ಕಡಿಮೆ ಶಬ್ದಗಳಲ್ಲಿ ವಿಚಿತ್ರ ತಿರುವು, ಹೆಚ್ಚು ಥ್ರಿಲ್ ಕೊಡುವುದು ಸಹ ಸರಿ.
ಇಂಗ್ಲಿಷ್ ಬಿಟ್ಟರೆ ಹೆಚ್ಚು ಸಣ್ಣಕಥೆಗಳು ಹುಟ್ಟುತ್ತಿರುವುದು ಕನ್ನಡದಲ್ಲೇ. ಅದು ವಿಭಿನ್ನ ಪ್ರಯೋಗಗಳ ಮೂಲಕ. ಹೀಗಾಗಿ, ಕನ್ನಡದ ಸಣ್ಣಕಥೆಗಳಿಗೆ ತೀರ್ಪುಗಾರನಾಗುವುದು, ಸುಂದರ ಹೂವಿನೊಳಗೆ ಅತಿಸುಂದರ ಪಕಳೆ ಆರಿಸುವ ಹಾಗೆ! ಒಂದೆಡೆ ಭಾಷೆ ಮನ ತಟ್ಟುತ್ತದೆ. ಇನ್ನೊಮ್ಮೆ ಭಾವವೇ ಶ್ರೇಷ್ಠವಾಗಿ ಮೋಸಗೊಳಿಸುತ್ತದೆ. ಪಾತ್ರಗಳು ರಂಜನೀಯವಾಗಿ ಮನ ಕರಗಿಸುವ ಸಾಧ್ಯತೆಯೂ ಇರುತ್ತದೆ. ಇನ್ನೂ ಕೆಲವೆಡೆ ಮುಕ್ತಾಯ ಮೋಡಿಗೊಳಿಸುವುದುಂಟು. ಈ ಎಲ್ಲ ಸಂಗತಿಗಳನ್ನು ಗಮನಿಸಿ, ಅವುಗಳಲ್ಲಿ ಕಳೆದುಹೋಗದೆ ತೀರ್ಪಿಡುವುದು ಕಸರತ್ತಿನ ಕೆಲಸ.
ಪ್ರಸ್ತುತ 'ಕನ್ನಡಪ್ರಭ/ಅಂಕಿತ ಯುಗಾದಿ ಸಣ್‌ಸ್ಟೋರಿ ಸ್ಪರ್ಧೆ'ಗೆ ಅಂತಿಮ ಸುತ್ತಿನಲ್ಲಿದ್ದ ಒಟ್ಟು 27 ಕಥೆಗಳು ಒಂದಕ್ಕೊಂದು ವಿಭಿನ್ನವಾಗಿದ್ದವು. ಫಲಿತಾಂಶ, ವಿಜೇತರ ಪಟ್ಟಿ ಓದುಗರ ಮುಂದಿದೆ. ಕಥಾಸ್ಪರ್ಧೆಗಳ ಕಥೆಗಳಿಗೆ ಮತ್ತು ಇತರ ಲೇಖನ ಮತ್ತು ಸುದ್ದಿಗಳಿಗೆ ಚಿತ್ರ ಬಿಡಿಸಬೇಕಾದರೆ ಅವುಗಳನ್ನು ಓದುವಾಗ ಅವು ಕೊಡುವ ಥ್ರಿಲ್ಲೇ ಬೇರೆಯಾಗಿರುತ್ತದೆ. ಹಾಗೆಯೇ ಅವುಗಳಿಗೆ ಚಿತ್ರ ಬರೆಯುವುದೂ ಒಂದು ಚಾಲೆಂಜೇ. ಅದಕ್ಕೆ ದೊರಕುತ್ತಿದ್ದ ಪ್ರತಿಕ್ರಿಯೆಗಳೂ ಖುಷಿ ಪಡುವಂತಿರುತ್ತದೆ. ಆದರೆ, ಈ ಬಾರಿ ನಮ್ಮ ಪುರವಣಿ ಸಂಪಾದಕರು ಅತ್ಯಂತ ಹೊಸ ಪರಿಕಲ್ಪನೆಯಾಗಿ ಕಲಾವಿದ ಕೂಡ ಸಣ್ಣಕಥೆಯ ಆಯ್ಕೆ ಮಾಡುವ ಮೂರು ಜನರಲ್ಲಿ ಒಬ್ಬರಾಗಿರುತ್ತಾರೆ ಎಂದಾಗ ಗಾಬರಿಯಾಗಿದ್ದು ನಿಜ. ಜೊತೆಗೆ ಖುಷಿಯೂ ಆಯಿತು.
ಕಥೆಗಳ ಬಗ್ಗೆ ಅದರ ಭಾಷೆ, ಗ್ರಾಮರ್, ವಸ್ತು... ಇತ್ಯಾದಿಗಳ ಬಗ್ಗೆ ವಿಮರ್ಶೆ ಮಾಡುವಷ್ಟು ನಾನು ದೊಡ್ಡವನಲ್ಲ. ಆದರೆ, ಈ ಥರದ ವಿನೂತನ ಪ್ರಯೋಗಕ್ಕೆ ಕಾರಣೀಭೂತರಾದ ನನ್ನ ಪತ್ರಿಕಾ ಬಳಗಕ್ಕೆ ನಮನಗಳು.

- ಸುಧಾಕರ ದರ್ಬೆ, ಚಿತ್ರಕಲಾವಿದ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.