ಸಣ್ಸ್ಟೋರಿ ಸ್ಪರ್ಧೆಯ ದೊಡ್ ಸರ್ಕಸ್ಸು!
ಐಪಿಎಲ್ ಅಬ್ಬರ ಎಲ್ಲೆಲ್ಲೂ. ಕ್ರಿಕೆಟ್ ಕಾವಿಗೆ ಸಾಥ್ ನೀಡುತ್ತಿರುವುದು ಬೇಸಿಗೆ. ಎರಡರ ನಡುವೆಯೂ ಪೈಪೋಟಿ. ಗೆಲ್ಲುತ್ತಿರುವುದು ಐಪಿಎಲ್ಲೆ.
ಜಮಾನವೇ ಹಾಗಿದೆ ಬಿಡಿ. ಮನಸು ಚಿತ್ತಾಗುವಂಥ ಮನರಂಜನೆ. ಹುಚ್ಚೆದ್ದು ಕುಣಿಸೋ ಸಂಗೀತ. ಪ್ರತಿ ಸಿಕ್ಸು, ಫೋರ್ಗೂ ಇದು ರಿಪೀಟು. ಅದಕ್ಕೆ ಹೆಜ್ಜೆ ಹಾಕುವ ಹುರಿದುಂಬಿಗಳು. ರಿದಂಗೆ ಹೆಜ್ಜೆ ಹಾಕುವ ಹುಡುಗೀರಿಗಾಗಿ ಬ್ಯಾಟ್ಸ್ಮನ್ಗಳು ಸ್ಕೋರು ಚಚ್ಚುತ್ತಾರೋ, ಅವರು ಸ್ಕೋರಿಸಿದ್ದಕ್ಕಾಗಿ ಇವರು ಕುಣಿತಾರೋ ಗೊತ್ತಿಲ್ಲ. ಅಂತೂ ನೋಡೋಕೆ ಹೋಗೋದು ಕ್ರಿಕೆಟ್ನ. ನೋಡೋದು ಚಿಯರ್ ಗರ್ಲ್ಸ್, ಅವರನ್ನೂ ಮೀರಿಸುವ ಪ್ರೇಕ್ಷಕರ ನಡುವಿನ ಚೆಲುವೆಯರನ್ನ. ಐಪಿಎಲ್ ಹುಚ್ಚಿಗೆ ಕಾರಣ ಬಹಳಷ್ಟಿದೆ. ಒಂದೇ ಮಾತಲ್ಲಿ ಹೇಳೋದಾದರೆ ಕಡಿಮೆ ಟೈಮಲ್ಲಿ ಸಿಕ್ಕಾಪಟ್ಟೆ ಎಂಜಾಯ್ಮೆಂಟ್. ಇಡೀ ದಿನ ಮ್ಯಾಚ್ ನೋಡ್ಕೋತ ಕೂತ್ಕೊಳ್ಳೋಕೆ ಯಾರಿಗಿದೆ ಟೈಮು? ಕ್ರಿಕೆಟ್ ನೋಡೋಕೂ ನಮ್ಮ ಜನರಿಗೆ ಟೈಮಿಲ್ಲ ಅಂತಾದಾಗ ಆ ಆಟ ತನ್ನ ಜನಪ್ರಿಯತೆ ಉಳಿಸಿಕೊಳ್ಳೋಕೆ ಹುಟ್ಟಿದ್ದೇ ಟ್ವೆಂಟಿ ಟ್ವೆಂಟಿ ಅಂತಿಟ್ಕೊಂಡ್ರೆ ಇದೇ ಥಿಯರಿ ಸಾಹಿತ್ಯದ ಓದಿಗೂ ಅಪ್ಲೈ ಮಾಡಿದಾಗ ಹುಟ್ಟಿದ್ದು ನಮ್ಮ 'ಸಣ್ ಸ್ಟೋರಿ' ಕಲ್ಪನೆ.
ಅಂಥ ಪರಿಕಲ್ಪನೆಯಡಿ ನಿಮ್ಮ ಕಲ್ಪನೆಯ ಕತೆಯನ್ನು ನಮ್ಮೆದುರು ಹರವಿಡಿ ಅಂತ ಓದುಗರಿಗೆ ಒಂದು ಆಫರ್ ಕೊಟ್ಟಿದ್ದೇ ತಡ ಪಕ್ಕಾ ಟಿ20ಯಲ್ಲಿ ಕ್ರಿಸ್ ಗೇಯ್ಲ್ರನ್ ಚಚ್ಚುವಂತೆಯೇ ಅಟ್ಟಿಬಿಟ್ಟರು ಕತೆಗಳನ್ನು ನಮ್ಮ ಸುದ್ದಿಮನೆಗೆ. ಈಪಾಟಿ ಕತೆಗಳು ಬರುತ್ತವೆ ಅಂತ ದೇವರಾಣೆ ನಿರೀಕ್ಷೆ ಮಾಡಿರಲಿಲ್ಲ. ಸಮಯಾವಕಾಶವೂ ಕಡಿಮೆ ಇತ್ತು. ಸ್ಪರ್ಧೆಯ ಕಲ್ಪನೆಯೂ ಹೊಸತಾಗಿತ್ತು. ಹಾಗಾಗಿ ನೂರಿನ್ನೂರು ಬಂದರೆ ಹೆಚ್ಚು ಅಂದ್ಕೊಂಡಿದ್ದ ನಮ್ಮನ್ನು ಏಪ್ರಿಲ್ಗೆ ಮುಂಚೆಯೇ ಫೂಲ್ ಮಾಡಿದವರು ಕತೆಗಾರರು. ನಿಜಕ್ಕೂ ಕನ್ನಡಿಗರ ಕಲ್ಪನಾ ಸಾಮಥ್ರ್ಯ, ಕ್ರಿಯೇಟಿವಿಟಿ, ಭಾಷಾ ಶೈಲಿ, ನಿರೂಪಣಾ ಧಾಟಿ, ವಸ್ತುವಿನ ಆಯ್ಕೆ ಎಲ್ಲಕ್ಕಿಂತ ಹೆಚ್ಚಾಗಿ ಸ್ಪರ್ಧಾ ಮನೋಭಾವದ ಬಗ್ಗೆ ಹೆಮ್ಮೆ ಮೂಡುತ್ತದೆ. ಅದಕ್ಕೆ 'ಕನ್ನಡ ಪ್ರಭ- ಅಂಕಿತ ಪ್ರಕಾಶನ'ದ ಈ ಬಾರಿಯ 'ಯುಗಾದಿ ಸಣ್ಸ್ಟೋರಿ ಸ್ಪರ್ಧೆ' ಖಂಡಿತಾ ಸ್ಪಷ್ಟ ನಿದರ್ಶನ.
ಕೊಟ್ಟ ನಾಲ್ಕು ದಿನಗಳ ಅವಕಾಶದಲ್ಲಿ ಸುದ್ದಿ ಮನೆಗೆ ಹರಿದು ಬಂದದ್ದು 1342 ಕಥೆಗಳು. ಈ ಪೈಕಿ ಇ-ಮೇಲ್ ಕೊಡುಗೆಯೂ ಗಮನಾರ್ಹ. ಗುಡ್ಡೆ ಹಾಕಿಕೊಂಡು ಕುಳಿತ ಪತ್ರಿಕೆಯ ಪುರವಣಿ ತಂಡ ನಿಜಕ್ಕೂ ಬಸವಳಿದಿತ್ತು. ಕೊನೆ ದಿನಾಂಕ ಕಳೆದರೂ ಕತೆಗಳ ಹರಿವು ನಿಂತಿರಲಿಲ್ಲ. ಆದರೆ ಅನಿವಾರ್ಯವಾಗಿ ಕೊನೆಯ ದಿನಾಂಕಕ್ಕೆ ಕತೆಗಳ ಪರಿಗಣನೆಯನ್ನು ಸೀಮಿತಗೊಳಿಸಲಾಯಿತು. ಇನ್ನೂ ವಿಶೇಷವೆಂದರೆ ಸ್ಪರ್ಧೆಗೆ ಒಡ್ಡಿಕೊಂಡವರ ಪೈಕಿ ಎಲ್ಲ ಸ್ತರದ, ಎಲ್ಲ ವಯಸ್ಸಿನ, ಎಲ್ಲ ಪ್ರದೇಶದ ಕತೆಗಾರರಿದ್ದುದು. ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಆರಂಭಿಸಿ, ಬದುಕಿನ ಮುಸ್ಸಂಜೆಯಲ್ಲಿ ಮಾಗಿದ ಮನಸ್ಸಿನವರೆಗೆ, ಹಳ್ಳಿ ಮೂಲೆಯವರಿಂದ ಹಿಡಿದು ವಿದೇಶದಲ್ಲಿ ನೆಲೆಸಿದ ಕನ್ನಡಿಗರವರೆಗೆ, ಗೃಹಿಣಿಯರು, ನೌಕರರು, ಕೃಷಿಕರು, ಯುವಕರು ಹೀಗೆ ವೈವಿಧ್ಯಮಯ ಮನಸುಗಳು ಕತೆ ಹೆಣೆದಿದ್ದವು. ಬಹುತೇಕ ಸ್ಪರ್ಧೆಗೆ ಬಂದಿದ್ದ ಪ್ರವೇಶಗಳು ಈವರೆಗೆ ಎಲ್ಲೂ ಬರೆದಿರದ ಅಥವಾ ತೀರಾ ವಿರಳವನಿಸುವ ರೀತಿಯಲ್ಲಿ ಬರೆದಿದ್ದವರದ್ದು. ವೃತ್ತಿಪರ ಕಥೆಗಾರರು ಇಲ್ಲವಂತಲ್ಲ. ಅದರೂ ಅವರ ಸಂಖ್ಯೆ ಕಡಿಮೆ. ಕನ್ನಡದ ಮಟ್ಟಿಗೆ ಇದೂ ಸಹ ಬೆನ್ನು ತಟ್ಟಿಕೊಳ್ಳುವ ಬೆಳವಣಿಗೆ.
ಆರಂಭದಲ್ಲಿ ಮೂರು ಹಂತದ ಆಯ್ಕೆ ಪ್ರಕ್ರಿಯೆ ನಡೆದು ಉತ್ತಮ ನೂರು ಕತೆಗಳನ್ನು ಹೆಕ್ಕಿ ತೆಗೆಯಲಾಯಿತು. ಇದೇನೂ ಸುಲಭವಿರಲಿಲ್ಲ. ಪ್ರಯತ್ನದ ದೃಷ್ಟಿಯಿಂದ ವೈವಿಧ್ಯಮಯ ಸೃಷ್ಟಿ ಕಂಡಿತ್ತು. ಇನ್ನು ಭಾಷಾ ಬಳಕೆ, ಕಡಿಮೆ ಪದಗಳಲ್ಲಿ ಸಮರ್ಥ ನಿರೂಪಣೆ, ವಿಭಿನ್ನ ಶೈಲಿ, ತೀರಾ ಹೊಸದೆನಿಸುವ ವಸ್ತುಗಳು ಕತೆಗಳಲ್ಲಿ ಕಂಡ ವೈಶಿಷ್ಟ್ಯಗಳು. ಆಧುನಿಕ ಯುಗದಲ್ಲಿ ಜನಪ್ರಿಯವೆನಿಸುತ್ತಿರುವ ಫಿಕ್ಷನ್, ವಿಜ್ಞಾನ, ಫ್ಯಾಂಟಸಿಗಳಿಗೂ ಬರವಿರಲಿಲ್ಲ. ಇನ್ನೂ ಗಮನ ಸೆಳೆದ ಅಂಶವೆಂದರೆ ಭಾಷಾಡಂಬರವಿಲ್ಲದೇ ಬಹುತೇಕ ಕತೆಗಳು ಅತ್ಯಂತ ಸಮರ್ಥವಾಗಿ ಸ್ಥಳೀಯ ಸೊಗಡನ್ನು ಬಿಂಬಿಸುತ್ತಿದ್ದುದು. ಇವೆಲ್ಲದರ ಜತೆಗೆ ಪದಮಿತಿಯ(500)ಲ್ಲಿ ಅಚ್ಚುಕಟ್ಟಾಗಿ ಕೂತಿದ್ದ ಅರ್ಹತೆಯನ್ನೂ ಪರಿಗಣಿಸಿ ನೂರರಲ್ಲಿ ಐವತ್ತನ್ನು ಬೇರ್ಪಡಿಸಲಾಯಿತು. ಅದನ್ನು ಪುನರ್ ಮೌಲ್ಯಮಾಪನಕ್ಕೆ ಒಳಪಡಿಸಲು ಹೊರಟಾಗ ಪೈಪೋಟಿಯ ಬಿಸಿ ತಟ್ಟಲಾರಂಭಿಸಿತ್ತು ನಮಗೆ. ಮತ್ತೆ ಮೂರು ಸುತ್ತಿನ ಸರ್ಕಸ್ ಬಳಿಕ ಅಂದುಕೊಂಡಿದ್ದ 25ರ ಬದಲಿಗೆ 27 ಕಥೆಗಳು ಅಂತಿಮವಾಗಿ ತೀರ್ಪುಗಾರರ ಡೆಸ್ಕ್ ತಲುಪಿತ್ತು.
ತಲೆನೋವು ಆರಂಭವಾದದ್ದು ಇಲ್ಲೆ. ಮೂರು ಮಂದಿ ತೀರ್ಪುಗಾರರು ತಂತಮ್ಮ ನೆಲೆಗಳಲ್ಲಿ ಅಂಕಗಳನ್ನು ನೀಡಿದ್ದರು. ಮೂವರಿಂದ ಮೂರು ಬಗೆಯ ಅಭಿಪ್ರಾಯ ವ್ಯಕ್ತವಾಗಿತ್ತು. ಭಿನ್ನ ಕ್ಷೇತ್ರಗಳ, ಭಿನ್ನ ಆಲೋಚನೆಯ ಪರಿಣಾಮ ಇದು. ಜತೆಗೆ ಅಂತಿಮ ಆಯ್ಕೆ ತೀರಾ ಕ್ಲಿಷ್ಟಕರ ಎಂಬಂಥ ಪರಿಸ್ಥಿತಿ ನಿರ್ಮಿಸಿದ ಪೈಪೋಟಿ, ಅತ್ಯುತ್ತಮ ಗುಣಮಟ್ಟ ಹಾಗೂ ಭಿನ್ನ ಬರವಣಿಗೆಯ ಧಾಟಿಯಿಂದ ಕತೆಗಾರರು ಸರ್ಕಸ್ಗೆ ಹಚ್ಚಿದ್ದರು ತೀರ್ಪುಗಾರರನ್ನು. ಹೀಗಾಗಿ ಕತೆಗಾರ ಕೆ. ಸತ್ಯನಾರಾಯಣ ಅವರ ನೇತೃತ್ವದಲ್ಲಿ ಮತ್ತಿಬ್ಬರು ಸುದ್ದಿಮನೆಯ ಹಿರಿಯ ಸಂಪಾದಕೀಯ ಸಿಬ್ಬಂದಿಯನ್ನೊಳಗೊಂಡ ಮರು ಮೌಲ್ಯಮಾಪನಾ ತಂಡ ರಚಿಸಲಾಯಿತು. ಕೊನೆಗೂ ರಿಸಲ್ಟ್ ಸಿಕ್ಕಿತ್ತು. ಕನ್ನಡ ಕತೆಗಾರ ಗೆದ್ದಿದ್ದ.
ಸ್ಪರ್ಧೆಯ, ಫಲಿತಾಂಶದ ಸಾಚಾತನ ನಿಜಕ್ಕೂ ಒರೆಗೆ ಹಚ್ಚಲ್ಪಡುವುದು ಓದುಗರಿಂದಲೇ. ನಮ್ಮ ತೀರ್ಪನ್ನು ನೀವೂ ಅನುಮೋದಿಸುವ ಜತೆಗೆ ಹಬ್ಬದ ಓದನ್ನು ಎಂಜಾಯ್ ಮಾಡುವ ನಂಬಿಕೆಯೊಂದಿಗೆ ಕತೆಗಳನ್ನು ಪ್ರಕಟಿಸುತ್ತಿದ್ದೇವೆ. ಈ ವಾರದ 'ಸಾಪ್ತಾಹಿಕ ಪ್ರಭ' ದಲ್ಲಿ ಮೊದಲ ಮೂರು ಬಹುಮಾನಕ್ಕೆ ಪಾತ್ರವಾದ ಹಾಗೂ ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾದ ಇತರ ಮೂರು ಕಥೆಗಳು ಪ್ರಕಟವಾಗಿದೆ. ಅಂತಿಮ ಸ್ಪರ್ಧೆಗೆ ಹೋಗಿದ್ದ ಎಲ್ಲ 27 ಕತೆಗಳೂ ಮುಂದಿನ ವಾರಗಳಲ್ಲಿ ಸರದಿಯಂತೆ ಪ್ರಕಟವಾಗಲಿವೆ.
ವಂದನೆಗಳು.
-ಸಂ
ತೀರ್ಪುಗಾರರ ತಂಡ
ಈ ಬಾರಿಯ ಯುಗಾದಿ 'ಸಣ್ಸ್ಟೋರಿ ಸ್ಪರ್ಧೆ'ಗೆ ನಾವು ನಿಗದಿಗೊಳಿಸಿದ ತೀರ್ಪುಗಾರರ ಬಗ್ಗೆ ಹೇಳಲೇಬೇಕು. ಎಂದಿನ ಸಿದ್ಧ ಸೂತ್ರವನ್ನು ಬದಿಗಿಡುವ ಜತೆಗೆ ಭಿನ್ನ ಅಭಿರುಚಿಯ, ಓದುಗ ಸ್ನೇಹಿ ಅಯ್ಕೆ ಸಾಧ್ಯವಾಗಿಸಬಲ್ಲವರನ್ನೇ ತೀರ್ಪುಗಾರರನ್ನಾಗಿಸಬೇಕು ಎಂದುಕೊಂಡೆವು. ಸಾಮಾನ್ಯವಾಗಿ ಕತೆ ಪ್ರಕಟಣೆಗೆ ಹೊರಟಾಗ ಅದಕ್ಕೊಂದು ಚೆಂದದ ಚಿತ್ರ ಶ್ರೀಮಂತಿಕೆ ಕೊಟ್ಟು, ದೃಶ್ಯೀಕರಿಸುವ ಅಪೂರ್ವ ಕಾಯಕ ಮಾಡುವವರು ಸುದ್ದಿಮನೆಯ ಕಲಾವಿದರು. ಪುರವಣಿಗಳಲ್ಲಿ ಪ್ರಕಟವಾಗುವ ಎಲ್ಲ ಕತೆಗಳನ್ನೂ ಅವರು ಕಡ್ಡಾಯವಾಗಿ ಓದಿರುತ್ತಾರೆ. ಈ ಹಿನ್ನೆಲೆಯಲ್ಲಿ ಒಂದೊಳ್ಳೆ ಕತೆ ಎಂದರೆ ಹೇಗಿರಬೇಕು ಎಂಬ ಸ್ಪಷ್ಟ ಕಲ್ಪನೆ ತಮ್ಮ ವೃತ್ತಿ ಬದುಕಿನಲ್ಲಿ ಸಾವಿರಾರು ಕತೆಗಳನ್ನು ಓದಿರುವ ಹಿರಿಯ ಕಲಾವಿದರಿಗೆ ಇದ್ದೇ ಇರುತ್ತದೆ. ಹಾಗಿದ್ದ ಮೇಲೆ ಅಂಥ ಕಲಾವಿದರಲ್ಲೊಬ್ಬರೇ ನಮ್ಮ ತೀರ್ಪುಗಾರರಲ್ಲೊಬ್ಬರು ಆಗಿರಬಾರದೇಕೆ? ಥಟ್ಟನೆ ನಮಗೆ ಸಿಕ್ಕ ಸಮರ್ಥ ಹಾಗೂ ಕನ್ನಡಪ್ರಭದ ಹೆಮ್ಮೆಯ ಕಲಾವಿದ ಸುಧಾಕರ ದರ್ಬೆ. ವಸ್ತುವನ್ನು ವಿಷುವಲೈಸ್ಗೊಳಿಸುವ ಕಲಾವಿದನಲ್ಲಿನ ಎಂದಿನ ದೃಷ್ಟಿಕೋನದ ಜತೆಗೆ ಸುಲಭ, ಉತ್ತಮ ಓದನ್ನೂ ಮಾನದಂಡ ಮಾಡಿಕೊಂಡು ಅತ್ಯಂತ ಸಮರ್ಥವಾಗಿ ಹೊಣೆ ನಿಭಾಯಿಸಿದರು ಅವರು.
ಇನ್ನು ಉತ್ತಮ ಓದುಗರೇ ಒಬ್ಬರು ತೀರ್ಪುಗಾರರಾಗಬಾರದೇಕೆ? ಹೊಸ ವೈದ್ಯನಿಗಿಂತ ಹಳೆ ರೋಗಿ ಅನುಭವಿ ಎಂಬ ಗಾದೆ ಇಲ್ಲಿ ವರ್ಕೌಟ್ ಆಗಿತ್ತು. ಅಂಥವರ ಹುಡುಕಾಟದಲ್ಲಿ ಸಿಕ್ಕವರು ಹಿರಿಯ ಚಿತ್ರನಟ, ಸಜ್ಜನ ಶಿವರಾಂ. ಕನ್ನಡ ಮಾತ್ರವಲ್ಲದೇ ಇತರೆ ಸಾಹಿತ್ಯಗಳಲ್ಲೂ ಅಭಿರುಚಿ ಮಾತ್ರದಿಂದಲೇ ಓದನ್ನೂ ರೂಢಿಸಿಕೊಂಡ, ಈವರೆಗೆ ನೂರಾರು ಚಿತ್ರಗಳಲ್ಲಿ ಅಭಿನಯಿಸಿ ಅದರಲ್ಲಿನ ಎಲ್ಲ ಕಲ್ಪನೆಗಳನ್ನು ಸಾಕಾರಗೊಳಿಸಿರುವ ಅವರು ಅತ್ಯಂತ ಪ್ರೀತಿಯಿಂದಲೇ ಪತ್ರಿಕೆ ಹೊರಿಸಿದ ಭಾರವನ್ನು ಓದುಗರವರೆಗೆ ಹೊತ್ತೊಯ್ದು ಮುಟ್ಟಿಸಿದರು.
ಇನ್ನು ತಾಂತ್ರಿಕ ದೃಷ್ಟಿಯಿಂದಲೂ ಆಯ್ಕೆ ಎಡವಬಾರದು ಎಂಬ ಕಾರಣಕ್ಕೆ ಅನುಭವಿ, ಹಿರಿಯ ಕತೆಗಾರರೊಬ್ಬರೂ ತೀರ್ಪುಗಾರರಲ್ಲಿ ಇರಬೇಕು ಎಂಬ ಅಭಿಪ್ರಾಯಕ್ಕೆ ಸಹಮತ ಸಿಕ್ಕು, ಹುಡುಕಾಟದಲ್ಲಿದ್ದಾಗ ಮೊದಲ ಸಾಲಿನಲ್ಲೇ ಗೋಚರಿಸಿದವರು, ಆದಾಯ ತೆರಿಗೆ ಅಧಿಕಾರಿ, ಕನ್ನಡದ ಹೆಮ್ಮೆಯ ಹಿರಿಯ ಕತೆಗಾರ ಕೆ. ಸತ್ಯನಾರಾಯಣ ಅವರು. ನಿಜಕ್ಕೂ ತೀರ್ಪಿಗೊಂದು ಮೌಲ್ಯವನ್ನು ಕಟ್ಟಿಕೊಟ್ಟವರು ಅವರು. ತಮ್ಮ ಅತ್ಯಂತ ಕಾರ್ಯಬಾಹುಳ್ಯದ ನಡುವೆಯೂ ಅತ್ಯಂತ ಕಡಿಮೆ ಅವಧಿಯಲ್ಲಿ ಹೆಚ್ಚಿನ ಜವಾಬ್ದಾರಿ ಹೊತ್ತುಕೊಂಡು, ತಾವೇ ಸುದ್ದಿಮನೆಯ ಸದಸ್ಯರೆಂಬಂತೆ ಅತ್ಯಂತ ಪ್ರೀತಿಯಿಂದ ಫಲಿತಾಂಶ ದೊರಕಿಸಿಕೊಟ್ಟರು.
ಈ ಮೂವರಿಗೂ ಪತ್ರಿಕೆ ಆಭಾರಿ.
ತೀರ್ಪುಗಾರರ ಅಭಿಮತ.
ಕನಸುಗಾರಿಕೆಗೆ ವೇದಿಕೆ
ಒಂದು ಸಾಹಿತ್ಯ ಪ್ರಕಾರವಾಗಿಯೇ ಸಣ್ಣ ಕಥೆ ಕಾವ್ಯಕ್ಕೆ ಹತ್ತಿರವಾದ್ದರಿಂದ, ಕಥೆಯಲ್ಲಿ ಸಂಕ್ಷಿಪ್ತತೆ, ಧ್ವನಿ ಮತ್ತು ಆಯಾಮಗಳ ಬಹುತ್ವವನ್ನು ನಾವು ನಿರೀಕ್ಷಿಸುತ್ತೇವೆ. ಮಿನಿ ಕಥೆ-ಸಣ್ ಸಣ್ ಕಥೆಯಿಂದ ಈ ನಿರೀಕ್ಷೆ ಇನ್ನೂ ಹೆಚ್ಚು.
ಹೆಮ್ಮಿಂಗ್ ವೇಯಂತಹ ಬರಹಗಾರರನ್ನು ಸಂಕ್ಷಿಪ್ತ ಕಥೆಗಳಿಗೆ ಹೆಸರಿಸುವುದೂ ಉಂಟು. ನಮ್ಮಲ್ಲೇ ದೃಷ್ಟಾಂತ, ಸಾಮತಿ, ನೀತಿ ಕಥೆ, ಉಪಕಥೆ, ಪ್ರಸಂಗಗಳಾಗಿ ಸಣ್ ಸಣ್ ಕಥೆಗಳು ಹಿಂದಿನಿಂದಲೂ ಬರೆಯಲ್ಪಟ್ಟಿವೆ. ಮಹಾಭಾರತದಂತಹ ಮಹಾ ಕಾವ್ಯದಲ್ಲೂ ಎಷ್ಟೊಂದು ಸ್ವಯಂಪೂರ್ಣ ಸಣ್ ಸಣ್ ಕಥೆಗಳು?
ಸ್ಪರ್ಧೆಗೆ ಬಂದ ಬರಹಗಳಲ್ಲಿ ಕಥನ ಮತ್ತು ನಿರೂಪಣೆ ವಿಪುಲವಾಗಿಯೇ ಇದೆ. ಸಂಕ್ಷಿಪ್ತತೆ ಮತ್ತು ಧ್ವನಿಗೆ ಗಮನ ಕೊಟ್ಟ ಬರಹಗಳು ಕೊಂಚ ಕಡಿಮೆ. ಕೆಲವು ಬರಹಗಳಂತೂ ದೀರ್ಘ ಕಥೆಗಳ ಸಾರಾಂಶದಂತೆ, ಇಲ್ಲ ಇಂತಹ ಕಥೆಯ ಪೀಠಿಕೆಯಂತೆ ಕಂಡು ಬಂದವು. ಮೊದಲ ಬಹುಮಾನ ಪಡೆದ 'ಆಯಾಮ' ತನ್ನ ಸಾಂದ್ರ ನಿರೂಪಣೆ, ಧ್ವನಿಪೂರ್ಣ ಆಶಯವನ್ನು ಮತ್ತೂ ಒಟ್ಟು ಜೀವನ ವಿನ್ಯಾಸವನ್ನು ಕಥೆಯೊಳಗೆ ಹಿಡಿದಿಟ್ಟಿರುವ ರೀತಿಯಿಂದಾಗಿ ಮೆಚ್ಚುಗೆ ಗಳಿಸಿತು. ದಾಂಪತ್ಯದ, ಕಲಾವಿದ-ವಿಜ್ಞಾನಿಯ ಹುಡುಕಾಟದ, ಮನುಷ್ಯ ಸಂಬಂಧಗಳ ಎಷ್ಟೊಂದು ಪದರುಗಳು ಈ ಕಥೆಯಲ್ಲಿ ಹಾಸುಹೊಕ್ಕಾಗಿವೆ ಎಂಬ ಅಂಶ ಎಲ್ಲ ತೀರ್ಪುಗಾರರ ಸಮಾನ ಮೆಚ್ಚುಗೆಗೆ ಪಾತ್ರವಾಯಿತು. ಕಥೆಯ ಆಶಯದಲ್ಲಿ ನಾವೀನ್ಯದ ಕೊರತೆ ಕಥೆಯ ಆಕರ್ಷಣೆಯನ್ನು ಕೊಂಚ ಮಟ್ಟಿಗೆ ಕಡಿಮೆ ಮಾಡಿದೆ.
'ಗೆದ್ದಲು' ಕಥೆಯು ಧ್ವನಿ ಮತ್ತು ಸಂಕ್ಷಿಪ್ತತೆಗಾಗಿ, ಸಾಂಕೇತಿಕ ಕ್ರಮದ ಬರವಣಿಗೆ ಮತ್ತು ವಾಸ್ತವವನ್ನು ಬಳಸಿ ನಿರೂಪಿಸಿರುವು ದರಿಂದಾಗಿ ಎರಡನೆಯ ಸ್ಥಾನ ಪಡೆದಿದೆ.
'ಹಕ್ಕಿಗಳಿಗಾಗಿ ಕಾದಿದ್ದಾನೆ' ಕೂಡ ಮೇಲಿನ ಕಾರಣಕ್ಕೇ ಇಷ್ಟವಾದರೂ ಕಥೆ ಓದುವಾಗ ಜೆನ್ ಕಥೆಗಳು ಮತ್ತು ಪಾಲ್ ಕೊಹೆಲೊರಂತಹ ಬರಹಗಾರರು ನೆನಪಿಗೆ ಬರುತ್ತಾರೆ. ಬರವಣಿಗೆಯ ಕ್ರಮದ ಆಕರ್ಷಣೆಯಿಂದಾಗಿ ಮೂರನೆಯ ಸ್ಥಾನ ಪಡೆಯಿತು.
ಹೊಸ ಕಾಲದ ಬೆಳವಣಿಗೆಗಳು ನಮ್ಮ ಸಾಮಾಜಿಕ ವರ್ತನೆಯನ್ನು , ನಡಾವಳಿಯನ್ನು, ಜೀವನ ಸಾರ್ಥಕತೆಯನ್ನು ಪ್ರಭಾವಿಸುವ ನಿರೂಪಣೆಗಳಾಗಿ 'ಈ-ಟೆಂಡರ್' ಮತ್ತು 'ಭಾಷಾ ಕಲಿಕೆಯ ಪ್ರಯೋಗ' ಮೆಚ್ಚುಗೆ ಗಳಿಸಿದವು. ಎರಡೂ ಕಥೆಗಳು ನಿರ್ದಿಷ್ಟ ಜಾಡಿನಲ್ಲೇ ನಡೆಯುತ್ತವೆ. ಒಟ್ಟು ಜೀವನ ಮತ್ತು ಮದುವೆ ಎಂಬ ಸಂಸ್ಥೆಯಲ್ಲೇ ಇರುವ ವಿಸಂಗತಿ ಹಾಗೂ ಅಸಾಂಗತ್ಯಗಳ ಕಡೆಗೆ ಕಥೆ ನಿರೂಪಿಸುತ್ತಲೇ ಗಮನ ಸೆಳೆಯುವುದಕ್ಕಾಗಿ 'ಮದಿವಿ' ಮೆಚ್ಚುಗೆ ಗಳಿಸಿತು.
ಇಷ್ಟೊಂದು ಜನಕ್ಕೆ ಕಥೆ ಹೇಳುವುದರಲ್ಲಿ, ಕಥೆ ಕಟ್ಟುವುದರಲ್ಲಿ, ಕಥೆ ದಾಟಿಸುವುದರಲ್ಲಿ ಆಸಕ್ತಿ ಮತ್ತು ಶ್ರದ್ಧೆ ಇದೆ ಎನ್ನುವುದೇ ದೊಡ್ಡ ಸಂಗತಿ. ಇವರೆಲ್ಲರ ಸ್ಪಂದನ ಮತ್ತು ಕನಸುಗಾರಿಕೆಗೆ ಒಂದು ವೇದಿಕೆ ಒದಗಿಸಿಕೊಟ್ಟ 'ಕನ್ನಡಪ್ರಭ'-'ಅಂಕಿತ ಪ್ರಕಾಶನ'ದವರ ಪ್ರಯೋಗಶೀಲತೆಗೆ ವಂದನೆಗಳು. ಇಷ್ಟೂ ಬರಹಗಳನ್ನು ಒಟ್ಟಿಗೆ ಗಮನಿಸುವ ಒಂದು ಚೇತೋಹಾರಿ ಸದಾವಕಾಶಕ್ಕೆ ಸ್ಪರ್ಧೆಯ ವ್ಯವಸ್ಥಾಪಕರಿಗೆ ಎಲ್ಲ ತೀರ್ಪುಗಾರರ ಪರವಾಗಿ ಕೃತಜ್ಞತೆಗಳು.
- ಕೆ. ಸತ್ಯನಾರಾಯಣ್, ಕಥೆಗಾರ
ಪರಿಣಾಮಕಾರಿ ತಂತ್ರ
ಕಥೆಗಳಲ್ಲಿ ಒಂದು ರೀತಿಯ ಹೊಸತನ, ಹೊಸ ಆಲೋಚನೆಗಳು ವ್ಯಕ್ತವಾಗಿವೆ. ಕೆಲವೇ ಪದಗಳಲ್ಲಿ, 2/3 ಪುಟಗಳಲ್ಲಿ ಹೊಳೆಯುವ ಯೋಚನೆಗಳ್ನು ಮನಮುಟ್ಟುವ ರೀತಿಯಲ್ಲಿ, ಪರಿಣಾಮಕಾರಿಯಾಗಿ ಹೇಳುವ ತಂತ್ರ ಇದೆಯಲ್ಲ ಅದು ಮುಖ್ಯ. ಅದು ಈ ಕಥೆಗಳಲ್ಲಿ ಕಂಡುಬರುತ್ತೆ. ತುಂಬಾ ಸಂತೋಷವಾಯಿತು.
ತೀರ್ಪಿನ ಜವಾಬ್ದಾರಿ ತುಂಬಾ ಕಷ್ಟ. ಬಿಟ್ಟವರು ಬೇಸರ ಪಡುವುದು ಬೇಡ. ಪ್ರಯತ್ನ ಸಾಗಲಿ. ಫಲ ಖಚಿತ. ಸ್ಪರ್ಧೆಯಲ್ಲಿ ಸೋಲು- ಗೆಲುವು ಇದ್ದಿದ್ದೆ. ಸೋಲು ಮುಂದಿನ ಗೆಲುವಿಗೆ ನಾಂದಿ. ಶುಭವಾಗಲಿ...
- ಶಿವರಾಂ, ಹಿರಿಯ ನಟ
ವಿಚಿತ್ರ ತಿರುವು , ಹೆಚ್ಚು ಥ್ರಿಲ್
ಟೆಸ್ಟ್ ಮ್ಯಾಚ್ ಆಯ್ತು. ಒಂಡೇ ಮ್ಯಾಚೂ ಆಯ್ತು. ಈಗ ಟಿ-ಟ್ವೆಂಟಿ. ಅದರ ರೋಚಕತೆಯೇ ಬೇರೆ. ಅತ್ಯಂತ ಕಡಿಮೆ ಅವಧಿಯಲ್ಲಿ ಹೆಚ್ಚು ಥ್ರಿಲ್.
ಕಥೆಗಳಲ್ಲಿ ಕಥೆ, ಸಣ್ಣಕಥೆ, ಅತೀ ಸಣ್ಣಕಥೆ ಈಗಾಗಲೇ ಚಾಲ್ತಿಯಲ್ಲಿದ್ದರೂ 'ಸಣ್ಸ್ಟೋರಿ ಸ್ಪರ್ಧೆ' ಹೆಚ್ಚು ನಡೆದಿಲ್ಲವೇನೋ. ಈ ಸಣ್ಣಕಥೆಯಲ್ಲಿ ಕಡಿಮೆ ಶಬ್ದಗಳಲ್ಲಿ ವಿಚಿತ್ರ ತಿರುವು, ಹೆಚ್ಚು ಥ್ರಿಲ್ ಕೊಡುವುದು ಸಹ ಸರಿ.
ಇಂಗ್ಲಿಷ್ ಬಿಟ್ಟರೆ ಹೆಚ್ಚು ಸಣ್ಣಕಥೆಗಳು ಹುಟ್ಟುತ್ತಿರುವುದು ಕನ್ನಡದಲ್ಲೇ. ಅದು ವಿಭಿನ್ನ ಪ್ರಯೋಗಗಳ ಮೂಲಕ. ಹೀಗಾಗಿ, ಕನ್ನಡದ ಸಣ್ಣಕಥೆಗಳಿಗೆ ತೀರ್ಪುಗಾರನಾಗುವುದು, ಸುಂದರ ಹೂವಿನೊಳಗೆ ಅತಿಸುಂದರ ಪಕಳೆ ಆರಿಸುವ ಹಾಗೆ! ಒಂದೆಡೆ ಭಾಷೆ ಮನ ತಟ್ಟುತ್ತದೆ. ಇನ್ನೊಮ್ಮೆ ಭಾವವೇ ಶ್ರೇಷ್ಠವಾಗಿ ಮೋಸಗೊಳಿಸುತ್ತದೆ. ಪಾತ್ರಗಳು ರಂಜನೀಯವಾಗಿ ಮನ ಕರಗಿಸುವ ಸಾಧ್ಯತೆಯೂ ಇರುತ್ತದೆ. ಇನ್ನೂ ಕೆಲವೆಡೆ ಮುಕ್ತಾಯ ಮೋಡಿಗೊಳಿಸುವುದುಂಟು. ಈ ಎಲ್ಲ ಸಂಗತಿಗಳನ್ನು ಗಮನಿಸಿ, ಅವುಗಳಲ್ಲಿ ಕಳೆದುಹೋಗದೆ ತೀರ್ಪಿಡುವುದು ಕಸರತ್ತಿನ ಕೆಲಸ.
ಪ್ರಸ್ತುತ 'ಕನ್ನಡಪ್ರಭ/ಅಂಕಿತ ಯುಗಾದಿ ಸಣ್ಸ್ಟೋರಿ ಸ್ಪರ್ಧೆ'ಗೆ ಅಂತಿಮ ಸುತ್ತಿನಲ್ಲಿದ್ದ ಒಟ್ಟು 27 ಕಥೆಗಳು ಒಂದಕ್ಕೊಂದು ವಿಭಿನ್ನವಾಗಿದ್ದವು. ಫಲಿತಾಂಶ, ವಿಜೇತರ ಪಟ್ಟಿ ಓದುಗರ ಮುಂದಿದೆ. ಕಥಾಸ್ಪರ್ಧೆಗಳ ಕಥೆಗಳಿಗೆ ಮತ್ತು ಇತರ ಲೇಖನ ಮತ್ತು ಸುದ್ದಿಗಳಿಗೆ ಚಿತ್ರ ಬಿಡಿಸಬೇಕಾದರೆ ಅವುಗಳನ್ನು ಓದುವಾಗ ಅವು ಕೊಡುವ ಥ್ರಿಲ್ಲೇ ಬೇರೆಯಾಗಿರುತ್ತದೆ. ಹಾಗೆಯೇ ಅವುಗಳಿಗೆ ಚಿತ್ರ ಬರೆಯುವುದೂ ಒಂದು ಚಾಲೆಂಜೇ. ಅದಕ್ಕೆ ದೊರಕುತ್ತಿದ್ದ ಪ್ರತಿಕ್ರಿಯೆಗಳೂ ಖುಷಿ ಪಡುವಂತಿರುತ್ತದೆ. ಆದರೆ, ಈ ಬಾರಿ ನಮ್ಮ ಪುರವಣಿ ಸಂಪಾದಕರು ಅತ್ಯಂತ ಹೊಸ ಪರಿಕಲ್ಪನೆಯಾಗಿ ಕಲಾವಿದ ಕೂಡ ಸಣ್ಣಕಥೆಯ ಆಯ್ಕೆ ಮಾಡುವ ಮೂರು ಜನರಲ್ಲಿ ಒಬ್ಬರಾಗಿರುತ್ತಾರೆ ಎಂದಾಗ ಗಾಬರಿಯಾಗಿದ್ದು ನಿಜ. ಜೊತೆಗೆ ಖುಷಿಯೂ ಆಯಿತು.
ಕಥೆಗಳ ಬಗ್ಗೆ ಅದರ ಭಾಷೆ, ಗ್ರಾಮರ್, ವಸ್ತು... ಇತ್ಯಾದಿಗಳ ಬಗ್ಗೆ ವಿಮರ್ಶೆ ಮಾಡುವಷ್ಟು ನಾನು ದೊಡ್ಡವನಲ್ಲ. ಆದರೆ, ಈ ಥರದ ವಿನೂತನ ಪ್ರಯೋಗಕ್ಕೆ ಕಾರಣೀಭೂತರಾದ ನನ್ನ ಪತ್ರಿಕಾ ಬಳಗಕ್ಕೆ ನಮನಗಳು.
- ಸುಧಾಕರ ದರ್ಬೆ, ಚಿತ್ರಕಲಾವಿದ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

