ಸಾಪ್ತಾಹಿಕಪ್ರಭ

ಒಳ್ಳೆಯ ಕೆಲಸಗಾರ ಮುರಳಿ ಮನೋಹರ ಜೋಷಿ

ಒಳ್ಳೆಯ ಕೆಲಸಗಾರ ಮುರಳಿ ಮನೋಹರ ಜೋಷಿ
Published On :

ಭಾರತೀಯ ಜನಸಂಘದ ಕಾಲದಿಂದಲೂ, ಸದ್ದು-ಗದ್ದಲವಿಲ್ಲದೇ ತಾನು ನಂಬಿದ ಸಿದ್ಧಾಂತ ಹಾಗೂ ಸಮುದಾಯಗಳ ಪ್ರಗತಿಯ ಯಾತ್ರೆಯಲ್ಲಿ ಸಕ್ರಿಯವಾಗಿ ಪಾಲುಗೊಂಡಿರುವ ನೈನಿತಾಲ ಮೂಲದ ಡಾ. ಮುರಳಿ ಮನೋಹರ ಜೋಷಿ ಅವರಿಗೆ ಈ ವರ್ಷ ಉರುಳಿದರೆ ಎಂಬತ್ತು ವರ್ಷ ತುಂಬುತ್ತದೆ.
ಒಂದು ಕಾಲದಲ್ಲಿ ಭಾರತೀಯ ಜನಸಂಘ, ಭಾರತೀಯ ಜನತಾ ಪಾರ್ಟಿಯಲ್ಲಿ ವಾಜಪೇಯಿ- ಆಡ್ವಾಣಿ ಅವರ ಅನಂತರ ಮೂರನೆಯ ನಾಯಕ ಎಂದೇ ಭಾವಿಸಲಾಗಿದ್ದ (ಈಗಲೂ ಆ ಪರಿಸ್ಥಿತಿ ಪೂರ್ತಿ ಹೋಗಿಲ್ಲ) ಮುರಳಿ ಮನೋಹರ ಜೋಷಿ ಒಮ್ಮೆ ಪಕ್ಷದ ಅಧ್ಯಕ್ಷರೂ ಆಗಿದ್ದರು.
ಅವರು ಅಧ್ಯಕ್ಷರಾಗಿದ್ದಾಗ, ಪಕ್ಷದಲ್ಲಿ ಯಾವುದೇ ರೀತಿಯ ಆಂತರಿಕ ತಿಸ್ರಗಳು ಹಾಗೂ ಬಂಡಾಯಕ್ಕೆ ಅವಕಾಶ ಕೊಡದೆ ಕಷ್ಟ ಕಾಲದಲ್ಲಿ ಮೂರಕ್ಕೆ ಇಳಿಯದೆ, ಆರಕ್ಕೇರದೆ ಪಕ್ಷವನ್ನು ಮುನ್ನಡೆಸಿದ್ದು ಒಂದು ರೀತಿಯ ಮಾನ- ಸಾಧನೆ.
ಅವರು ಅಧ್ಯಕ್ಷರಾದಾಗ, ಚುನಾವಣೆಯ ಸೋಲಿನಿಂದ ಪಕ್ಷ ತತ್ತರಿಸಿತ್ತು. ರಾಜಕೀಯ ಅಧಿಕಾರಕ್ಕೆಂದೇ ಪಕ್ಷವನ್ನು ಸೇರಿದ್ದ ಅನೇಕರು ಬೇರೆ ಬೇರೆ ಹಲ್ಲುಗಾವಲುಗಳನ್ನು ಹುಡುಕಿಕೊಂಡು ಹೊರಟಿದ್ದರು. ವಾಜಪೇಯಿ- ಆಡ್ವಾಣಿ ಅವರು ಸರದಿಯ ಮೇಲೆ ಪಕ್ಷದ ಅಧ್ಯಕ್ಷರಾಗುತ್ತಿದ್ದ ಕಾಲ ಅದು. ಇದೇನಿದು, ಈ ಪಕ್ಷಕ್ಕೆ ಅಧ್ಯಕ್ಷರಾಗಬಲ್ಲ ಮೂರನೆಯ ವ್ಯಕ್ತಿಯೇ ಇಲ್ಲವೇ ಎನ್ನುವ ಅನುಮಾನವೂ ಅನೇಕರನ್ನು ಕಾಡಿತ್ತು.
1944ರಲ್ಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಪರ್ಕ ಬಂದಾಗ, ತೀರ ಎಳೆಯ ವಯಸ್ಸಿನ ಜೋಷಿ ಅವರ ಪ್ರತಿಭೆಯ ದರ್ಶನವಾಗಿದ್ದು, ಅವರು ಸಂಸತ್ತಿನಲ್ಲಿ ಜನತಾ ಪಾರ್ಟಿಯ ಸಂಸದೀಯ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದಾಗಲೇ. ಅದು ರಾಷ್ಟ್ರೀಯ ವ್ಯಾಪ್ತಿಯ ವಿಚಾರ. ಆದರೆ ಉತ್ತರ ಪ್ರದೇಶದ ಜನಸಂಘದ ವಲಯಗಳಲ್ಲಿ ಅವರದ್ದು ಚಿರಪರಿಚಿತ ವ್ಯಕ್ತಿತ್ವ.
ಪ್ರಾಯಶಃ ಪಕ್ಷದಲ್ಲಿ ಅಧ್ಯಕ್ಷ ಸ್ಥಾನದವರೆಗೂ ಇರುವ ಏಣಿಯ ಎಲ್ಲ ಮೆಟ್ಟಿಲುಗಳನ್ನು ಒಂದೊಂದಾಗಿ ಹತ್ತಿ ಬಂದ ವ್ಯಕ್ತಿ ಮುರಳಿ ಮನೋಹರ ಜೋಷಿ ಅವರೊಬ್ಬರೇ. ಉಳಿದವರಲ್ಲಿ ಬಹುಮಂದಿ ನಾಯಕರಾಗಿ ತೀರಿಕೆಯನ್ನು ಅಲಂಕರಿಸಿದ್ದು ಎಲ್ಲಿಂದಲೋ ಬಂದು ಮಧ್ಯದಲ್ಲಿ ಪಕ್ಷವನ್ನು ಸೇರಿದವರು.
ಪರ್ವತ ಶ್ರೇಣಿಗಳ ನಡುವಣ ನೈನಿತಾಲದಿಂದ ಮುರಳಿ ಮನೋಹರ ಜೋಷಿ ವಿದ್ಯಾಭ್ಯಾಸಕ್ಕಾಗಿ ಮೀರತ್, ಅಲಹಾಬಾದ್‌ಗಳಿಗೆ ಬರಬೇಕಾಯಿತು. ಅವರು ಅಧ್ಯಯನಕ್ಕೆ ಆರಿಸಿಕೊಂಡ ವಿಷಯ ವಿಜ್ಞಾನ. ನ್ಯೂಕ್ಲಿಯರ್ ಫಿಸಿಕ್ಸ್‌ನಲ್ಲಿ ವಿಶೇಷ ಜ್ಞಾನ ಪಡೆದರು. ಅಲಹಾಬಾದ್ ವಿಶ್ವವಿದ್ಯಾಲಯದಲ್ಲಿ ಜೋಷಿ ಅವರಿಗೆ ವಿಜ್ಞಾನದ ಪಾಠ ಹೇಳಿದ್ದ ಪ್ರೊಫೆಸರ್ ರಾಜೇಂದ್ರ ಸಿಂಗ್, ಮುಂದೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘ ಚಾಲಕರಾದರು. ಜೋಷಿ, ಅವರ ಅಚ್ಚುಮೆಚ್ಚಿನ ಶಿಷ್ಯ.
ಅಲಹಾಬಾದ್ ಹಾಗೂ ಭಾರತೀಯ ವಿಶ್ವವಿದ್ಯಾಲಯಗಳ ಮೊಟ್ಟ ಮೊದಲು ಹಿಂದಿಯಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದ ವಿಷಯದಲ್ಲಿ ಪ್ರಬಂಧ ಬರೆದು ಡಾಕ್ಟರೇಟ್ ಪಡೆದ ವ್ಯಕ್ತಿ ಮುರಳಿ ಮನೋಹರ ಜೋಷಿ. ಆದರೆ ಬಹುಕಾಲ ಅವರು ಅಧ್ಯಾಪಕರಾಗಿ ಉಳಿಯಲಿಲ್ಲ. ರಾಜಕೀಯ, ಜನಸಂಘದ ಸಂಘಟನೆ ಕೈ ಬೀಸಿ ಕರೆದಿತ್ತು.
 ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಜಾರಿಯಲ್ಲಿದ್ದ ಜಾಗೀರ್‌ದಾರ ಭೂಮಾಲಿಕ ವ್ಯವಸ್ಥೆಯಲ್ಲಿ ರೈತರ ಮೇಲಿನ ಕಂದಾಯದ ಹೊರೆ ವಿಪರೀತವಾಗಿತ್ತು. ಆದರ ವಿರುದ್ಧ ಕುಂಭ ಕಿಸಾನ್ ಆಂದೋಲನದ ಮೂಲಕ ಯಶಸ್ವಿಯಾಗಿ ಹೋರಾಡಿದರು ಜೋಷಿ.
ಜನಸಂಘ- ಭಾರತೀಯ ಜನತಾ ಪಾರ್ಟಿಗಳಲ್ಲಿ ಹಲವಾರು ಸ್ಥಾನಗಳ ಜವಾಬ್ದಾರಿಯನ್ನು ಹೊತ್ತು ಕೆಲಸ ಮಾಡಿ, ಅನುಭವವಿದ್ದ ಜೋಷಿ 1980ರಲ್ಲಿ ಅಲ್ಮೋರಾದಿಂದ ಲೋಕಸಭೆಗೆ ಆರಿಸಿ ಹೋದರು. ಅನಂತರ ಮೂರು ಬಾರಿ ಅಲಹಾಬಾದ್ ಕ್ಷೇತ್ರದ ಪ್ರತಿನಿಧಿ. ಅಲ್ಲಿ ಸೋತಿದ್ದೂ ಆಯಿತು. ವಾರಾಣಸಿ ಕ್ಷೇತ್ರವನ್ನು ಈಗ ಅವರು ಪ್ರತಿನಿಧಿಸುತ್ತಿದ್ದಾರೆ.
 ಜೋಷಿ ರಾಮಮಂದಿರ ನಿರ್ಮಾಣ ಆಂದೋಲನದ ಪ್ರಮುಖರಲ್ಲಿ ಒಬ್ಬರು. ಅಯೋಧ್ಯೆಯಲ್ಲಿ ಬಾಬರಿ ಮಸೀದಿ ನೆಲಸಮವಾದ ಘಟನೆಯ ಪ್ರತ್ಯಕ್ಷ ಸಾಕ್ಷಿ. ಅಂದು ಅವರು ಗ್ವಾಲಿಯರ್‌ನ ರಾಜಮಾತೆ ವಿಜಯರಾಜೇ ಸಿಂಧ್ಯಾ ಅವರ ಪಕ್ಕದಲ್ಲೇ ಇದ್ದವರು. ಆ ಘಟನೆಯಿಂದ ಅವರು ಹಿಗ್ಗಲೂ ಇಲ್ಲ, ಕುಗ್ಗಲೂ ಇಲ್ಲವಂತೆ.
ಬಿಜೆಪಿಯ ಎಲ್ಲ ಕಾರ್ಯಕ್ರಮಗಳಲ್ಲೂ ಜೋಷಿ ಸಕ್ರಿಯವಾಗಿ ಪಾಲುಗೊಂಡಿದ್ದಾರೆ. ಅವರು ಬಿಜೆಪಿ ಅಧ್ಯಕ್ಷರಾಗಿದ್ದಾಗ ಕಾಶ್ಮೀರದ ಶ್ರೀನಗರದಲ್ಲಿ ತ್ರಿರಂಗೀ ಧ್ವಜವನ್ನು ಹಾರಿಸುವ ಮುನ್ನ ಕನ್ಯಾಕುಮಾರಿಯಿಂದ ಏಕತಾ ಯಾತ್ರೆಯನ್ನು ನಡೆಸಿದ್ದರು.
ಮಾನವ ಸಂಪನ್ಮೂಲ ಅಭಿವೃದ್ಧಿಯ ಸಚಿವರಾಗಿ ಜೋಷಿ ವಿಶ್ವವಿದ್ಯಾಲಯಗಳಲ್ಲಿ ಜ್ಯೋತಿಷ್ಯದಂತಹ ವಿಷಯದ ಬೋಧನೆಗೆ ಮುಂದಾಗಿದ್ದು ಒಂದು ವಿಪರ್ಯಾಸವೇ. ಎಲ್ಲಿಯ ನ್ಯೂಕ್ಲಿಯರ್ ಫಿಸಿಕ್ಸ್, ಎಲ್ಲಿಯ ಜ್ಯೋತಿಷ್ಯ ಶಾಸ್ತ್ರ!  ಅವರೇ ಜ್ಯೋತಿಷಿಗಳ ಮನೆತನದವರೆನ್ನುವುದು ಹೆಸರಿನಿಂದಲೇ ಗೊತ್ತಾಗುತ್ತದೆ. ಆದರೆ ಅವರು ಇದುವರೆಗೆ ಯಾವ ವ್ಯಕ್ತಿಗೂ, ಜ್ಯೋತಿಷ್ಯದ ಆಧಾರದ ಮೇಲೆ ಭವಿಷ್ಯ ಹೇಳಿದ ಉದಾಹರಣೆಗಳಿಲ್ಲ. ಚುನಾವಣೆಗಳ ಭವಿಷ್ಯವನ್ನು ಅವರು ಗಂಭೀರವಾಗಿ ಪರಿಗಣಿಸಲಿಲ್ಲ.
ಈಗ ಸದ್ಯದಲ್ಲಿ ಮುರಳಿ ಮನೋಹರ ಜೋಷಿ ಪ್ರಸ್ತುತವಾಗುವುದು ಸಂಸತ್ತಿನ ಸಾರ್ವಜನಿಕ (ಸರ್ಕಾರಿ) ಲೆಕ್ಕ ಪತ್ರಗಳ ಸಮಿತಿಯ ಅಧ್ಯಕ್ಷರಾಗಿ. ಈಗಾಗಲೇ ಎರಡು ವರ್ಷಗಳ ಕಾಲ ಆ ಸಮಿತಿಯ ಅಧ್ಯಕ್ಷರಾಗಿ ಪಟ್ಟು ಹಿಡಿದು ಎರಡನೇ ತರಂಗಾಂತರ ಗುಚ್ಛಗಳ ಹಂಚಿಕೆಯ ಸಂಬಂಧದಲ್ಲಿ ಆಡಿಟರ್ ಜನರಲ್‌ರ ವರದಿಯನ್ನು ಎಳೆಎಳೆಯಾಗಿ ಬಿಡಿಸಿದ್ದಾರೆ. ಮುಂದಿನ (ಅಂದರೆ ಈಗಿನ ಲೋಕಸಭೆಯ ಕಟ್ಟ ಕಡೆಯ ವರ್ಷ) ವರ್ಷಕ್ಕೂ ಬಿಜೆಪಿ ಅವರನ್ನೇ ಆ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸುವ ಸಂಭವವಿದೆ.
ಈ ಆಡಿಟ್ ವರದಿಯಲ್ಲಿನ ಅಂಶಗಳನ್ನು ತೀರ ಸೂಕ್ಷ್ಮವಾಗಿ ವಿಶ್ಲೇಷಿಸಿರುವ ಜೋಷಿ ಅವರ ಕೆಲಸ ಸುಲಭವಾಗಿರಲಿಲ್ಲ. ಅದಕ್ಕೆ ಪ್ರತಿಯೊಂದು ಹಂತದಲ್ಲೂ ಆಳುವ ಕೂಟದ ಪ್ರತಿನಿಧಿಗಳು ಅಡೆತಡೆಗಳನ್ನು ಒಡ್ಡಿದರು. ಕಂಡು ಕೇಳರಿಯದ ರೀತಿಯಲ್ಲಿ ಸಮಿತಿಯ ಸಭೆಯಲ್ಲೇ ಹೊಡೆದಾಟ ನಡೆಯುವ ಪ್ರಕರಣಗಳು ತಪ್ಪಿದವು. ಆದರೆ ದ್ವೇಷ ವಿಪರೀತವಾಗಿತ್ತು.
ಮುರಳಿ ಮನೋಹರ ಜೋಷಿ ಹಾಗೂ ಅವರ ಸಂಗಾತಿ ಯಶವಂತ ಸಿನ್ಹಾ ಸಿದ್ಧಪಡಿಸಿದ್ದ ವರದಿಯನ್ನು ಸಮಿತಿ ಒಪ್ಪಲಿಕ್ಕೆ ಸಿದ್ಧವಿರಲಿಲ್ಲ. ಜೋಷಿ ಅವರು ಸಂಸದೀಯ ಇತಿಹಾಸವನ್ನೇ ಸೃಷ್ಟಿಸುವ ರೀತಿಯಲ್ಲಿ ಕರಡು ವರದಿಯನ್ನೇ ಸ್ಪೀಕರ್ ಮೀರಾ ಕುಮಾರ್ ಅವರಿಗೆ ಕಳುಹಿಸಿದರು. ಅದನ್ನು ಅವರು ಹಿಂದಕ್ಕೆ ಕಳಿಸಿದ್ದೂ ಆಯಿತು.
ಇನ್ನೂ ಒಂದು ವರ್ಷ ಅವಕಾಶ ಸಿಕ್ಕರೆ ಟೆಲಿಕಾಮ್ ಪ್ರಪಂಚದ ಸಾವಿರ ಲಕ್ಷ ಕೋಟಿ ರುಪಾಯಿಗಳ ಅವ್ಯವಹಾರವನ್ನು ಅದರ ಬೆತ್ತಲೆಯ ರೂಪದಲ್ಲಿ ದಾಖಲಿಸುವ ಬಯಕೆ ಅವರದ್ದು. ಅದು ಸಾಧ್ಯವಾದರೆ ಭಾರತೀಯ ಸಂಸದೀಯ ಇತಿಹಾಸದಲ್ಲೇ ಒಂದು ಹೊಸ ಮೈಲಿಗಲ್ಲು ಸ್ಥಾಪನೆಯಾದಂತೆಯೇ ಆದೀತು.
ಮುಂದಿನ ಚುನಾವಣೆಯಲ್ಲಿ ಜೋಷಿ ಅವರು ಸ್ಪರ್ಧಿಸುತ್ತಾರೋ, ಇಲ್ಲವೋ ಗೊತ್ತಿಲ್ಲ. ಅವರು ಸ್ಪರ್ಧಿಸಲಿ, ಬಿಡಲಿ, ಒಬ್ಬ ಅತ್ಯುತ್ತಮ ಸಂಸದೀಯ ಪಟು ಯಾವ ರೀತಿ ಕೆಲಸ ಮಾಡಬಹುದು ಎನ್ನುವುದಕ್ಕೆ ಇತರರ ಜತೆ ಅವರೂ ಉದಾಹರಣೆಯ ರೂಪದಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ.

-ಸತ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.