ಸಾಪ್ತಾಹಿಕಪ್ರಭ

ಕತೆಯ ಒಡಲಿಗೆ ಇಳಿದ ನೇಗಿಲು (ಬುಕ್ ಶಾಪ್)

Published On :

ವಿಕಾಸ ನೇಗಿಲೋಣಿ ಡೆಡ್‌ಲೈನ್ ವೀರರಾಗಿದ್ದುಕೊಂಡೂ ಸಂಯಮದ ಹಾಗೂ ವಿರಾಮದ ಸೃಜನ ಕ್ರಿಯೆಯಾದ ಕತೆ ಕಟ್ಟುವ ಕಲೆಯನ್ನು ಜತನದಿಂದ ಕಾಪಾಡಿಕೊಂಡು ಬಂದಿರುವುದಕ್ಕೆ ಅವರ ಮೊದಲ ಕಥಾಸಂಕಲನ 'ಮಳೆಗಾಲ ಬಂದು ಬಾಗಿಲು ತಟ್ಟಿತು' ಪುರಾವೆಯಾಗಿದೆ. ಇಲ್ಲಿರುವ ಹನ್ನೊಂದು ಕಥೆಗಳಲ್ಲಿ ಮನಸ್ಸಿಗೆ ಥಟ್ಟನೆ ತಟ್ಟುವುದು ಅದರಲ್ಲಿಯ ಮಲೆನಾಡಿನ ಮಣ್ಣಿನ ಭಾಷೆ. ಎರಡನೆಯದು ಅವರು ಕತೆಗಳಿಗೆ ಕೊಟ್ಟಿರುವ ಶೀರ್ಷಿಕೆಗಳು. ಇಲ್ಲಿಯ ಕತೆಗಳಲ್ಲಿ ಮಲೆನಾಡಿನಲ್ಲಿ ಮಾತ್ರ ಹುಟ್ಟುವಂಥ ಪಾತ್ರಗಳು ಇವೆ. ಅಲ್ಲಿಯ ಪರಿಸರವೂ ಒಂದು ಪಾತ್ರವಾಗುವ ಸಾಧ್ಯತೆ ಇಲ್ಲಿ ತೆರೆದುಕೊಂಡಿದೆ. 'ಮಳೆಗಾಲ ಬಂದು ಬಾಗಿಲು ತಟ್ಟಿತು' ಕತೆ ಇದಕ್ಕೊಂದು ಉದಾಹರಣೆ. ಹಳ್ಳಿ ಪರಿಸರದಿಂದ ಬಂದ ವ್ಯಕ್ತಿಯ ಮಗ್ಧತೆ ಹಾಗೂ ಆತನ ಪಟ್ಟಣದ ಅಚ್ಚರಿಗಳೂ ಇಲ್ಲಿಯ ಕತೆಯಾಗಿವೆ. ಒಮ್ಮೊಮ್ಮೆ ಕತೆಯು ಕಟ್ಟುಕತೆಯೋ ಎನ್ನಿಸುವ ಹಾಗೆ ಭಾಸವಾಗುತ್ತದೆ. ಎಲ್ಲಕ್ಕೂ ಹೆಚ್ಚಾಗಿ ಇವು ಮನುಷ್ಯ ಸಂಬಂಧಗಳ ಬಗ್ಗೆ ಯೋಚಿಸುವ ಹಾಗೆ ಮಾಡುತ್ತವೆ.
ಕೃತಿ: ಮಳೆಗಾಲ ಬಂದು ಬಾಗಿಲು ತಟ್ಟಿತು
ಪ್ರಕಾರ: ಕಥೆಗಳು
ಏಕೆ ಓದಬೇಕು?: ಕತೆಯ ಥ್ರಿಲ್ ಅನುಭವಿಸಲು
ಪ್ರ: ಅಂಕಿತ ಪುಸ್ತಕ, ಬೆಂಗಳೂರು, ಪುಟಗಳು  128, ಬೆಲೆ ರು.  95

ಕೇಂದ್ರದಾಚೆಯ ಬದುಕು
1976ರಲ್ಲಿ ತಮ್ಮ ಮೊದಲ ಕಥಾ ಸಂಕಲನವನ್ನು ಪ್ರಕಟಿಸಿದ ತಿಲಕನಾಥ ಮಂಜೇಶ್ವರ ಅವರು ಈಗ ಮೂರನೆಯ ಕಥಾ ಸಂಕಲನ 'ಪರಿಧಿ ಮೀರಿದ ಕೇಂದ್ರ'ವನ್ನು ಪ್ರಕಟಿಸಿದ್ದಾರೆ. ಇದರಲ್ಲಿ ಹತ್ತು ಕತೆಗಳಿವೆ. ಎಲ್ಲ ಸಾಹಿತಿಗಳ ಹಾಗೆ ತಿಲಕನಾಥರ ಆಸಕ್ತಿಯೂ ಬದುಕಿನ ಹೊಸ ಸಾಧ್ಯತೆಗಳ ಶೋಧ. ಜೀವನ ಮೌಲ್ಯಗಳನ್ನು ನಿಕಷಕ್ಕೆ ಒಡ್ಡಿ ಯಾವುದು ಸರಿ ಯಾವುದು ತಪ್ಪು ಎಂದು ಹೇಳುವುದು ಅವರ ರೀತಿ. ಇಲ್ಲಿ ಯಾವುದೂ ವಾಚ್ಯವಿಲ್ಲ. ಎಲ್ಲವನ್ನೂ ರೂಪಕಗಳ ರೀತಿಯಲ್ಲಿ ಅವರು ಹೇಳಲು ಪ್ರಯತ್ನಿಸಿದ್ದಾರೆ. ಸಾಮಾನ್ಯ ಗಣಿತದ ಲೆಕ್ಕಾಚಾರದಲ್ಲಿ ಕೇಂದ್ರವನ್ನು ಆಧರಿಸಿ ಇರುವುದೇ ಪರಿಧಿ. ಆದರೆ ಕೇಂದ್ರವೇ ಪರಿಧಿಯನ್ನು ಮೀರುವ ಸೀಮೋಲಂಘನದ ಆಲೋಚನೆಯೇ ವಿಶಿಷ್ಟವಾದದ್ದು ಮತ್ತು ಪ್ರಗತಿಪರವಾದದ್ದು. ಬದುಕು ಕೂಡ ಇಂಥ ಗಣಿತದ ಲೆಕ್ಕಾಚಾರಗಳನ್ನು ಮೀರಿದ್ದು. ತಿಲಕನಾಥರು ಕತೆಯನ್ನು ಸಾಕಷ್ಟು ಸಿದ್ಧತೆ ಮಾಡಿಕೊಂಡೇ ಬರೆಯುತ್ತಾರೆ. ಈ ಸಂಯಮ ಅವರ ಕತೆಗಳಿಗೆ ಒಂದು ತೂಕವನ್ನು ಒದಗಿಸಿದೆ.
ಕೃತಿ: ಪರಿಧಿ ಮೀರಿದ ಕೇಂದ್ರ, ಪ್ರಕಾರ: ಕತೆಗಳು
ಏಕೆ ಓದಬೇಕು?: ಕತೆಗಾಗಿ
ಪ್ರ: ಶ್ರೀನಿವಾಸ ಪುಸ್ತಕ ಪ್ರಕಾಶನ, ಬೆಂಗಳೂರು, ಪುಟಗಳು 144, ಬೆಲೆ ರು.  75

ಮಾಧ್ಯಮ ಕರ್ನಾಟಕ
ಮೊದಲು ಮಾಧ್ಯಮವೆಂದರೆ ಪತ್ರಿಕೆ ಮಾತ್ರವಾಗಿತ್ತು. ಇಂದು ಅದಕ್ಕೆ ಸುದ್ದಿ ವಾಹಿನಿಗಳು, ಅಂತರ್ಜಾಲ ಪತ್ರಿಕೆಗಳು ಮೊದಲಾದವು ಸೇರ್ಪಡೆಯಾಗಿವೆ. ಜೊತೆಗೆ ಮಾಧ್ಯಮರಂಗದ ಆದ್ಯತೆಗಳು, ಪ್ರೇರಣೆಗಳು, ಸವಾಲುಗಳೂ ಬದಲಾಗಿವೆ. ಹತ್ತು ವರ್ಷಗಳ ಹಿಂದಿನ ಪತ್ರಿಕೋದ್ಯಮದ ರೀತಿಗೂ ಇಂದಿನ ರೀತಿಗೂ ಅಜಗಜಾಂತರ ವ್ಯತ್ಯಾಸವಿದೆ. ಒಂದು ಆದರ್ಶಕ್ಕಾಗಿ ಹಿಂದೆ ಪತ್ರಿಕೆಗಳು ಆರಂಭವಾದರೆ ಇಂದು ಅದು ಉದ್ಯಮವಾಗಿದೆ. ಈ ಉದ್ಯಮ ಸ್ವರೂಪ ಪಡೆದ ಪತ್ರಿಕೆಗಳಿಂದ ಪತ್ರಕರ್ತರಿಗೆ ಆರ್ಥಿಕವಾಗಿ ಲಾಭವಾದರೂ ಪತ್ರಿಕಾಧರ್ಮದಲ್ಲಿ ಅನಿವಾರ್ಯವಾಗಿ ರಾಜಿಮಾಡಿಕೊಳ್ಳಬೇಕಾಗಿದೆ. ಸುದ್ದಿಯ ಪ್ರಸಾರದ ವಿಷಯದಲ್ಲಿ ಸಂಪಾದಕ ಮಂಡಳಿಯ ತೀರ್ಮಾನವೇ ಅಂತಿಮವಾಗದೆ ಆಡಳಿತ ಮಂಡಳಿಯ ಮಾತೂ ಕೇಳಬೇಕಾಗುತ್ತದೆ. ಮಾಧ್ಯಮದವರ ಬಿಕ್ಕಟ್ಟುಗಳ ಚಿತ್ರಣವಿರುವ 'ಮಾಧ್ಯಮ ಕರ್ನಾಟಕ' ಕೃತಿಯನ್ನು ಹಿರಿಯ ಪತ್ರಕರ್ತ ನಾಗೇಶ ಹೆಗಡೆಯವರು ಸಂಪಾದಿಸಿದ್ದಾರೆ. ಪತ್ರಕರ್ತರ ಇಂದು-ನಾಳಿನ ಸವಾಲುಗಳ ಚರ್ಚೆ ಇದರಲ್ಲಿದೆ.
ಕೃತಿ: ಮಾಧ್ಯಮ ಕರ್ನಾಟಕ
ಪ್ರಕಾರ: ಸಂಪಾದನೆ
ಏಕೆ ಓದಬೇಕು?: ಪತ್ರಿಕಾ ರಂಗದ ಒಳಗನ್ನು ಅರಿಯಲು
ಪ್ರ: ಉದಯಭಾನು ಕಲಾಸಂಘ, ಬೆಂಗಳೂರು, ಪುಟಗಳು 384, ಬೆಲೆ ರು.  250

ಮತಾಂತರ ಮತ್ತು ಅಂಬೇಡ್ಕರ್
ಜಾತಿ ಮೂಲದ ಅಸಮಾನತೆಯನ್ನು ಈ ದೇಶದಲ್ಲಿ ಹೋಗಲಾಡಿಸಲು ಬುದ್ಧ, ಬಸವ, ಅಂಬೇಡ್ಕರ್ ಅವರು ಸತತವಾಗಿ ಪ್ರಯತ್ನಿಸಿದರು. ಆದರೂ ಅದು ಕೀಳಲಾರದಷ್ಟು ಆಳಕ್ಕೆ ಬೇರಿಳಿಸಿಬಿಟ್ಟಿದೆ. 'ಯಾವುದೋ ಒಂದು ಧರ್ಮವನ್ನು ವೃದ್ಧಿಸುವುದೆಂದರೆ ಜಾತಿ ವ್ಯವಸ್ಥೆಯನ್ನು ಬೆಳೆಸುವುದೆಂದೇ ಅರ್ಥ. ಪ್ರತಿಯೊಬ್ಬ ಪ್ರಜೆಗೂ ತನ್ನ ಜಾತಿಯೇ ಪ್ರಧಾನ. ಆತನೆಂದೂ ತಾನು ಭಾರತೀಯನೆಂದು ಹೇಳಿಕೊಳ್ಳುವ ಯಾವ ಸಂದರ್ಭವೂ ಇಲ್ಲ. ಮಿಗಿಲಾಗಿ ಅವನು ತನ್ನ ಜಾತಿಯ ಹೆಸರನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಾನೆ' ಎಂದು ಅಂಬೇಡ್ಕರ್ ಹೇಳಿದ್ದರು. ಜಾತಿಪದ್ಧತಿಯನ್ನು ನಾಶ ಮಾಡಲು, ಶೋಷಣೆಯ ಅಂತ್ಯಕ್ಕಾಗಿ ಅಂಬೇಡ್ಕರ್, 'ಮತಾಂತರ ಒಂದೇ ಮದ್ದು' ಎಂದು ಸ್ವತಃ ತಾವೇ ಲಕ್ಷಾಂತರ ಅನುಯಾಯಿಗಳೊಂದಿಗೆ ಬೌದ್ಧಧರ್ಮಕ್ಕೆ ಮತಾಂತರ ಹೊಂದಿದರು. ಡಾ.ಎನ್. ಚಿನ್ನಸ್ವಾಮಿ ಸೋಸಲೆಯವರು 'ಅಂಬೇಡ್ಕರ್ ದೃಷ್ಟಿಯಲ್ಲಿ ದಲಿತರು ಮತ್ತು ಮತಾಂತರ' ಎಂಬ ಕೃತಿಯ ಹತ್ತು ಅಧ್ಯಾಯಗಳಲ್ಲಿ ಇವನ್ನೆಲ್ಲ ವಿವರವಾಗಿ ಚರ್ಚಿಸಿದ್ದಾರೆ.
ಕೃತಿ: ಅಂಬೇಡ್ಕರ್ ದೃಷ್ಟಿಯಲ್ಲಿ ದಲಿತರು ಮತ್ತು ಮತಾಂತರ
ಪ್ರಕಾರ: ಸಾಮಾಜಿಕ ವಿಮರ್ಶೆ
ಏಕೆ ಓದಬೇಕು?: ದಲಿತರ ನೋವು ಅರಿಯಲು
ಪ್ರ: ಯಾಜಿ ಪ್ರಕಾಶನ, ಹೊಸಪೇಟೆ, ಪುಟಗಳು  246, ಬೆಲೆ ರು.  200

ಕೌದಿಯೊಳಗಿನ ಕನಸು
ಕವಿತೆ ಅಷ್ಟು ಸುಲಭವಾಗಿ ಸಿಕ್ಕುಬೀಳುವಂಥದ್ದಲ್ಲ; ನಿಲುಕುವಂಥದ್ದಲ್ಲ ಎಂದು ಹೇಳುವ ವಿಜಯಕಾಂತ ಪಾಟೀಲರು ತಮ್ಮ ನಾಲ್ಕನೆಯ ಕವನ ಸಂಕಲನ 'ಹೌದು ನಾನು ಕೌದಿ'ಯನ್ನು ನಿಮ್ಮ ಮುಂದೆ ಹರವಿದ್ದಾರೆ. ಈ ಕೌದಿಯನ್ನು 37 ಕಾವ್ಯ ತುಣುಕುಗಳ ಮೂಲಕ ಹೊಲಿದಿದ್ದಾರೆ. 'ನೂರಾರು ಬಣ್ಣದ ಹರಕರಿವೆ ಚೂರು ಎದ್ದು ಹೊಡೆವ ಬಿಳಿ ನೂಲು ಸಾಲು ಸಾವಿರಾರು ಬಾರಿ ಸೂಜಿ ಮೊನೆಗೆ ಬಾಗಿ ಒಡಲಿಗೆಲ್ಲ ಚುಚ್ಚಿಸಿಕೊಂಡರೂ ಕಾರದ ನೆತ್ತರು...! ಹೌದು, ನಾನು ಕೌದಿ; ಈ ನೆಲದ ಪಾರಂಪರಿಕ ಹಾದಿ!' ಎಂದು ಹೇಳುವ ಕವಿ, ಈ ದೇಶದ ಬಡತನವನ್ನೇ ಕೌದಿಯ ರೂಪಕದಲ್ಲಿ ಹೇಳುವರು. ಈ ಕೌದಿಯೋ 'ಇಂಡಿಯಾದ ಅಘೋಷಿತ ಧ್ವಜವಾಗಿದೆ...!' ಎಂದು ಹೇಳುವ ಮೂಲಕ ಅವರು, ನಮಗೆ ದೊರೆತ ಸ್ವಾತಂತ್ರ್ಯ ನಮ್ಮ ಬಡತನವನ್ನು ದೂರ ಮಾಡುವಲ್ಲಿ ಸಫಲವಾಗಿಲ್ಲ ಎಂದು ವಿಷಾದಿಸುತ್ತಾರೆ. ಕವಿ ಹುಕಿ ಎದ್ದಾಗ ಬರೆದ ಹಲವು ಸಫಲ ಸಾಲುಗಳು ಈ ಸಂಕಲನದಲ್ಲಿವೆ. ಶ್ರಮಪಟ್ಟು ದಕ್ಕಿಸಿಕೊಂಡ ಕಾವ್ಯದ ಹನಿಗಳನ್ನು ಇಲ್ಲಿ ಆಸ್ವಾದಿಸಬಹುದು.
ಕೃತಿ: ಹೌದು ನಾನು ಕೌದಿ, ಪ್ರಕಾರ: ಕವನ
ಏಕೆ ಓದಬೇಕು?: ಕಾವ್ಯಾಸ್ವಾದನೆಗೆ
ಪ್ರ: ಪಲ್ಲವ ಪ್ರಕಾಶನ, ಚನ್ನಪಟ್ಟಣ, ಪುಟಗಳು 82, ಬೆಲೆ ರು.  60

ಗೆರೆ ದಾಟಿದ ಕತೆಗಳು
ಸಬಿಹಾ ಭೂಮೀಗೌಡ ಅವರ ಎರಡನೆಯ ಕಥಾಸಂಕಲನ 'ಗೆರೆಗಳು' ಮಹಿಳಾ ಸಂವೇದನೆಯ ದೃಷ್ಟಿಯಿಂದ ಅತ್ಯಂತ ಮಹತ್ವವಾದದ್ದು. ಇದರಲ್ಲಿ ಒಂಬತ್ತು ಕತೆಗಳಿವೆ. ಪುರುಷ ಪ್ರಧಾನವಾದ ಈ ಸಮಾಜದಲ್ಲಿ ಮಹಿಳೆ ತನ್ನ ಸಹನೆಯಿಂದ ಪುರುಷ ಅಹಂಕಾರವನ್ನು ಎದುರಿಸುತ್ತಾಳೆ, ಅನಿವಾರ್ಯವಾಗಿ ಅವಳು ಬದುಕಿನೊಂದಿಗೆ ರಾಜಿ ಮಾಡಿಕೊಳ್ಳಬೇಕಾಗುತ್ತದೆ ಎನ್ನುವುದರ ಚಿತ್ರಣ ಇಲ್ಲಿದೆ. ಇಲ್ಲಿಯ ಹಲವು ಪಾತ್ರಗಳು ನಿಮ್ಮ ಬದುಕಿನಲ್ಲಿಯೂ ಎದುರಾಗಿರಬಹುದು. ನೀವು ಅವರೊಂದಿಗೆ ಮಾತನಾಡಿರಬಹುದು. ಹೆಣ್ಣು ಕುಟುಂಬದ ಅತ್ಯಂತ ಮಹತ್ವದ ಘಟಕವಾದರೂ ಅವಳಿಗೆ ಸಲ್ಲಬೇಕಾದ ಗೌರವ ಸಿಗುತ್ತಿಲ್ಲ. ಇಲ್ಲಿಯ ಕತೆಗಳಲ್ಲಿ ಆ ಬಗೆಗೆ ವಿಷಾದವಿದೆ. ಹೆಣ್ಣಿನ ಸೂಕ್ಷ್ಮ ಮನಸ್ಸಿನ ಮೇಲೆ ಸಬಿಹಾ ಬೆಳಕು ಚೆಲ್ಲಿದ್ದಾರೆ. ಸಭ್ಯತೆ, ಸನ್ನಡತೆ ಎಂಬುದು ಕೇವಲ ಮಹಿಳೆಗೇ ಏಕೆ ಎಂಬ ಪ್ರಶ್ನೆಯನ್ನು ಎತ್ತಿದ್ದಾರೆ. ಕೌಟುಂಬಿಕ ಹಿಂಸೆಯಲ್ಲಿ ನರಳುವ ಹೆಣ್ಣಿನ ಚಿತ್ರಣದ ಜೊತೆಗೆ ಅಲ್ಲಿಂದ ಬಿಡುಗಡೆ ಹೊಂದುವ, ಗೆರೆಗಳನ್ನು ದಾಟುವ ಹೊಸ ಆಶಯಗಳೊಂದಿಗೆ ಇಲ್ಲಿ ಕತೆಗಳನ್ನು ಹೆಣೆಯಲಾಗಿದೆ.
ಕೃತಿ: ಗೆರೆಗಳು
ಪ್ರಕಾರ: ಕತೆಗಳು
ಏಕೆ ಓದಬೇಕು?: ಖುಷಿಗಾಗಿ
ಪ್ರ: ಸಿರಿವರ ಪ್ರಕಾಶನ, ಬೆಂಗಳೂರು, ಪುಟಗಳು 128 ಬೆಲೆ ರು.  100
- ಡಾ. ವಾಸುದೇವ ಶೆಟ್ಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.