ಸಾಪ್ತಾಹಿಕಪ್ರಭ

ಅಂ.ನಾ. ಹೆಗಡೆ ಮತ್ತು ಸ್ವಾತಂತ್ರ್ಯ

ಅಂ.ನಾ. ಹೆಗಡೆ ಮತ್ತು ಸ್ವಾತಂತ್ರ್ಯ
Published On :

-ಸಣ್‌ಸ್ಟೋರಿ ಸ್ಪರ್ಧೆ 2013 ಮೆಚ್ಚುಗೆ ಬಹುಮಾನ ಪಡೆದ ಕಥೆ

'ಇನ್ನು ಈ ಮುದುಕಿಯನ್ನು ನೋಡಿಕೊಂಡಿರಲು ನನಗಂತೂ ಆಗದಪ್ಪಾ. ಎಲ್ಲಾದ್ರೂ ಸೇರಿಸೋದೇ ಒಳ್ಳೇದು, ಇಲ್ಲಾ, ನಾನೇ ಈ ಮನೆಯಿಂದ ಓಡಿಹೋಗ್ಬೇಕಷ್ಟೇ' ಸೊಸೆ ವಾರಿಜಾ ಗೊಣಗುತ್ತಿದ್ದರೆ ಸರಸ್ವತಿ ಏನೂ ಹೇಳದೇ ಸುಮ್ಮನಿದ್ದಳು. ಅವಳಾದರೂ ಏನು ಹೇಳಿಯಾಳು? ಹೇಳಿದರೆ ಅವಳ ಮುದಿ ತಾಯಿ ಅರ್ಥ ಮಾಡಿಕೊಂಡಾಳೆಯೇ? ಅರುಳುಮರುಳಿನ ಮುದುಕಿ. ವಾರಿಜಾ ಮಗಳಿಗೆಂದು ಮಾಡಿಟ್ಟ ಶಾವಿಗೆ ಪಾಯಸವಷ್ಟನ್ನೂ ಕುಡಿದುಬಿಟ್ಟಿದ್ದಳು ಅಂಬಜ್ಜಿ. ಅಷ್ಟೇ ಅಲ್ಲ, ಇನ್ನು ಸೀರೆಯಲ್ಲಿ ಗಲೀಜು ಮಾಡಿಕೊಳ್ಳುತ್ತಾಳೆ, ಮನೆಯೆಲ್ಲ ಕೆಟ್ಟ ವಾಸನೆ.
ತನ್ನ ತಾಯಿ ಹೀಗಿರಲಿಲ್ಲ ಮೊದಲು. ಅಂಬಮ್ಮ ಎಂದರೆ ಲಕ್ಷಣವಾದ ಹೆಂಗಸು. ಬಿಳಿ ಸೀರೆ, ಬಿಳಿ ರವಿಕೆ, ಹಾಂ, ಅಂಬಮ್ಮ ಎನ್ನುವಂತಿರಲಿಲ್ಲ ಆಕೆಗೆ. ಅಂಬಾಬಾಯಿ ನಾರಾಯಣ ಹೆಗಡೆ, ನನ್ನನ್ನು ಯಾರಂತ ತಿಳ್ದಿದೀರಿ? ಕಾನುಮೂಲೆ ನಾರಾಯಣ ಹೆಗಡೇರ ಮಗಳು, ನಮ್ಮಪ್ಪ ಗಾಂಧಿ, ಗೋಖಲೆ ಎಲ್ರನ್ನೂ ಕಂಡೋರು.
ಇತ್ತೀಚೆಗೆ ಆಕೆಗೆ ಅರಳುಮರುಳು ಜಾಸ್ತಿ ಆಗಿತ್ತು. ಕೇರಿಯ ಮಕ್ಕಳ್ಯಾರಾದರೂ ಅಂಬಜ್ಜಿ ಎಂದು ಕರೆದರೆ ನಾನು ಅಂಬಾಬಾಯಿ ನಾರಾಯಣ ಹೆಗಡೆ, ಹಾಗೆಯೇ ಕರೆಯಬೇಕು ನನ್ನನ್ನು ಎಂದು ದೊಡ್ಡದಾಗಿ ಕಣ್ಣುಬಿಟ್ಟು ಗದರಿಸುತ್ತಿದ್ದಳು. ಬಂದ್ಲು ನೋಡು, ಅಂ.ನಾ. ಹೆಗಡೆ ಎಂದು ಕೆಲವು ತುಂಟ ಹುಡುಗರು ಕಿಚಾಯಿಸುತ್ತಿದ್ದರು. ಒಮ್ಮೆ ಮನೆಯೆದುರಿನ ದೇವಸ್ಥಾನಕ್ಕೆ ಈಕೆ ಹೋದಾಗ ಮೇಲಿನ ಕೇರಿ ಮಂಗಳಮ್ಮ, ಭವಾನಕ್ಕ ಹಾಡುತ್ತಿದ್ದರು. 'ಅಂಬಭವಾನಿ ಕಂಬದ ಗಣಪತಿ ಚಂಡಿ ಚಾಮುಂಡಿಗೆ' ನಾನು ಚಂಡಿಯೇನೇ ಚಾಮುಂಡಿಯೇನೇ ಎಂದು ಜಗಳಕ್ಕೆ ನಿಂತ ಅಂಬಕ್ಕನಿಗೆ ಹಾಗಲ್ವೇ ಅಂಬಕ್ಕ. ಮಂಗಳಂ ಗುರುಶ್ರೀ, ಚಂದ್ರಮೌಳೇಶ್ವರಿಗೆ' ಹೇಳ್ತಾ ಇದ್ವಿ. ಅದ್ರಲ್ಲಿ ನಿನ್ನ ಹೆಸ್ರು ಬಂದ್ರೆ ನಾವೆಂತಾ ಮಾಡೋದೇ' ಹೇಳಿ ಸಮಾಧಾನಿಸಿದರು. ಸರಸ್ವತಿಗೆ ತಾಯಿಯನ್ನು ಮನೆಗೆ ಕರೆತರುವಷ್ಟರಲ್ಲಿ ಸಾಕೆನ್ನಿಸಿತು. 'ಎಂಬತ್ತು ದಾಟಿದ ಅಜ್ಜಿಯ ಕಣ್ಣು, ಕಿವಿ, ಬಾಯಿರುಚಿಗಳೆಲ್ಲಾ ಚೆನ್ನಾಗೇ ಇವೆ, ಬುದ್ಧಿ ಮಾತ್ರ ಸರಿ ಇಲ್ಲ' ವಾರಿಜಾಳ ಗೊಣಗಾಟ ನಡೆದೇ ಇತ್ತು. ಇವಳ ಸ್ನೇಹಿತೆಯರು ಬಂದಾಗಲೆಲ್ಲಾ ಈ ಅಜ್ಜಿ ಏನೋ ಒಂದು ಅವಾಂತರ ಮಾಡಿ ಅವಳು ತಲೆತಗ್ಗಿಸುವಂತೆ ಮಾಡುತ್ತಿತ್ತು. ಆಗೆಲ್ಲಾ ಸರಸ್ವತಿ ತಾಯಿಯನ್ನು ಕರೆದುಕೊಂಡು ದೇವಸ್ಥಾನಕ್ಕೆಂದು ಹೋಗಿ ಅಲ್ಲಿಯ ಪೌಳಿಯಲ್ಲಿ ಕೂರಿಸಿಕೊಂಡಿರುತ್ತಿದ್ದಳು. ವಾರಿಜಾಳ ಸ್ನೇಹಿತೆಯರು ಹೋದರೆಂದು ತಿಳಿದ ಬಳಿಕ ಮನೆಗೆ ತಾಯಿಯೊಂದಿಗೆ ಬರುತ್ತಿದ್ದಳು.
ಅಂಬಕ್ಕ ಸ್ವಾತಂತ್ರ್ಯ ಹೋರಾಟಗಾರನ ಮಗಳಾಗಿಯೇ ಬೆಳೆದಿದ್ದಳು. ಇವಳೂ ತಂದೆಯೊಂದಿಗೆ ಸಣ್ಣಪುಟ್ಟ ಚಳವಳಿಗಳಿಗೆ ಹೋಗುತ್ತಿದ್ದಳಂತೆ. ಹುಟ್ಟಿದ ಕೂಡಲೇ ತಾಯಿಯನ್ನು ಕಳೆದುಕೊಂಡು ಪರದೇಶಿಯಾಗಿ ಬೆಳೆದಿದ್ದಳು. ಚಳವಳಿಗಾಗಿ ತಂದೆ ಜೈಲು ಸೇರುತ್ತಿದ್ದ ಸಂದರ್ಭಗಳಲ್ಲಿ ಯಾರಾದರೂ ಸಂಬಂಧಿಗಳ ಮನೆಯಲ್ಲಿಯೋ ಇಲ್ಲವೇ ಇಂಥ ಮಕ್ಕಳಿಗೆಂದೇ ಇರುವ ಆಶ್ರಮಗಳಲ್ಲಿಯೋ ಇವಳ ಬಾಲ್ಯ ಕಳೆಯುತ್ತಿತ್ತು.
ಮಗಳು ಮೈನೆರೆದರೂ ಮದುವೆಯ ಯೋಚನೆಯನ್ನು ತಂದೆ ಮಾಡದಿದ್ದಾಗ ಸೋದರಮಾವ ಹುಡುಗನೊಬ್ಬನನ್ನು ಹುಡುಕಿ ಅಂಬಾಗೆ 'ಲಗ್ನ' ಎಂದು ಮಾಡಿದ. ಅವನೊಬ್ಬ ಪರದೇಶಿ. ಪರದೇಶಿಗೆ ಪರದೇಶಿ ದಿಕ್ಕು ಎಂಬಂತೆ ಕಾನುಮೂಲೆಯಲ್ಲಿ ಸಂಸಾರ ಶುರುವಾಯಿತು. ಹದಿನಾರನೇ ವಯಸ್ಸಿನಲ್ಲಿ ಸರಸ್ವತಿ ಹುಟ್ಟಿದ್ದು. ಮುಂದೇನಾಯ್ತೋ ಏನೋ, ಗಂಡ ಅಂತ ಅನ್ನಿಸಿಕೊಂಡವನು ಒಂದು ಕತ್ತಲರಾತ್ರಿ ಕರಗಿ ಹೋದ. ಮತ್ತೆ ಹಿಂದಿರುಗಲೇ ಇಲ್ಲ. ಬ್ರಿಟಿಷರಂತೂ ಭಾರತ ಬಿಟ್ಟು ಹೋಗಿದ್ದರು. ಈಗ ನಾರಾಯಣ ಹೆಗಡೆ ಮಗಳು, ಮೊಮ್ಮಗಳೊಂದಿಗೆ ಕಾನುಮೂಲೆಯಲ್ಲಿ ಇರುವ ಅಲ್ಪಸ್ವಲ್ಪ ಜಮೀನನ್ನು ನೋಡಿಕೊಳ್ಳುತ್ತಿದ್ದರು. ಹೋರಾಟ-ಚಳವಳಿಗಳೆಂದು ಎಷ್ಟೋ ಆಸ್ತಿ-ಪಾಸ್ತಿಗಳನ್ನು ಕಳೆದುಕೊಂಡಿದ್ದರವರು. ಅಳಿಯನನ್ನು ಹುಡುಕುವ ಪ್ರಯತ್ನ ಸಫಲವಾಗಲಿಲ್ಲ. ಯಾರೋ ಹೇಳಿದರು, ಕಾಶಿಯಲ್ಲಿ ಸನ್ಯಾಸಿಯಾಗಿದ್ದಾನೆಂದು. ಮತ್ಯಾರೋ ಹೇಳಿದರು, ಅಘನಾಶಿನಿ ಹೊಳೆಯಲ್ಲಿ ಸಿಕ್ಕ ಕೊಳೆತ ಹೆಣ ಇವನದ್ದೇ ಎಂದು. ಎಲ್ಲವೂ ಅಂತೆ-ಕಂತೆಗಳಷ್ಟೇ. ದಿನಗಳದೆಷ್ಟೋ ಉರುಳಿದವು- ನಾರಾಯಣ ಹೆಗಡೆ ಶಿವನಪಾದ ಸೇರಿದ್ದೂ, ಸರಸ್ವತಿ ದೊಡ್ಡವಳಾದದ್ದೂ, ಸಹಜನೇನೋ ಎಂಬಂತೆ ಅಂಬಾಬಾಯಿಯ ಪಾಲಿಗೆ ನಡೆಯಿತು. ಅಂಬಾಬಾಯಿಯನ್ನು ಘಟವಾಣಿ ಎಂದು ತೆಗಳಿದವರೇ ಈಗ ಆಕೆಯನ್ನು ಗಟ್ಟಿಗಿತ್ತಿ ಎಂದು ಹೊಗಳುತ್ತಿದ್ದರು. ಬಿಸಿಲು-ಮಳೆ ಎನ್ನದೆ ಆಳಾಗಿ ದುಡಿಯುತ್ತಿದ್ದ ಅಂಬಾಬಾಯಿ ಏನೇ ತೊಂದರೆ ಇದ್ದರೂ ಕನ್ನಡ ಶಾಲೆಯಲ್ಲಿ ನಡೆಯುವ ಆಗಸ್ಟ್ ಹದಿನೈದರ ಸ್ವಾತಂತ್ರ್ಯ ದಿನಾಚರಣೆ ಸಮಾರಂಭವನ್ನು ಮಾತ್ರ ತಪ್ಪಿಸುತ್ತಿರಲಿಲ್ಲ. ಬೋಲೋ ಭಾರತ್ ಮಾತಾಕೀ ಎಂದು ಜೋರಾಗಿ ಕೂಗಿ ಮಕ್ಕಳನ್ನು ಹುರಿದುಂಬಿಸುತ್ತಿದ್ದಳು. ಈ ಭಾಗದ ಹುಟ್ಟು ಹೋರಾಟಗಾರರಾದ ನಾರಾಯಣ ಹೆಗಡೆಯವರು, ಎಂದೆಲ್ಲಾ ಸಭೆಯಲ್ಲಿ ಗುಣಗಾನ ಮಾಡುತ್ತಿದ್ದರೆ ಅಂಬಾಬಾಯಿ ರೋಮಾಂಚನಗೊಂಡು ಕಣ್ಣೀರು ಸುರಿಸುತ್ತಿದ್ದಳು.
ಸರಸ್ವತಿಯ ಪ್ರೌಢಶಾಲೆ ವಿದ್ಯಾಭ್ಯಾಸ ಮುಗಿಯುತ್ತಿದ್ದಂತೆಯೇ ಸಾಗರದಲ್ಲಿದ್ದ ವಾಸುದೇವ ಮಾಸ್ತರರ ಮಗನೊಂದಿಗೆ ಮದುವೆಯೂ ಅಯಿತು. ಅವರೇ ಮೆಚ್ಚಿ ಸೊಸೆಯಾಗಿಸಿಕೊಂಡಿದ್ದರಿಂದ ಅಂಬಾಬಾಯಿಗೆ ಮಗಳ ಲಗ್ನ ಹೂವೆತ್ತಿದಂತೆ ಸಲೀಸಾಯಿತು.
ಮಗಳಿಗೆ ಎರಡು ಗಂಡು ಮಕ್ಕಳಾದವು. ಇನ್ನೆಷ್ಟು ದಿನ ನೀನೊಬ್ಬಳೇ ಇರುತ್ತೀ, ನಮ್ಮಲ್ಲಿಗೆ ಬಂದುಬಿಡು ಎಂದು ಮಗಳು ಸದಾ ಹೇಳುತ್ತಿದ್ದಳು. ಅವಳ ಅತ್ತೆ-ಮಾವನೂ ತೀರಿಕೊಂಡಿದ್ದರು. ತನ್ನ ಕೈ ಕಾಲು ಗಟ್ಟಿ ಇರುವವರೆಗೂ ಪರಾಶ್ರಯ ಪಡೆಯಲಾರೆ ಎನ್ನುತ್ತಿದ್ದ ಅಂಬಮ್ಮ ಕೊನೆಗೊಂದು ದಿನ ಮಗಳ ಮನೆ ಸೇರಲೇಬೇಕಾಯಿತು.
ಮಗಳ ಮಕ್ಕಳಿಬ್ಬರಿಗೂ ತನ್ನ ಸ್ವಾತಂತ್ರ್ಯದ ಕಥೆ ಹೇಳಿದರೆ ಅವರು ಕೇಳುತ್ತಲೇ ಇರಲಿಲ್ಲ. ಬದಲಾಗಿ ಹೋಗಜ್ಜಿ ಹಿಸ್ಟ್ರೀಲಿ ಅದನ್ನೇ ಓದಿ ಓದಿ ಬೇಜಾರು ಬಂದಿದೆ. ನೀನೂ ತಲೆ ತಿನ್ನಬೇಡ, ಮೊಮ್ಮಕ್ಕಳ ಮಾತಿಗೆ ಕ್ಷಣಕಾಲ ಮಂಕಾಗುತ್ತಿದ್ದಳು.
ಮೊಮ್ಮಕ್ಕಳ ಶಾಲೆಯಲ್ಲಿ ನಡೆಯುವ ಸ್ವಾತಂತ್ರ್ಯ ದಿನಾಚರಣೆಯ ಸಮಾರಂಭಕ್ಕೆ ಹೋದಾಗಲೆಲ್ಲಾ ಅಂಬಜ್ಜಿಯ ಮನಸ್ಸು ಚುರ್ ಎನ್ನುತ್ತಿತ್ತು. ಅಲ್ಲಿ ಯಾರೂ ಇವಳ ತಂದೆಯನ್ನು ನೆನಪಿಸಿಕೊಳ್ಳುತ್ತಲೇ ಇರಲಿಲ್ಲ. ಬದಲಾಗಿ ಬೇರೆ ಏನೇನೋ ಭಾಷಣ ಮಾಡುತ್ತಿದ್ದರು. ನಿನ್ನೆ-ಮೊನ್ನೆ ಹುಟ್ಟಿದವು. ಇವಕ್ಕೆಂತ ಗೊತ್ತು ಹೋರಾಟ, ಚಳವಳಿ. ನನಗೆ ಗೊತ್ತು ಅದರ ಮಹತ್ವ. ಇವರಿಗೆ ವಿನೋಭಾ ಗೊತ್ತಾ, ಬೂದಾನ ಗೊತ್ತಾ, ನಾನು ನನ್ನ ಒಂದೆಳೆ ಸರವನ್ನು ಹುಂಡಿಗೆ ಹಾಕಿದ್ದೇನೆ ಎಂದೆಲ್ಲಾ ಗೊಣಗುತ್ತ ಬಂದ ತಾಯಿಗೆ ಸರಸ್ವತಿ ಹೇಳಿದಳು 'ಅಮ್ಮ ದಯವಿಟ್ಟು ನೀನು ಶಾಲೆಗೆಲ್ಲ ಹೋಗಬೇಡ ಮಾರಾಯ್ತಿ, ದಿವಾಕರ, ದಿನಕರರಿಗೆ ನೀನು ಹೋದ್ರೆ ಮುಜುಗರ ಆಗ್ತದೆ!
ಮೊಮ್ಮಕ್ಕಳು ದೊಡ್ಡವರಾಗಿ ಮದುವೆಯೂ ಆಯ್ತು. ದಿವಾಕರ-ವಾರಿಜ ಸಾಗರದಲ್ಲಿಯೇ ಇದ್ದಿದ್ದರಿಂದ ಅಜ್ಜಿಯ ಜವಾಬ್ದಾರಿ ಅವರ ಹೆಗಲನ್ನೇರಿತ್ತು. ಇತ್ತೀಚೆಗೆ ಅಂಬಜ್ಜಿಗೆ ಅರುಳುಮರುಳು ಹೆಚ್ಚಾಗಿತ್ತು. ಸಮಾಪದ ಶಾಲೆಗೆ ಹೋಗಿ ಗಾಂಧಿ ಗೊತ್ತೇನ್ರೋ, ಭಗತ್‌ಸಿಂಗ್ ಗೊತ್ತೇನ್ರೋ ಎಂದು ಮಕ್ಕಳನ್ನೆಲ್ಲ ಕೇಳುತ್ತಿದ್ದಳು. ಗೋಖಲೆ-ಬೋಸ್ ಇವ್ರೆಲ್ಲ ನಮ್ಮನೆ ಅಟ್ಟದ ಮೇಲೆ ಅಡಗಿಕೊಂಡಿರ್ತಾ ಇದ್ರು ಎಂದೆಲ್ಲಾ ಹೇಳುವ ಅಜ್ಜಿಗೆ ಮಂಡೆ ಸಮ ಇಲ್ಲ ಎಂದು ಮಕ್ಕಳು ಗೊಳ್ಳನೆ ನಗುತ್ತಿದ್ದರೆ, ಈಕೆ ಚಲ್‌ಚಲ್ ರೆ ನೌಜವಾನ್, ಭಾರತ್ ಮಾತಾಕೀ ಜೈ ಎಂದು ಕೂಗುತ್ತಾ ಬರುತ್ತಿದ್ದಳು. ಪರಿಚಿತರ್ಯಾರಾದರೂ ಕಂಡು ಮನೆ ಸೇರಿಸುತ್ತಿದ್ದರು. ಸರಸ್ವತಿಗಂತೂ ತಾಯಿಯನ್ನು ಕಾಯ್ದುಕೊಳ್ಳುವುದೇ ಪ್ರಯಾಸದ ಕೆಲಸವಾಗಿತ್ತು. ಅಮ್ಮ, ನಿನ್ನ ಕಾಲದ ಚರಿತ್ರೆ ಯಾರಿಗೆ ಬೇಕಾಗಿದೆ. ಶಿವಾ, ರಾಮಾ ಎಂದಿರಬಾರ್ದಾ ಎಂದರೆ ಕೇಳುವ ಜಾಯಮಾನವೇ? ವಾರಿಜಾಳಂತೂ ಸದಾ ದುಮುಗುಡುತ್ತಿದ್ದಳು. ಆಕೆಯ ತವರಿನವರು ಬಂದರೆ ತಾಯಿಯೊಂದಿಗೆ ಸರಸ್ವತಿ ಕೋಣೆ ಸೇರಿಬಿಡುತ್ತಿದ್ದಳು. ಆದರೂ ತಾಯಿಯನ್ನು ಬಿಟ್ಟಿರಲಾರದ ವ್ಯಾಮೋಹ. ಮೊಮ್ಮಕ್ಕಳು ಮುತ್ತಜ್ಜಿಯನ್ನು ಕಂಡು ದೂರ ಓಡುತ್ತಿದ್ದರು.
ಸಿಹಿಮೂತ್ರ ರೋಗ ಅಂಟಿಕೊಂಡ ಅಂಬಜ್ಜಿಗೆ ತಿನ್ನುವ ಚಪಲ. ಯಾವಾಗ ಏನಾಗುತ್ತದೆ ಎಂದೂ ತಿಳಿಯುತ್ತಿರಲಿಲ್ಲ. ಮನೆಯವರ ಕಣ್ಣುತಪ್ಪಿಸಿ ರಸ್ತೆಗಿಳಿದು ಬಿಡುತ್ತಿದ್ದಳು. ಬೋಲೋ  ಭಾರತ್ ಮಾತಾಕೀ ಎನ್ನುತ್ತಾ ಹೊರಟರೆ ಅವಳ ಹಿಂದೆ ಬೀದಿಯ ಮಕ್ಕಳಿರುತ್ತಿದ್ದರು. ಕೆಲವು ಪುಂಡರು ಈಕೆಯತ್ತ ಕಲ್ಲು ತೂರುತ್ತಿದ್ದರು. ಅಂದು ಅಂಬಜ್ಜಿಗೆ ಅದೇನಾಗಿತ್ತೋ, ಬೆಳಗ್ಗೆ ಎದ್ದವಳೇ ರಸ್ತೆಗಿಳಿದಿದ್ದಳು. ವೇಗವಾಗಿ ಬರುತ್ತಿದ್ದ ಸೈಕಲ್ ಹುಡುಗನೊಬ್ಬ ಈಕೆಯನ್ನು ಕೆಡವಿ ಹೋಗಿದ್ದ. ಪರಿಚಿತರ್ಯಾರೋ ನೋಡಿದವರು ಮನೆಯೊಳಗೆ ಕರೆತಂದಿದ್ದರು. ಮದುವೆ ಮನೆಗೆ ಹೋಗಿಬಂದ ವಾರಿಜಾ ರೇಶ್ಮೆಸಿರೆಯನ್ನು ತಂತಿಯ ಮೇಲೆ ಹರವಿದ್ದಳು. ಯಾವುದೋ ಮಾಯದಲ್ಲಿ ಅಂಬಜ್ಜಿ ಕತ್ತರಿಯಿಂದ ಸೀರೆಯನ್ನು ಕತ್ತರಿಸಿ ಬಾವುಟ ಮಾಡಿಬಿಟ್ಟಿದ್ದಳು. ಅಷ್ಟೇ ಅಲ್ಲ, ಬೀದಿ ಬಾಗಿಲಲ್ಲಿ ನಿಂತು 'ಜಂಡಾ ಊಂಚಾ ರಹೇ ಹಮಾರಾ' ಎಂದು ಗಟ್ಟಿ ದನಿಯಲ್ಲಿ ಹಾಡುವುದು ಬೇರೆ. ವಾರಿಜಾಳಂತೂ ಕೋಪದಿಂದ ಕುದಿದು ದರದರನೆ ಅಜ್ಜಿಯನ್ನು ಎಳೆತಂದಳು.
'ಅಮ್ಮ, ಹೀಗೇ ಇದ್ರೆ ವಾರಿಜಾಳಿಗೂ ತಲೆ ಕೆಡುತ್ತೆ. ಅಜ್ಜಿಯನ್ನು ಬೆಂಗಳೂರಿನ ವೃದ್ಧಾಶ್ರಮವೊಂದಕ್ಕೆ ಸೇರಿಸೋಣವೆಂದಿದ್ದೇನೆ.ಅಲ್ಲಿ ಚೆನ್ನಾಗಿ ನೋಡ್ಕೋತಾರೆ'. ಮಗನ ಮಾತಿಗೆ ಪ್ರತಿ ಹೇಳಲಿಲ್ಲ. ಗಂಡನನ್ನು ಕಳೆದುಕೊಂಡ ಸರಸ್ವತಿ ನಿತ್ರಾಣಿಯಾಗಿದ್ದಳು. ಹಾಗೆಯೇ ನನಗೂ ಒಂದು ಜಾಗವನ್ನು ಕಾಯ್ದಿರಿಸಿ ಬಾರಪ್ಪ ಎಂದಳಾಕೆ ವಿಷಾದದಿಂದ.
ನಾಳೆ ಬೆಳಗ್ಗೆ ನಾನು ವಾರಿಜಾ ಹೋಗಿ ಅಜ್ಜಿಯನ್ನು ಬಿಟ್ಟು ಬರುತ್ತೇವೆ ಎಂದ ಮಗನತ್ತ ಶೂನ್ಯದೃಷ್ಟಿ ಬೀರಿದ ಸರಸ್ವತಿ ತಾಯಿಯ ಬಳಿ ನಡೆದಳು. ಸೀರೆಯೊಂದನ್ನು ಹರಿದು ಚೂರು ಚೂರು ಮಾಡಿಕೊಂಡು ಕಾಲಿಗೆಲ್ಲ ಕಟ್ಟಿಕೊಳ್ಳುತ್ತಿದ್ದ ತಾಯಿಯನ್ನು ಕಂಡು ದುಃಖ ಒತ್ತರಿಸಿ ಬಂತು. ಒಮ್ಮೊಮ್ಮೆ ಆಕೆ ರಾತ್ರಿ ನಿದ್ರೆ ಮಾಡದೇ ಮನೆಮಂದಿಗೆಲ್ಲ ತ್ರಾಸು ಕೊಡುತ್ತಿದ್ದಾಗ ಮಗ ಬಲವಂತವಾಗಿ ನುಂಗಿಸುತ್ತಿದ್ದ ಮಾತ್ರೆಗಳು ಕಣ್ಣಿಗೆ ಬಿದ್ದವು.
'ಹುಚ್ಚಿಯಾದರೂ, ಮಳ್ಳಾದರೂ ತಾಯಿ ತಾಯಿಯೇ, ಅಮ್ಮ ನಾನು ಹೀಗೆ ಮಾಡಬಾರದು. ನನ್ನನ್ನು ಕ್ಷಮಿಸು. ನಾನು ಕೂಡಾ ಬಿದ್ದುಹೋಗುವ ಮರವೇ'.
ಲೋಟದ ತುಂಬ ನೊರೆಹಾಲನ್ನು ತುಂಬಿ ತಾಯಿಗೆ ಕುಡಿಸಿದಳು. ತಾನೂ ಅದೇ ಲೋಟದಲ್ಲಿ ಎಂದೂ ಕುಡಿಯದ ಹಾಲನ್ನು ಗಟಗಟನೆ ಕುಡಿದೇಬಿಟ್ಟಳು.
ಅಮ್ಮ-ಮಗಳು ಇನ್ನಿಲ್ಲದ ಪ್ರೀತಿಯಿಂದ ಒಬ್ಬರನ್ನೊಬ್ಬರು ತಬ್ಬಿ ಮಲಗಿದರು. ಅಮ್ಮ ಹೊಲಿದ ದುಪ್ಪಟಿ ಹೊದ್ದ ಸರಸ್ವತಿ.
ಅಂಬಾಬಾಯಿ ನಾರಾಯಣ ಹೆಗಡೆಗೆ ಸ್ವಾತಂತ್ರ್ಯದ ಜೊಂಪು.


- ಸಮುದ್ಯತಾ ವೆಂಕಟರಾಮು
08183 265650

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.